ದೆಹಲಿ: ಲಖಿಂಪುರ ಖೇರಿ (Lakhimpur Kheri)ಯಲ್ಲಿ ಅಕ್ಟೋಬರ್ 3ರಂದು ರೈತರ ಮೇಲೆ ಕಾರು ಹರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲ ಆಶೀಶ್ ಮಿಶ್ರಾ ಆಪ್ತರು ಎಂದು ಹೇಳಲಾಗಿದ್ದು, ಒಬ್ಬ ಬಿಜೆಪಿ ಕಾರ್ಯಕರ್ತ ಇದ್ದಾರೆ. ಘಟನೆ ನಡೆದಾಗ ಈ ನಾಲ್ವರೂ ಎಸ್ಯುವಿ ವಾಹನದ ಮೇಲೆ ಇದ್ದರು . ಅಲ್ಲಿಗೆ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 10ಕ್ಕೇರಿಕೆಯಾಗಿದೆ.
ಲಖಿಂಪುರ ಖೇರಿ ಪೊಲೀಸ್ ಕ್ರೈಂಬ್ರ್ಯಾಂಚ್ ಇದೀಗ ನಾಲ್ವರನ್ನು ಬಂಧಿಸಿದೆ. ಇದೀಗ ಬಂಧಿತರಾಗಿರುವ ನಾಲ್ವರನ್ನು ಎಸ್ಐಟಿ ಅಧಿಕಾರಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ವಿಚಾರಣೆ ನಡೆಯುತ್ತಿದೆ. ಬಂಧಿತರ ಹೇಳಿಕೆ ಆಧಾರದ ಮೇಲೆ ತನಿಖೆಯೂ ನಡೆಯುತ್ತಿದೆ ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬಂಧನಕ್ಕೆ ಒಳಗಾದವರನ್ನು ಸುಮಿತ್ ಜೈಸ್ವಾಲ್, ಶಿಶಿಪಾಲ್, ಸತ್ಯ ಪ್ರಕಾಶ್ ತ್ರಿಪಾಠಿ ಮತ್ತು ನಂದನ್ ಸಿಂಗ್ ಬಿಸ್ತ್ ಎಂದು ಹೇಳಲಾಗಿದೆ. ಇನ್ನು ಪ್ರಕರಣದಲ್ಲಿ ಮುಖ್ಯ ಆರೋಪಿಗಳೆನಿಸಿರುವ ಆಶೀಶ್ ಮಿಶ್ರಾ, ಅಂಕಿತ್ ದಾಸ್, ಆಶೀಶ್ ಪಾಂಡೆ, ಲವಕುಶ್ ರಾಣಾ, ಶೇಖರ್ ಭಾರ್ತಿ ಮತ್ತು ಲತೀಫ್ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ.
ಇವರಲ್ಲಿ ಸುಮಿತ್ ಜೈಸ್ವಾಲ್ ತನ್ನನ್ನು ತಾನು ಬಿಜೆಪಿ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದಾರೆ. ಅಯೋಧ್ಯಾಪುರಿ ನಿವಾಸಿಯಾಗಿದ್ದು, ಅಂದು ಘಟನೆ ನಡೆದಾಗ ಬನ್ಬೀರ್ ಪುರದಲ್ಲಿ ನಡೆಯಲಿದ್ದ ಕುಸ್ತಿ ಕಾರ್ಯಕ್ರಮಕ್ಕೆ ಉತ್ತರಪ್ರದೇಶ ಡೆಪ್ಯೂಟಿ ಸಿಎಂ ಕೇಶವ್ ಮೌರ್ಯ ಅವರನ್ನು ಸ್ವಾಗತಿಸಲು ಹೊರಟಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗೇ, ರೈತರ ಮೇಲೆ ಕಾರು ಹರಿದ ವಿಡಿಯೋ ವೈರಲ್ ಆದಾಗ, ಅದರಲ್ಲೊಂದು ಎಸ್ಯುವಿ ವಾಹನದಿಂದ ವ್ಯಕ್ತಿಯೊಬ್ಬ ಓಡಿದ ದೃಶ್ಯ ಕಂಡುಬಂದಿತ್ತು. ಆ ವ್ಯಕ್ತಿ ಇದೇ ಸುಮಿತ್ ಎಂದೂ ಹೇಳಲಾಗಿದೆ. ಇನ್ನು ಘಟನೆಯನ್ನು ವಿವರಿಸಿದ ಜೈಸ್ವಾಲ್, ಅಂದು ತುಂಬ ಭೀಕರ ಸನ್ನಿವೇಶ ಇತ್ತು. ಅಲ್ಲಿದ್ದವರ ಕೈಯಲ್ಲಿ (ರೈತರು) ಕೋಲು, ಕಲ್ಲು, ಬಡಿಗೆಗಳು ಇದ್ದವು. ಅವರೆಲ್ಲ ನಮ್ಮ ಮೇಲೆ ದಾಳಿ ಮಾಡಿದರು. ನಿಂದಿಸಿದರು..ಅಷ್ಟೇ ಅಲ್ಲ, ಖಲಿಸ್ತಾನ್ ಜಿಂದಾಬಾದ್ ಎಂದು ಕೂಗುತ್ತಿದ್ದರು..ಎಂದು ಹೇಳಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ‘ಬಿಕ್ಷೆ ಬೇಡಲು ಬಯಸೋದಿಲ್ಲ’ ಪುಣೆ ಬೀದಿಗಳಲ್ಲಿ ಪೆನ್ನು ಮಾರಿ ಜೀವನ ನಡೆಸುತ್ತಿದ್ದಾರೆ ಸ್ವಾವಲಂಬಿ ವೃದ್ಧೆ
Published On - 9:56 am, Tue, 19 October 21