ಕಾನ್ಪುರದಲ್ಲಿ ವಾಯುಪಡೆಯ 6 ಸಿಬ್ಬಂದಿ ಸೇರಿ 25ಕ್ಕೂ ಹೆಚ್ಚು ಜನರಿಗೆ ಝಿಕಾ ವೈರಸ್ ಸೋಂಕು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 03, 2021 | 9:28 PM

ಹೊಸದಾಗಿ ದೃಢಪಟ್ಟ ಪ್ರಕರಣಗಳಲ್ಲಿ 14 ಮಹಿಳೆಯರು, ಆರು ವಾಯುಪಡೆಯ ಸಿಬ್ಬಂದಿ ಇದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ವಿಶಾಖ್ ಹೇಳಿದ್ದರು.

ಕಾನ್ಪುರದಲ್ಲಿ ವಾಯುಪಡೆಯ 6 ಸಿಬ್ಬಂದಿ ಸೇರಿ 25ಕ್ಕೂ ಹೆಚ್ಚು ಜನರಿಗೆ ಝಿಕಾ ವೈರಸ್ ಸೋಂಕು
ಝಿಕಾ ವೈರಸ್ ಸೋಂಕು ಸೊಳ್ಳೆಗಳಿಂದ ಹರಡುತ್ತದೆ (ಪ್ರಾತಿನಿಧಿಕ ಚಿತ್ರ)
Follow us on

ಕಾನ್ಪುರ: ವಾಯುಪಡೆಯ ಆರು ಸಿಬ್ಬಂದಿಯೂ ಸೇರಿದಂತೆ ಜಿಲ್ಲೆಯ 25 ಮಂದಿಯಲ್ಲಿ ಬುಧವಾರ ಝಿಕಾ ವೈರಸ್ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಹೊಸದಾಗಿ ದೃಢಪಟ್ಟ ಪ್ರಕರಣಗಳಲ್ಲಿ 14 ಮಹಿಳೆಯರು, ಆರು ವಾಯುಪಡೆಯ ಸಿಬ್ಬಂದಿ ಇದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ವಿಶಾಖ್ ಹೇಳಿದ್ದರು.

ಆರೋಗ್ಯ ಇಲಾಖೆಯು 586 ಜನರಿಂದ ಭಾನುವಾರ ರಕ್ತದ ಮಾದರಿಗಳನ್ನು ಸಂಗ್ರಹಿಸಿತ್ತು. ಲಖನೌ ನಗರದ ಪ್ರಯೋಗಾಲಯದಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಈ ಪೈಕಿ 25 ಮಾದರಿಗಳಲ್ಲಿ ಝಿಕಾ ವೈರಸ್​ ಸೋಂಕು ದೃಢಪಟ್ಟಿತ್ತು ಎಂದು ಅವರು ತಿಳಿಸಿದರು.

ರೋಗ ಹರಡುವುದನ್ನು ತಡೆಯಲು ಮತ್ತು ಮೂಲವನ್ನು ಪತ್ತೆಹಚ್ಚಲು ಆರೋಗ್ಯ ತಂಡಗಳನ್ನು ರಚಿಸಲಾಗಿದೆ. ಸೊಳ್ಳೆಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದೆ. ಗರ್ಭಿಣಿಯರು ಮತ್ತು ಜ್ವರ ಪೀಡಿತರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದರು.

ಮನೆಮನೆಯಿಂದ ಮಾದರಿ ಸಂಗ್ರಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಝಿಕಾ ವೈರಸ್ ಸೋಂಕಿನ ಬಗ್ಗೆ ಯಾರೂ ಗಾಬರಿಯಾಗಬಾರದು ಎಂದು ಮನವಿ ಮಾಡಿರುವ ಅವರು, ವಾಯುಪಡೆ ಕೇಂದ್ರದ ಸುತ್ತಮುತ್ತ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಝಿಕಾ ವೈರಸ್ ಸೋಂಕು ಸೊಳ್ಳೆಗಳಿಂದ ಹರಡುತ್ತದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಅ.23ರಂದು ಮೊದಲ ಬಾರಿಗೆ ವಾಯುಪಡೆ ಅಧಿಕಾರಿಯೊಬ್ಬರಲ್ಲಿ ಝೀಕಾ ಸೋಂಕು ಕಾಣಿಸಿಕೊಂಡಿತ್ತು. ಇದಾದ ನಂತರ ಕೇಂದ್ರ ಆರೋಗ್ಯ ಇಲಾಖೆಯು ಉನ್ನತ ಮಟ್ಟದ ತಂಡವನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿಕೊಟ್ಟಿತ್ತು.

ಇದನ್ನೂ ಓದಿ: ಕಾನ್ಪುರದ ವ್ಯಕ್ತಿಯೊಬ್ಬರಲ್ಲಿ ಝಿಕಾ ವೈರಸ್ ಪತ್ತೆ; ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಂಡಗಳ ಭೇಟಿ
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಝಿಕಾ  ವೈರಸ್ ಪತ್ತೆ: ವೈದ್ಯಕೀಯ ತಜ್ಞರ ತಂಡ ಕಳುಹಿಸಿದ ಕೇಂದ್ರ ಸರ್ಕಾರ