
ನವದೆಹಲಿ, ಅಕ್ಟೋಬರ್ 5: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 5 ಚೀತಾ ಮರಿಗಳು ಜನ್ಮ ತಾಳುವ ಮೂಲಕ ಭಾರತದ ಚೀತಾಗಳ ಸಂತತಿಯು ಮತ್ತಷ್ಟು ವೃದ್ಧಿಯಾಗಿದೆ. ಈ ನೂತನ ಮರಿಗಳ ಆಗಮನದೊಂದಿಗೆ ದೇಶದಲ್ಲಿ ಚೀತಾಗಳ ಒಟ್ಟು ಸಂಖ್ಯೆಯು 60ಕ್ಕೆ ಏರಿಕೆಯಾಗಿದ್ದು, ಇವುಗಳಲ್ಲಿ 41 ಚೀತಾಗಳು ಭಾರತದ ಮಣ್ಣಿನಲ್ಲೇ ಜನ್ಮತಾಳಿವೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಇಂದು ಈ ಕುರಿತು ಅಧಿಕೃತವಾಗಿ ಪ್ರಕಟಿಸಿದ್ದು, ‘ಪ್ರಾಜೆಕ್ಟ್ ಚೀತಾ’ ಸಂರಕ್ಷಣಾ ಯೋಜನೆಯಲ್ಲಿ ಶ್ರಮಿಸುತ್ತಿರುವ ಪಶುವೈದ್ಯರು, ಅರಣ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ನಿರ್ವಹಣಾ ತಂಡದ ಪ್ರಯತ್ನಗಳನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.
5 ಮರಿಗಳಿಗೆ ಜನ್ಮ ನೀಡಿರುವ ‘KJP21’ ಎಂಬ ಹೆಣ್ಣು ಚೀತಾ ಭಾರತದಲ್ಲೇ ಜನ್ಮತಾಳಿದ ಮೂರನೇ ಹೆಣ್ಣು ಚೀತಾವಾಗಿದೆ (ಮುಖಿ ಮತ್ತು KGP12 ನಂತರ). ಭಾರತದಲ್ಲೇ ಹುಟ್ಟಿ ಬೆಳೆದ ಚೀತಾವೊಂದು ಮತ್ತೊಂದು ಪೀಳಿಗೆಗೆ ಜನ್ಮ ನೀಡಿರುವುದು ಯೋಜನೆಯ ಯಶಸ್ಸನ್ನು ಎತ್ತಿಹಿಡಿದಿದೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಸಲಾಗುತ್ತಿರುವ ನಿರಂತರ ವೈಜ್ಞಾನಿಕ ನಿರ್ವಹಣೆ, ಸೂಕ್ತ ಕಾವಲು ಮತ್ತು ಅರಣ್ಯ ಸಿಬ್ಬಂದಿಯ ಭಾರಿ ಶ್ರಮದಿಂದಾಗಿ ಭಾರತದಲ್ಲಿ ಚೀತಾಗಳ ಮುಂದಿನ ಪೀಳಿಗೆಯು ಯಶಸ್ವಿಯಾಗಿ ಸ್ಥಾಪನೆಯಾಗುತ್ತಿದೆ.
ಇದನ್ನೂ ಓದಿ: ಪ್ರಾಣಿ ಪ್ರಿಯರಿಗೆ ಗುಡ್ನ್ಯೂಸ್: ದಕ್ಷಿಣ ಆಫ್ರಿಕಾದ ಚೀತಾಗಳು ಬನ್ನೇರುಘಟ್ಟದಲ್ಲಿ ಜೂನ್ 4ರಿಂದ ವೀಕ್ಷಣೆಗೆ ಲಭ್ಯ
ಈ ಮರಿಗಳ ಜನನವನ್ನು ಭಾರತದ ಚೀತಾ ಸಂತತಿಯ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ. ಮರಿಗಳ ತಂದೆಯನ್ನು ಬೋಟ್ಸ್ವಾನಾದಿಂದ ತಂದಿರುವುದರಿಂದ, ಈ ಹೊಸ ಆಗಮನವು ಭಾರತದಲ್ಲಿ ‘ಬೋಟ್ಸ್ವಾನಾ ವಂಶಾವಳಿ’ಯ ಆರಂಭಕ್ಕೆ ನಾಂದಿ ಹಾಡಿದೆ. ಇದು ದೇಶದಲ್ಲಿ ಬೆಳೆಯುತ್ತಿರುವ ಚೀತಾಗಳ ತಳಿ ವೈವಿಧ್ಯತೆಗೆ ನೂತನ ಆನುವಂಶಿಕ ಶಕ್ತಿಯನ್ನು ಸೇರ್ಪಡೆಗೊಳಿಸಿದೆ ಎಂದು ಸರ್ಕಾರ ತಿಳಿಸಿದೆ.
Another Proud Moment for Project Cheetah…
Indian-born female cheetah KJP21 has given birth to five healthy cubs at Kuno National Park, taking India’s cheetah population to 60, including 41 Indian-born cheetahs.
Heartiest congratulations to the entire Project Cheetah and Kuno team. Another significant milestone in India’s journey towards restoring its cheetah population and strengthening wildlife conservation.
#ProjectCheetah
— Dr Mohan Yadav (@DrMohanYadav51) October 5, 2026
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ವೈಜ್ಞಾನಿಕ ನಿರ್ವಹಣೆ, ಕಟ್ಟುನಿಟ್ಟಿನ ಕಾವಲು ಹಾಗೂ ಸಂರಕ್ಷಣಾ ಕ್ರಮಗಳ ಮೂಲಕ ‘ಪ್ರಾಜೆಕ್ಟ್ ಚೀತಾ’ ತನ್ನ ಕಾರ್ಯವನ್ನು ಯಶಸ್ವಿಯಾಗಿ ಮುಂದುವರಿಸಿದೆ. ಮಧ್ಯಪ್ರದೇಶ ಮುಖ್ಯಮಂತ್ರಿಗಳ ಕಚೇರಿ ನೀಡಿದ ಮಾಹಿತಿಯ ಪ್ರಕಾರ, ಮುಖಿ ಮತ್ತು KGP12 ನಂತರ ಭಾರತದ ಮಣ್ಣಿನಲ್ಲೇ ಜನ್ಮತಾಳಿದ ಮೂರನೇ ಹೆಣ್ಣು ಚೀತಾ ಎಂಬ ಹೆಗ್ಗಳಿಕೆಗೆ KJP21 ಪಾತ್ರವಾಗಿದೆ. ಈಗ ಈ ಚೀತಾ 5 ಮರಿಗಳಿಗೆ ಜನ್ಮ ನೀಡಿರುವುದು ಭಾರತದಲ್ಲಿ ಚೀತಾಗಳ ಮುಂದಿನ ಪೀಳಿಗೆಯನ್ನು ಗಟ್ಟಿಮಾಡಿದೆ.
ಇದನ್ನೂ ಓದಿ: ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ; ‘ಪ್ರಾಜೆಕ್ಟ್ ಚೀತಾ’ ಯೋಜನೆಯ ಹೊಸ ಮೈಲಿಗಲ್ಲು
ಚೀತಾ ಮರಿಗಳ ಜನನವು ಪ್ರದೇಶದಲ್ಲಿ ಅಪಾರ ಸಂತಸ ತಂದಿದೆ ಎಂದು ಸಿಎಂ ಮೋಹನ್ ಯಾದವ್ ಹೇಳಿದ್ದಾರೆ. 5 ನೂತನ ಮರಿಗಳ ಸೇರ್ಪಡೆಯೊಂದಿಗೆ ಭಾರತದಲ್ಲಿರುವ ಒಟ್ಟು ಚೀತಾಗಳ ಸಂಖ್ಯೆ 60ಕ್ಕೆ ತಲುಪಿದೆ. ಇವುಗಳಲ್ಲಿ 41 ಚೀತಾಗಳು ಭಾರತದಲ್ಲೇ ಜನ್ಮತಾಳಿರುವುದು ಈ ಯೋಜನೆಯ ಯಶಸ್ಸನ್ನು ತೋರಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ