Javed Akhtar: ಪಾಕಿಸ್ತಾನಕ್ಕೆ ಹೋಗಿ ಪಾಕಿಗಳನ್ನು ಬಯ್ದು ಜಾವೇದ್ ಅಖ್ತರ್; ವಿಡಿಯೋ ವೈರಲ್
26/11 Mumbai Attack: 2008ರಲ್ಲಿ ಮುಂಬೈನಲ್ಲಿ ಉಗ್ರರ ದಾಳಿ ಮಾಡಿಸಿದವರು ಈಗಲೂ ಪಾಕಿಸ್ತಾನದಲ್ಲಿ ಆರಾಮವಾಗಿ ಅಡ್ಡಾಡುತ್ತಿದ್ದಾರೆ ಎಂದು ಲಾಹೋರ್ನಲ್ಲಿ ನಿಂತು ಬಾಲಿವುಡ್ ಚಿತ್ರಸಾಹಿತಿ ಜಾವೇದ್ ಅಖ್ತರ್ ಗುಡುಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ.
ನವದೆಹಲಿ: ಬಾಲಿವುಡ್ ಚಿತ್ರಸಾಹಿತಿ ಜಾವೇದ್ ಅಖ್ತರ್ (Javed Akhtar) ಪಾಕಿಸ್ತಾನಕ್ಕೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದು ಕೆಲ ವಲಯಗಳಲ್ಲಿ ಟೀಕೆಗೆ ಕಾರಣವಾಗಿತ್ತು. ಇದೀಗ ಪಾಕಿಸ್ತಾನದ ನೆಲದಲ್ಲಿ ನಿಂತ ಆ ದೇಶದವರಿಗೆ ಜಾವೇದ್ ಅಖ್ತರ್ ಮಾತಿನ ಚಾಟಿ ಬೀಸಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 2008ರಲ್ಲಿ ಮುಂಬೈನಲ್ಲಿ ದಾಳಿ ನಡೆಸಲು ಸಂಚು ರೂಪಿಸಿದವರು (26/11 Mumbai Attack Mastermind) ಈಗಲೂ ಪಾಕಿಸ್ತಾನದಲ್ಲಿ ಆರಾಮವಾಗಿ ಅಡ್ಡಾಡಿಕೊಂಡಿದ್ದಾರೆ ಎಂದು ಜಾವೇದ್ ಅಖ್ತರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಾವೇದ್ ಅಖ್ತರ್ ಮುಸ್ಲಿಮರಾದರೂ ನಾಸ್ತಿಕರು. ಭಾರತದಲ್ಲಿ ಇಸ್ಲಾಂ ಮತ್ತು ಹಿಂದೂ ಮೂಲಭೂತವಾದಿಗಳಿಬ್ಬರನ್ನೂ ಸಮಾನವಾಗಿ ಟೀಕಿಸುವ ದಿಟ್ಟ ವ್ಯಕ್ತಿತ್ವ ಅವರದ್ದು. ಪಾಕಿಸ್ತಾನದ ಖ್ಯಾತ ಉರ್ದು ಕವಿ ಫಾಯಜ್ ಅಹ್ಮದ್ ಫಾಯಜ್ ಅವರ ಸ್ಮರಣಾರ್ಥ ಲಾಹೋರ್ನಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಹೋಗಿದ್ದರು.
ಈ ಕಾರ್ಯಕ್ರಮದ ವೇಳೆ ಜಾವೇದ್ ಅಖ್ತರ್ ಮಾತನಾಡುವಾಗ ಸಭಿಕರಲ್ಲಿ ಒಬ್ಬಾತ ಎದ್ದು ನಿಂತು, ನೀವು ಪಾಕಿಸ್ತಾನಕ್ಕೆ ಹಲವು ಬಾರಿ ಬಂದಿದ್ದಿರಿ. ನೀವು ಭಾರತಕ್ಕೆ ವಾಪಸ್ ಹೋದಾಗ, ಪಾಕಿಸ್ತಾನೀ ಜನರ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತೀರಾ? ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಅಖ್ತರ್, ನಾವು ಪರಸ್ಪರ ದೂರಿಕೊಳ್ಳುವುದು ಬೇಡ. ಇದರಿಂದ ಸಮಸ್ಯೆಗಳಿಗೆ ಪರಿಹಾರ ಸಿಕ್ಕೋದಿಲ್ಲ. ಮುಂಬೈ ದಾಳಿ ಹೇಗಾಯ್ತು ಎಂದು ನೋಡಿದ್ದೇವೆ. ಆ ಉಗ್ರರು ನಾರ್ವೆಯಿಂದಲೋ, ಈಜಿಪ್ಟ್ನಿಂದಲೋ ಬಂದವರಲ್ಲ. ನಿಮ್ಮ ದೇಶದಲ್ಲಿ ಈಗಲೂ ಆರಾಮವಾಗಿ ಓಡಾಡಿಕೊಂಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: Trending News: ಅಂತಿಂಥವರಲ್ಲ ನಮ್ಮ ದಣಿ, ಕೋಟಿ ಮೌಲ್ಯದ ಆಸ್ತಿ, ಮನೆಗಳು, ಐಷಾರಾಮಿ ವಾಹನಗಳನ್ನು ತನ್ನ ಸೇವಕರಿಗೆ ಹಂಚಿದ ಮಾಲೀಕ
ಪಾಕಿಸ್ತಾನದ ಗಾಯಕರಾದ ನುಸ್ರತ್ ಮತ್ತು ಮೆಹದಿ ಹಸನ್ ಅವರಿಗೆ ಭಾರತದಲ್ಲಿ ದೊಡ್ಡ ಕಾರ್ಯಕ್ರಮಗಳು ಆಯೋಜನೆಯಾಗಿವೆ. ಆದರೆ, ಲತಾ ಮಂಗೇಶ್ಕರ್ ಅವರಿಗೆ ನಿಮ್ಮ ದೇಶ ಯಾವತ್ತಾದರೂ ಕಾರ್ಯಕ್ರಮ ಆಯೋಜಿಸಿದೆಯಾ ಎಂದೂ ಬಾಲಿವುಡ್ ಚಿತ್ರಸಾಹಿತಿ ಪ್ರಶ್ನೆ ಮಾಡಿದರು.
ಪಾಕಿಸ್ತಾನದ ಅದೆಷ್ಟೋ ಕಲಾವಿದರಿಗೆ ಭಾರತ ಆತಿಥ್ಯ ವಹಿಸಿದೆ, ಅಥವಾ ಆಶ್ರಯ ಒದಗಿಸಿದೆ. ಲಿಫ್ಟ್ ಕರಾದೇ ಖ್ಯಾತಿಯ ಅದ್ನಾನ್ ಸಾಮಿ ಭಾರತದಲ್ಲೇ ನೆಲಸಿದ್ದಾರೆ. ಗಾಯಕರಾದ ನುಸ್ರತ್ ಫತೇ ಅಲಿ ಖಾನ್, ಗುಲಾಮ್ ಅಲಿ ಮೊದಲಾದ ಹಲವರ ಗಾಯನವನ್ನು ಭಾರತೀಯರು ಮೆಚ್ಚಿಕೊಂಡಿದ್ದಿದೆ.
ಮುಂಬೈ ಘಟನೆ ಬಗ್ಗೆ:
2008, ನವೆಂಬರ್ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಬಂದ 10 ಮಂದಿ ಪಾಕಿಸ್ತಾನೀ ಉಗ್ರರು ಮುಂಬೈನ ವಿವಿಧ ಸ್ಥಳಗಳಲ್ಲಿ ಗುಂಡಿನ ದಾಳಿ ನಡೆಸಿ 166 ಮಂದಿಯ ದಾರುಣ ಹತ್ಯೆ ಮಾಡಿದ್ದರು. ಹೀಗೆ ಹುತಾತ್ಮರಾದವರಲ್ಲಿ 18 ಮಂದಿ ಪೊಲೀಸರು ಇದ್ದಾರೆ. ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಮುಖ್ಯಸ್ಥ ಹೇಮಂತ್ ಕರ್ಕರೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಂಬೈ ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ, ಪೊಲೀಸ್ ಇನ್ಸ್ಪೆಕ್ಟರ್ ವಿಜಯ್ ಸಲಾಸ್ಕರ್ ಮೊದಲಾದವರು ವೀರಮರಣ ಅಪ್ಪಿದ್ದರು.
ಹೀಗೆ ದಾಳಿ ಮಾಡಿದ 10 ಮಂದಿ ಉಗ್ರರ ಪೈಕಿ ಜೀವಂತ ಸಿಕ್ಕಿದ್ದು ಅಜ್ಮಲ್ ಕಸಬ್ ಮಾತ್ರವೇ. ನ್ಯಾಯಾಲಯದಲ್ಲಿ ಈತನ ವಿಚಾರಣೆ ನಡೆದು ಕೊನೆಗೆ ಗಲ್ಲಿಗೇರಿಸಲಾಯಿತು. ಆದರೆ, ಮುಂಬೈ ದಾಳಿಯ ಮಾಸ್ಟರ್ಮೈಂಡ್ಗಳು ಪಾಕಿಸ್ತಾನದಲ್ಲೇ ಇದ್ದಾರೆ. ಅವರ ಪೈಕಿ ಲಷ್ಕರೆ ತೈಬಾ ಮುಖ್ಯಸ್ಥ ಹಫೀಜ್ ಸಯೀದ್ ಪ್ರಮುಖರು. ಪಾಕಿಸ್ತಾನದಿಂದ ಬಂದ ಉಗ್ರರು ಮುಂಬೈ ದಾಳಿ ನಡೆಸಿದರು ಎಂಬುದಕ್ಕೆ ಭಾರತ ಬಹಳಷ್ಟು ಪುರಾವೆಗಳ್ನು ನೀಡಿದ್ದರೂ ಪಾಕಿಸ್ತಾನ ಒಪ್ಪುತ್ತಿಲ್ಲ. ಹಫೀಜ್ ಸಯೀದ್ನನ್ನು ಭಾರತಕ್ಕೆ ಒಪ್ಪಿಸಲು ಅಥವಾ ಗಡೀಪಾರು ಮಾಡಲೂ ಪಾಕಿಸ್ತಾನ ಒಪ್ಪುತ್ತಿಲ್ಲ.
ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Tue, 21 February 23