ಕೊವಿಡ್ ವಿರುದ್ಧದ ಹೋರಾಟಕ್ಕೆ ಲಸಿಕೆ ಮಾತ್ರ ಸಾಕಾಗುವುದಿಲ್ಲ; ಹೊಸ ರೂಪಾಂತರಿ ವೈರಸ್ ಆಟವೇ ಬೇರೆ
Covid Vaccine: ಪ್ರತಿಯೊಬ್ಬರು ಸುರಕ್ಷಿತರಾಗುವವರೆಗೆ ಯಾರೊಬ್ಬರೂ ಕೊವಿಡ್-19ನಿಂದ ಸುರಕ್ಷಿತರಾಗಿರುವುದಿಲ್ಲ. ಹೊಸ ರೂಪಾಂತರಿ ವೈರಸ್ ಗಳು ಹುಟ್ಟಿಕೊಳ್ಳುವುದನ್ನು ಮತ್ತು ಹರಡುವುದನ್ನು ತಡೆಯುವ ಮೂಲಕ ಜಾಗತಿಕ ಪ್ರಸರಣಕ್ಕೆ ಕಡಿವಾಣ ಹಾಕಲು ನಾವು ಸಮಯದ ವಿರುದ್ಧ ಸ್ಪರ್ಧೆ ನಡೆಸುತ್ತಿದ್ದೇವೆೆ
2020ರ ಕೊನೆಯಲ್ಲಿ ಕೊರೊನಾವೈರಸ್ ವಿರುದ್ಧ ಹೋರಾಡಲು ಲಸಿಕೆ ಉಪಯೋಗಕ್ಕೆ ಬರುತ್ತದೆ ಎಂಬ ಅಪಾರ ನಿರೀಕ್ಷೆ ಇತ್ತು. ಮುಂಬರುವ ದಿನಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇರುತ್ತದೆ, ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಹೊಸ ರೂಪಾಂತರಿ ವೈರಸ್ ಪತ್ತೆಯಾಗಿ ಜಗತ್ತಿನಾದ್ಯಂತ ಹರಡಲು ತೊಡಗಿದಾದ ಅಲ್ಲಿಯವರಿಗಿದ್ದ ಕೊರೊನಾವೈರಸ್ ನಿಯಂತ್ರಣ ಕ್ರಮ, ಲಸಿಕೆ ವಿತರಣೆ ಎಲ್ಲವನ್ನೂ ಹಳಿತಪ್ಪುವಂತೆ ಮಾಡಿತು. ಸರಳವಾಗಿ ಹೇಳಬೇಕಾದರೆ ಆಟವೇ ಬದಲಾಗಿ ಬಿಟ್ಟಿತು. ಜಗತ್ತಿನಾದ್ಯಂತ ಕೊವಿಡ್ ಲಸಿಕೆ ವಿತರಣೆ ಆಗಿದ್ದರೂ ಅದು ಫಲಪ್ರದವಾಗುತ್ತದೆ ಎಂಬ ಯಾವುದೇ ಭರವಸೆ ಇಲ್ಲದಂತಾಗಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಪ್ರತಿಯೊಬ್ಬರು ಸುರಕ್ಷಿತರಾಗುವವರೆಗೆ ಯಾರೊಬ್ಬರೂ ಕೊವಿಡ್-19ನಿಂದ ಸುರಕ್ಷಿತರಾಗಿರುವುದಿಲ್ಲ. ಹೊಸ ರೂಪಾಂತರಿ ವೈರಸ್ಗಳು ಹುಟ್ಟಿಕೊಳ್ಳುವುದನ್ನು ಮತ್ತು ಹರಡುವುದನ್ನು ತಡೆಯುವ ಮೂಲಕ ಜಾಗತಿಕ ಪ್ರಸರಣಕ್ಕೆ ಕಡಿವಾಣ ಹಾಕಲು ನಾವು ಸಮಯದ ವಿರುದ್ಧ ಸ್ಪರ್ಧೆ ನಡೆಸುತ್ತಿದ್ದೇವೆ . ಲಸಿಕೆಗಳು ಅಥವಾ ಮೊದಲಿನ ಸೋಂಕಿನಿಂದ ನೀಡಲ್ಪಟ್ಟ ಪ್ರತಿರೋಧಗಳಿಗಿಂತ ಶಕ್ತಿಶಾಲಿಯಾಗಿರುವ ರೂಪಾಂತರಿಗಳು ಹುಟ್ಟಿಕೊಳ್ಳುತ್ತಿರುವುದು ಅಪಾಯದ ಸಂಗತಿ. ಅನೇಕ ದೇಶಗಳು ಜಿನೋಮಿಕ್ (genomic) ಕಣ್ಗಾವಲು ಮೂಲಕ ಹೊಸತಾಗಿ ಹುಟ್ಟಿಕೊಳ್ಳುತ್ತಿರುವ ರೂಪಾಂತರಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಇದರರ್ಥ ಪರಿಸ್ಥಿತಿಯು ಗೋಚರಿಸುವುದಕ್ಕಿಂತ ಇನ್ನಷ್ಟು ಗಂಭೀರವಾಗಬಹುದು.
ಸಾರ್ವಜನಿಕ ಆರೋಗ್ಯದ ಕುರಿತಾದ ಲ್ಯಾನ್ಸೆಟ್ ಸಿಒವಿಐಡಿ -19 ಆಯೋಗದ ಕಾರ್ಯಪಡೆಯ ಸದಸ್ಯರಾಗಿರುವ ನಾವು ಹೊಸ ರೂಪಾಂತರಿಗಳಿಗೆ ಪ್ರತಿಕ್ರಿಯೆಯಾಗಿ ತುರ್ತು ಕ್ರಮಕ್ಕೆ ಕರೆ ನೀಡಿದ್ದೇವೆ. ಈ ಹೊಸ ರೂಪಾಂತರಿಗಳಿಂದ ರಕ್ಷಣೆ ಪಡೆಯಲು ನಾವು ಲಸಿಕೆಗಳನ್ನು ಮಾತ್ರ ಅವಲಂಬಿಸಲಾಗುವುದಿಲ್ಲ. ಆದರೆ ಈ ರೂಪಾಂತರಿಗಳಿಂದ ಅಪಾಯವನ್ನು ಕಡಿಮೆ ಮಾಡಲು ಕಟ್ಟುನಿಟ್ಟಿನ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ನಿರ್ವಹಿಸಬೇಕು. ಅದೇ ಸಮಯದಲ್ಲಿ, ನಾವು ಎಲ್ಲಾ ದೇಶಗಳಲ್ಲಿ ಲಸಿಕೆ ಕಾರ್ಯಕ್ರಮದ ವೇಗವನ್ನು ಸಮಾನ ರೀತಿಯಲ್ಲಿ ಹೆಚ್ಚಿಸಬೇಕಿದೆ. ಒಟ್ಟಿನಲ್ಲಿ, ಈ ಕಾರ್ಯತಂತ್ರಗಳಿಂದ ವೈರಸ್ನ ಗರಿಷ್ಠ ನಿಗ್ರಹ ಸಾಧ್ಯವಾಗಬಹುದು.
ರೂಪಾಂತರಿ ವೈರಸ್ ಬಗ್ಗೆ ಕಳವಳ ಏನು? SARS-CoV-2 ನಂತಹ ವೈರಸ್‌ಗಳ ಆನುವಂಶಿಕ ರೂಪಾಂತರಗಳು ಆಗಾಗ್ಗೆ ಹೊರಹೊಮ್ಮುತ್ತವೆ. ಆದರೆ ಕೆಲವು ರೂಪಾಂತರಿಗಳನ್ನು ಕಳವಳದ ರೂಪಾಂತರಿಗಳು (variants of concern) ಎಂದು ಲೇಬಲ್ ಮಾಡಲಾಗುತ್ತದೆ. ಏಕೆಂದರೆ ಅವುಗಳು ಹಿಂದಿನ ಸೋಂಕು ಅಥವಾ ಲಸಿಕೆ ಪಡೆದಿದ್ದ ಜನರಿಗೆ ಮತ್ತೆ ಸೋಂಕು ಹರಡುವಂತೆ ಮಾಡಬಹುದು ಅಥವಾ ಹೆಚ್ಚೆಚ್ಚು ಹರಡಬಹುದು. ಇಲ್ಲವೇ ಹೆಚ್ಚು ತೀವ್ರವಾದ ಕಾಯಿಲೆಗೆ ಕಾರಣವಾಗಬಹುದು.
ಪ್ರಸ್ತುತ ಕನಿಷ್ಠ ಮೂರು ದಾಖಲಿತ SARS-CoV-2 ರೂಪಾಂತರಿಗಳ ಬಗ್ಗೆ ಕಳವಳ ವ್ಯಕ್ತವಾಗಿದೆ
B.1.351, ಇದು ಡಿಸೆಂಬರ್ 2020 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರದಿಯಾಗಿತ್ತು B.1.1.7, ಬ್ರಿಟನ್ ನಲ್ಲಿ ಡಿಸೆಂಬರ್ 2020 ರಲ್ಲಿ ಮೊದಲು ವರದಿ ಆಗಿತ್ತು P.1 ಜನವರಿ 2021 ರಲ್ಲಿ ಬ್ರೆಜಿಲ್‌ನಿಂದ ಬಂದ ಪ್ರಯಾಣಿಕರಲ್ಲಿ ಜಪಾನ್‌ನಲ್ಲಿ ಮೊದಲು ಗುರುತಿಸಲ್ಪಟ್ಟಿದೆ. ಒಂದೇ ರೀತಿಯ ರೂಪಾಂತರಿಗಳು ವಿವಿಧ ದೇಶಗಳಲ್ಲಿ ಏಕಕಾಲದಲ್ಲಿ ಉದ್ಭವಿಸುತ್ತಿವೆ. ಗಡಿ ನಿಯಂತ್ರಣಗಳು ಮತ್ತು ಗರಿಷ್ಠ ಲಸಿಕೆ ವಿತರಣೆಯ ಹೊರತಾಗಿಯೂ ದೇಶವನ್ನು ವೈರಸ್ನಿಂದ ರಕ್ಷಿಸಲು ಸಾಧ್ಯವಾಗುತ್ತಿಲ್ಲ. ರೂಪಾಂತರಿ ವೈರಸ್ ಗಳ ಸಮುದಾಯ ಪ್ರಸರಣವೂ ಹೆಚ್ಚಿದೆ.
ಪ್ರಸರಣ ಮಟ್ಟ ಅಧಿಕ ಇದ್ದಲ್ಲಿ ಮತ್ತು ಜಗತ್ತಿನ ಯಾವುದಾದರೂ ಪ್ರದೇಶದಲ್ಲಿ SARS-CoV-2 ನ ವ್ಯಾಪಕವಾದ ಪುನರಾವರ್ತನೆ, ರೂಪಾಂತರಿಗಳ ಬಗ್ಗೆ ಕಳವಳ ಉದ್ಭವಿಸುತ್ತವೆ. ಅಷ್ಟೇ ಅಲ್ಲದೆ ಹೆಚ್ಚು ಸಾಂಕ್ರಾಮಿಕ ರೂಪಾಂತರಿಗಳು ಪ್ರಾಬಲ್ಯ ಸಾಧಿಸುತ್ತವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ರೂಪಾಂತರಿಗಳು ಹರಡುತ್ತವೆ.
ದಕ್ಷಿಣ ಆಫ್ರಿಕಾದಲ್ಲಿನ ಅನುಭವಗಳನ್ನು ನೋಡಿದರೆ SARS-CoV-2ನಿಂದ ಉಂಟಾದ ಸೋಂಕು B.1.351 ರೂಪಾಂತರಿಯ ವಿರುದ್ಧ ಭಾಗಶಃ ರಕ್ಷಣೆ ನೀಡುತ್ತದೆ ಎಂದು ಸೂಚಿಸುತ್ತದೆ. ಇದು ಮೊದಲೇ ಅಸ್ತಿತ್ವದಲ್ಲಿರುವ ರೂಪಾಂತರಿಗಳಿಗಿಂತ ಸುಮಾರು ಶೇಕಡಾ 50ರಷ್ಟು ಹೆಚ್ಚು ಹರಡುತ್ತದೆ. ಮಾರ್ಚ್ 2021 ರ ಹೊತ್ತಿಗೆ ಕನಿಷ್ಠ 48 ದೇಶಗಳಲ್ಲಿ ಬಿ .1.351 ರೂಪಾಂತರಿಗಳು ಈಗಾಗಲೇ ಪತ್ತೆಯಾಗಿದೆ.
ಹೊಸ ರೂಪಾಂತರಿಗಳ ಮೇಲೆ ಲಸಿಕೆಗಳ ಪ್ರಭಾವ ಅಷ್ಟೇನೂ ಕಂಡು ಬಂದಿಲ್ಲ. ಬ್ರಿಟನ್ ನ ಇತ್ತೀಚಿನ ಪುರಾವೆಗಳನ್ನು ಗಮನಿಸಿದರೆ ಫೈಜರ್ ಮತ್ತು ಆಸ್ಟ್ರಾಜೆನೆಕಾ ಲಸಿಕೆಗಳು ತೀವ್ರವಾದ ಕಾಯಿಲೆ ಮತ್ತು B .1.1.7 ರೂಪಾಂತರಿಗಳ ವಿರುದ್ಧ ಗಮನಾರ್ಹ ರಕ್ಷಣೆ ನೀಡುತ್ತದೆ ಎಂದು ಸೂಚಿಸುತ್ತದೆ. ಮತ್ತೊಂದೆಡೆ, B.1.351 ರೂಪಾಂತರಿಯು ಸೌಮ್ಯದಿಂದ ಮಧ್ಯಮ ಅನಾರೋಗ್ಯದ ವಿರುದ್ಧ ಅಸ್ಟ್ರಾಜೆನೆಕಾ ಲಸಿಕೆಯ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಇದು ತೀವ್ರವಾದ ಕಾಯಿಲೆಯ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂಬುದರ ಕುರಿತು ನಮಗೆ ಇನ್ನೂ ಸ್ಪಷ್ಟ ಪುರಾವೆಗಳಿಲ್ಲ.
ಈ ಕಾರಣಗಳಿಗಾಗಿ, ಸಮುದಾಯ ಪ್ರಸರಣವನ್ನು ಕಡಿಮೆ ಮಾಡುವುದು ಅತ್ಯಗತ್ಯ. ವೈರಸ್ ಹರಡುವುದನ್ನು ತಡೆಯಲು ಯಾವುದೇ ಒಂದು ಕ್ರಿಯೆ ಸಾಕಾಗುವುದಿಲ್ಲ. ಪ್ರತಿ ದೇಶದಲ್ಲಿ ಲಸಿಕೆ ವಿತರಣೆ ಕಾರ್ಯಕ್ರಮಗಳಿಗೆ ಅನುಗುಣವಾಗಿ ನಾವು ಕಟ್ಟುನಿಟ್ಟಿನ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ನಿರ್ವಹಿಸಬೇಕು.
ಗರಿಷ್ಠ ನಿಗ್ರಹ ಯಾಕೆ ಮಾಡಬೇಕಿದೆ? ಪ್ರತಿ ಬಾರಿ ವೈರಸ್ ಪುನಾವರ್ತಿತಗೊಂಡು (replicate) ರೂಪಾಂತರ ಸಂಭವಿಸುವ ಅವಕಾಶವಿದೆ. ಈಗಾಗಲೇ ಪ್ರಪಂಚದಾದ್ಯಂತ ನೋಡುತ್ತಿರುವಂತೆ ಕೆಲವು ರೂಪಾಂತರಿಗಳು ಲಸಿಕೆಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ನಾವು ಗರಿಷ್ಠ ನಿಗ್ರಹ ಮಾಡುವ ಜಾಗತಿಕ ಕಾರ್ಯತಂತ್ರಕ್ಕೆ ಕರೆ ನೀಡಿದ್ದೇವೆ.
ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಸಾಂಕ್ರಾಮಿಕ ಸೋಂಕಿನ ಪ್ರಮಾಣವನ್ನು ಗರಿಷ್ಠವಾಗಿ ನಿಗ್ರಹಿಸುವ ಪ್ರಯತ್ನಗಳತ್ತ ಗಮನ ಹರಿಸಬೇಕು. ಹೀಗಾದರೆ ಮಾತ್ರ ರೂಪಾಂತರಿಗಳ ಪ್ರಸರಣ ತಡೆಯಲು ಸಹಾಯವಾಗುತ್ತದೆ. ಇದಕ್ಕಾಗಿ ನಿಯಮಿತವಾದ ಲಸಿಕೆವಿತರಣೆ ಮಾತ್ರ ಸಾಕಾಗುವುದಿಲ್ಲ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡುವುದು ಮೊದಲಾದ ಕ್ರಮಗಳು ಸಹ ಬಹಳ ಮುಖ್ಯ. ಒಳಾಂಗಣ ಸ್ಥಳಗಳಲ್ಲಿ ವೆಂಟಿಲೇಷನ್ ಮುಖ್ಯವಾಗಿರುತ್ತದೆ. ಕೆಲವೆಡೆ ಇದು ಜನರ ನಿಯಂತ್ರಣದಲ್ಲಿರುತ್ತದೆ ಇನ್ನು ಕೆಲವಡೆ ಕಟ್ಟಡಗಳನ್ನು ಇದಕ್ಕಾಗಿ ಹೊಂದಿಸಿಕೊಳ್ಳಬೇಕಾಗುತ್ತದೆ.
ಲಸಿಕೆ ಪಡೆಯುವಿಕೆಯೂ ನ್ಯಾಯಸಮ್ಮತವಾಗಿರಬೇಕು ಲಸಿಕೆ ಪಡೆಯುವಲ್ಲಿ ಜಾಗತಿಕ ನ್ಯಾಯವೂ ಮುಖ್ಯವಾಗಿರುತ್ತದೆ. ಹೆಚ್ಚಿನ ಆದಾಯದ ದೇಶಗಳು ಕೋವಾಕ್ಸ್ ಸೌಲಭ್ಯದಂತಹ ಬಹುಪಕ್ಷೀಯ ಕಾರ್ಯವಿಧಾನಗಳನ್ನು ಬೆಂಬಲಿಸಬೇಕು. ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ ಹೆಚ್ಚುವರಿ ಲಸಿಕೆಗಳನ್ನು ದಾನ ಮಾಡಬೇಕು ಮತ್ತು ಹೆಚ್ಚಿದ ಲಸಿಕೆ ಉತ್ಪಾದನೆಯನ್ನು ಬೆಂಬಲಿಸಬೇಕು.
ಆದಾಗ್ಯೂ ವೈರಲ್ ರೂಪಾಂತರಿಗಳು ಹುಟ್ಟುವುದನ್ನು ತಡೆಗಟ್ಟಲು, ಹೆಚ್ಚಿನ ರೋಗ ಹರಡುವಿಕೆ ಮತ್ತು ಪ್ರಸರಣ ಮಟ್ಟವನ್ನು ಹೊಂದಿರುವ ದೇಶಗಳು ಅಥವಾ ಪ್ರದೇಶಗಳಿಗೆ ಆದ್ಯತೆ ನೀಡುವುದು ಅಗತ್ಯವಾಗಬಹುದು. ಅಲ್ಲಿ ಅಂತಹ ರೂಪಾಂತರಿಗಳು ಹೊರಹೊಮ್ಮುವ ಅಪಾಯವು ಹೆಚ್ಚು.
ಆರೋಗ್ಯ ರಕ್ಷಣೆ ಸಂಪನ್ಮೂಲಗಳು, ಸೇವೆಗಳು ಮತ್ತು ವ್ಯವಸ್ಥೆಗಳ ಮೇಲೆ ನಿಯಂತ್ರಣ ಹೊಂದಿರುವವರು ಕೊವಿಡ್- 19 ಅಲ್ಲದ ರೋಗಿಗಳ ಆರೈಕೆಯನ್ನು ಕಡಿಮೆ ಮಾಡದೆ ಹೆಚ್ಚಿನ ಆಸ್ಪತ್ರೆಗಳನ್ನು ನಿರ್ವಹಿಸಲು ಆರೋಗ್ಯ ಕಾರ್ಯಕರ್ತರಿಗೆ ಬೆಂಬಲ ನೀಡಬೇಕಿದೆ.
ಭವಿಷ್ಯದ ರೂಪಾಂತರಿಗಳ ವಿರುದ್ಧ ಆರೋಗ್ಯ ವ್ಯವಸ್ಥೆಗಳನ್ನು ಉತ್ತಮವಾಗಿ ಸಿದ್ಧಪಡಿಸಬೇಕು. ಅದಕ್ಕಾಗಿ ಪ್ರಯತ್ನಗಳು ಹೀಗಿರಬೇಕು
ಪ್ರಪಂಚದಾದ್ಯಂತ ಸಾಧ್ಯವಾದಷ್ಟು ದೇಶಗಳಲ್ಲಿ ರೂಪಾಂತರಿಗಳನ್ನು ಗುರುತಿಸಲು ಮತ್ತು ತ್ವರಿತವಾಗಿ ನಿರೂಪಿಸಲು ಜಿನೋಮಿಕ್ ಕಣ್ಗಾವಲು ಕಾರ್ಯಕ್ರಮಗಳು
ಕ್ಷಿಪ್ರ ದೊಡ್ಡ-ಪ್ರಮಾಣದ ಎರಡನೇ ತಲೆಮಾರಿನ ಲಸಿಕೆ ಕಾರ್ಯಕ್ರಮಗಳು ಮತ್ತು ಲಸಿಕೆ ವಿತರಣೆಯಲ್ಲಿ ಸಮಾನತೆಯನ್ನು ಬೆಂಬಲಿಸುವ ಉತ್ಪಾದನಾ ಸಾಮರ್ಥ್ಯ ಹೆಚ್ಚು ಮಾಡಬೇಕು
ಅಸ್ತಿತ್ವದಲ್ಲಿರುವ ಮತ್ತು ಕಳವಳವುಳ್ಳ ಹೊಸ ರೂಪಾಂತರಿಗಳ ಮೇಲೆ ಲಸಿಕೆ ಪರಿಣಾಮಕಾರಿತ್ವದ ಅಧ್ಯಯನಗಳು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವು ದು (ಉದಾಹರಣೆಗೆ ಡಬಲ್ ಮಾಸ್ಕಿಂಗ್) ಮತ್ತು ಆರೋಗ್ಯ ವ್ಯವಸ್ಥೆಯ ವ್ಯವಸ್ಥೆಗಳಿಗೆ ಮರು-ಬದ್ಧತೆ (ಆರೋಗ್ಯ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಖಾತರಿಪಡಿಸುವಂತವುಗಳು)
ನಡವಳಿಕೆ, ಪರಿಸರ, ಸಾಮಾಜಿಕ ಮತ್ತು ವ್ಯವಸ್ಥೆಗಳ ಮಧ್ಯಸ್ಥಿಕೆಗಳು, ಉದಾಹರಣೆಗೆ ವೆಂಟಿಲೇಷನ್ ನೀಡುವುದು, ಜನರ ನಡುವೆ ಅಂತರವಿರಿಸುವುದು ಮತ್ತು ಪರಿಣಾಮಕಾರಿ ಶೋಧ, ಪರೀಕ್ಷೆ, ನಿಗಾ, ಪ್ರತ್ಯೇಕಿಸುವಿಕೆ ಮತ್ತು ಬೆಂಬಲದ ವ್ಯವಸ್ಥೆ.
COVID-19 ರೂಪಾಂತರಿಗಳು ಆಟವನ್ನು ಬದಲಾಯಿಸಿವೆ. ಜಾಗತಿಕ ಸಮಾಜವಾಗಿ ನಾವು ಭವಿಷ್ಯದ ಸೋಂಕುಗಳ ಅಲೆಗಳನ್ನು ತಪ್ಪಿಸಬೇಕಾದರೆ, ಇನ್ನೂ ಹೆಚ್ಚಿನ ಲಾಕ್‌ಡೌನ್‌ಗಳು ಮತ್ತು ನಿರ್ಬಂಧಗಳು ಮಾಡಬೇಕು. ಅನಾರೋಗ್ಯ ಮತ್ತು ಸಾವುಗಳನ್ನು ತಪ್ಪಿಸಬೇಕಾದರೆ ನಾವು ಇದನ್ನು ಗುರುತಿಸಬೇಕು ಮತ್ತು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಬೇಕು.
ಇದನ್ನೂ ಓದಿ: Corona second wave: ದುರ್ಬಲ ವರ್ಗದ ಜನರ ರಕ್ಷಣೆಗೆ ಯಾವ ದೇಶಗಳು ಏನು ಮಾಡಿವೆ ಮೌಲ್ಯಮಾಪನವಾಗಲಿ ಎಂದ ನಿರ್ಮಲಾ
Published On - 3:05 pm, Mon, 12 April 21