ಕೇರಳದ ಕೊಚ್ಚಿಯಲ್ಲಿ ಕ್ರೈಸ್ತ ಸಮುದಾಯ ನಡೆಸುತ್ತಿದ್ದ ಸಾಮೂಹಿಕ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟಗೊಂಡು ಮೂರು ಜನ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ನಾನೇ ಬಾಂಬ್ ತಯಾರಿಸಿದ್ದು ಎಂದು ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ಒಪ್ಪಿಕೊಂಡಿದ್ದಾನೆ. ಈ ವ್ಯಕ್ತಿ ಬಾಂಬ್ಗಳನ್ನು ಮನೆಯಲ್ಲಿಯೇ ತಯಾರಿಸಿದ್ದಾನೆ ಎಂದು ಹೇಳಲಾಗಿದೆ. ಜತೆಗೆ ಈ ಬಾಂಬ್ ತಯಾರಿಸಲು ಮೂರು ಸಾವಿರ ರೂ. ಖರ್ಚು ಮಾಡಿದ್ದಾನೆ ಎಂದು ಹೇಳಲಾಗಿದೆ. ಯುಟ್ಯೂಬ್ ನೋಡಿಕೊಂಡು ಈ ಬಾಂಬ್ ತಯಾರಿಸಿದ್ದಾನೆ. ಡೊಮಿನಿಕ್ ಮಾರ್ಟಿನ್ ಕುಟುಂಬ ಐದು ವರ್ಷಗಳಿಂದ ಕೊಚ್ಚಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕೂ ಮೊದಲು ಡೊಮಿನಿಕ್ ಮಾರ್ಟಿನ್ ಗಲ್ಫ್‌ನಲ್ಲಿ ಫೋರ್‌ಮ್ಯಾನ್ ಆಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ, ಅಲ್ಲಿಯೇ ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸುವ ತಂತ್ರವನ್ನು ಪತ್ತೆ ಮಾಡಿದ್ದ ಎಂದು ಹೇಳಲಾಗಿದೆ. ಇನ್ನು ಮಾರ್ಟಿನ್ ಎರಡು ವರ್ಷಗಳ ಹಿಂದೆ ಗಲ್ಫ್‌ನಿಂದ ಕೇರಳಕ್ಕೆ ಬಂದಿದ್ದಾನೆ. ಈ ಸ್ಫೋಟದ ಬಗ್ಗೆ ಅಂದಿನಿಂದಲೇ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಗಳ ಪ್ರಕಾರ ಈ ಬಾಂಬ್ಗೆ ಪಟಾಕಿಗಳಲ್ಲಿ ಬಳಸುವ ಕಡಿಮೆ ದರ್ಜೆಯ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ. ಇದರ ಜೋಡನೆಯ ಕೆಲಸವನ್ನು ಮಾರ್ಟಿನ್ ಮನೆಯಲ್ಲಿಯೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈ ಬಾಂಬ್ನ್ನು ಕ್ರೈಸ್ತ ಸಮಾವೇಶದಲ್ಲೇ ಸ್ಫೋಟಿಸುವುದು ಇತನ ಪ್ರಮುಖ ಉದ್ದೇಶವಾಗಿತ್ತು.
ಇದನ್ನೂ ಓದಿ: ಕೇರಳ ಸಿಎಂ ತೀವ್ರಗಾಮಿ ಎಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ದೂರು ದಾಖಲು
ಈ ಸ್ಫೋಟದ ನಂತರ ಸಾಮಾಜಿಕ ಜಾಲತಾಣದಲ್ಲಿ ಮಾರ್ಟಿನ್ ಒಂದು ಪೋಸ್ಟ್ನ್ನು ಕೂಡ ಹಂಚಿಕೊಂಡಿದ್ದ ಎಂದು ಹೇಳಲಾಗಿದೆ. ಈ ವಿಡಿಯೋದಲ್ಲಿ ಕೊಚ್ಚಿಯಲ್ಲಿ ನಡೆಯುತ್ತಿರುವ ಈ ಧರ್ಮ ಸಮಾವೇಶ “ದೇಶದ್ರೋಹಿ” ಆಗಿದೆ. ಈ ಕಾರಣಕ್ಕೆ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾನೆ. ಕ್ರೈಸ್ತ ಸಮುದಾಯ ಜನರಿಗೆ, ಮಕ್ಕಳಿಗೆ ತಪ್ಪು ಮೌಲ್ಯಗಳನ್ನು ಭೋದನೆ ಮಾಡುತ್ತಿದೆ. ಈ ಸಮಾವೇಶವನ್ನು ನಿಲ್ಲಿಸುವಂತೆ ಮಾರ್ಟಿನ್ ಹೇಳಿದ್ದ, ಆದರೆ ಆತನ ಮಾತನ್ನು ಯಾರು ಕೂಡ ಗಮನಿಸಿಲ್ಲ ಎಂದು ಹೇಳಿದ್ದಾನೆ.
ಈ ಸಮುದಾಯ ರಾಷ್ಟ್ರಕ್ಕೆ ಕೆಟ್ಟದನ್ನು ಬಯಸುತ್ತಿದೆ. ಈ ಕಾರಣಕ್ಕೆ ಹಲವು ದಿನಗಳಿಂದ ಈ ಕಾರ್ಯದಲ್ಲಿ ತೋಡಗಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಭಾನುವಾರ ಕೊಚ್ಚಿ ಬಳಿಯ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಮತ್ತು 12 ವರ್ಷದ ಬಾಲಕಿ ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದಾರೆ. ಯೆಹೋವನ ಸಾಕ್ಷಿಗಳ ಅಧಿವೇಶನದಲ್ಲಿ ಸುಮಾರು 2,000 ಜನರು ಹಾಜರಿದ್ದರು ಎಂದು ವರದಿ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Tue, 31 October 23