75ನೇ ಸ್ವಾತಂತ್ರ್ಯ ದಿನಾಚರಣೆಗೆ ಮೆರುಗು ತುಂಬಲಿದೆ ಮೋದಿ ನೇತೃತ್ವದ 259 ಸದಸ್ಯರ ಸಮಿತಿ
ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್, ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಮತ್ತು ಬಹುತೇಕ ಎಲ್ಲ ಕೇಂದ್ರ ಸಚಿವರು ಮತ್ತು ಕೆಲ ರಾಜ್ಯಪಾಲರು ಸಮಿತಿಯಲ್ಲಿದ್ದಾರೆ.
ದೆಹಲಿ: 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರವು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 259 ಸದಸ್ಯರ ಉನ್ನತ ಮಟ್ಟದ ರಾಷ್ಟ್ರೀಯ ಸಮಿತಿಯನ್ನು ರೂಪಿಸಿದೆ. ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಸೇರಿದಂತೆ ಹಲವು ಪ್ರಭಾವಿ ರಾಜಕಾರಿಣಿಗಳು ಮತ್ತು ಅಧಿಕಾರಿಗಳು ಈ ಸಮಿತಿಯಲ್ಲಿದ್ದಾರೆ.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್, ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಮತ್ತು ಬಹುತೇಕ ಎಲ್ಲ ಕೇಂದ್ರ ಸಚಿವರು ಮತ್ತು ಕೆಲ ರಾಜ್ಯಪಾಲರು ಸಮಿತಿಯಲ್ಲಿದ್ದಾರೆ.
ವಿರೋಧಪಕ್ಷಗಳ ನಾಯಕರಾದ ಸೋನಿಯಾ ಗಾಂಧಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಎನ್ಸಿಪಿ ನಾಯಕ ಶರದ್ ಪವಾರ್, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿಗಳಾದ ಮುಲಾಯಂ ಸಿಂಗ್ ಯಾದವ್ ಮತ್ತು ಮಾಯಾವತಿ ಸಹ ಸಮಿತಿಯ ಭಾಗವಾಗಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ರಾಷ್ಟ್ರೀಯ ಅನುಷ್ಠಾನ ಸಮಿತಿಯನ್ನು ಈ ಮೊದಲು ರೂಪಿಸಲಾಗಿತ್ತು. ಕೇಂದ್ರ ಸರ್ಕಾರದ ಉನ್ನತ ಕಾರ್ಯದರ್ಶಿಗಳ ಸಮಿತಿಯೊಂದನ್ನು ಸಹ ಇದೇ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ ರೂಪಿಸಲಾಗಿದೆ.
‘ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರವು 259 ಸದಸ್ಯರ ರಾಷ್ಟ್ರೀಯ ಸಮಿತಿಯನ್ನು ರೂಪಿಸಿದೆ. ಈ ಸಂಬಂಧ ಗೆಜೆಟ್ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಸಮಾಜದ ವಿವಿಧ ಮುಖಗಳನ್ನು ಪ್ರತಿನಿಧಿಸುವ ಗೌರವಾನ್ವಿತರು ಸಮಿತಿಯಲ್ಲಿದ್ದಾರೆ’ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಪಿಸುವ ಕಾರ್ಯಕ್ರಮಗಳಿಗೆ ನೀತಿ ನಿರ್ದೇಶನ ಮತ್ತು ಮಾರ್ಗದರ್ಶನವನ್ನು ಈ ಸಮಿತಿ ನೀಡಲಿದೆ ಎಂದು ಕೇಂದ್ರ ಸಂಸ್ಕೃತಿ ಇಲಾಖೆಯ ಹೇಳಿಕೆ ತಿಳಿಸಿದೆ.
ಆಗಸ್ಟ್ 15, 2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗುತ್ತದೆ. 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು 75 ವಾರಗಳ ಮೊದಲೇ ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ದಂಡಿ ಸರ್ಕಾರ ಆರಂಭವಾದ 91ನೇ ವರ್ಷಾಚರಣೆಯಿಂದ ಅಂದರೆ ಮಾರ್ಚ್ 12, 2021ರಿಂದ ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷದ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಪ್ರಸ್ತಾವವಿದೆ.
ಕಾರ್ಯಕ್ರಮಗಳ ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ಚರ್ಚಿಸಲು ಮಾರ್ಚ್ 8ರಂದು ಉನ್ನತ ಸಮಿತಿಯ ಮೊದಲ ಸಭೆ ಕರೆಯಲಾಗಿದೆ.
ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸುಗಳನ್ನು ನಾವು ಈಡೇರಿಸಬೇಕಿದೆ: ಪ್ರಧಾನಿ ನರೇಂದ್ರ ಮೋದಿ
Published On - 11:14 pm, Fri, 5 March 21