ದೆಹಲಿಯಲ್ಲಿ ಏರಿಕೆಯಾಗುತ್ತಿದೆ ಕೊವಿಡ್ 19 ಸೋಂಕಿತರ ಸಂಖ್ಯೆ; ನಿರ್ಬಂಧ ನಿಯಮ ಉಲ್ಲಂಘನೆ, ನಿನ್ನೆ ಒಂದೇ ದಿನ 1.15 ಕೋಟಿ ರೂ.ದಂಡ ವಸೂಲಿ
ಕೊರೊನಾ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಹೊಸವರ್ಷದ ಮುಂಚಿತವಾಗಿಯೇ ಒಂದಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಗುಂಪುಗೂಡುವಿಕೆ ನಿಷೇಧಿಸಲಾಗಿದೆ. ಆದರೆ ಸಾರ್ವಜನಿಕರು ಕಾಯ್ದೆ ಉಲ್ಲಂಘನೆ ಮಾಡುತ್ತಿದ್ದಾರೆ.
ದೆಹಲಿಯಲ್ಲಿ ಕೊವಿಡ್ 19 ಕೇಸ್(Covid 19 Cases)ಗಳು ಏರಿಕೆಯಾಗುತ್ತಿವೆ. ಸದ್ಯ ರಾಷ್ಟ್ರರಾಜಧಾನಿಯಲ್ಲಿ ಪಾಸಿಟಿವಿಟಿ ದರ ಶೇ.6ರಷ್ಟಿದೆ. ದೆಹಲಿಯಲ್ಲಿ ಇಂದು 4100 ಕೊರೊನಾ ಸೋಂಕಿನ ಕೇಸ್ಗಳು ಪತ್ತೆಯಾಗಿದ್ದು, ಕಳೆದ 7.5 ತಿಂಗಳಲ್ಲೇ ಇದು ಅತ್ಯಂತ ಹೆಚ್ಚಿನ ಪ್ರಕರಣಗಳಾಗಿವೆ. ಹೀಗೆ ಪತ್ತೆಯಾಗುತ್ತಿರುವ ಕೊವಿಡ್ 19 ಕೇಸ್ಗಳೊಂದಿಗೆ ಒಮಿಕ್ರಾನ್ ಸೋಂಕಿನ ಪ್ರಕರಣಗಳೂ ಹೆಚ್ಚುತ್ತಿವೆ. ಇನ್ನು ಒಂದು ವಾರದಲ್ಲಿ ಕೊರೊನಾ ಪ್ರಕರಣಗಳು ಗರಿಷ್ಠ ಮಟ್ಟಕ್ಕೆ ತಲುಪಬಹುದು ಎಂದು ತಜ್ಞರು ಹೇಳಿದ್ದಾರೆ. ಆದರೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರೂ ಆಸ್ಪತ್ರೆಗೆ ಸೇರುವವರ ಪ್ರಮಾಣ ಕಡಿಮೆ ಎಂದು ಹೇಳಲಾಗಿದೆ.
ದೆಹಲಿಯಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶ್ರೇಣೀಕೃತ ಪ್ರತಿಕ್ರಿಯಾ ಕಾರ್ಯ ಯೋಜನೆಯಿಂದ ಹಳದಿ ಅಲರ್ಟ್ ಘೋಷಿಸಲಾಗಿದೆ. ಆದರೆ ಈಗ ಇರುವ ಪಾಸಿಟಿವಿಟಿ ದರ ಹೀಗೆ ಮುಂದುವರಿದರೆ ಶೀಘ್ರದಲ್ಲೇ ರೆಡ್ ಅಲರ್ಟ್ ಘೋಷಿಸಲಾಗುವುದು ಎಂದೂ ಹೇಳಲಾಗಿದೆ. ಹಾಗೊಮ್ಮೆ, ರೆಡ್ ಅಲರ್ಟ್ ಘೋಷಣೆಯಾದರೆ ದೆಹಲಿಯಲ್ಲಿ ಕೊವಿಡ್ 19 ನಿಯಂತ್ರಿಸಲು ಸಂಪೂರ್ಣ ಪ್ರಮಾಣದ ಕರ್ಫ್ಯೂ, ಜನದಟ್ಟಣಿ ನಿಯಂತ್ರಿಸಲು ವಿವಿಧ ಸಂಸ್ಥೆಗಳ ಸಂಪೂರ್ಣ ಬಂದ್ನಂತ ನಿಯಮಗಳನ್ನು ಜಾರಿಗೊಳಿಸಬಹುದು. ಈಗಲೂ ಕೂಡ ಅಲ್ಲಿ ಗುಂಪುಗೂಡುವಿಕೆ ನಿಷೇಧಿಸಲಾಗಿದೆ. ಸಿನಿಮಾ ಹಾಲ್ಗಳು, ಥಿಯೇಟರ್ಗಳೆಲ್ಲ ಶೇ.50ರ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಜ.2ರಂದು 1.15 ಕೋಟಿ ರೂ.ದಂಡ ವಸೂಲಿ ಕೊರೊನಾ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಹೊಸವರ್ಷದ ಮುಂಚಿತವಾಗಿಯೇ ಒಂದಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಗುಂಪುಗೂಡುವಿಕೆ ನಿಷೇಧಿಸಲಾಗಿದೆ. ಆದರೆ ಸಾರ್ವಜನಿಕರು ಕಾಯ್ದೆ ಉಲ್ಲಂಘನೆ ಮಾಡುತ್ತಿದ್ದಾರೆ. ಹೀಗೆ ಕೊವಿಡ್ 19 ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಜನವರಿ 2ರಂದು ಒಟ್ಟು 1.15 ಕೋಟಿ ದಂಡ ವಸೂಲಿ ಮಾಡಲಾಗಿದೆ. 45 ಎಫ್ಐಆರ್ಗಳು ದಾಖಲಾಗಿವೆ ಎಂದು ದೆಹಲಿ ಸರ್ಕಾರ ತಿಳಿಸಿದೆ. ಜನವರಿ 1ರಂದು 66 ಎಫ್ಐಆರ್ಗಳು ದಾಖಲಾಗಿದ್ದು, ಒಟ್ಟು 99 ಲಕ್ಷ ರೂಪಾಯಿ ದಂಡ ವಸೂಲಿಯಾಗಿದೆ ಎಂದೂ ಮಾಹಿತಿ ನೀಡಿದೆ. ದೆಹಲಿ ಸರ್ಕಾರ ಹಿಂದೆಯೇ ಹೇಳಿತ್ತು. ಕೊವಿಡ್ 19 ನಿಯಂತ್ರಣ ನಿಯಮಗಳನ್ನು ಮೀರಿದರೆ ಸಂಬಂಧಪಟ್ಟ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು. ಸರ್ಕಾರ ಹೇರಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿದವರಿಂದ ದಂಡ ವಸೂಲಿ ಮಾಡಲಾಗುತ್ತಿದೆ. ಜನವರಿ 2ರಂದು ಒಂದೇ ದಿನ ಬರೋಬ್ಬರಿ 1.15 ಕೋಟಿ ರೂಪಾಯಿ ವಸೂಲಿಯಾಗಿದೆ.
ಇದನ್ನೂ ಓದಿ: ಮೈಸೂರಲ್ಲಿ ಸೇಬು ಹಣ್ಣಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆತರು ಕಾಂಗ್ರೆಸ್ ಕಾರ್ಯಕರ್ತರು!