ಮಹಾಕುಂಭಮೇಳದಲ್ಲೊಂದು ಸುಂದರ ಸಂಗಮ; 5ವರ್ಷದ ಹಿಂದೆ ಅರ್ಧಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಮತ್ತೆ ಕುಟುಂಬ ಕೂಡಿಕೊಂಡದ್ದು ಹೇಗೆ?
2016ರಲ್ಲಿ ಕೃಷ್ಣಾ ದೇವಿ ತನ್ನ ಕಿರಿಯಪುತ್ರಿಯನ್ನು ಕಳೆದುಕೊಂಡಿದ್ದರು. ಈ ದುಃಖದಲ್ಲಿದ್ದ ಅವರು ಹರಿದ್ವಾರದಲ್ಲಿ ನಡೆದಿದ್ದ ಅರ್ಧಕುಂಭ ಮೇಳದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಅರ್ಧ ಕುಂಭಮೇಳಕ್ಕೆ ಹೋಗಿದ್ದ ಕೃಷ್ಣಾ ದೇವಿ ಅಲ್ಲಿ ದಾರಿ ತಪ್ಪಿ ಬೇರೆಡೆಗೆ ನಡೆದಿದ್ದರು.
ಹರಿದ್ವಾರ: ಇದೊಂದು ಪವಾಡವೇ ಎಂದು ಹೇಳಬೇಕು. ಅರ್ಧಕುಂಭಮೇಳದಲ್ಲಿ ಕುಟುಂಬದಿಂದ ದೂರವಾಗಿದ್ದ ಉತ್ತರ ಪ್ರದೇಶದ 65ವರ್ಷದ ಮಹಿಳೆಯೊಬ್ಬರು 5 ವರ್ಷಗಳ ಬಳಿಕ ಈಗ ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮತ್ತೆ ಮನೆಯವರೊಂದಿಗೆ ಕೂಡಿಕೊಂಡ ಘಟನೆ ನಡೆದಿದೆ. 2016ರಲ್ಲಿ ಹರಿದ್ವಾರದಲ್ಲಿ ನಡೆದಿದ್ದ ಅರ್ಧಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಕೃಷ್ಣಾದೇವಿ ಕಾಣೆಯಾದ ನಂತರ ಮನೆಯವರು ದೂರು ನೀಡಿದ್ದರು. ಜಾಹೀರಾತುಗಳನ್ನು ಕೂಡ ನೀಡಿ, ತುಂಬ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಆದರೆ ಈ ಬಾರಿ ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮತ್ತೆ ತಮ್ಮ ಕುಟುಂಬದವರ ಜತೆ ಕೂಡಿದ್ದಾರೆ.
2016ರಲ್ಲಿ ಕೃಷ್ಣಾ ದೇವಿ ತನ್ನ ಕಿರಿಯಪುತ್ರಿಯನ್ನು ಕಳೆದುಕೊಂಡಿದ್ದರು. ಈ ದುಃಖದಲ್ಲಿದ್ದ ಅವರು ಹರಿದ್ವಾರದಲ್ಲಿ ನಡೆದಿದ್ದ ಅರ್ಧಕುಂಭ ಮೇಳದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಅರ್ಧ ಕುಂಭಮೇಳಕ್ಕೆ ಹೋಗಿದ್ದ ಕೃಷ್ಣಾ ದೇವಿ ಅಲ್ಲಿ ದಾರಿ ತಪ್ಪಿ ಬೇರೆಡೆಗೆ ನಡೆದಿದ್ದರು. ಬಳಿಕ ಒಂದು ವಸತಿ ಗೃಹದಲ್ಲಿ ಆಶ್ರಯ ಪಡೆದು, ವಾರಗಳ ಬಳಿಕ ಮತ್ತೊಂದು ವಸತಿಗೃಹಕ್ಕೆ ಹೋಗಿದ್ದರು. ಆದರೆ ಮನೆಯವರು ಎಷ್ಟೇ ಪ್ರಯತ್ನ ಪಟ್ಟರೂ ಅವರನ್ನು ಹುಡುಕಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿಯ ಮಹಾಕುಂಭಮೇಳದಲ್ಲಿ ಇಲ್ಲಿಗೆ ಬರುವವರ ಗುರುತು ಪರಿಶೀಲನೆ ಮಾಡುವ ವೇಳೆ ಇವರು ಅಂದು ಕಾಣೆಯಾದ ಕೃಷ್ಣಾ ದೇವಿ ಎಂಬುದು ಗೊತ್ತಾಗಿದೆ.
ಅಂದು ಕೃಷ್ಣಾದೇವಿ ನಾಪತ್ತೆಯಾದಾಗಿನಿಂದಲೂ ಎಲ್ಲ ಧಾರ್ಮಿಕ ಪ್ರದೇಶಗಳಲ್ಲೂ ಹುಡುಕಿದ್ದೇವೆ. ಪೇಪರ್ಗಳಲ್ಲಿ ಫೋಟೋ ಹಾಕಿದ್ದೆವು. ಟಿವಿಗಳನ್ನೂ ಜಾಹಿರಾತು ಕೊಟ್ಟಿದ್ದೆವು. ಉದಯ್ಪುರ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ವರ್ಷಗಳು ಕಳೆಯುತ್ತಿದ್ದವು ಹೊರತು ಈಕೆ ಮಾತ್ರ ಸಿಗುತ್ತಿರಲಿಲ್ಲ ಎಂದು ಕೃಷ್ಣಾದೇವಿ ಪತಿ ಜ್ವಾಲಾಪ್ರಸಾದ್ ತಿಳಿಸಿದ್ದಾರೆ. ಯಾವುದೇ ಕುಂಭಮೇಳವಾದರೂ ಇಲ್ಲಿಗೆ ಭೇಟಿ ನೀಡುವವರ ಗುರುತು ಪರಿಶೀಲನೆಯನ್ನು ಪೊಲೀಸರು ನಡೆಸುತ್ತಾರೆ.