ಹಾರ್ಮುಜ್ ಜಲಸಂಧಿ ರಕ್ಷಣೆಗೆ ಬರಲು ಭಾರತವೂ ಸೇರಿ ಹಲವು ರಾಷ್ಟ್ರಗಳಿಗೆ ಅಮೆರಿಕ ಮನವಿ
US may request India and other countries help to secure Hormuz Strait: ಪರ್ಷಿಯನ್ ಕೊಲ್ಲಿಯಲ್ಲಿರುವ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಾಟಕ್ಕೆ ಭದ್ರತೆ ಒದಗಿಸಲು ಜಾಗತಿಕ ರಾಷ್ಟ್ರಗಳ ನೆರವನ್ನು ಅಮೆರಿಕ ಯಾಚಿಸುತ್ತಿದೆ. ಹಾರ್ಮುಜ್ ಜಲಸಂಧಿಯನ್ನು ಇರಾನ್ ತಡೆ ಹಿಡಿದಿರುವ ಹಿನ್ನೆಲೆಯಲ್ಲಿ ಅಮೆರಿಕ ಈ ನಡೆ ಇಡುತ್ತಿದೆ. ಭಾರತವೂ ಒಳಗೊಂಡಂತೆ ಹಲವು ದೇಶಗಳ ನೆರವು ಪಡೆಯಲು ಅದು ಯೋಜಿಸಿದೆ.

ನವದೆಹಲಿ, ಮಾರ್ಚ್ 16: ಜಗತ್ತಿನ ಪ್ರಮುಖ ತೈಲ ಮಾರ್ಗಗಳಲ್ಲಿ ಒಂದೆನಿಸಿರುವ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ತೈಲ ಹಡಗುಗಳ ಸಾಗಣೆಗೆ ರಕ್ಷಣೆ ಒದಗಿಸಲು ಅಮೆರಿಕವು ಹಲವು ದೇಶಗಳ ನೆರವು ಯಾಚಿಸುತ್ತಿದೆ. ಇರಾನ್ ಯುದ್ಧದಿಂದಾಗಿ ಈ ಹಾರ್ಮುಜ್ ಸ್ಟ್ರೇಟ್ ಬಹುತೇಕ ಸ್ಥಗಿತಗೊಂಡಿದೆ. ತೈಲ ಹೊತ್ತ ಕೆಲವೇ ಕೆಲವು ಹಡಗುಗಳ ಮಾತ್ರ ಆಗಾಗ್ಗೆ ಹೊರಬರುತ್ತಿವೆ. ಇದರ ಪರಿಣಾಮವಾಗಿ ಜಾಗತಿಕವಾಗಿ ತೈಲ ಬೆಲೆ ಗಗನಕ್ಕೇರುತ್ತಿದೆ.
ಇದೇ ವೇಳೆ, ಹಾರ್ಮುಜ್ ಜಲಸಂಧಿಯಲ್ಲಿ ತೈಲ ಹಡಗುಗಳನ್ನು ಸಾಗಿಸಲು ಬಿಡುವುದಿಲ್ಲ ಎಂದು ಇರಾನ್ ಹೇಳಿರುವ ಹಿನ್ನೆಲೆಯಲ್ಲಿ ಅಮೆರಿಕ ಇತರ ರಾಷ್ಟ್ರಗಳ ನೆರವು ಕೇಳುತ್ತಿದೆ. ತನ್ನ ನೌಕಾಸೇನೆಯ ಭದ್ರತೆಯಲ್ಲಿ ತೈಲ ಹಡಗುಗಳನ್ನು ಸಾಗಲು ವ್ಯವಸ್ಥೆ ಮಾಡುವುದಾಗಿ ಹೇಳಿದ್ದ ಅಮೆರಿಕ ಈಗ ಇತರ ದೇಶಗಳ ನೆರವು ಕೇಳುವಂತಾಗಿದೆ. ವರದಿ ಪ್ರಕಾರ ಭಾರತದ ನೆರವನ್ನೂ ಕೇಳಲು ಅಮೆರಿಕ ಯೋಜಿಸಿದೆ.
ಚೀನಾ, ಜಪಾನ್, ಫ್ರಾನ್ಸ್, ಆಸ್ಟ್ರೇಲಿಯಾ, ಬ್ರಿಟನ್, ಸೌತ್ ಕೊರಿಯ, ಹಾಗೆಯೇ ನಾಟೋ ಕೂಟದ ದೇಶಗಳನ್ನು ಹಾರ್ಮುಜ್ ಜಲಸಂಧಿಯಲ್ಲಿ ಭದ್ರತೆಗೆ ಬರಬೇಕೆಂದು ಕೇಳಿಕೊಂಡಿರುವುದಾಗಿ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ನಿನ್ನೆ ಹೇಳಿದ್ದರು.
ಇದನ್ನೂ ಓದಿ: ಮೊಜ್ತಬಾ ಖಮೇನಿ ಜೀವಂತವಿಲ್ಲ, ಇರಾನ್ ಕದನ ವಿರಾಮಕ್ಕೆ ಸಿದ್ಧವಾಗಿದೆ, ಆದರೆ ನಮಗೆ ಮನಸ್ಸಿಲ್ಲ ಎಂದ ಟ್ರಂಪ್
ಅವರ ಪ್ರಕಾರ, ಕೆಲ ದೇಶಗಳು ಅಮೆರಿಕದ ಮನವಿಗೆ ಸಮ್ಮತಿಸಿವೆ. ಕೆಲ ವರದಿಗಳ ಪ್ರಕಾರ ಅಮೆರಿಕದ ಹಲವು ಮಿತ್ರ ದೇಶಗಳು ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ. ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳು ಹಾರ್ಮುಜ್ ಜಲಸಂಧಿ ಬಳಿ ತಮ್ಮ ನೌಕೆಗಳನ್ನು ಕಳುಹಿಸಲು ನಿರಾಕರಿಸಿವೆ.
ಭಾರತ ಸೇರಿದಂತೆ ಇನ್ನೂ ಕೆಲ ದೇಶಗಳನ್ನು ಹಾರ್ಮುಜ್ ಜಲಸಂಧಿ ಭದ್ರತೆಗೆ ಬರಬೇಕೆಂದು ಆಹ್ವಾನಿಸುವ ಆಲೋಚನೆಯಲ್ಲಿ ಅಮೆರಿಕ ಇದೆ. ಹಾರ್ಮುಜ್ ಜಲಸಂಧಿ ಮೂಲಕ ಬರುವ ತೈಲದ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತ, ಜಪಾನ್, ಕೊರಿಯಾ, ಚೀನಾ, ಥಾಯ್ಲೆಂಡ್ ಮೊದಲಾದ ಏಷ್ಯನ್ ದೇಶಗಳು ಹಾರ್ಮುಜ್ ಸ್ಟ್ರೇಟ್ ರಕ್ಷಣೆಗೆ ಬರಬಹುದು ಎಂದು ಅಮೆರಿಕ ನಿರೀಕ್ಷಿಸುತ್ತಿದೆ.
ಹಾರ್ಮುಜ್ ಜಲಸಂಧಿ ಯಾಕೆ ಮುಖ್ಯ?
ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿ ಹಾಗೂ ಅರೇಬಿಯನ್ ಸಮುದ್ರವನ್ನು ಸಂಪರ್ಕಿಸುತ್ತದೆ. ಬಹಳ ಕಿರಿದಾಗಿರುವ ಜಲಮಾರ್ಗವಾದ್ದರಿಂದ ಹಡಗುಗಳ ಸಾಗಾಟ ಬಹಳ ಸೂಕ್ಷ್ಮ ಎನಿಸುತ್ತದೆ. ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ಮಾಡಿದ ಹಿನ್ನೆಲೆಯಲ್ಲಿ ಈ ಜಲಸಂಧಿಗೆ ಕಂಟಕ ಶುರುವಾಗಿದೆ.
ಇದನ್ನೂ ಓದಿ: ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಬದುಕಿದ್ದಾರಷ್ಟೇ, ಟ್ರಂಪ್ ಹೀಗ್ಯಾಕಂದ್ರು?
ಕೊಲ್ಲಿ ದೇಶಗಳ ತೈಲಗಳು ಇತರೆಡೆ ಸಾಗಲು ಈ ಜಲಸಂಧಿಯೇ ಮುಖ್ಯ ಮಾರ್ಗ. ಜಗತ್ತಿನ ಶೇ. 40ರಷ್ಟು ತೈಲ ಸಾಗಾಟ ಇಲ್ಲಿಂದಲೇ ನಡೆಯುತ್ತದೆ. ಭಾರತ, ಚೀನಾ ಸೇರಿದಂತೆ ಹೆಚ್ಚಿನ ಏಷ್ಯನ್ ದೇಶಗಳಿಗೆ ಬೇಕಾದ ಹೆಚ್ಚಿನ ತೈಲವು ಇಲ್ಲಿಂದಲೇ ಪೂರೈಕೆಯಾಗುವುದು. ಹೀಗಾಗಿ, ಕೊಲ್ಲಿ ದೇಶಗಳು ಹಾಗೂ ಏಷ್ಯನ್ ದೇಶಗಳಿಗೆ ಈ ಜಲಸಂಧಿಯ ಭದ್ರತೆ ಬಹಳ ಮುಖ್ಯವಾಗುತ್ತದೆ. ಜಾಗತಿಕವಾಗಿ ತೈಲ ಬೆಲೆಯಲ್ಲಿ ಏರುಪೇರಾಗದಂತೆ ನೋಡಿಕೊಳ್ಳಲೂ ಇದು ಮುಖ್ಯ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:55 am, Mon, 16 March 26
