ಹೈದರಾಬಾದ್: ಕೊಳವೆ ಬಾವಿ ದುರಂತ ಅಂದ ಕೂಡಲೇ ಕಣ್ಮುಂದೆ ಬರೋದೇ ಪುಟ್ಟ ಕಂದಮ್ಮಗಳು. ದೊಡ್ಡವರು ಮಾಡಿದ ಬೇಜವಾಬ್ದಾರಿ ಕೆಲ್ಸಕ್ಕೆ ತೆಲಂಗಾಣದಲ್ಲಿ ಮಗುವೊಂದು ಕೊಳವೆ ಬಾವಿಗೆ ಬಿದ್ದು ಮೃತಪಟ್ಟಿದೆ.
ದುಃಖದ ಕಟ್ಟೆಯೊಡೆದಿದೆ.. ಒಡಲಾಳದ ನೋವು ಉಕ್ಕಿ ಉಕ್ಕಿ ಬರ್ತಿದೆ. ಹೆತ್ತ ಕರುಳಿನ ಆಕ್ರಂದನ ಮುಗಿಲು ಮುಟ್ಟಿದೆ. ಆಕಾಶವೇ ಕಳಚಿ ಬಿದ್ದಂತಾಗಿದೆ. ಕಣ್ಮುಂದೆ ಖುಷಿ ಖುಷಿಯಾಗಿ ಆಟ ಆಡ್ಕೊಂಡ್ ಇದ್ದ ಮಗು ಭೂಮಿಯ ಒಡಲು ಸೇರಿದೆ. ಇದ್ರಿಂದ ನೀರು ಹರಿಯಬೇಕಿದ್ದ ಜಾಗದಲ್ಲಿ ಪೋಷಕರು ಕಣ್ಣೀರು ಹರೀತಿದೆ.
ಕೊಳವೆ ಬಾವಿಗೆ ಬಿದ್ದ ಮೂರು ವರ್ಷದ ಬಾಲಕ ಸಾವು!
ಸಂಗಾರೆಡ್ಡಿ ಜಿಲ್ಲೆ ಪಟಾನ್ಚೆರುಕು ಗ್ರಾಮದ ಗೋವರ್ಧನ್ 4 ತಿಂಗಳ ಹಿಂದೆಯಷ್ಟೇ ಪೊಡ್ಚನಪಲ್ಲಿಗೆ ಬಂದು ನೆಲೆಸಿದ್ರು. ಮೂವರ ಮಕ್ಕಳ ಪೈಕಿ ಸಾಯಿವರ್ಧನ್ ಚಿಕ್ಕವನಾಗಿದ್ದಾನೆ. ಇನ್ನು ಮಗು ಕೊಳವೆಬಾವಿಗೆ ಬೀಳ್ತಿದ್ದಂತೆಯೇ ಸೀರೆ ಇಳಿಬಿಟ್ಟು ಮಗುವನ್ನ ಮೇಲೆತ್ತಲು ಪ್ರಯತ್ನಿಸಲಾಯ್ತು. ಆದ್ರೆ ಈ ವೇಳೆ ಮಣ್ಣು ಕುಸಿದು ಸಾಯಿವರ್ಧನ್ ಇನ್ನಷ್ಟು ಒಳಗೆ ಹೋಗಿದ್ದಾನೆ. ಇದ್ರಿಂದ ವಿಷ್ಯ ತಿಳಿದ ಕೂಡಲೇ ಜಿಲ್ಲಾಧಿಕಾರಿ ಧರ್ಮಾರೆಡ್ಡಿ, ಎಸ್ಪಿ ಚಂದನ ದಿಪ್ತಿ ಸೇರಿದಂತೆ ಅಧಿಕಾರಿಗಳ ದಂಡೇ ಸ್ಥಳಕ್ಕೆ ಭೇಟಿ ನೀಡ್ತು. ಬಳಿಕ ಮಗವಿನ ರಕ್ಷಣಾ ಕಾರ್ಯಾಚರಣೆಯನ್ನ ಶುರು ಮಾಡಿದ್ರು. ರಾತ್ರಿಯಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಸಿ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಬಾಲಕನ್ನ ಮೇಲೆತ್ತಿದ್ರು ಆದ್ರೂ ಅಷ್ಟೊತ್ತಿಗಾಗಲೇ ಪುಟ್ಟ ಕಂದ ಉಸಿರು ನಿಲ್ಲಿಸಿತ್ತು.
ನಿರಂತರ 12 ಗಂಟೆಗಳ ಕಾರ್ಯಾಚರಣೆ.. ಬದುಕಲಿಲ್ಲ ಬಾಲಕ..!
ಒಟ್ನಲ್ಲಿ, ಎಷ್ಟೇ ಬುದ್ಧಿ ಹೇಳಿದ್ರೂ, ಎಷ್ಟೇ ಎಚ್ಚರಿಸಿದ್ರೂ ಜನರು ಮಾತ್ರ ಅರ್ಥನೇ ಮಾಡಿಕೊಳ್ತಿಲ್ಲ. ದೇಶದಲ್ಲಿ ಪದೇಪದೆ ಕೊಳವೆ ಬಾವಿ ದುರಂತಗಳು ನಡೀತಾನೆ ಇದ್ದಾವೆ. ಎಷ್ಟೋ ಪ್ರಕರಣಗಳಲ್ಲಿ ಕಂದಮ್ಮಗಳು ಭೂಮಾತೆಯ ಮಡಿಲಲ್ಲೇ ಕೊನೆಯುಸಿರೆಳೆದಿವೆ. ಆದ್ರೆ ಸಾಯಿವರ್ಧನ್ನನ್ನ ದೇವರು ಕಾಪಾಡಲಿ, ಜೀವಂತವಾಗಿ ಹೊರಗೆ ಬರಲಿ ಅಂತ ಪ್ರಾರ್ಥಿಸಿದ್ರೂ ಪ್ರಯೋಜನವಾಗಲೇ ಇಲ್ಲ.
Published On - 6:54 am, Thu, 28 May 20