
ಮುಂಬರಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ, ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು 2026ರಲ್ಲಿ ನಡೆಯಲಿದೆ. ಕಾಂಗ್ರೆಸ್ ಅಥವಾ ಇತರ ಪಕ್ಷಗಳೊಂದಿಗೆ ಯಾವುದೇ ಮೈತ್ರಿಯನ್ನು ತಳ್ಳಿಹಾಕಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮುಂಬರುವ ವಿಧಾನಸಭೆಯ ಬಜೆಟ್ ಅಧಿವೇಶನಕ್ಕೂ ಮುನ್ನ ಪಕ್ಷದ ಶಾಸಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಬ್ಯಾನರ್ಜಿ, ಬಹುಮತ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಕಾಂಗ್ರೆಸ್ ಸಹಾಯ ಮಾಡಲಿಲ್ಲ, ಹರ್ಯಾಣದಲ್ಲಿ ಎಎಪಿ ಕಾಂಗ್ರೆಸ್ಗೆ ಸಹಾಯ ಮಾಡಲಿಲ್ಲ, ಆದ್ದರಿಂದ ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಎಲ್ಲರೂ ಒಗ್ಗಟ್ಟಾಗಿರಬೇಕು. ಆದರೆ ಬಂಗಾಳದಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ, ನಾವು ಒಂಟಿಯಾಗಿ ಹೋರಾಡುತ್ತೇವೆ, ನಾವೇ ಸಾಕು ಎಂದು ಬ್ಯಾನರ್ಜಿ ಹೇಳಿದ್ದಾರೆ.
ಮತ್ತಷ್ಟು ಓದಿ: ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಜನರಿಗಾಗಿ ರಾಜೀನಾಮೆ ನೀಡಲು ಮುಂದಾದ ಮಮತಾ ಬ್ಯಾನರ್ಜಿ
ಒಟ್ಟು ಸ್ಥಾನಗಳಲ್ಲಿ ಮೂರನೇ ಎರಡರಷ್ಟು ಹೆಚ್ಚು ಗೆದ್ದು ನಮ್ಮ ಪಕ್ಷವು ಸತತ ನಾಲ್ಕನೇ ಅವಧಿಗೆ ಸರ್ಕಾರ ರಚಿಸುತ್ತದೆ ಎಂದು ಅವರು ಹೇಳಿಕೊಂಡರು. ಪಕ್ಷದ ಮೂಲವೊಂದರ ಪ್ರಕಾರ, ಸಮಾನ ಮನಸ್ಕ ಪಕ್ಷಗಳು ವಿರೋಧ ಪಕ್ಷದ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕು ಎಂದು ಬ್ಯಾನರ್ಜಿ ಶಾಸಕರಿಗೆ ತಿಳಿಸಿದರು. ಇಲ್ಲದಿದ್ದರೆ, ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ತಡೆಯುವುದು ಇಂಡಿ ಬಣಕ್ಕೆ ಕಷ್ಟವಾಗುತ್ತದೆ.
ಬಿಜೆಪಿ ವಿದೇಶಿಯರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸಬಹುದು ಎಂದು ಹೇಳುತ್ತಾ, ಬ್ಯಾನರ್ಜಿ ಪಕ್ಷದ ಶಾಸಕರು ಜಾಗರೂಕರಾಗಿರಬೇಕೆಂದು ಕೇಳಿಕೊಂಡರು. ಪಕ್ಷದ ಸಂಘಟನಾ ರಚನೆಯನ್ನು ರಾಜ್ಯ ಮಟ್ಟದಿಂದ ಬೂತ್ ಮಟ್ಟಕ್ಕೆ ಪುನರ್ರಚಿಸಲಾಗುವುದು ಎಂದು ಅವರು ಸಭೆಗೆ ಮಾಹಿತಿ ನೀಡಿದ್ದಾರೆ.
ಪಡಿತರ ಹಗರಣ ಪ್ರಕರಣದಲ್ಲಿ ಮಾಜಿ ಆಹಾರ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರ ಬಂಧನದ ಬಗ್ಗೆಯೂ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ. ಬಂಧನವನ್ನು ಅನ್ಯಾಯ ಎಂದು ಕರೆದ ಅವರು, ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ