Googlies: ಗೂಗಲ್​ನಲ್ಲಿ ಕೆಲಸ ಕಳೆದುಕೊಂಡ ಏಳು ಮಂದಿ ಸೇರಿ ಹೊಸ ಕಂಪನಿ ಶುರು

Ex Google Employees Start New Company: ಗೂಗಲ್​ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿದ್ದ ಹೆನ್ರಿ ಕಿರ್ಕ್ ಮುಂದಾಳತ್ವದಲ್ಲಿ ಒಟ್ಟು ಏಳು ಮಂದಿ ಸೇರಿ ಅಮೆರಿಕದ ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಡಿಸೈನ್ ಮತ್ತು ಡೆವಲಪ್ಮೆಂಟ್ ಸ್ಟುಡಿಯೋ ಸ್ಥಾಪಿಸಿದ್ದಾರೆ.

Googlies: ಗೂಗಲ್​ನಲ್ಲಿ ಕೆಲಸ ಕಳೆದುಕೊಂಡ ಏಳು ಮಂದಿ ಸೇರಿ ಹೊಸ ಕಂಪನಿ ಶುರು
ಗೂಗಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 21, 2023 | 4:22 PM

ನ್ಯೂಯಾರ್ಕ್: ಸೋಲೇ ಗೆಲುವಿನ ಮೆಟ್ಟಿಲು ಎಂದು ದೊಡ್ಡವರು ಹೇಳಿದ್ದು ಸುಮ್ಮನೆ ಅಲ್ಲ. ಬಾವಿಯೊಳಗಿರುವ ಕಪ್ಪೆ ಈ ಬಾವಿಯೇ ಪ್ರಪಂಚ ಎಂದು ತಪ್ಪಾಗಿ ಭಾವಿಸಿರುತ್ತದೆ. ನಮ್ಮ ಬದುಕಿನ ಒಂದು ದಾರಿ ಮುಚ್ಚಿದರೆ ಬೇರೆ ನೂರು ದಾರಿಗಳು ಕಾಣುತ್ತವಂತೆ. ಕೆಲಸ ಕಳೆದುಕೊಂಡವರಿಗೆ ದುಡಿಯಲು ಬೇರೆ ಹೊಸ ಆಲೋಚನೆಗಳು ಹುಟ್ಟಿಕೊಳ್ಳುತ್ತವಂತೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ ಗೂಗಲ್​ನಿಂದ ವಜಾಗೊಂಡ ಏಳು ಮಂದಿ ಉದ್ಯೋಗಿಗಳು ಸೇರಿ ಹೊಸ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ.

ಗೂಗಲ್​ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿದ್ದ ಹೆನ್ರಿ ಕಿರ್ಕ್ ಮುಂದಾಳತ್ವದಲ್ಲಿ ಒಟ್ಟು ಏಳು ಮಂದಿ ಸೇರಿ ಅಮೆರಿಕದ ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಡಿಸೈನ್ ಮತ್ತು ಡೆವಲಪ್ಮೆಂಟ್ ಸ್ಟುಡಿಯೋ ಸ್ಥಾಪಿಸಿದ್ದಾರೆ.

ಗೂಗಲ್ ದಿಢೀರನೇ 12 ಸಾವಿರ ಮಂದಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದವರು. ಅವರಲ್ಲಿ ಈ ಏಳು ಮಂದಿಯೂ ಇದ್ದಾರೆ. 12 ಸಾವಿರ ಮಂದಿಗೆ 60 ದಿನಗಳ ಕಾಲ ಸಮಯಾವಕಾಶ ಇದೆ. ಅಷ್ಟರೊಳಗೆ ಇವರು ಹೊಸ ಕೆಲಸ ಹುಡುಕಿಕೊಳ್ಳಬೇಕು ಇಲ್ಲಾ ಹೊಸ ಕಂಪನಿ ಸ್ಥಾಪನೆ ಮಾಡಬೇಕು. ಈ ಸಂದಿಗ್ಧ ಸಂದರ್ಭದಲ್ಲಿ ಹೆನ್ರಿ ಕಿರ್ಕ್ ಗೂಗಲ್​ನ ಕೆಲ ಆಯ್ದ 6 ಟೆಕ್ಕಿಗಳನ್ನು ಜೊತೆಗೆ ಹಾಕಿಕೊಂಡು ಹೊಸ ಕಂಪನಿಯನ್ನೇ ಹುಟ್ಟುಹಾಕಲು ನಿರ್ಧರಿಸಿದ್ದಾರೆ.

ಲಿಂಕ್ಡ್ ಇನ್​ನಲ್ಲಿ ಇವರು ಒಂದು ಪೋಸ್ಟ್ ಹಾಕಿದ್ದು, ಅದರಲ್ಲಿ ತಾನು ಹೊಸ ಕಂಪನಿ ಸ್ಥಾಪಿಸಿರುವುದು, 60 ದಿನ ಕಾಲಾವಕಾಶ ಇರುವುದು ಇವೆಲ್ಲವನ್ನೂ ಪ್ರಸ್ತಾಪಿಸಿದ್ದಾರೆ. ಕುಟುಂಬದವರು 52 ದಿನ ಗಡುವು ಕೊಟ್ಟಿದ್ದಾರೆ. ಹೊಸ ಕಂಪನಿ ಯಶಸ್ವಿಯಾಗದೇ ಹೋದಲ್ಲಿ ಬೇರೆ ಕೆಲಸ ಹುಡುಕಿಕೊಳ್ಳಬೇಕಾಗುತ್ತದೆ. ಹೊಸ ಕಂಪನಿ ಯಶಸ್ವಿಯಾಗಲು ಎಲ್ಲರ ಸಹಕಾರ ಬೇಕು, ಮಾರ್ಗದರ್ಶನ ಬೇಕು ಎಂದು ಕೋರಿದ್ದಾರೆ.

ಇವರ ಹೊಸ ಕಂಪನಿಯು ಬೇರೆ ಕಂಪನಿಗಳ ಆ್ಯಪ್ ಮತ್ತು ವೆಬ್​ಸೈಟ್​ಗಳಿಗೆ ಡಿಸೈನ್ ಮತ್ತು ರಿಸರ್ಚ್ ಟೂಲ್​ಗಳನ್ನು ಒದಗಿಸುತ್ತದೆ. ಸಣ್ಣದಿಂದ ಹಿಡಿದು ದೊಡ್ಡದವರೆಗೆ, ಆರಂಭದಿಂದ ಹಿಡಿದು ಉನ್ನತದ ಹಂತದವರೆಗೆ ಎಂಥದ್ದೇ ಪ್ರಾಜೆಕ್ಟ್​ಗಳಿಗೆ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ ಮಾಡುವುದು ಈ ಮಾಜಿ ಗೂಗಲ್ ಉದ್ಯೋಗಿಗಳ ಕಾಯಕವಾಗಿದೆ.

ಇದನ್ನೂ ಓದಿ: Strange Pakistani: 60 ವರ್ಷದ ಈ ಪಾಕಿಸ್ತಾನಿಗೆ 100 ಮದುವೆಯ ಅಸೆಯಂತೆ; ಈವರೆಗೆ ಈತ ವಿವಾಹವಾಗಿದ್ದೆಷ್ಟು?

ಇವರ ಪ್ರಯತ್ನ ಯಶಸ್ವಿಯಾಗಿ ಇನ್ನಷ್ಟು ಯುವಕರಿಗೆ ನವೋದ್ಯಮಗಳ ಸ್ಥಾಪನೆಗೆ ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯ.

ಈಗಾಗಲೇ ಗೂಗಲ್, ಮೈಕ್ರೋಸಾಫ್ಟ್ ಮೊದಲಾದ ಕಂಪನಿಗಳಲ್ಲಿ ಕೆಲಸ ಕಳೆದುಕೊಂಡವರು, ಕೆಲಸ ಬಿಟ್ಟವರು, ಕೆಲಸ ಸಿಕ್ಕದವರು ಸ್ವಂತವಾಗಿ ಕಂಪನಿಗಳನ್ನು ಕಟ್ಟಿ ಸೈ ಎನಿಸಿಕೊಂಡ ನಿದರ್ಶನಗಳು ಹಲವುಂಟು.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Tue, 21 February 23