ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ 320 ಡೋಸ್ ಕೊವ್ಯಾಕ್ಸಿನ್ ನಾಪತ್ತೆ

|

Updated on: Apr 14, 2021 | 7:22 PM

320 dose of Covaxin: ಇಂದು ಬಿಡುಗಡೆಯಾದ ಕೊರೊನಾ ಸೋಂಕಿತರ ದತ್ತಾಂಶದ ಪ್ರಕಾರ ಜೈಪುರದಲ್ಲಿ ಈವರೆಗಿನ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 1,325 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಇಡೀ ರಾಜಸ್ಥಾನದಲ್ಲಿ 5,528 ಕೊರೊನಾ ಪ್ರಕರಣಗಳು ದಾಖಲಾಗಿವೆ.

ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ 320 ಡೋಸ್ ಕೊವ್ಯಾಕ್ಸಿನ್ ನಾಪತ್ತೆ
ಸಾಂದರ್ಭಿಕ ಚಿತ್ರ
Follow us on

ಜೈಪುರ: ಕೊರೊನಾ ಲಸಿಕೆ ಕೊರತೆ ಮತ್ತು ತೀವ್ರಗತಿಯ ಲಸಿಕೆ ವಿತರಣೆಯ ಕುರಿತು ದೇಶದೆಲ್ಲೆಡೆ ಸುದ್ದಿ ಗದ್ದಲ ಹೆಚ್ಚುತ್ತಿದೆ. ಇದರ ಬೆನ್ನಲ್ಲೇ ರಾಜಸ್ಥಾನದ ಜೈಪುರದ ಸರ್ಕಾರಿ ಆಸ್ಪತ್ರೆಯ ಶಿಥಲೀಕರಣ ಘಟಕದಿಂದ 320 ಡೋಸ್ ಕೊವ್ಯಾಕ್ಸಿನ್ ಲಸಿಕೆ ಕಾಣೆಯಾಗಿದೆ ಎಂದು ವರದಿಯಾಗಿದೆ. ಜೈಪುರದ ಹೆಚ್​ಬಿ ಕಾನ್​ವಾಟಿಯಾ ಆಸ್ಪತ್ರೆಯ ವೈದ್ಯರು ಕಳೆದ ರವಿವಾರ ಲಸಿಕೆಯ ದಾಸ್ತಾನು ಪರಿಶೀಲಿಸಿ 200 ಡೋಸ್ ಲಸಿಕೆಗಳು ದಾಸ್ತಾನಿವೆ ಎಂದು ದಾಖಲಿಸಿದ್ದರು. ಸೋಮವಾರ ಮತ್ತೆ 489 ಡೋಸ್ ಲಸಿಕೆ ಆಸ್ಪತ್ರೆಯನ್ನು ತಲುಪಿದ್ದು, ಎಲ್ಲಾ ಲಸಿಕೆಗಳ ಸಂಖ್ಯೆಯನ್ನು ಲೆಕ್ಕ ಮಾಡಿದಾಗ 320 ಡೋಸ್ ಲಸಿಕೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. 

ಲಸಿಕೆ ಸಂಗ್ರಹಣಾಗಾರದ ಹೊರಗೆ ಭದ್ರತಾ ಸಿಬ್ಬಂದಿ ಕಾವಲಿಗಿದ್ದರು. ಆಸ್ಪತ್ರೆ ಮಧ್ಯಮವರ್ಗದ ಜನಸಾಮಾನ್ಯರು ವಾಸಿಸುವ ಪ್ರದೇಶದಲ್ಲಿ ಈ ಆಸ್ಪತ್ರೆ ಇದೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಲಸಿಕೆ ಕಳ್ಳತನವಾದ ಕುರಿತು ಎಫ್​ಐಆರ್ ದಾಖಲಿಸಲಾಗಿದ್ದು, ಪೊಲೀಸರು ಸಿಸಿಟಿವಿ ವಿಡಿಯೋ ತುಣುಕು ಪರಿಶೀಲನೆ ನಡೆಸಿದ್ದಾರೆ.

ಇಂದು ಬಿಡುಗಡೆಯಾದ ಕೊರೊನಾ ಸೋಂಕಿತರ ದತ್ತಾಂಶದ ಪ್ರಕಾರ ಜೈಪುರದಲ್ಲಿ ಈವರೆಗಿನ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 1,325 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಇಡೀ ರಾಜಸ್ಥಾನದಲ್ಲಿ 5,528 ಕೊರೊನಾ ಪ್ರಕರಣಗಳು ದಾಖಲಾಗಿವೆ. ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಏರುತ್ತಿರುವ ಬೆನ್ನಲ್ಲೇ ಲಸಿಕೆ ಕಳ್ಳತನವಾಗಿರುವುದು ಮಹತ್ವ ಪಡೆದುಕೊಂಡಿದೆ.

ದೇಶದಲ್ಲೂ ಹೆಚ್ಚುತ್ತಿದೆ ಕೊರೊನಾ
ಭಾರತದಲ್ಲಿ ಮಂಗಳವಾರ 1,84,372 (1.84 ಲಕ್ಷ) ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,38,73,825 (1.38 ಕೋಟಿ)ಗೆ ಏರಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊವಿಡ್​ನಿಂದ ಸಾವಿಗೀಡಾದವರ ಸಂಖ್ಯೆ 1,027 ಆಗಿದ್ದು, ಒಟ್ಟು ಸಾವಿನ ಸಂಖ್ಯೆ 1,72,085ಕ್ಕೆ ತಲುಪಿದೆ. ಅದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 13,65,704 ಆಗಿದ್ದು 1,23,36,036 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ 11,11,79,578 ಮಂದಿ ಕೊವಿಡ್ ಲಸಿಕೆ ಪಡೆದಿದ್ದಾರೆ.

ಸಿಬಿಎಸ್​ಇ ಪರೀಕ್ಷೆ ರದ್ದು

ದೇಶದೆಲ್ಲೆಡೆ ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆಯಿಂದಾಗಿ ಶೈಕ್ಷಣಿಕ ವಲಯ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದಾಗಿ ಸಿಬಿಎಸ್​ಇ ಬೋರ್ಡ್​ನ 10 ಮತ್ತು 12ನೇ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸುವ ಕುರಿತು ಪ್ರಧಾನಿ ನರೇಂದ್ರ ಮೋದಿ, ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಾಲ್​ ನಿಶಾಂಕ್​ ಹಾಗೂ ಶಿಕ್ಷಣ ಇಲಾಖೆಯ ಪ್ರಮುಖರು ಸಭೆ ನಡೆಸಿದ್ದಾರೆ. ವಿವಿಧ ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸಿ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ 10ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿ, 12ನೇ ತರಗತಿ ಪರೀಕ್ಷೆಯ ದಿನಾಂಕ ಮುಂದೂಡಿ ಆದೇಶ ಹೊರಡಿಸಲಾಗಿದೆ. ಈ ಸಂದರ್ಭ ವಿದ್ಯಾರ್ಥಿಗಳ ಹಿತರಕ್ಷಣೆ ಮುಖ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾಗಿ ತಿಳಿದುಬಂದಿದೆ.

ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಕಷ್ಟವಿದೆ, ಹಾಗಂತ ಆನ್​ಲೈನ್​ ಪರೀಕ್ಷೆ ನಡೆಸಿದರೂ ದೇಶದ ಎಲ್ಲಾ ಭಾಗಗಳ ಮಕ್ಕಳಿಗೂ ಒಂದೇ ತೆರನಾಗಿ ತಂತ್ರಜ್ಞಾನ ಸೌಲಭ್ಯ ಸಿಗುತ್ತಿದೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಪರೀಕ್ಷೆಗಳನ್ನು ರದ್ದುಪಡಿಸಬೇಕು ಅಥವಾ ಮುಂದೂಡಬೇಕು ಎಂಬ ಕೂಗು ಕೇಳಿಬಂದಿತ್ತು. ಇದೀಗ ಶಿಕ್ಷಣ ಇಲಾಖೆಯ ಜತೆ ನಡೆದ ಸಭೆಯ ಬಳಿಕ 12ನೇ ತರಗತಿ ಪರೀಕ್ಷೆಯನ್ನು ಮುಂದೂಡಲಾಗಿದ್ದು ಅತಿ ಶೀಘ್ರದಲ್ಲಿ ಪರೀಕ್ಷಾ ದಿನಾಂಕವನ್ನು ತಿಳಿಸಲಾಗುವುದು ಹಾಗೂ 10ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ 11,265 ಮಂದಿಗೆ ಕೊರೊನಾ ಸೋಂಕು, 38 ಜನರ ಸಾವು

Karnataka SSLC Exam 2021: ಸಿಬಿಎಸ್​ಇ ಪರೀಕ್ಷೆ ರದ್ದಿನಂತೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬಗ್ಗೆ ತಕ್ಷಣಕ್ಕೆ ಯಾವುದೇ ತೀರ್ಮಾನವಿಲ್ಲ: ಸಚಿವ ಸುರೇಶ್ ಕುಮಾರ್

(320 dose of Covaxin missing in Jaipur Rajasthan)