ಮುಂಬೈ: ಮಹಾರಾಷ್ಟ್ರದ ಸಂಸದೆ ನವನೀತ್ ಕೌರ್ ರಾಣಾರಿಗೆ ಬಾಂಬೆ ಹೈಕೋರ್ಟ್ 2 ಲಕ್ಷ ರೂಪಾಯಿ ದಂಡ ವಿಧಿಸಿದೆ. ನವನೀತ್ ಕೌರ್ ಅವರು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ದಂಡ ವಿಧಿಸಲಾಗಿದೆ. ನವನೀತ್ ಕೌರಾ ಅಮರಾವತಿಯ ಸಂಸದೆಯಾಗಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದರು. ಇದೇ ಮೊದಲಬಾರಿಗೆ ಸಂಸದೆಯಾಗಿದ್ದ ಅವರೀಗ ತಮ್ಮ ಸ್ಥಾನ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಆದರೆ ಕೋರ್ಟ್ ಸದ್ಯ 2 ಲಕ್ಷ ರೂಪಾಯಿ ದಂಡವನ್ನು ಮಾತ್ರ ವಿಧಿಸಿದ್ದು, ನವನೀತ್ ಹುದ್ದೆಯ ಬಗ್ಗೆ ಮೌನ ವಹಿಸಿದೆ.
ವಿದರ್ಭದ ಅತಿದೊಡ್ಡ ಪ್ರದೇಶವಾದ ಅಮರಾವತಿಯ ಸಂಸದೆಯಾಗಿರುವ ಕೌರ್ಗೆ ಈಗ 35 ವರ್ಷ. 7 ಭಾಷೆಗಳನ್ನು ಮಾತನಾಡುತ್ತಾರೆ. ಮಹಾರಾಷ್ಟ್ರದ ಎಂಟು ಮಹಿಳಾ ಜನಪ್ರತಿನಿಧಿಗಳಲ್ಲಿ ಇವರೂ ಒಬ್ಬರು. ಇದೇ ವರ್ಷ ಮಾರ್ಚ್ನಲ್ಲಿ ಕೌರ್ ಹಾಗೂ ಶಿವಸೇನೆ ಸಂಸದ ಅರವಿಂದ್ ಸಾವಂತ್ ನಡುವೆ ಸಂಘರ್ಷ ಏರ್ಪಟ್ಟಿತ್ತು. ಅರವಿಂದ್ ಸಾವಂತ್ ಅವರು ದೆಹಲಿಯ ಲೋಕಸಭೆ ಮೊಗಸಾಲೆಯಲ್ಲಿಯೇ ನಿಂತು ನನಗೆ ಬೆದರಿಕೆ ಹಾಕಿದ್ದಾರೆ. ನಾನು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಜೈಲಿಗೆ ಕಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ನವನೀತ್ ಕೌರ್ ಆರೋಪಿಸಿದ್ದರು. ಈ ಬಗ್ಗೆ ಲೋಕಸಭೆ ಸ್ಪೀಕರ್ ಓಂಬಿರ್ಲಾರಿಗೂ ದೂರು ನೀಡಿದ್ದರು.
ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಯಾಗಿದ್ದ ಸಚಿನ್ ವಾಝೆ ಅಮಾನತಿನ ಬಗ್ಗೆ ಕೌರ್ ಲೋಕಸಭೆಯಲ್ಲಿ ಮಾತನಾಡಿದ್ದರು. ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬ್ ಸಿಕ್ಕ ಪ್ರಕರಣದಲ್ಲಿ ಈ ಅಧಿಕಾರಿಯನ್ನು ಅಮಾನತು ಮಾಡಿ, ಅರೆಸ್ಟ್ ಮಾಡಲಾಗಿತ್ತು. ಅದರ ಬಗ್ಗೆ ಮಾತನಾಡಿದ್ದ ಕೌರ್, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರ ಭ್ರಷ್ಟಾಚಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಅಧಿಕಾರದಿಂದ ಕೆಳಗೆ ಇಳಿಯಬೇಕು ಎಂದೂ ಆಗ್ರಹಿಸಿದ್ದರು.
ಇದನ್ನೂ ಓದಿ: ರಶ್ಮಿಕಾ ಬಗ್ಗೆ ಕೆಟ್ಟ ಕಮೆಂಟ್ಗಳ ಸುರಿಮಳೆ; ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆಗೆ ಭೇಷ್ ಎನ್ನಲೇಬೇಕು
Published On - 4:27 pm, Tue, 8 June 21