26/11 ಮುಂಬೈ ದಾಳಿಯ ಉಗ್ರರು ನಿಮ್ಮ ದೇಶದಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾರೆ; ಪಾಕ್ ವೇದಿಕೆಯಲ್ಲಿ ಜಾವೇದ್ ಅಖ್ತರ್ ಖಡಕ್ ಮಾತು

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 21, 2023 | 6:25 PM

Javed Akhtar ನಾವು ನುಸ್ರತ್ ಫತೇಹ್ ಅಲಿ ಖಾನ್ ಮತ್ತು ಮೆಹದಿ ಹಸನ್ ಅವರ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಲತಾ ಮಂಗೇಶ್ಕರ್ ಅವರಿಗಾಗಿ ನೀವು (ಪಾಕಿಸ್ತಾನ) ಸಮಾರಂಭವನ್ನು ಆಯೋಜಿಸಿದ್ದೀರಾ ಎಂದು ಅಖ್ತರ್ ಕೇಳಿದಾಗ ಸಭೆಯಲ್ಲಿ ಕರತಾಡನ

ದೆಹಲಿ: ಪಾಕಿಸ್ತಾನದ (Pakistan) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಕವಿ, ಲೇಖಕ,ಗೀತ ರಚನೆಕಾರ ಜಾವೇದ್ ಅಖ್ತರ್ (Javed Akhtar). ಅಲ್ಲಿ ಪಾಕಿಸ್ತಾನದ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಪಾಕ್ ನೆಲದಲ್ಲೇ ಅಖ್ತರ್ ಖಡಕ್ ಉತ್ತರ ನೀಡಿದ್ದು ,ಈ ವಿಡಿಯೊ ವೈರಲ್ ಆಗಿದೆ. ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಅವರ ನೆನಪಿಗಾಗಿ ಲಾಹೋರ್‌ನಲ್ಲಿ(Lahore) ನಡೆದ ಉತ್ಸವಕ್ಕಾಗಿ ಜಾವೇದ್ ಅಖ್ತರ್ ಕಳೆದ ವಾರ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು.ಸಂವಾದದ ಸಮಯದಲ್ಲಿ ಸಭಿಕರಲ್ಲಿ ಒಬ್ಬರು “ನೀವು ಪಾಕಿಸ್ತಾನಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದೀರಿ, ನೀವು ಹಿಂತಿರುಗಿದಾಗ ನಿಮ್ಮ ಜನರಿಗೆ ನಾವು (ಪಾಕಿಸ್ತಾನದವರು) ಒಳ್ಳೆಯವರು ಎಂದು ಹೇಳುತ್ತೀರಾ. ಅವರು ನಮ್ಮ ಮೇಲೆ ಬಾಂಬ್ ಹಾಕುತ್ತಿಲ್ಲ. ಅವರು ಹಾರ ಹಾಕಿ ಪ್ರೀತಿಯಿಂದ ನಮ್ಮನ್ನು ಸ್ವಾಗತಿಸುತ್ತಾರೆ ಎಂದು ಹೇಳುತ್ತೀರಾ ಎಂದು ಕೇಳಿದ್ದರು.

ಇದಕ್ಕೆ ಜಾವೇದ್ ಅಖ್ತರ್ ಅವರ ಉತ್ತರ ಹೀಗಿತ್ತು: ನಾವು ಒಬ್ಬರನ್ನೊಬ್ಬರು ದೂಷಿಸಬಾರದು. ಇದು ಯಾವುದನ್ನೂ ಪರಿಹರಿಸುವುದಿಲ್ಲ. ವಾತಾವರಣ ಉದ್ವಿಗ್ನವಾಗಿದೆ, ಅದನ್ನು ತಗ್ಗಿಸಬೇಕು. ನಾವು ಮುಂಬೈನವರು, ನಮ್ಮ ನಗರದ ಮೇಲೆ ನಡೆದ ದಾಳಿಯನ್ನು ನೋಡಿದ್ದೇವೆ. ಅವರು (ದಾಳಿಕೋರರು) ನಾರ್ವೆ ಅಥವಾ ಈಜಿಪ್ಟ್‌ನಿಂದ ಬಂದವರಲ್ಲ. ಅವರು ಇನ್ನೂ ನಿಮ್ಮ ದೇಶದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಹಾಗಾಗಿ ಹಿಂದೂಸ್ತಾನಿಗಳ ಹೃದಯದಲ್ಲಿ ಕೋಪವಿದ್ದರೆ, ಅದರ ಬಗ್ಗೆ ದೂರುವುದು ಸರಿಯಲ್ಲ.


ಪಾಕಿಸ್ತಾನದ ಖ್ಯಾತನಾಮರಿಗೆ ಭಾರತ ಆತಿಥ್ಯ ನೀಡಿದ ರೀತಿಯಲ್ಲಿ ಭಾರತೀಯ ಕಲಾವಿದರನ್ನು ಪಾಕಿಸ್ತಾನದಲ್ಲಿ ಸ್ವಾಗತಿಸಲಾಗಿಲ್ಲ ಎಂದು ಅಖ್ತರ್ ಹೇಳಿದ್ದಾರೆ.ಫೈಜ್ ಸಾಹಬ್ ಭೇಟಿ ನೀಡಿದಾಗ, ಅವರನ್ನು ಬಹಳ ಪ್ರಮುಖ ಸಂದರ್ಶಕರಂತೆ ಸ್ವೀಕರಿಸಲಾಯಿತು. ಅದು ಎಲ್ಲೆಡೆ ಪ್ರಸಾರವಾಯಿತು. ನಾವು ನುಸ್ರತ್ ಫತೇಹ್ ಅಲಿ ಖಾನ್ ಮತ್ತು ಮೆಹದಿ ಹಸನ್ ಅವರ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಲತಾ ಮಂಗೇಶ್ಕರ್ ಅವರಿಗಾಗಿ ನೀವು (ಪಾಕಿಸ್ತಾನ) ಸಮಾರಂಭವನ್ನು ಆಯೋಜಿಸಿದ್ದೀರಾ ಎಂದು ಅಖ್ತರ್ ಕೇಳಿದಾಗ ಸಭೆಯಲ್ಲಿ ಕರತಾಡನ ಮುಗಿಲು ಮುಟ್ಟಿತು.

ಇದು ಸರ್ಜಿಕಲ್ ಸ್ಟೈಕ್ ಎಂದ ನೆಟ್ಟಿಗರು

ಜಾವೇದ್ ಅಖ್ತರ್ ಅವರ ಕಾಮೆಂಟ್‌ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ನೆಟ್ಟಿಗರು ಇದನ್ನು ಪಾಕಿಸ್ತಾನದಲ್ಲಿ ಮಾಡಿದ “ಸರ್ಜಿಕಲ್ ಸ್ಟ್ರೈಕ್” ಎಂದಿದ್ದಾರೆ


ಮುಂಬೈ ಮೇಲೆ ದಾಳಿ ಮಾಡಲು ಬಂದವರು ನಾರ್ವೆ ಅಥವಾ ಈಜಿಪ್ಟ್‌ನಿಂದ ಬಂದವರಲ್ಲ. ಅವರು ಇನ್ನೂ ಪಾಕಿಸ್ತಾನದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ ಮತ್ತು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಈ ದೂರು ಇರುತ್ತದೆ. ಜಾವೇದ್ ಅಖ್ತರ್ ಇದನ್ನು ಸ್ವತಃ ಲಾಹೋರ್‌ನಲ್ಲಿ ಕುಳಿತು ತೋರಿಸಿದರು ಎಂದು ಟ್ವೀಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.


ಜಾವೇದ್ ಸಾಬ್ ಅವರ ಕವನವನ್ನು ಕೇಳಿದಾಗ, ಅವರು ಸರಸ್ವತಿ ದೇವಿಯಿಂದ ಎಷ್ಟು ಆಶೀರ್ವಾದ ಪಡೆದಿದ್ದಾರೆಂದು ನನಗೆ ಆಶ್ಚರ್ಯವಾಗುತ್ತದೆ. ದೇವರು ಆಶೀರ್ವದಿಸ ಬೇಕಾದರೆ ವ್ಯಕ್ತಿಯಲ್ಲಿ ಶುದ್ಧವಾದ ಏನಾದರೂ ಇರಬೇಕು. ಜೈ ಹಿಂದ್ ಜಾವೇದ್ ಅಖ್ತರ್ ಸಾಬ್. ಘರ್ ಮೇ ಘುಸ್ ಕೆ ಮಾರಾ (ನೀವು ಅವರ ಮನೆಗೆ ನುಗ್ಗಿ ಹೊಡಿದ್ದೀರಿ)” ಎಂದು ಕಂಗನಾ ರನೌತ್ ಟ್ಟೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Tue, 21 February 23