ಕಾಟನ್ ಮಾರುಕಟ್ಟೆಯನ್ನು ಲೀಜ್​ದಾರರಿಗೆ ಮಾರಾಟ ಮಾಡಲು ನಗರಸಭೆ ತೀರ್ಮಾನ; ಸಬ್ ಲೀಜ್​ದಾರರ ಕಡೆಗಣನೆ ಆಕ್ರೋಶ

ವಿವಾದ ಧಾರವಾಡ ಹೈಕೋರ್ಟ್ ತಲುಪಿ ಮೂರು ವರ್ಷದ ಸುಧೀರ್ಘ ವಿಚಾರಣೆ ಬಳಿಕ ತೀರ್ಪು ಲೀಜ್​ದಾರರ ಪರವಾಗಿ ಬಂದಿದೆ. ಈಗ ಬಾಗಲಕೋಟೆ ‌ನಗರಸಭೆ ಆಡಳಿತ ಮಂಡಳಿ ಈ ಕಾಟನ್ ಮಾರುಕಟ್ಟೆಯನ್ನು ಲೀಜ್​ದಾರರಿಗೆ ಇಂದಿನ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುವುದಕ್ಕೆ ಮುಂದಾಗಿದೆ.

ಕಾಟನ್ ಮಾರುಕಟ್ಟೆಯನ್ನು ಲೀಜ್​ದಾರರಿಗೆ ಮಾರಾಟ ಮಾಡಲು ನಗರಸಭೆ ತೀರ್ಮಾನ; ಸಬ್ ಲೀಜ್​ದಾರರ ಕಡೆಗಣನೆ ಆಕ್ರೋಶ
ನಗರಸಭೆ ಆಡಳಿತ ಮಂಡಳಿ

ಬಾಗಲಕೋಟೆ: ಜಿಲ್ಲೆಯಲ್ಲಿ ಹತ್ತಿ ಮಾರಾಟಕ್ಕಾಗಿ ಕಾಟನ್ ಮಾರುಕಟ್ಟೆ (Cotton market) ನಿರ್ಮಾಣ ಮಾಡಲಾಗಿದೆ. ಇದನ್ನು‌ ನಂಬಿಕೊಂಡು ನೂರಾರು ಜನ ವ್ಯಾಪಾರಸ್ಥರು ಬದುಕು ಕಟ್ಟಿಕೊಂಡಿದ್ದರು. ಆದರೆ ಕೆಲ ವ್ಯಾಪಾರಸ್ಥರು ಇಲ್ಲಿ ಆಡಿದ್ದೇ ಆಟ ಎನ್ನುವಂತಾಗಿದ್ದು, ಲೀಜ್ (Lease) ಪಡೆದ ಮಳಿಗೆಗಳನ್ನು ಮತ್ತೊಬ್ಬರಿಗೆ ಸಬ್ ಲೀಜ್ ಹೆಸರಲ್ಲಿ ಮಾರಾಟ ಕೂಡ ಮಾಡಿದ್ದರು. ಕೆಲವರು ತಿಂಗಳಿಗೆ 50 -60 ಸಾವಿರದಂತೆ ಬಾಡಿಗೆ ನೀಡಿದ್ದರು. ಇದರಿಂದ ನಗರಸಭೆ ಆಯಕ್ತರೊಬ್ಬರು ಎಲ್ಲಾ ಮಳಿಗೆಗಳಿಗೆ ಬೀಗ ಜಡಿದು ವಿವಾದ ಹೈಕೋರ್ಟ್ (High court) ಮೆಟ್ಟಿಲೇರಿತ್ತು. ಈಗ ಕೋರ್ಟ್ ಈ ಬಗ್ಗೆ ತೀರ್ಪು ನೀಡಿದ್ದು, ಲೀಜ್​ದಾರರಿಗೆ ಮಾರಾಟ ಮಾಡೋದಕ್ಕೆ ನಗರಸಭೆ ಮುಂದಾಗಿದೆ. ಆದರೆ ಇಲ್ಲಿ ಮಳಿಗೆ ಹೊಂದಿದ್ದ ಸಬ್ ಲೀಜ್​ದಾರರಿಗೂ ಮಳಿಗೆ ಮಾರಾಟ ಮಾಡಬೇಕು ಎಂಬ ಕೂಗು ಸದ್ಯ ಕೇಳಿ ಬರುತ್ತಿದೆ.

ಇದು ಬಾಗಲಕೋಟೆಯ ಹೃದಯಭಾಗದಲ್ಲಿರುವ ಬಸವೇಶ್ವರ ವೃತ್ತದ ಬಳಿಯ ಕಾಟನ್ ಮಾರುಕಟ್ಟೆ. ಒಟ್ಟು ಹನ್ನೊಂದು ಎಕರೆ ಇರುವ ಈ‌ ಜಾಗವನ್ನು ಕಾಟನ್ ಮಾರುಕಟ್ಟೆ ಎಂದು ಘೋಷಣೆ‌ ಮಾಡಿ ಐವತ್ತು ವರ್ಷಗಳ ಕಾಲ ವ್ಯಾಪಾರಸ್ಥರಿಗೆ ಲೀಜ್ ಮೇಲೆ ಬಾಗಲಕೋಟೆ ನಗರ ಸ್ಥಳೀಯ ಸಂಸ್ಥೆಯಿಂದ ನೀಡಲಾಗಿತ್ತು. ಆದರೆ ಲೀಜ್ ಪಡೆದ ವ್ಯಾಪಾರಸ್ಥರು ಇಲ್ಲಿ ಕಾಟನ್ ಮಾರುಕಟ್ಟೆ ಉದ್ದೇಶ ಮರೆತು ಬೇಕಾಬಿಟ್ಟಿ‌ಯಾಗಿ ಬೇರೆ ಬೇರೆ ಮಳಿಗೆ ಆರಂಭ ಮಾಡಿದ್ದರು. ಕೆಲವರು ಲೀಜ್ ಪಡೆದ ಈ ಜಾಗದಲ್ಲಿ ಮಳಿಗೆ ಕಟ್ಟಿಸಿ ಸಬ್ ಲೀಜ್ ಹೆಸರಲ್ಲಿ‌ ಮಾರಾಟ ಕೂಡ ಮಾಡಿದ್ದರು. ಇನ್ನು ಕೆಲವರು 40-60 ಸಾವಿರದಂತೆ ಪ್ರತಿ ತಿಂಗಳು ಬಾಡಿಗೆ ಪಡೆದು ಹಣ ಜೇಬಿಗಿಳಿಸಿಕೊಳ್ಳುತ್ತಿದ್ದರು. ಇದಕ್ಕೆ ಬ್ರೆಕ್‌ ಹಾಕಲು 2-14 ರಲ್ಲಿ ಬಾಗಲಕೋಟೆಯ ‌ನಗರಸಭೆಯ ಆಯುಕ್ತರಾಗಿದ್ದ ರುದ್ರೇಶ್ ಅವರು, ಕಾಟನ್ ಮಾರುಕಟ್ಟೆ ವಶಕ್ಕೆ ಪಡೆದು ಬೀಗ ಜಡಿದಿದ್ದರು.

ವಿವಾದ ಧಾರವಾಡ ಹೈಕೋರ್ಟ್ ತಲುಪಿ ಮೂರು ವರ್ಷದ ಸುಧೀರ್ಘ ವಿಚಾರಣೆ ಬಳಿಕ ತೀರ್ಪು ಲೀಜ್​ದಾರರ ಪರವಾಗಿ ಬಂದಿದೆ. ಈಗ ಬಾಗಲಕೋಟೆ ‌ನಗರಸಭೆ ಆಡಳಿತ ಮಂಡಳಿ ಈ ಕಾಟನ್ ಮಾರುಕಟ್ಟೆಯನ್ನು ಲೀಜ್​ದಾರರಿಗೆ ಇಂದಿನ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುವುದಕ್ಕೆ ಮುಂದಾಗಿದೆ. ಈ ಬಗ್ಗೆ ನಗರಸಭೆ ಆಡಳಿತ ಮಂಡಳಿ ಸಭೆಯಲ್ಲಿ ಠರಾವು ಮಾಡಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸೋದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದು ನಮಗೆ ಖುಷಿ ತಂದಿದ್ದು, ನಗರಸಭೆ ನಿರ್ಣಯವನ್ನು ಸ್ವಾಗತಿಸುತ್ತೇವೆ. ನಗರಸಭೆ ಈ ಪ್ರಕ್ರಿಯೆ ಆದಷ್ಟು ಬೇಗ ಮುಗಿಸಲಿ ಎಂದು ಮೂಲ‌ ಲೀಜ್​ದಾರರಾದ ರವಿ‌ ಕುಮಟಗಿ ಹೇಳಿದ್ದಾರೆ.

ಕಾಟನ್ ‌ಮಾರುಕಟ್ಟೆಯಲ್ಲಿ ಮೂಲ ಲೀಜ್​ದಾರರು 14 ಜನರು ಇದ್ದು, ನಿಯಮ ಉಲ್ಲಂಘಿಸಿ ಬೇರೆಯವರಿಗೆ ಸಬ್ ಲೀಜ್ ಕೊಟ್ಟಿದ್ದಾರೆ. ಬೃಹತ್ ಕಟ್ಟಡ ಕಟ್ಟಿದ್ದಾರೆಂದು ಕಾಟನ್ ಮಾರುಕಟ್ಟೆ ವಶಕ್ಕೆ ಪಡೆದು, ನೂರಾರು ಅಂಗಡಿಗಳನ್ನು ಬೀಗ ಹಾಕಿದ ವೇಳೆ ಇದಕ್ಕೆ ಅಂದಿನ ಕಾಂಗ್ರೆಸ್ ಶಾಸಕ ಎಚ್​ವೈ ಮೇಟಿ ಬೆಂಬಲವಾಗಿ ನಿಂತಿದ್ದರು. ಆದರೆ, ಅಂದು ಬಿಜೆಪಿ ನಗರಸಭೆಯಲ್ಲಿ ಆಡಳಿತ ಇದ್ದು, ಕಮೀಷನರ್ ಆದೇಶ ವಿರೋಧಿಸಿ ವ್ಯಾಪಾರಸ್ಥರ ಪರವಾಗಿ ನಿಂತಿತ್ತು.

ಕಮಿಷನರ್​ ಕ್ರಮದ ವಿರುದ್ಧ ಲೀಜ್​ದಾರರು ನ್ಯಾಯಾಲಯದ ಮೊರೆ ಹೋಗಿ, ಮೂರು ವರ್ಷಗಳ ಕಾಲ ಹೋರಾಟ ಮಾಡಿದ್ರು. ನ್ಯಾಯಾಲಯದ ಆದೇಶದಂತೆ ಮೂರು ವರ್ಷಗಳ ಬಳಿಕ ಮತ್ತೆ ವಹಿವಾಟು ಆರಂಭವಾಗಿದೆ. ಇದೀಗ ಬಿಜೆಪಿ ಆಡಳಿತ ಮತ್ತು ಶಾಸಕರು ಇರುವುದರಿಂದ ಲೀಜ್​ದಾರರಿಗೆ ಆ ಪ್ರದೇಶವನ್ನು ಇಂದಿನ ಮಾರುಕಟ್ಟೆ ದರಕ್ಕೆ ಮಾರಾಟ ಮಾಡಲು ತೀರ್ಮಾನಿಸಿದೆ. ಆದರೆ ಇದಕ್ಕೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಹಿಡಿತದಲ್ಲಿರುವ ನಗರಸಭೆ ಕೇವಲ ‌ಮೂಲ‌ ಲೀಜ್​ದಾರರ ಪರ ನಿಂತಿದೆ. ಇಲ್ಲಿ ಸಬ್ ಲೀಜ್ ಪಡೆದವರನ್ನು ಪರಿಗಣಿಸಬೇಕು. ಅವರಿಗೆ ಸೂಕ್ತ ಜಾಗ ನೀಡಿ ಮೂಲ‌ ಲೀಜ್​ದಾರರ ರೀತಿ ಅವರಿಗೂ ಜಾಗ ಮಾರಾಟ ಮಾಡಬೇಕು. ಖಾಲಿ ಇದ್ದ ಜಾಗದಲ್ಲಿ ಮಳಿಗೆ ಕಟ್ಟಿಸಿ‌ ಮಾರಾಟ‌ ಮಾಡಬೇಕು. ಸಬ್ ಲೀಜ್ ಕೊಟ್ಟು, ಬೇಕಾಬಿಟ್ಟಿ ಹಣ ಮಾಡಿದ ಮೂಲ‌ ಲೀಜ್​ದಾರರಿಗೆ ಕೇವಲ‌ ಮನ್ನಣೆ ನೀಡದೆ ಸಬ್ ಲೀಜ್ ದಾರರು, ಸದ್ಯ ಅಲ್ಲಿ ಅಂಗಡಿ ಮಳಿಗೆ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದವರಿಗೂ ಜಾಗ ಮಾರಾಟ ಮಾಡಬೇಕು ಎಂದು ಕಾಂಗ್ರೆಸ್​ ಮುಖಂಡ ನಾಗರಾಜ ಹದ್ಲಿ ಆಗ್ರಹ ‌ಮಾಡಿದ್ದಾರೆ.

ವರದಿ: ರವಿ ಮೂಕಿ

ಇದನ್ನೂ ಓದಿ: ಬಿಎಸ್​ಇ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟ 274.73 ಲಕ್ಷ ಕೋಟಿ ರೂಪಾಯಿಗೆ

Year Ender 2021: ಭಾರತೀಯ ಮಾರುಕಟ್ಟೆಗೆ 2022 ರಲ್ಲಿ ಅಪ್ಪಳಿಸಲಿದೆ ಈ ಬಹುನಿರೀಕ್ಷಿತ ಸ್ಮಾರ್ಟ್​ಫೋನ್​ಗಳು

Published On - 8:54 am, Sat, 15 January 22

Click on your DTH Provider to Add TV9 Kannada