ಪಂಜಾಬ್​​ನಲ್ಲಿ ₹150 ಕೋಟಿ ಹಗರಣ: ಬೆಳೆ ತ್ಯಾಜ್ಯಗಳನ್ನು ನಿರ್ವಹಿಸಲು ಬಳಸುವ ಯಂತ್ರ ನಾಪತ್ತೆ?

| Updated By: ರಶ್ಮಿ ಕಲ್ಲಕಟ್ಟ

Updated on: Aug 18, 2022 | 8:09 PM

ಕೇಂದ್ರ ಸರ್ಕಾರ ಸಬ್ಸಿಡಿ ನೀಡಿದ ಯಂತ್ರಗಳು ರೈತರಿಗೆ ತಲುಪಿಲ್ಲ ಎಂಬ ವರದಿ ಬಂದ ನಂತರ ಕ್ಷೇತ್ರ ಸಮೀಕ್ಷೆಗೆ ಆದೇಶಿಸಿದ್ದೇನೆ ಎಂದು ಕೃಷಿ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಹೇಳಿದ್ದಾರೆ.

ಪಂಜಾಬ್​​ನಲ್ಲಿ ₹150 ಕೋಟಿ ಹಗರಣ: ಬೆಳೆ ತ್ಯಾಜ್ಯಗಳನ್ನು ನಿರ್ವಹಿಸಲು ಬಳಸುವ ಯಂತ್ರ ನಾಪತ್ತೆ?
ಪ್ರಾತಿನಿಧಿಕ ಚಿತ್ರ
Follow us on

ಚಂಡೀಗಢ: ಪಂಜಾಬ್‌ನ (Punjab) ಆಮ್ ಆದ್ಮಿ ಪಕ್ಷದ (Aam Aadmi Party) ಸರ್ಕಾರ ರಾಜ್ಯದಲ್ಲಿ ಬೆಳೆ ತ್ಯಾಜ್ಯಗಳನ್ನು ನಿರ್ವಹಿಸುವ 11,000 ಕ್ಕೂ ಹೆಚ್ಚು ಯಂತ್ರಗಳು “ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ”. ಇದರರ್ಥ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ನೇತೃತ್ವದಲ್ಲಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹ 150 ಕೋಟಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಲಾಗಿದೆ ಎಂದು ಹೇಳಿದ್ದು ತನಿಖೆಗೆ ಆದೇಶಿಸಿದೆ. ಕೇಂದ್ರ ಸರ್ಕಾರ ಸಬ್ಸಿಡಿ ನೀಡಿದ ಯಂತ್ರಗಳು ರೈತರಿಗೆ ತಲುಪಿಲ್ಲ ಎಂಬ ವರದಿ ಬಂದ ನಂತರ ಕ್ಷೇತ್ರ ಸಮೀಕ್ಷೆಗೆ ಆದೇಶಿಸಿದ್ದೇನೆ ಎಂದು ಕೃಷಿ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಹೇಳಿದ್ದಾರೆ. 2018 ರಿಂದ ಈ ತಿಂಗಳವರೆಗಿನ ಅವಧಿಯಲ್ಲಿನ ಪರಿಶೀಲನೆಯಲ್ಲಿ ಸರ್ಕಾರವು ಖರೀದಿಸಿದೆ ಮತ್ತು ವಿತರಿಸಿದೆ ಎಂದು ಹೇಳಿಕೊಂಡ 90,422 ಯಂತ್ರಗಳಲ್ಲಿ – ಕನಿಷ್ಠ 11,275 (ಶೇ 13 ) ಫಲಾನುಭವಿಗಳ ಬಳಿ ಇಲ್ಲ. ಮಾರ್ಚ್‌ನಲ್ಲಿ ಎಎಪಿ ಸರ್ಕಾರ ಇಲ್ಲಿ ಅಧಿಕಾರಕ್ಕೇರಿತ್ತು.
ಕೃಷಿ ಖಾತೆಯನ್ನು ಹೊಂದಿದ್ದ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಅವರ ಅಂದಿನ ಕಾಂಗ್ರೆಸ್ ಪಕ್ಷ ಈ ಹಗರಣಕ್ಕೆ ಕಾರಣ ಎಂದು ಸಚಿವ ಧಲಿವಾಲ್ ಆರೋಪಿಸಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ ನ ವಕ್ತಾರ ಪ್ರೀತ್ಪಾಲ್ ಸಿಂಗ್ ಬಲಿಯಾವಾಲ್ ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದು ಯಂತ್ರ ವಿತರಣಾ ಪಟ್ಟಿಗಳನ್ನು ಸಿದ್ಧಪಡಿಸುವುದು ಮುಖ್ಯಮಂತ್ರಿಯಾಗಿ ಕ್ಯಾಪ್ಟನ್ ಸಾಬ್ ಅವರ ಕೆಲಸವಾಗಿರಲಿಲ್ಲ. ಅವರು ಕ್ಷೇತ್ರಾಧಿಕಾರಿಯಾಗಿರಲಿಲ್ಲ. ತಾತ್ವಿಕವಾಗಿ, ಭ್ರಷ್ಟಾಚಾರದ ವಿರುದ್ಧ ಯಾವುದೇ ತನಿಖೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಇದು ತನ್ನ ವೈಫಲ್ಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಎಎಪಿಯ ತಂತ್ರವಾಗಿದೆ ಎಂದಿದ್ದಾರೆ.

ವಿಜಿಲೆನ್ಸ್ ಇಲಾಖೆಯಿಂದ ತನಿಖೆಗೆ ಕಡತವನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಕಳುಹಿಸಿದ್ದೇನೆ ಎಂದು ಸಚಿವ ಧಲಿವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪಂಜಾಬ್ ಮತ್ತು ಹರ್ಯಾಣದಲ್ಲಿ ಬೆಳೆ ತಾಜ್ಯಗಳನ್ನು ನಿರ್ದಿಷ್ಟವಾಗಿ ಬೈಹುಲ್ಲು ಸುಡುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಇಲ್ಲಿ ಕೃಷಿ ತ್ಯಾಜ್ಯಗಳ ಸುಡುವಿಕೆಯು ದೆಹಲಿಯಲ್ಲಿನ ಮಾಲಿನ್ಯಕ್ಕೆ ಕಾರಣವಾಗಿದೆ. ಈ ಯಂತ್ರಗಳು ಪೈರು ಕೊಯ್ದ ಮೇಲೆ ಉಳಿದ ಬೆಳೆ ತ್ಯಾಜ್ಯಗಳು ನುಣುಪಾಗಿ ಬೋಳಿಸಲು ಸಹಾಯ ಮಾಡುತ್ತವೆ. ಹಾಗಾಗಿ ಸುಡುವ ಪ್ರಮೇಯವೇ ಬರುವುದಿಲ್ಲ.

ಯಂತ್ರಗಳಿಗೆ ಒಟ್ಟು ₹ 1,200 ಕೋಟಿ ಸಬ್ಸಿಡಿ ನೀಡಲಾಗಿದ್ದು, ಹೀಗಾಗಿ ₹ 150 ಕೋಟಿ ಹಗರಣ ನಡೆದಿರಬಹುದೆಂದು ಅಂದಾಜಿಸಿದ್ದೇವೆ ಎಂದು ಸಚಿವರು ತಿಳಿಸಿದರು. ಇಂತಹ ಹಗರಣಗಳಿಂದ ಮುಂದೆ ಕೇಂದ್ರದ ಅನುದಾನ ಪಡೆಯುವುದು ಕಷ್ಟವಾಗುತ್ತದೆ. ಇದು ಜನರ ಹಣ, ಇದರಲ್ಲಿ ಯಾರೇ ಭಾಗಿಯಾಗದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದ್ದಾರೆ. 2021 ರ ಅಂತ್ಯದ ವೇಳೆಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಪದಚ್ಯುತಗೊಳಿಸಿದ ಕಾಂಗ್ರೆಸ್‌ನಿಂದ ಇನ್ನೂ ಯಾವುದೇ ಹೇಳಿಕೆ ಬಂದಿಲ್ಲ.

Published On - 7:35 pm, Thu, 18 August 22