ಡಿಸೆಂಬರ್ ತಿಂಗಳಲ್ಲಿ ತಮಿಳುನಾಡಿನಲ್ಲಿ ನಡೆದ ಸೇನಾ ವಿಮಾನ ಅಪಘಾತದಲ್ಲಿ (Army Helicopter Crash) ಮೃತಪಟ್ಟ ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್ (Brigadier Lidder) ಕುಟುಂಬಕ್ಕೆ 50 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲು ಸರ್ಕಾರದಿಂದ ಅನುಮೋದನೆ ನೀಡಲಾಗಿದೆ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಕುಟುಂಬಕ್ಕೆ 50 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವ ಜತೆ, ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ನೀಡಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ. ಹಾಗೇ, ಬ್ರಿಗೇಡಿಯರ್ ಲಿಡ್ಡರ್ ಅಕಾಲಿಕ ನಿಧನದಿಂದ ಅವರ ಕುಟುಂಬ ಮತ್ತು ದೇಶಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದ್ದಾರೆ. ಸೈನಿಕ್ ಮತ್ತು ಅರ್ಧ ಸೈನಿಕ್ ಬಲ್ ಆರ್ಥಿಕ ನೆರವು ನೀತಿಯಡಿ, ಮೃತ ಲಿಡ್ಡರ್ ಕುಟುಂಬಕ್ಕೆ ಹಣಕಾಸು ನೆರವು ಮತ್ತು ಸರ್ಕಾರಿ ಉದ್ಯೋಗ ನೀಡಲಾಗುವುದು. ಈ ನೀತಿಯಡಿ ಬ್ರಿಗೇಡಿಯರ್ ಲಿಡ್ಡರ್ ಅವರು ತಾತ್ಕಾಲಿಕ ಯುದ್ಧದ ಕಾರಣದಿಂದ ಮೃತಪಟ್ಟಿದ್ದಾರೆ ಎಂದೇ ಪರಿಗಣಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಲಿಡ್ಡರ್ ಅವರು ಹರ್ಯಾಣದ ಪಂಚಕುಲಾ ನಿವಾಸಿ. ಡಿಸೆಂಬರ್ 8ರಂದು ತಮಿಳುನಾಡಿನ ಕೂನೂರು ಬಳಿ ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಪತನವಾಗಿ ಮೃತಪಟ್ಟ 14 ಮಂದಿಯಲ್ಲಿ ಇವರೂ ಒಬ್ಬರು. ಈ ಸೇನಾ ವಿಮಾನ ದುರಂತದಲ್ಲಿ ಭಾರತದ ಪ್ರಥಮ ಸಿಡಿಎಸ್ ಬಿಪಿನ್ ಜನರಲ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಕೂಡ ಮೃತಪಟ್ಟಿದ್ದಾರೆ. ಅಂದು ನಡೆದ ಅಪಘಾತದ ತನಿಖೆಯನ್ನು ಭಾರತೀಯ ಸೇನೆಯ ಮೂರು ವಲಯಗಳ ಮುಖ್ಯ ಅಧಿಕಾರಿಗಳನ್ನೊಳಗೊಂಡ ಸಮಿತಿ ನಡೆಸಿತ್ತು. ಅದರ ವರದಿ ಹೊರಬಿದ್ದಿದ್ದು, ಸೇನಾ ಹೆಲಿಕಾಪ್ಟರ್ ದುರಂತಕ್ಕೆ ತಾಂತ್ರಿಕ ದೋಷ ಕಾರಣವಲ್ಲ. ಮೋಡ ಅಡ್ಡಬಂದು, ಹವಾಮಾನದಲ್ಲಿ ಆಕಸ್ಮಿಕವಾಗಿ ಆದ ಬದಲಾವಣೆಯೇ ಮುಖ್ಯ ಕಾರಣ ಎಂದು ಹೇಳಲಾಗಿದೆ. ಆದರೆ ಅಂದು ಸಿಡಿಎಸ್ ರಾವತ್ ಮತ್ತು ಇತರ 13 ಅಧಿಕಾರಿಗಳ ಸಾವು ದೇಶಕ್ಕೇ ಶಾಕ್ ನೀಡಿತ್ತು.
ತಮಿಳುನಾಡಿನ ವೆಲ್ಲಿಂಗ್ಟನ್ನಲ್ಲಿರುವ ಮಿಲಿಟರಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಜನರಲ್ ಬಿಪಿನ್ ರಾವತ್ ತೆರಳುತ್ತಿದ್ದರು. ಅವರೊಂದಿಗೆ ಪತ್ನಿ ಮಧುಲಿಕಾ ಸೇರಿ ಸೇನೆಯ ಇತರ ಉನ್ನತ ಅಧಿಕಾರಿಗಳು ಇದ್ದರು. ಆದರೆ ಕೂನೂರಿನ ಬಳಿಯ ನೀಲಗಿರಿ ಅರಣ್ಯದಲ್ಲಿ ಹೆಲಿಕಾಪ್ಟರ್ ಪತನಗೊಂಡು ಸ್ಫೋಟಗೊಂಡಿತ್ತು. ಅಂದು ವಾಯುಸೇನೆ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಒಬ್ಬರು ಬದುಕುಳಿದಿದ್ದರು. ಆದರೆ ಅವರೂ ಕೂಡ ಡಿಸೆಂಬರ್ 15ರಂದು ಮೃತಪಟ್ಟಿದ್ದಾರೆ. ಈ ಮೂಲಕ ಅಂದು ಸೇನಾ ಹೆಲಿಕಾಪ್ಟರ್ನಲ್ಲಿದ್ದ 14 ಜನರೂ ಮೃತಪಟ್ಟಿದ್ದರು.
ಇದನ್ನೂ ಓದಿ: ಕಾಟನ್ ಮಾರುಕಟ್ಟೆಯನ್ನು ಲೀಜ್ದಾರರಿಗೆ ಮಾರಾಟ ಮಾಡಲು ನಗರಸಭೆ ತೀರ್ಮಾನ; ಸಬ್ ಲೀಜ್ದಾರರ ಕಡೆಗಣನೆ ಆಕ್ರೋಶ
Published On - 9:01 am, Sat, 15 January 22