ಕೊವಿಡ್ ಕಾಲದಲ್ಲಿ ಕುಂಭ ಮೇಳ: ಈ ಹಿಂದೆಯೂ ಸೋಂಕು ಹರಡುವಿಕೆಗೆ ಕಾರಣವಾಗಿತ್ತು ಧಾರ್ಮಿಕ ಆಚರಣೆ

Kumbh Mela 2021: 19ನೇ ಶತಮಾನ ಮತ್ತು 20ನೇ ಶತಮಾನದ ಆದಿಯಲ್ಲಿ ಉತ್ತರ ಭಾರತದಲ್ಲಿ ಕಾಲರಾ, ಪ್ಲೇಗ್ ರೋಗ ಹಬ್ಬಿದಾಗ ಇದ್ದ ಪರಿಸ್ಥಿತಿಯೇ ಈಗ ಇದ್ದು, ಕೊವಿಡ್ ಸಾಂಕ್ರಾಮಿಕದ ನಡುವೆಯೇ ಈ ಬಾರಿ ಕುಂಭಮೇಳ ನಡೆದಿದೆ.

ಕೊವಿಡ್ ಕಾಲದಲ್ಲಿ ಕುಂಭ ಮೇಳ: ಈ ಹಿಂದೆಯೂ ಸೋಂಕು ಹರಡುವಿಕೆಗೆ ಕಾರಣವಾಗಿತ್ತು ಧಾರ್ಮಿಕ ಆಚರಣೆ
ಕುಂಭ ಮೇಳ 2021
Follow us
ರಶ್ಮಿ ಕಲ್ಲಕಟ್ಟ
|

Updated on:Apr 14, 2021 | 4:46 PM

1918ರಲ್ಲಿ ಇನ್​ಫ್ಲೂಯೆಂಜಾ ಅಥವಾ ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ವ್ಯಾಪಿಸಿಕೊಂಡಿತ್ತು. ಇದಾಗಿ ಹಲವು ದಶಕಗಳ ನಂತರ ಕೊವಿಡ್ ಸಾಂಕ್ರಾಮಿಕದ ನಡುವೆಯೇ ಕುಂಭ ಮೇಳ ನಡೆಯುತ್ತಿದೆ. 1918 ಮತ್ತು 1919ರಲ್ಲಿ ಮೂರು ಅಲೆಗಳಾಗಿ ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ಹರಡಿದ್ದು, ವಿಶ್ವದಲ್ಲಿ ಈ ಪಿಡುಗಿಗೆ ಬಲಿಯಾದವರ ಸಂಖ್ಯೆ 5 ರಿಂದ 10 ಕೋಟಿ. ಭಾರತದಲ್ಲಿ ಈ ಸೋಂಕು 5ಕೋಟಿ ಜನರಿಗೆ ತಗುಲಿದ್ದು 1.8 ಕೋಟಿ ಮಂದಿ ಈ ರೋಗಕ್ಕೆ ಬಲಿಯಾಗಿದ್ದರು. ಕೊವಿಡ್ ಎರಡನೇ ಅಲೆಯ ಪರಿಣಾಮ ಕೊರೊನಾವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹೊತ್ತಿನಲ್ಲಿಯೇ ಹರಿದ್ವಾರದಲ್ಲಿ ಕುಂಭ ಮೇಳ ನಡೆಯುತ್ತಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಜನರು ಪಾಲ್ಗೊಳ್ಳುವ ಧಾರ್ಮಿಕ ಕಾರ್ಯಕ್ರಮವಾಗಿದೆ ಕುಂಭಮೇಳ. ಇಲ್ಲ ಪ್ರತಿ ದಿನ 10 ಲಕ್ಷಕ್ಕಿಂತಲೂ ಹೆಚ್ಚು ಜನ ಭಾಗವಹಿಸುತ್ತಾರೆ. ಮೂರು ಶುಭ ದಿನಗಳಲ್ಲಿ 50 ಲಕ್ಷಕ್ಕಿಂತಲೂ ಹೆಚ್ಚು ಜನ ಸೇರುತ್ತಾರೆ. ಒಟ್ಟಿನಲ್ಲಿ ಕುಂಭ ಮೇಳದಲ್ಲಿ ಭಾಗವಹಿಸುವ ಭಕ್ತರ ಸಂಖ್ಯೆ 10 ಕೋಟಿಯಿಂದ 15 ಕೋಟಿವರೆಗೆ ಇರುತ್ತದೆ. ಕುಂಭ ಮೇಳದಲ್ಲಿ ಭಾಗವಹಿಸುವವರು ಕೊವಿಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂಬ ಆದೇಶವಿದೆ. ಆದರೆ ಈ ಆದೇಶ ಕೇವಲ ಆದೇಶವಾಗಿಯೇ ಉಳಿದಿದೆ. ಅಲ್ಲಿ ಸೇರುವ ಜನರನ್ನು ನಿಯಂತ್ರಿಸುವುದೇ ಕಷ್ಟವಾಗಿರುವಾಗ ಸಾಮಾಜಿಕ ಅಂತರ, ಕಡ್ಡಾಯವಾಗಿ ಕೊವಿಡ್ ಪರೀಕ್ಷೆ ಅಥವಾ ಹ್ಯಾಂಡ್ ಸ್ಯಾನಿಟೈಜರ್ ಬಳಸುವಂತೆ ಹೇಳುವುದು ಕೂಡಾ ಕಷ್ಟವಾಗಿದೆ .

ಸೋಮವಾರದ ಅಂಕಿ ಅಂಶಗಳ ಪ್ರಕಾರ ಕುಂಭಮೇಳದಲ್ಲಿ ಭಾಗವಹಿಸಿದವರಲ್ಲಿ 102 ಮಂದಿಗೆ ಕೊವಿಡ್ ದೃಢಪಟ್ಟಿದೆ. ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರುವಾಗ ಕೊವಿಡ್ ಹಾಟ್​ಸ್ಪಾಟ್ ಆಗುವುದರಲ್ಲಿ ಅಚ್ಚರಿಯಿಲ್ಲ. ಅಲ್ಲಿ ಭಾಗವಹಿಸಿದ ಜನರು ಸೋಂಕು ವಾಹಕರಾಗಿ ಹತ್ತಿರದ ಪ್ರದೇಶಗಳಿಗೆ ಅಥವಾ ಅವರು ಸಂಚರಿಸುವ ಇತರ ಪ್ರದೇಶಗಳಿಗೂ ಸೋಂಕು ಹರಡುವಂತೆ ಮಾಡುತ್ತಾರೆ. ಕಳೆದ ಎರಡು ದಿನಗಳಲ್ಲಿ ಹರಿದ್ವಾರದಲ್ಲಿ 1,000ಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣಗಳು ವರದಿ ಆಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 2,812 ಆಗಿದೆ.

19ನೇ ಶತಮಾನ ಮತ್ತು 20ನೇ ಶತಮಾನದ ಆದಿಯಲ್ಲಿ ಉತ್ತರ ಭಾರತದಲ್ಲಿ ಕಾಲರಾ, ಪ್ಲೇಗ್ ರೋಗ ಹಬ್ಬಿದಾಗ ಇದ್ದ ಪರಿಸ್ಥಿತಿಯೇ ಈಗ ಇದ್ದು, ಕೊವಿಡ್ ಸಾಂಕ್ರಾಮಿಕದ ನಡುವೆಯೇ ಈ ಬಾರಿ ಕುಂಭಮೇಳ ನಡೆದಿದೆ. ಹರಿದ್ವಾರ ಮತ್ತು ಅಲಹಾಬಾದ್​ನಲ್ಲಿ 12 ವರ್ಷಗಳ ಅಂತರದಲ್ಲಿ ಕುಂಭ ಮೇಳ ನಡೆಯುತ್ತಿದ್ದು 6 ವರ್ಷಗಳ ಅಂತರದಲ್ಲಿ ಅರ್ಧ ಕುಂಭ ಮೇಳ ನಡೆಯುತ್ತದೆ.

ಈ ಹಿಂದೆ ಭಾರತದಲ್ಲಿ ಅಧಿಕಾರದಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿ ಮತ್ತು ಬ್ರಿಟಿಷ್ ಸರ್ಕಾರಗಳಿಗೆ ಕುಂಭ ಮೇಳ ದುಡ್ಡು ಮಾಡುವ ಕಾರ್ಯಕ್ರಮವಾಗಿತ್ತು. ಇತಿಹಾಸದ ಪುಟಗಳನ್ನು ತಿರುವಿದರೆ ಬ್ರಿಟಿಷರ ಕಾಲದಲ್ಲಿ ನಡೆಯುತ್ತಿದ್ದ ಕುಂಭಮೇಳದಲ್ಲಿ ಸಾವಿರಾರು ಮಂದಿ ಭಾಗವಹಿಸುತ್ತಿದ್ದು, ಇಲ್ಲಿ ಬರುವವರಿಗೆ ತೆರಿಗೆ ವಿಧಿಸಲಾಗುತ್ತಿತ್ತು. ಹೀಗೆ ಸೇರುವ ಕಾರ್ಯಕ್ರಮಗಳು ರೋಗ ಹರಡುವುದಕ್ಕೂ ಕಾರಣವಾಗುತ್ತದೆ ಎಂಬ ವಿಷಯ ಆಮೇಲೆ ಬ್ರಿಟಿಷ್ ಸರ್ಕಾರದ ಗಮನಕ್ಕೆ ಬಂದಿತ್ತು.

1959ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕಾಲರಾ ಬಗ್ಗೆ ಸರಣಿ ಪುಸ್ತಕಗಳನ್ನು ಪ್ರಕಟಿಸಿದ್ದು, ಇದರ ಪ್ರಕಾರ ಸಂಯುಕ್ತ ಪ್ರಾಂತ್ಯ (ಈಗಿನ ಉತ್ತರ ಪ್ರದೇಶ ಮತ್ತು ಉತ್ತರಾಖಂಡ), ಪಂಜಾಬ್ ನ ಕೆಲವು ಭಾಗಗಳಲ್ಲಿ ಅಲಹಾಬಾದ್ ಅಥವಾ ಹರಿದ್ವಾರದಲ್ಲಿ ಕುಂಭ ಮೇಳ ನಡೆದ ವರ್ಷ ಕಾಲರಾದಿಂದ ಸಾವಿಗೀಡಾದವರ ಸಂಖ್ಯೆ ಜಾಸ್ತಿಯಾಗಿತ್ತು. ಕುಂಭ ಮೇಳದಲ್ಲಿ ಭಾಗವಹಿಸಿದವರಿಂದಲೇ ಸೋಂಕು ಹೆಚ್ಚಾಗಿ ಹರಡಿತ್ತು.

1783 ಹರಿದ್ವಾರದಲ್ಲಿ ನಡೆದ ಕುಂಭ ಮೇಳದಲ್ಲಿ ಕಾಲರಾ ಸೋಂಕು ಕಾಣಿಸಿಕೊಂಡದ್ದು ಎಂಟು ವರ್ಷಗಳಲ್ಲಿ ಸುಮಾರು 20,000 ಜನರನ್ನು ಬಲಿತೆಗೆದುಕೊಂಡಿತ್ತು. 1879ರಲ್ಲಿ ಹರಿದ್ವಾರದಲ್ಲಿ ಕುಂಭ ಮೇಳ ನಡೆದಿತ್ತು. ಆಗ ಸಂಯುಕ್ತ ಪ್ರಾಂತ್ಯಗಳ 1000 ಜನರಿಗೆ ಒಬ್ಬರಂತೆ ಸಾವಿನ ಪ್ರಮಾಣ ಇತ್ತು. 1878ರಲ್ಲಿ ಇದೇ ಪ್ರದೇಶದಲ್ಲಿ ಕಾಲರಾದಿಂದ ಸಾವಿಗೀಡಾದವರ ಪ್ರಮಾಣ ಎರಡು ಪಟ್ಟಾಗಿತ್ತು. 1882ರಲ್ಲಿ ಅಲಹಾಬಾದ್​ನಲ್ಲಿ ಕುಂಭ ಮೇಳ ನಡೆದಾಗ ಸಂಯುಕ್ತ ಪ್ರಾಂತ್ಯಗಳಲ್ಲಿ 1000 ಜನರಲ್ಲಿ 2 ಸಾವು ಎಂಬಂತೆ ಇಲ್ಲಿ ಸಾವಿನ ಪ್ರಮಾಣವಿತ್ತು. 1885ರಲ್ಲಿ ಹರಿದ್ವಾರದಲ್ಲಿ ಅರ್ಧ ಕುಂಭ ನಡೆದಾಗ 1000 ಜನರ ಪೈಕಿ ಸರಿಸುಮಾರು 1.75 ಸಾವು ಎಂಬಂತೆ ಇಲ್ಲಿನ ಸಾವಿನ ಪ್ರಮಾಣ ಇತ್ತು, 1891ರಲ್ಲಿ 1000 ಮಂದಿಯಲ್ಲಿ 4 ಸಾವು, 1890ರಲ್ಲಿ ಇದರ ದುಪಟ್ಟು ಸಾವಿನ ಪ್ರಮಾಣ ವರದಿ ಆಗಿತ್ತು. 1906 ಅಲಹಾಬಾದ್​ ಕುಂಭ ಮೇಳದಲ್ಲಿ ಸಾವಿನ ಸಂಖ್ಯೆ ಏರಿಕೆ ಆಗಿದ್ದು 1000 ಮಂದಿಗೆ 3 ಮೂರು ಸಾವು 1900 ಅಲಹಾಬಾದ್ ಅರ್ಧ ಕುಂಭ ಮೇಳದಲ್ಲಿ ಸಾವಿನ ಸಂಖ್ಯೆ 1000 ಮಂದಿಗೆ 1.8 ಎಂಬಂತೆ ಇತ್ತು. 1913 , 1915 ಮತ್ತು 1921ರಲ್ಲಿ ಕುಂಭ ಮೇಳ ನಡೆದಾಗಲೂ ಸಾವಿನ ಸಂಖ್ಯೆ ಏರಿಕೆ ಆಗಿತ್ತು. ಈ ಅಂಕಿಗಳನ್ನು ಆರ್. ಪೊಲ್ಲಿಟ್ಜರ್ ಅವರು ಕಾಲರಾ ಸಾವಿನ ಬಗ್ಗೆ ಬರೆದ ವಿಶ್ಲೇಷಣೆಯಿಂದ ಪಡೆಯಲಾಗಿದೆ . ಇವುಗಳನ್ನು ನೋಡಿದರೆ ಕುಂಭಮೇಳ ಮತ್ತು ಕಾಲರಾ ಸಾವುಗಳು ಪರಸ್ಪರ ಸಂಬಂಧ ಹೊಂದಿವೆ.

1867ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭ ಮೇಳದಲ್ಲಿ ಮೊದಲ ಬಾರಿ ಕಾಲರಾ ಕಾಣಿಸಿಕೊಂಡಿದ್ದು, ಮೊದಲ ಬಾರಿ ಇಲ್ಲಿ ಸ್ಯಾನಿಟೈಜೇಷನ್ ನಡೆದಿತ್ತು. ಅಂದಿನ ಬ್ರಿಟಿಷ್ ಸರ್ಕಾರವು ಕುಂಭ ಮೇಳ ಪ್ರದೇಶಕ್ಕೆ ಜನರು ಬರುವುದನ್ನು ನಿಯಂತ್ರಿಸಿತ್ತು. ಹಾಗಾಗಿ ಇಲ್ಲಿ ಸಾವಿನ ಸಂಖ್ಯೆ ಕಡಿಮೆ ಆಗಿದ್ದು, ಮೇಳ ನಡೆಯುವ ಜಾಗದಲ್ಲಿ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು.

1879 ರ ಹರಿದ್ವಾರ್ ಕುಂಭಮೇಳದಲ್ಲಿ ವಸಾಹತುಶಾಹಿ ಬ್ರಿಟಿಷ್ ಸರ್ಕಾರದ ಪ್ರತಿನಿಧಿಗಳು ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರನ್ನು ಬಳಸಿದ್ದರು. ಇತಿಹಾಸದ ದಾಖಲೆಗಳ ಪ್ರಕಾರ ಅಧಿಕಾರಿಗಳು ಮೇಳ ನಡೆಯುವ ಜಾಗದಲ್ಲಿ ಸಣ್ಣ ವಸತಿ ಗೃಹಗಳಲ್ಲಿ ಹೆಚ್ಚು ಜನರು ಉಳಿದುಕೊಳ್ಳುವುದನ್ನು ತಡೆಯಲು ಕಾನೂನು ಮತ್ತು ಆದೇಶ ಹೊರಡಿಸಿದ ಪರಿಣಾಮ ನೈರ್ಮಲ್ಯ ವ್ಯವಸ್ಥೆಗಳು ಗಾಳಿಗೆ ತೂರಿ, ಸೋಂಕು ಮತ್ತಷ್ಟು ವ್ಯಾಪಿಸಲು ಕಾರಣವಾಯಿತು.

1885ರಲ್ಲಿ ಹರಿದ್ವಾರದಲ್ಲಿನ ಅರ್ಧ ಕುಂಭದದಲ್ಲಿ ಹೆಚ್ಚಿದ ನೈರ್ಮಲ್ಯ ವ್ಯವಸ್ಥೆಗಳ ಜತೆಗೆ ನಗರದ ಎಲ್ಲಾ ವಸತಿಗೃಹಗಳನ್ನು ನೋಂದಣಿ ಮಾಡಲಾಯಿತು. ಅದೇ ವೇಳೆ ವಸತಿಗೃಹದಲ್ಲಿ ಅನುಮತಿಸಲಾದ ಜನರ ಸಂಖ್ಯೆಯ ಮೇಲೆ ನಿಬಂಧನೆಗಳನ್ನಿರಿಸಲಾಯಿತು.

ಹರಿದ್ವಾರದಲ್ಲಿ 1891ರ ಕುಂಭಮೇಳ ಕಾಲರಾ ಸ್ಫೋಟದ ನಂತರ, ಹರಿದ್ವಾರ ಇಂಪ್ರೂವ್ಮೆಂಟ್ ಸೊಸೈಟಿಯನ್ನು ಸ್ಥಾಪಿಸಲಾಯಿತು. ಇದನ್ನು ದೇಶಾದ್ಯಂತದ ಹಿಂದೂಗಳು ಬೆಂಬಲಿಸಿದರು. ಅದೇ ವರ್ಷದಲ್ಲಿ ಭಾರತವು 5,80,000 ಕ್ಕೂ ಹೆಚ್ಚು ಕಾಲರಾ ಸಾವುಗಳನ್ನು ಕಂಡಿತು. ಕೊನೆಗೆ ಈ ರೀತಿಯ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಯಿತು. 20,00,000 ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಮೇಳ ನಡೆಯುವ ಪ್ರದೇಶದಿಂದ ಹೊರಗೆ ಕಳುಹಿಲಾಯಿತು ಎಂದು ಜಾರ್ಜ್ ಚೈಲ್ಡ್ ಕೊಹ್ನ್ ಅವರು ‘Encyclopedia of Plague and Pestilence: From Ancient Times to the Present ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಈ ಹೊತ್ತಲ್ಲಿ ಹರಿದ್ವಾರಕ್ಕೆ ರೈಲ್ವೆ ಪ್ರಯಾಣವನ್ನೂ ನಿರ್ಬಂಧಿಸಲಾಗಿತ್ತು.

ಮೇಳಗಳಲ್ಲಿ ಜನರು ಸೇರುವುದನ್ನು ನಿಯಂತ್ರಿಸಲು ಬ್ರಿಟಿಷ್ ಸರ್ಕಾರವು ಲಾಡ್ಜಿಂಗ್-ಹೌಸ್ ಆಕ್ಟ್ (ಆಕ್ಟ್ 1 ಆಫ್ 1892) ಅನ್ನು ಜಾರಿಗೆ ತಂದಿತು. ಉತ್ತಮ ನೈರ್ಮಲ್ಯ, ನೈರ್ಮಲ್ಯ ಅಭ್ಯಾಸಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಜನದಟ್ಟಣೆಯನ್ನು ತಡೆಗಟ್ಟುವುದು ಇದರ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ 1894 ರ ಕುಂಭಮೇಳ ನಡೆದು ಮತ್ತೆ ಕಾಲರಾ ಹರಡಿತು.1897 ಹರಿದ್ವಾರದಲ್ಲಿ ನಡೆದ ಅರ್ಧ ಕುಂಭ ಮೇಳದಲ್ಲಿ ಪ್ಲೇಗ್ ಹರಡಲು ಕಾರಣವಾಯಿತು. ಪ್ಲೇಗ್ ವ್ಯಾಪಕವಾಗಿ ಹರಡುತ್ತಿದ್ದಂತೆ ನಗರದ ಎಲ್ಲಾ ವಸತಿಗೃಹಗಳನ್ನು ಮುಚ್ಚಲಾಯಿತು ಮತ್ತು ಮೇಳ ನಡೆಯುವ ಪ್ರದೇಶಕ್ಕೆ ಭೇಟಿ ನೀಡುವ ಯಾತ್ರಿಕರನ್ನು ಪಟ್ಟಣದ ಹೊರಗಿನ ಶಿಬಿರದಲ್ಲಿ ಪ್ರತ್ಯೇಕವಾಗಿರಿಸಲಾಯಿತು.

kumbh mela

ಕುಂಭ ಮೇಳ

1894 ಅಲಹಾಬಾದ್​ನಲ್ಲಿ ನಡೆದ ಕುಂಭಮೇಳದಿಂದಾಗಿ ಅಲಹಾಬಾದ್​ನ ಸಮೀಪ ಪ್ರದೇಶಗಳಲ್ಲಿ ಕನಿಷ್ಠ 1,431 ಕಾಲರಾ ಸಾವುಗಳನ್ನು ಸಂಭವಿಸಿತ್ತು ಎಂದು ವಾಯುವ್ಯ ಪ್ರಾಂತ್ಯಗಳ ಮತ್ತು ಔಧ್​ನ ನೈರ್ಮಲ್ಯ ಆಯುಕ್ತರ ವಾರ್ಷಿಕ ವರದಿಯನ್ನು ಉಲ್ಲೇಖಿಸಿ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರೆಸ್ ಪ್ರಕಟಿಸಿದ ‘Culture and Power in Banaras’ಎಂಬ ಪುಸ್ತಕದಲ್ಲಿ ಬರೆದಿದೆ.

1906 ರ ಅಲಹಾಬಾದ್ ಕುಂಭಮೇಳದಲ್ಲಿ ಶುಚಿತ್ವ ಕಾಪಾಡಲಾಗಿತ್ತು. ಆದರೂ ಅಲ್ಲಿ ಕಾಲರಾ ರೋಗ ಕಾಣಿಸಿಕೊಂಡಿತ್ತು. ಹೆಚ್ಚಿನ ನದಿಗಳು ಬಹುತೇಕ ಒಣಗಿಹೋದಾಗ ಜನರು ಕಲುಷಿತ ನೀರು ಕುಡಿಯಬೇಕಾದ ಪರಿಸ್ಥಿತಿ ಬಂತು. ಕಲುಷಿತ ನೀರಿನ ಮೂಲಕ ಕಾಲರಾ ಹರಡುವುದರಿಂದ ಕಾಲರಾ ರೋಗಿಗಳ ಮಲ ಮೂತ್ರವು ದೊಡ್ಡ ಸಮಸ್ಯೆಯಾಗಿತ್ತು.

19ನೇ ಶತಮಾನ ಮತ್ತು 20ನೇ ಶತಮಾನದ ಆರಂಭದಲ್ಲಿ ಭಾರತದಲ್ಲಿ ಸಂಭವಿಸಿದ ಸಾವಿನ ಸಂಖ್ಯೆಯ ಶೇಕಡಾ 5 ರಷ್ಟು ಸಾವು ಕಾಲರಾದಿಂದಾಗಿದೆ. 20ನೇ ಶತಮಾನದ ಎರಡನೇ ತ್ರೈಮಾಸಿಕದಲ್ಲಿ ಸಾವಿನ ಪ್ರಮಾಣ ಕಡಿಮೆಯಾಗುತ್ತಾ ಬಂತು. 1906ರಲ್ಲಿ ಅಲಹಾಬಾದ್​ನಲ್ಲಿ ನಡೆದ ಕುಂಭ ಮೇಳದಲ್ಲಿ ಕೊನೆಯ ಬಾರಿ ಕಾಲರಾ ರೋಗ ವ್ಯಾಪಕವಾಗಿ ಹರಡಿತ್ತು.

ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್​ನ ಚಿನ್ಮಯ್ ತುಂಬೆ ಅವರ ‘Pandemics and Historical Mortality in India’ ಅಧ್ಯಯನ ವರದಿಯಲ್ಲಿ ಸ್ಟಾಟಿಸ್ಟಿಕಲ್ ಅಬ್ ಸ್ಟ್ರಾಕ್ಟ್ಸ್ ಆಫ್ ಬ್ರಿಟಿಷ್ ಇಂಡಿಯಾದ ಅಂಕಿ ಅಂಶಗಳನ್ನು ಉಲ್ಲೇಖಿಸಲಾಗಿದೆ. ಇದರ ಪ್ರಕಾರ ಸಂಯುಕ್ತ ಪ್ರಾಂತ್ಯಗಳಲ್ಲಿ 1877-1910ರ ಅವಧಿಯಲ್ಲಿ ಸಾವಿನ ಪ್ರಮಾಣ ಶೇ 1.4 ಆಗಿದ್ದು, 1911-1939ರ ಅವಧಿಯಲ್ಲಿ ಸಾವಿನ ಪ್ರಮಾಣ ಶೇ 0.9ಕ್ಕೆ ಇಳಿದಿತ್ತು.

ಇದನ್ನೂ ಓದಿ: ಥರ್ಮಲ್ ಸ್ಕ್ರೀನಿಂಗ್ ಇಲ್ಲ, ಮಾಸ್ಕ್ ಇಲ್ಲ; ಹರಿದ್ವಾರದ ಕುಂಭ ಮೇಳದಲ್ಲಿ ಭಾಗವಹಿಸಿದ 102 ಮಂದಿಗೆ ಕೊವಿಡ್

ಕೊವಿಡ್ ವಿರುದ್ಧದ ಹೋರಾಟಕ್ಕೆ ಲಸಿಕೆ ಮಾತ್ರ ಸಾಕಾಗುವುದಿಲ್ಲ; ಹೊಸ ರೂಪಾಂತರಿ ವೈರಸ್ ಆಟವೇ ಬೇರೆ

Published On - 4:39 pm, Wed, 14 April 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್