2 ಸಾವಿರಕ್ಕೂ ಅಧಿಕ ಪ್ರಯಾಣಿಕರಿದ್ದ ಮುಂಬೈ-ಗೋವಾ ಐಷಾರಾಮಿ ಹಡಗಿನಲ್ಲಿ 66 ಮಂದಿಗೆ ಕೊರೊನಾ ಸೋಂಕು; ಇಡೀ ಹಡಗು ಐಸೋಲೇಟ್​ !

| Updated By: Lakshmi Hegde

Updated on: Jan 03, 2022 | 5:56 PM

ಗೋವಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಬೇರೆಬೇರೆ ದೇಶಗಳಿಂದ ಬರುವ ಸುಮಾರು 4000 ದಷ್ಟು ಪ್ರಯಾಣಿಕರನ್ನು ಪ್ರತಿದಿನ ಕೊವಿಡ್​ 19 ತಪಾಸಣೆಗೆ ಒಳಪಡಿಸಲಾಗುತ್ತಿದೆ.

2 ಸಾವಿರಕ್ಕೂ ಅಧಿಕ ಪ್ರಯಾಣಿಕರಿದ್ದ ಮುಂಬೈ-ಗೋವಾ ಐಷಾರಾಮಿ ಹಡಗಿನಲ್ಲಿ 66 ಮಂದಿಗೆ ಕೊರೊನಾ ಸೋಂಕು; ಇಡೀ ಹಡಗು ಐಸೋಲೇಟ್​ !
ಮುಂಬೈ-ಗೋವಾ ಹಡಗು
Follow us on

2000 ಕ್ಕೂ ಅಧಿಕ ಪ್ರಯಾಣಿಕರು ಇದ್ದ ಮುಂಬೈ-ಗೋವಾ ಐಷಾರಾಮಿ ಕ್ರೂಸ್​ ಹಡಗಿ(Mumbai-Goa cruise ship)ನಲ್ಲಿ ಒಬ್ಬ ಪ್ರಯಾಣಿಕರಲ್ಲಿ ಕೊರೊನಾ ಸೋಂಕು (Corona Virus) ದೃಢಪಟ್ಟಿತ್ತು. ಅದಾದ ಬೆನ್ನಲ್ಲೇ ಉಳಿದ ಪ್ರಯಾಣಿಕರನ್ನೂ ಸಹ ಅಲ್ಲಿಯೇ ಐಸೋಲೇಟ್ ಮಾಡಿ, ಎಲ್ಲರಿಗೂ ಆರ್​ಟಿ-ಪಿಸಿಆರ್​ ಟೆಸ್ಟ್(RT-PCR Test) ಮಾಡಲಾಗುತ್ತಿದೆ. ಅದರ ವರದಿಯೂ ಬರುತ್ತಿದ್ದು, ಸದ್ಯ ಈ ಕಾರ್ಡೆಲಿಯಾ ಕ್ರೂಸಸ್​ ಐಷಾರಾಮಿ ಹಡಗಿನಲ್ಲಿ 66 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಬ್ಬರಲ್ಲಿ ಕೊವಿಡ್ 19 ಸೋಂಕು ಕಾಣಿಸಿಕೊಂಡ ನಂತರ, ಯಾರಿಗೂ ಹಡಗಿನಿಂದ ಹೊರ ಹೋಗಲು ಬಿಟ್ಟಿರಲಿಲ್ಲ. ವೈದ್ಯಕೀಯ ತಂಡ ಅಲ್ಲಿಯೇ ಇದ್ದುಕೊಂಡು ಎಲ್ಲರಿಗೂ ಆರ್​ಟಿ-ಪಿಸಿಆರ್​ ಟೆಸ್ಟ್ ಮಾಡುತ್ತಿದೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್​ ರಾಣೆ ತಿಳಿಸಿದ್ದಾರೆ.

ಹಡಗಿನಲ್ಲಿ ಇದ್ದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ, ಈ ಐಷಾರಾಮಿ ಹಡಗನ್ನು ಗೋವಾದಲ್ಲಿ ನಿಲ್ಲಿಸಲು ಮುಂಬೈ ಪೋರ್ಟ್​ ಟ್ರಸ್ಟ್​ ನಿರಾಕರಿಸಿದೆ. ಹಾಗಾಗಿ ಇದೀಗ ಹಡಗು ಮೊರ್ಮುಗೋವ್​ ಪೋರ್ಟ್​ ಕ್ರೂಸ್​ ಟರ್ಮಿನಲ್​ನಲ್ಲಿ ನಿಂತಿದೆ.  ಪ್ರತಿಯೊಬ್ಬರಿಗೂ ಕೊವಿಡ್​ 19 ಟೆಸ್ಟ್​ ಮುಗಿದು, ರಿಪೋರ್ಟ್​ ಬಂದ ಬಳಿಕವಷ್ಟೇ ಅಲ್ಲಿಂದ ತೆರಳಲು ಅವಕಾಶ ಮಾಡಿಕೊಡಲಾಗುವುದು. ನಾವು ವೈದ್ಯಕೀಯ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಯೊಂದರ ಜತೆ ಟೈ-ಅಪ್ ಮಾಡಿಕೊಂಡಿದ್ದೇವೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.  ಹಾಗೇ, ಟ್ವೀಟ್ ಮಾಡಿ ಒಟ್ಟು 66 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದನ್ನು ತಿಳಿಸಿದ್ದಾರೆ. ಪ್ರಯಾಣಿಕರನ್ನು ಹಡಗಿನಿಂದ ಯಾವಾಗ ಕಳಿಸಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಹಡಗಿನಲ್ಲಿ ಇದ್ದವರೆಲ್ಲ ಎರಡೂ ಡೋಸ್​ ಕೊರೊನಾ ಲಸಿಕೆ ಪಡೆದವರೇ ಆಗಿದ್ದಾರೆ. ಹಾಗಿದ್ದಾಗ್ಯೂ ಕೆಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.  ಇನ್ನು ಗೋವಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಬೇರೆಬೇರೆ ದೇಶಗಳಿಂದ ಬರುವ ಸುಮಾರು 4000 ದಷ್ಟು ಪ್ರಯಾಣಿಕರನ್ನು ಪ್ರತಿದಿನ ಕೊವಿಡ್​ 19 ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪ್ರತಿದಿನವೂ, ಪ್ರತಿ ವಿಮಾನದಲ್ಲೂ ಒಬ್ಬರಲ್ಲ ಒಬ್ಬರು ಕೊವಿಡ್​ 19 ಸೋಂಕಿತರು ಇರುತ್ತಿದ್ದಾರೆ. ಹೀಗಾಗಿ ನಿಯಂತ್ರಣಕ್ಕೆ ಸಂಬಂಧಪಟ್ಟ ಶಿಷ್ಟಾಚಾರ ಪಾಲನೆ ಅತ್ಯಗತ್ಯ ಎಂದು ಹೇಳಿದ್ದಾರೆ.  ಹಾಗೇ, ಒಮಿಕ್ರಾನ್​ ಟೆಸ್ಟ್​ ಮಾಡುವುದಕ್ಕೋಸ್ಕರ ಗೋವಾ ಇನ್ನು 15 ದಿನಗಳಲ್ಲಿ ಜಿನೋಮ್​ ಸಿಕ್ವೆನ್ಸಿಂಗ್​ ಯಂತ್ರವನ್ನು ಸಿದ್ಧಗೊಳಿಸಲಿದೆ. ಇದರಿಂದ ಒಮಿಕ್ರಾನ್​ ಟೆಸ್ಟ್​ ವಿಳಂಬವಾಗುವುದನ್ನು ತಪ್ಪಿಸಬಹುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್​..!

Published On - 5:55 pm, Mon, 3 January 22