ಮೈಸೂರಲ್ಲಿ ಸೇಬು ಹಣ್ಣಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆತರು ಕಾಂಗ್ರೆಸ್ ಕಾರ್ಯಕರ್ತರು!
ಕೋವಿಡ್-19 ಪಿಡುಗಿನ ಮೂರನೇ ಭೀತಿಯ ನಡುವೆ ರಾಜ್ಯ ಮತ್ತು ದೇಶದಲ್ಲಿ ಸೋಂಕಿನ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ರಾಜಕೀಯ ಮೇಳ, ಸಮಾವೇಶ, ರೋಡ್ ಶೋ ಮೊದಲಾದವುಗಳನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲವೇ? ಸರ್ಕಾರಗಳಿಗೆ ಮತ್ತೊಮ್ಮೆ ಕೋರ್ಟುಗಳು ಛೀಮಾರಿ ಹಾಕಬೇಕೇ?
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರ ಪಾದಯಾತ್ರೆ ಹಮ್ಮಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಪ್ರಸ್ತಾಪಿತ ಪಾದಯಾತ್ರೆಗೆ ಪೂರ್ವಭಾವಿಯಾಗಿ ಸೋಮವಾರದಂದು ಮೈಸೂರಲ್ಲಿ ಕಾಂಗ್ರೆಸ್ ಒಂದು ಸಮಾವೇಶವನ್ನು ಏರ್ಪಡಿಸಿತ್ತು. ಪಕ್ಷದ ಸಹಸ್ರಾರು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಆದರೆ ಅವರಲ್ಲಿ ಬಹಳಷ್ಟು ಕಾರ್ಯಕರ್ತರು ಹಸಿದ ಹೊಟ್ಟೆಯಲ್ಲಿ ಬಂದಿದ್ದರು ಅನ್ನೋದು ನಮಗೆ ಈ ವಿಡಿಯೋ ನೋಡಿದ ಬಳಿಕ ಗೊತ್ತಾಯಿತು ಮಾರಾಯ್ರೇ! ನಾವು ಯಾಕೆ ಹಾಗೆ ಹೇಳುತ್ತಿದ್ದೇವೆ ಅಂತ ನಿಮಗೂ ಗೊತ್ತಾಗಿರಬಹುದು. ಮೈಸೂರು ಜಿಲ್ಲಾ ಕಾಂಗ್ರೆಸ್ ಘಟಕವು ವರಿಷ್ಠ ನಾಯಕರಿಗೆ ಸಾವಿರಾರು ಸೇಬಿನಹಣ್ಣುಗಳನ್ನು ಪೋಣಿಸಿದ ಒಂದು ಬೃಹತ್ತಾದ ಒಂದು ಹಾರವನ್ನು ತಯಾರಿಸಿತ್ತು.
ಆದರೆ, ಈ ಹಾರದ ಸ್ಥಿತಿ ಏನಾಯ್ತು ಅಂತ ನೀವೇ ನೋಡಿ. ಹಾರವು ಕೈಗೆಟಕುವ ಎತ್ತರಕ್ಕೆ ಇಳಿಯುತ್ತಿದ್ದಂತೆ ಕಾರ್ಯಕರ್ತರು ನಾ ಮುಂದು ತಾ ಮುಂದು ಅಂತ ಸೇಬು ಹಣ್ಣುಗಳಿಗೆ ಮುಗಿಬಿದ್ದು ತಮ್ಮ ಕೈಗೆ ಸಿಕ್ಕಷ್ಟು ಕಿತ್ತುಕೊಳ್ಳಲಾರಂಭಿಸಿದರು. ಹಣ್ಣಿಗಾಗಿ ನೂಕು ನುಗ್ಗಲು ಮತ್ತು ಕಿತ್ತಾಟದಂಥ ಸ್ಥಿತಿಯೂ ನಿರ್ಮಾಣವಾಯಿತು. ಎಲ್ಲರಿಗೂ ಸೇಬು ಸಿಕ್ಕುವುದು ಸಾಧ್ಯವಿರಲಿಲ್ಲ. ಕ್ರೇನ್ಗೆ ಹತ್ತಿರವಿದ್ದವರು ಮಾತ್ರ ಎಳೆದಾಡಿ ಕಿತ್ತುಕೊಂಡರು.
ಈ ಗುಂಪಿನಲ್ಲಿ ಬಹಳಷ್ಟು ಜನ ಮಾಸ್ಕ್ ಧರಿಸಿಲ್ಲ. ಕೋವಿಡ್-19 ಪಿಡುಗಿನ ಮೂರನೇ ಭೀತಿಯ ನಡುವೆ ರಾಜ್ಯ ಮತ್ತು ದೇಶದಲ್ಲಿ ಸೋಂಕಿನ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ರಾಜಕೀಯ ಮೇಳ, ಸಮಾವೇಶ, ರೋಡ್ ಶೋ ಮೊದಲಾದವುಗಳನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲವೇ? ಸರ್ಕಾರಗಳಿಗೆ ಮತ್ತೊಮ್ಮೆ ಕೋರ್ಟುಗಳು ಛೀಮಾರಿ ಹಾಕಬೇಕೇ?
ಆಡಳಿತ ಪಕ್ಷ ಬಿಜೆಪಿ ನಾಯಕರ ಕಟು ಟೀಕೆಯ ನಡುವೆಯೂ ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು ಶುರುವಿಟ್ಟುಕೊಂಡಿದ್ದಾರೆ. ನಿಮಗೆ ನೆನೆಪಿರಬಹುದು, 2010 ರಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ಮತ್ತು ಬಳ್ಳಾರಿ ರೆಡ್ಡಿ ಸಾಮ್ರಾಜ್ಯದ ವಿರುದ್ಧ ಬಳ್ಳಾರಿಯಿಂದ ಬೆಂಗಳೂರಿನವೆರೆಗೆ ನಡೆಸಿದ ಪಾದಯಾತ್ರೆ 2013 ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ನಿರ್ಣಾಯಕವಾಗಿ ಸಾಬೀತಾಗಿತ್ತು. ಅಧಿಕಾರರೂಢ ಬಿಜೆಪಿ ಸೋಲುಂಡು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು.
ಇದನ್ನೂ ಓದಿ: ತನಗೇ ವೋಟ್ ಹಾಕಬೇಕೆಂದು ಮತದಾರರಿಂದ ಆಣೆ ಪ್ರಮಾಣ ಮಾಡಿಸಿದ ರೇಣುಕಾಚಾರ್ಯ; ವೈರಲ್ ಆದ ವಿಡಿಯೋ ಇಲ್ಲಿದೆ