ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಸಂಭ್ರಮ
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಉತ್ತರಾಖಂಡ್, ಉತ್ತರಪ್ರದೇಶ, ಗೋವಾ, ಮಣಿಪುರಗಳಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿದಿದ್ದರೆ, ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಲಿದೆ. ಉತ್ತರಾಖಂಡ್ನಲ್ಲಿ ಹಿಂದಿನ ಸಿಎಂ ಪುಷ್ಕರ್ ಸಿಂಗ್ ಧಮಿ ಸೋತಿರುವ ಕಾರಣ, ಬೇರೊಬ್ಬರನ್ನು ಆ ಸ್ಥಾನಕ್ಕೆ ಏರಿಸುವ ನಿರೀಕ್ಷೆಯಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ. ಗೋವಾದಲ್ಲಿ ಪ್ರಮೋದ್ ಸಾವಂತ್, ಮಣಿಪುರದಲ್ಲಿ ಎನ್.ಬಿರೆನ್ ಸಿಂಗ್ ಸಿಎಂಗಳಾಗಿ ಮುಂದುವರಿಯಲಿದ್ದು, ಪಂಜಾಬ್ನಲ್ಲಿ ಭಗವಂತ್ ಮಾನ್ ಮುಖ್ಯಮಂತ್ರಿ.ಈ ವಿಧಾನಸಭೆ ಚುನಾವಣೆಯಲ್ಲಿ ಯಾವ ರಾಜ್ಯದಲ್ಲಿ ಯಾವ ಪಕ್ಷ ಎಷ್ಟು ಸೀಟ್ಗಳಿಸಿದೆ ಇಲ್ಲಿದೆ ವಿವರ
- ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಪಕ್ಷಗಳು ಒಟ್ಟು 273 ಕ್ಷೇತ್ರಗಳನ್ನು ಬಾಚಿಕೊಂಡಿದೆ. ಅದರಲ್ಲಿ ಬಿಜೆಪಿ ಒಂದೇ ಪಕ್ಷ 255 ಕ್ಷೇತ್ರಗಳನ್ನು ಗೆದ್ದಿದೆ. ಇನ್ನು ಅಪ್ನಾದಳ್ 12 ಮತ್ತು ನಿಶಾದ್ ಪಾರ್ಟಿ 6 ಸೀಟ್ನಲ್ಲಿ ಗೆದ್ದಿದೆ. ಸಮಾಜವಾದಿ ಪಕ್ಷದ ಮೈತ್ರಿ 125 ಕ್ಷೇತ್ರಗಳನ್ನು ಗೆದ್ದಿದ್ದರೂ, ಸಮಾಜವಾದಿ ಪಕ್ಷ ಗೆಲ್ಲಲು ಸಾಧ್ಯವಾಗಿದ್ದು 111 ಕ್ಷೇತ್ರಗಳಲ್ಲಿ ಮಾತ್ರ. ಇದರ ಮೈತ್ರಿಪಕ್ಷಗಳಾದ ರಾಷ್ಟ್ರೀಯ ಲೋಕ ದಳ್ ಮತ್ತು ಸುಹೇಲ್ ದೇವ್ ಭಾರತೀಯ ಸಮಾಜ ಪಾರ್ಟಿಗಳು ಅನುಕ್ರಮವಾಗಿ 8 ಮತ್ತು 6 ಸೀಟ್ಗಳಲ್ಲಿ ಗೆದ್ದುಕೊಂಡಿವೆ. ಇನ್ನು ಕಾಂಗ್ರೆಸ್ , ಸಮಾಜವಾದಿ ಪಕ್ಷಗಳು ನೆಲಕಚ್ಚಿವೆ. ಕಾಂಗ್ರೆಸ್ 2 ಕ್ಷೇತ್ರದಲ್ಲಿ, ಬಿಎಸ್ಪಿ 1 ಕ್ಷೇತ್ರದಲ್ಲಿ ಗೆದ್ದಿವೆ. ಲೋಕತಾಂತ್ರಿಕ ಜನತಾದಳ ಪಕ್ಷವೂ 2 ಸೀಟ್ನಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಸರ್ಕಾರ ರಚನೆಗೆ 202 ಸೀಟ್ ಆದರೂ ಗೆಲ್ಲಬೇಕು. ಬಿಜಪಿ ಪಕ್ಷವೇ 255 ಕ್ಷೇತ್ರ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ.
- ಗೋವಾದಲ್ಲಿ ಬಿಜೆಪಿ 20 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರೂ, ಸರ್ಕಾರ ರಚನೆಗೆ ಇನ್ನೊಂದು ಸೀಟ್ ಅಗತ್ಯವಿತ್ತು. ಒಟ್ಟಾರೆ ಗೋವಾದಲ್ಲಿ 40 ಕ್ಷೇತ್ರಗಳಿದ್ದು, ಅಲ್ಲೀಗ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇಲ್ಲಿ ಕಾಂಗ್ರೆಸ್ 11, ಆಮ್ ಆದ್ಮಿ ಪಾರ್ಟಿ 2, ಗೋವಾ ಫಾರ್ವರ್ಡ್ ಪಾರ್ಟಿ 1, ಪಕ್ಷೇತರರು ಮೂರು, ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ 2, ರೆವಲ್ಯೂಷನರಿ ಗೋವನ್ಸ್ ಪಕ್ಷ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡುವುದಾಗಿ ಪ್ರಮೋದ್ ಸಾವಂತ್ ಹೇಳಿಕೊಂಡಿದ್ದಾರೆ.
- ಮಣಿಪುರದಲ್ಲೂ ಬಿಜೆಪಿಯೇ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಅಲ್ಲಿನ ಒಟ್ಟು 60 ಕ್ಷೇತ್ರಗಳಲ್ಲಿ ಬಿಜೆಪಿ 31 ಸೀಟ್ ಗೆದ್ದುಕೊಂಡಿದೆ. ಇನ್ನುಳಿದಂತೆ ಕಾಂಗ್ರೆಸ್ 5, ಜನತಾದಳ-6, ನ್ಯಾಷನಲ್ ಪೀಪಲ್ಸ್ ಪಾರ್ಟಿ-7, ನಾಗಾ ಪೀಪಲ್ಸ್ ಫ್ರಂಟ್ 5, ಕುಕಿ ಪೀಪಲ್ಸ್ ಅಲಿಯನ್ಸ್ 2 ಮತ್ತು ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
- ಉತ್ತರಾಖಂಡ್ನಲ್ಲೂ ಬಿಜೆಪಿಗೆ ಸ್ಪಷ್ಟ ಗೆಲುವು. ಇಲ್ಲಿನ ಒಟ್ಟು 70 ಕ್ಷೇತ್ರಗಳ ಪೈಕಿ 47ರಲ್ಲಿ ಬಿಜೆಪಿ ಗೆದ್ದುಕೊಂಡಿದೆ. ಕಾಂಗ್ರೆಸ್ 19, ಬಿಎಸ್ಪಿ 2 ಮತ್ತು ಪಕ್ಷೇತರರು ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
- ಪಂಜಾಬ್ನಲ್ಲಿ ಅಚ್ಚರಿಯ ಬೆಳವಣಿಗೆ, ಆಡಳಿತದಲ್ಲಿದ್ದ ಕಾಂಗ್ರೆಸ್ ನೆಲಕಚ್ಚಿದೆ. ಒಟ್ಟು 117 ವಿಧಾನಸಭಾ ಕ್ಷೇತ್ರಗಳಿರುವ ಪಂಜಾಬ್ನಲ್ಲಿ 92ರಲ್ಲಿ ಆಮ್ ಆದ್ಮಿ ಪಾರ್ಟಿ ಗೆದ್ದುಕೊಂಡಿದ್ದರೆ, 18 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ 2, ಬಿಎಸ್ಪಿ 1, ಶಿರೋಮಣಿ ಅಕಾಲಿ ದಳ -3 ಮತ್ತು ಪಕ್ಷೇತರರು ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: Retail Direct Guild: ಆರ್ಬಿಐನಲ್ಲಿ ನಾವು ಕೂಡ ಖಾತೆ ತೆರೆಯಬಹುದು ಗೊತ್ತಾ..! ಇಲ್ಲಿದೆ ಮಾಹಿತಿ