Good News: ಭಾರತದಲ್ಲಿ ಕೊವಾವ್ಯಾಕ್ಸ್​, ಕಾರ್ಬೆವ್ಯಾಕ್ಸ್ ಲಸಿಕೆ, ​ಮೊಲ್ನುಪಿರವಿರ್ ಔಷಧ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ

| Updated By: Lakshmi Hegde

Updated on: Dec 28, 2021 | 12:10 PM

ಭಾರತದಲ್ಲಿ ಕೊವಾವ್ಯಾಕ್ಸ್, ಕಾರ್ಬೆವ್ಯಾಕ್ಸ್​ ಲಸಿಕೆಗಳ ತುರ್ತು ಬಳಕೆಗೆ, ಷರತ್ತು ಬದ್ಧ ಅನುಮತಿ ನೀಡಬೇಕು ಎಂದು ಕೊವಿಡ್​ 19 ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿ ಶಿಫಾರಸ್ಸು ಮಾಡಿತ್ತು. 

Good News: ಭಾರತದಲ್ಲಿ ಕೊವಾವ್ಯಾಕ್ಸ್​, ಕಾರ್ಬೆವ್ಯಾಕ್ಸ್ ಲಸಿಕೆ, ​ಮೊಲ್ನುಪಿರವಿರ್ ಔಷಧ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ
ಪ್ರಾತಿನಿಧಿಕ ಚಿತ್ರ
Follow us on

ಭಾರತದಲ್ಲಿ ಕೊವಿಡ್ 19 ವಿರುದ್ಧ ಹೋರಾಟವನ್ನು ಇನ್ನಷ್ಟು ಬಲಪಡಿಸಲು ಇನ್ನೆರಡು ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ. ಇದೀಗ ಹೊಸದಾಗಿ ಕಾರ್ಬೆವ್ಯಾಕ್ಸ್(Corbevax)​, ಕೊವಾವ್ಯಾಕ್ಸ್ (Covovax) ಕೊರೊನಾ ಲಸಿಕೆಗಳು ಮತ್ತು ಮೊಲ್ನುಪಿರವಿರ್(Molnupiravir) ಆ್ಯಂಟಿ ವೈರಲ್​ ಔಷಧಿಗಳ ತುರ್ತು ಮತ್ತು ನಿಯಂತ್ರಿತ ಬಳಕೆಗಾಗಿ ಆರೋಗ್ಯ ಸಚಿವಾಲಯ ಅನುಮೋದನೆ ಕೊಟ್ಟಿದೆ. ಅಂದಹಾಗೆ ಇದು 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮಾತ್ರ ಬಳಸಲಾಗುವ ಲಸಿಕೆಗಳು ಮತ್ತು ಔಷಧವಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಟ್ವೀಟ್ ಮಾಡಿ ತಿಳಿಸಿದ್ದಾರೆ.   ಅಂದಹಾಗೆ, ಎರಡು ಲಸಿಕೆಗಳು ಮತ್ತು ಒಂದು ಔಷಧಿಯ ತುರ್ತು ಬಳಕೆಗೆ ಒಂದೇ ದಿನ ಅನುಮೋದನೆ ನೀಡಿದ್ದು ವಿಶೇಷವಾಗಿದೆ.

ಭಾರತದಲ್ಲಿ ಕೊವಾವ್ಯಾಕ್ಸ್, ಕಾರ್ಬೆವ್ಯಾಕ್ಸ್​ ಲಸಿಕೆಗಳ ತುರ್ತು ಬಳಕೆಗೆ, ಷರತ್ತು ಬದ್ಧ ಅನುಮತಿ ನೀಡಬೇಕು ಎಂದು ಕೊವಿಡ್​ 19 ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿ ಶಿಫಾರಸ್ಸು ಮಾಡಿತ್ತು.  ಹಾಗೇ, ರೋಗದ ಅಪಾಯ ತೀವ್ರವಾಗಿದ್ದು, ಅಪಾಯದಲ್ಲಿರುವ ರೋಗಿಗಳ ಚಿಕಿತ್ಸೆಗೆ  ಮೊಲ್ನುಪಿರವಿರ್ ಔಷಧ ತುರ್ತು ಬಳಕೆಗೆ ಅನುಮತಿ ನೀಡಬೇಕು ಎಂದೂ ಈ ಸಮಿತಿ ಹೇಳಿತ್ತು. ಈ ಶಿಫಾರಸ್ಸನ್ನು ಕೇಂದ್ರ ಆರೋಗ್ಯ ಸಚಿವಾಲಯ ಮಾನ್ಯ ಮಾಡಿದೆ. ಅಲ್ಲಿಗೆ ದೇಶದಲ್ಲಿ ಒಟ್ಟು 8 ಕೊರೊನಾ ಲಸಿಕೆಗಳು ತುರ್ತು ಬಳಕೆಗೆ ಅನುಮೋದನೆ ಪಡೆದಂತಾಯಿತು.

ಭಾರತದಲ್ಲಿ ಈ ಮೊದಲು ತುರ್ತು ಬಳಕೆಗೆ ಅನುಮೋದನೆ ಪಡೆದ ಕೊರೊನಾ ಲಸಿಕೆಗಳು, ಸೀರಮ್​ ಇನ್​ಸ್ಟಿಟ್ಯೂಟ್​ನ ಕೊವಿಶೀಲ್ಡ್, ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್​, ಜೈಡಸ್​ ಕ್ಯಾಡಿಲಾದ ZyCoV-D, ರಷ್ಯಾದ ಸ್ಪುಟ್ನಿಕ್ ವಿ, ಯುಎಸ್​ನ ಮಾಡೆರ್ನಾ ಮತ್ತು ಜಾನ್ಸ್​ನ್​ ಆ್ಯಂಡ್ ಜಾನ್ಸನ್​ ಕೊರೊನಾ ಲಸಿಕೆಗಳು. ಈ ಆರು ಲಸಿಕೆಗಳೊಟ್ಟಿಗೆ ಈಗ ಕೊವಾವ್ಯಾಕ್ಸ್ ಮತ್ತು ಕಾರ್ಬೆವ್ಯಾಕ್ಸ್ ಕೂಡ ಸೇರ್ಪಡೆಗೊಂಡಿದ್ದು, ಕೊರೊನಾ ವಿರುದ್ಧ ಹೋರಾಟಕ್ಕೆ ಬಲಬಂದಂತೆ ಆಗಿದೆ.  ಅಂದಹಾಗೆ, ಈಗ ಅನುಮೋದನೆ ಪಡೆದಿರುವ ಕಾರ್ಬೆವ್ಯಾಕ್ಸ್ ಲಸಿಕೆ ಹೈದರಾಬಾದ್​ ಮೂಲದ ಬಯೋಲಾಜಿಕಲ್​ ಇ ಸಂಸ್ಥೆ ಅಭಿವೃದ್ಧಿ ಪಡಿಸಿದ ಆರ್​ಬಿಡಿ ಪ್ರೊಟೀನ್ ಉಪ-ಘಟಕ ಲಸಿಕೆಯಾಗಿದೆ. ಇದೂ ಕೂಡ ಸ್ವದೇಶಿ ಲಸಿಕೆಯಾಗಿದ್ದು, ಅಲ್ಲಿಗೆ ಮೂರು ಸ್ವದೇಶಿ ಲಸಿಕೆಗಳು ಭಾರತದಲ್ಲಿ ಬಳಕೆಯಾಗುತ್ತಿವೆ. ಇದು ಭಾರತದ ಪಾಲಿಗೆ ಹ್ಯಾಟ್ರಿಕ್​ ಸಾಧನೆ ಎಂದು ಮನ್​ಸುಖ್​ ಮಾಂಡವಿಯಾ ತಿಳಿಸಿದ್ದಾರೆ.

ಕೊವಾವ್ಯಾಕ್ಸ್ ಮರುಸಂಯೋಜಿತ ನ್ಯಾನೊಪರ್ಟಿಕಲ್ ಪ್ರೊಟೀನ್ ಆಧಾರಿತ ಕೊರೊನಾ ಲಸಿಕೆಯಾಗಿದ್ದು, ಯುಎಸ್​ ಮೂಲದ ನೊವಾವ್ಯಾಕ್ಸ್​ ಮತ್ತುಸೀರಮ್​ ಇನ್​ಸ್ಟಿಟ್ಯೂಟ್​ ಸಹಭಾಗಿತ್ವದಲ್ಲಿ ತಯಾರಾಗುತ್ತಿದೆ. ಇನ್ನು ಮೊಲ್ನುಪಿರವಿರ್ ಎಂಬುದು ಆ್ಯಂಟಿ ವೈರಲ್ ಔಷಧವಾಗಿದ್ದು, ಕೊವಿಡ್​ 19 ಸೋಂಕಿನ ಸೌಮ್ಯ ಮತ್ತು ಹೆಚ್ಚಿನ ಲಕ್ಷಣಗಳಿದ್ದಾಗ ಈ ಮಾತ್ರೆ ಕೊಡಬಹುದು ಎಂದು ಇತ್ತೀಚೆಗಷ್ಟೇ ಯುಎಸ್​ನ ಆಹಾರ ಮತ್ತು ಔಷಧ ನಿಯಂತ್ರಣ ಆಡಳಿತ ಹೇಳಿತ್ತು. ಹಾಗೇ, ಯುಎಸ್​ನಲ್ಲಿ ಇದರ ಬಳಕೆಗೆ ಅನುಮೋದನೆ ನೀಡಿತ್ತು. ಇದೀಗ ಭಾರತದಲ್ಲೂ ಮೊಲ್ನುಪಿರವಿರ್​ ಬಳಕೆಯಾಗಲಿದ್ದು, ಇದು ರೋಗಿಗಳಲ್ಲಿ ರೋಗ ತೀವ್ರತೆ ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Bank Holidays in January 2022: ಗಮನಿಸಿ: ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ಬಂದ್: ಯಾವಾಗ?, ಇಲ್ಲಿದೆ ಮಾಹಿತಿ

Published On - 11:32 am, Tue, 28 December 21