ಪಣಜಿ: ಗೋವಾ ವಿಧಾನಸಭೆ ಚುನಾವಣೆಗೆ (Goa Assembly Election 2022) ಕೆಲವೇ ತಿಂಗಳುಗಳು ಬಾಕಿ ಇದ್ದು, ಆ ರಾಜ್ಯದಲ್ಲಿ ಈ ಬಾರಿ ತೃಣಮೂಲ ಕಾಂಗ್ರೆಸ್ (TMC) ತನ್ನ ವ್ಯಾಪ್ತಿ ಹೆಚ್ಚಿಸಲು ಪ್ರಯತ್ನ ಮಾಡುತ್ತಿದೆ. ಅದಕ್ಕೆ ತಕ್ಕಂತೆ ಸ್ವಲ್ಪ ದಿನಗಳ ಹಿಂದೆ ಹಲವರು ಬೇರೆ ಪಕ್ಷಗಳ ನಾಯಕರು ಟಿಎಂಸಿ ಸೇರ್ಪಡೆಯಾಗಿದ್ದಾರೆ. ಆದರೆ ಇದೆಲ್ಲದರ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ಗೆ ಬಹುದೊಡ್ಡ ಆಘಾತ ಎದುರಾಗಿದೆ. ಟಿಎಂಸಿಯ ಮಾಜಿ ಶಾಸಕ ಲಾವೂ ಮಾಮ್ಲೆದರ್ ಸೇರಿ ಒಟ್ಟು ಐವರು ಪ್ರಮುಖ ನಾಯಕರು ಟಿಎಂಸಿಗೆ ರಾಜೀನಾಮೆ ನೀಡಿದ್ದಾರೆ.
ಗೋವಾವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಪಕ್ಷದೊಂದಿಗೆ ನಾವು ಇರಲು ಇಚ್ಛಿಸುವುದಿಲ್ಲ. ಎಐಟಿಸಿ (ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್) ಆಗಲೀ, ಎಐಟಿಸಿ ಗೋವಾವನ್ನು ನಿರ್ವಹಿಸುತ್ತಿರುವ ಕಂಪನಿಯೇ ಆಗಲಿ, ಇಲ್ಲಿನ ಜಾತ್ಯತೀತ ಪರಂಪರೆಯನ್ನು ಹಾಳುಗೆಡವಲು ನಾವು ಬಿಡುವುದಿಲ್ಲ. ನಾವು ಇದರ ರಕ್ಷಣೆ ಮಾಡುತ್ತೇವೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಂದಹಾಗೆ ಇವರೆಲ್ಲ ಇತ್ತೀಚಿನ ತಿಂಗಳುಗಳಲ್ಲಿ ಟಿಎಂಸಿ ಸೇರ್ಪಡೆಯಾದವರು ಆಗಿದ್ದರು. ಮಾಮ್ಲೆದರ್ ಅವರು ಸೆಪ್ಟೆಂಬರ್ 23ರಂದು ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದರು. ಅದಕ್ಕೂ ಮೊದಲು ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿಯಲ್ಲಿ ಇದ್ದರು. ಗೋವಾ ಮಾಜಿ ಮುಖ್ಯಮಂತ್ರಿ ಲ್ಯೂಯಿಜಿನ್ಹೋ ಫಲೇರಿಯೋ ಟಿಎಂಸಿ ಸೇರ್ಪಡೆ ಬೆನ್ನಲ್ಲೇ ಇವರೂ ಕೂಡ ಟಿಎಂಸಿ ಸೇರಿದ್ದರು. ಫಲೇರಿಯೋ ಇದೀಗ ಟಿಎಂಸಿ ರಾಜ್ಯಸಭಾ ಸದಸ್ಯರಾಗಿದ್ದಾರೆ.
ಫೆಬ್ರವರಿಯಲ್ಲಿ ಚುನಾವಣೆ
ಗೋವಾದಲ್ಲಿ 2022ರ ಫ್ರೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 40 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಅದರ ದಿನಾಂಕವನ್ನು ಇನ್ನೂ ಚುನಾವಣಾ ಆಯೋಗ ಪ್ರಕಟಿಸಿಲ್ಲ.ಸದ್ಯ ಇರುವ ಬಿಜೆಪಿ ಸರ್ಕಾರದ ಅವಧಿ 2022ರ ಮಾರ್ಚ್ 15ರಂದು ಮುಕ್ತಾಯಗೊಳ್ಳಲಿದೆ. ಈ ಬಾರಿ ಬಿಜೆಪಿಗೆ ಕಾಂಗ್ರೆಸ್ ಅಷ್ಟೇ ಅಲ್ಲ, ಆಮ್ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್ ಕೂಡ ಪ್ರಬಲ ಸ್ಪರ್ಧೆ ಒಡ್ಡಲಿವೆ. ಇನ್ನು ಗೋವಾದ ಪ್ರಾದೇಶಿಕ ಪಕ್ಷವಾದ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ ತೃಣಮೂಲ ಕಾಂಗ್ರೆಸ್ನೊಟ್ಟಿಗೆ ಮತ್ತು ಗೋವಾ ಫಾರ್ವರ್ಡ್ ಪಾರ್ಟಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ.
2017ರ ಚುನಾವಣೆಯಲ್ಲಿ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ 17 ಸೀಟುಗಳನ್ನು ಗೆದ್ದುಕೊಂಡಿತ್ತು. ಆದರೆ ಬಿಜೆಪಿ ಗೋವಾದ ಎಂಜಿಪಿ ಸೇರಿ ಪ್ರಾದೇಶಿಕ ಪಕ್ಷಗಳು, ಸ್ವತಂತ್ರ್ಯ ಅಭ್ಯರ್ಥಿಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿತ್ತು. ತೃಣಮೂಲ ಕಾಂಗ್ರೆಸ್ ಮುಂಬರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನನಗೆ ಗೋವಾ ಅಧಿಕಾರ ಹಿಡಿಯಬೇಕು ಎಂಬ ಆಸೆ ಖಂಡಿತ ಇಲ್ಲ. ಆದರೆ ಬಿಜೆಪಿಯನ್ನು ಗೆಲ್ಲಲು ಬಿಡಬಾರದು ಎಂಬುದೇ ನನ್ನ ಉದ್ದೇಶ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಈಗಾಗಲೇ ಒಮ್ಮೆ ಗೋವಾ ಪ್ರವಾಸಕ್ಕೆ ಹೋಗಿ, ಅಲ್ಲಿನ ಮೀನುಗಾರರೊಂದಿಗೆ ಸಂವಾದ ನಡೆಸಿದ್ದಾರೆ. ಇತ್ತೀಚೆಗಷ್ಟೇ ಮಾಜಿ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಟಿಎಂಸಿ ಸೇರ್ಪಡೆಯಾಗಿದ್ದು, ಬಲ ಬಂದಿತ್ತು. ಆದರೆ ಈಗ ಏಕಾಏಕಿ ಐವರು ರಾಜೀನಾಮೆ ನೀಡಿದ್ದು, ಟಿಎಂಸಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಕುಂದಾ ಖರೀದಿಗೆ ಮುಗಿಬಿದ್ದ ಜನಪ್ರತಿನಿಧಿಗಳು: ವಿಡಿಯೋ ನೋಡಿ
Published On - 2:46 pm, Sat, 25 December 21