ತೆಲಂಗಾಣ ಬಿಜೆಪಿ ಮುಖ್ಯಸ್ಥ, ಸಂಸದ ಬಂಡಿ ಸಂಜಯ್ ಕುಮಾರ್ಗೆ 14 ದಿನ ನ್ಯಾಯಾಂಗ ಬಂಧನ; ಜೆ.ಪಿ.ನಡ್ಡಾರಿಂದ ತೀವ್ರ ವಿರೋಧ
ಬಂಡಿ ಸಂಜಯ್ಕುಮಾರ್ ಅವರನ್ನು ನಿನ್ನೆ ಇಡೀ ರಾತ್ರಿ ಮನಾಕೊಂಡೂರ್ ಪೊಲೀಸ್ ಠಾಣೆಯಲ್ಲಿಯೇ ಇರಿಸಲಾಗಿತ್ತು. ಇಂದು ಬೆಳಗ್ಗೆ ಹೊತ್ತಿಗೆ ಕರೀಂನಗರ ಪಟ್ಟಣದಲ್ಲಿರುವ ಪೊಲೀಸ್ ತರಬೇತಿ ಕೇಂದ್ರಕ್ಕೆ ಅವರನ್ನು ಕಳಿಸಲಾಗಿತ್ತು.
ತೆಲಂಗಾಣ ಬಿಜೆಪಿ ಮುಖ್ಯಸ್ಥ (Telangana BJP chief )ಬಂಡಿ ಸಂಜಯ್ ಕುಮಾರ್ (Bandi Sanjay Kumar) ಅವರನ್ನು ನಿನ್ನೆ (ಜ.2) ಪೊಲೀಸರು ವಶಕ್ಕೆ ಪಡೆದಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದೆ. ಈ ಕ್ರಮವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಲವಾಗಿ ಖಂಡಿಸಿದ್ದು, ಅಮಾನವೀಯ ಎಂದಿದ್ದಾರೆ. ಅಷ್ಟೇ ಅಲ್ಲ, ತೆಲಂಗಾಣದಲ್ಲಿ ಪ್ರಜಾಪ್ರಭುತ್ವ ಸತ್ತುಹೋಗಿದೆ ಎಂದು ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಜೆ.ಪಿ.ನಡ್ಡಾ, ತೆಲಂಗಾಣ ಪೊಲೀಸರು ಅಲ್ಲಿನ ಸಿಎಂ ಕೆಸಿಆರ್ ನೇತೃತ್ವದ ಸರ್ಕಾರದ ಒತ್ತಡಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬಂಡಿ ಸಂಜಯ್ ಕುಮಾರ್ ಮನೆಗೆ ತೆರಳಿ, ಅವರ ಮೇಲೆ ಲಾಠಿ ಚಾರ್ಜ್ ನಡೆಸಿ ಬಂಧಿಸಿದ್ದಾರೆ ಎಂದು ಜೆಪಿ ನಡ್ಡಾ ಹೇಳಿದ್ದಾರೆ.
ಇತ್ತೀಚೆಗೆ ಕೆಸಿಆರ್ ಸರ್ಕಾರ, ಉದ್ಯೋಗ ಹಂಚಿಕೆಯಲ್ಲಿ ವಲಯವಾರು ವ್ಯವಸ್ಥೆ ಮಾಡಿ ಆದೇಶ ಹೊರಡಿಸಿತ್ತು. ಆದರೆ ಇದರ ವಿರುದ್ಧ ಶಿಕ್ಷಕರು ಮತ್ತು ಇತರ ಸರ್ಕಾರಿ ಉದ್ಯೋಗಿಗಳು, ಕರೀಂನಗರ ಲೋಕಸಭಾ ಸಂಸದರೂ ಆಗಿರುವ ಬಂಡಿ ಸಂಜಯ್ ಕುಮಾರ್ ಅವರ ಕಚೇರಿಗೆ ಹೋಗಿ ದೂರು ನೀಡಿದ್ದರು. ಇದು ಉದ್ಯೋಗಿಗಳ ವಿರೋಧಿ ಯೋಜನೆ ಎಂಬ ಕಾರಣಕ್ಕೆ ಸಂಜಯ್ ಕುಮಾರ್, ತಮ್ಮ ಕೆಲವು ಬೆಂಬಲಿಗರೊಂದಿಗೆ ಸೇರಿ ಜನವರಿ 2ರ ರಾತ್ರಿ 9 ರಿಂದ, ಜನವರಿ 3ರ ಮುಂಜಾನೆ 5ಗಂಟೆವರೆಗೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದರು. ರಾತ್ರಿ ಪೂರ್ತಿ ಮಾಡಲು ಯೋಜಿಸಿದ್ದ ಈ ಪ್ರತಿಭಟನೆಗೆ ಜಾಗರಣ ದೀಕ್ಷಾ ಎಂದು ಹೆಸರಿಡಲಾಗಿತ್ತು. ಆದರೆ ಪ್ರತಿಭಟನೆ ಶುರುಮಾಡುತ್ತಿದ್ದಂತೆ ಪೊಲೀಸರು ಬಂಡಿ ಸಂಜಯ್ ಕುಮಾರ್ರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಸರ್ಕಾರ ಹೇರಿರುವ ಕೊವಿಡ್ 19 ನಿರ್ಬಂಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಬಂಡಿ ಸಂಜಯ್ಕುಮಾರ್ ಅವರನ್ನು ನಿನ್ನೆ ಇಡೀ ರಾತ್ರಿ ಮನಾಕೊಂಡೂರ್ ಪೊಲೀಸ್ ಠಾಣೆಯಲ್ಲಿಯೇ ಇರಿಸಲಾಗಿತ್ತು. ಇಂದು ಬೆಳಗ್ಗೆ ಹೊತ್ತಿಗೆ ಕರೀಂನಗರ ಪಟ್ಟಣದಲ್ಲಿರುವ ಪೊಲೀಸ್ ತರಬೇತಿ ಕೇಂದ್ರಕ್ಕೆ ಅವರನ್ನು ಕಳಿಸಲಾಗಿತ್ತು. ಬಂಡಿ ಸಂಜಯ್ ಕುಮಾರ್ ಜತೆ ಅವರ ಬೆಂಬಲಿಗರನ್ನೂ ಬಂಧಿಸಲಾಗಿದ್ದು, ಅವರೆಲ್ಲರಿಗೂ ಕೊವಿಡ್ 19 ತಪಾಸಣೆ ಮಾಡಲಾಗುವುದು ಕರೀಂನಗರ ಪೊಲೀಸ್ ಆಯುಕ್ತ ಸತ್ಯನಾರಾಯಣ ಹೇಳಿದ್ದಾರೆ. ಇನ್ನು ಪೊಲೀಸ್ ತರಬೇತಿ ಕೇಂದ್ರಕ್ಕೆ ಬಂಡಿಯವರನ್ನು ಕರೆದುಕೊಂಡು ಹೋಗುತ್ತಿದ್ದಂತೆ ಅಲ್ಲಿಗೆ ಅನೇಕ ಬಿಜೆಪಿ ಕಾರ್ಯಕರ್ತರು ತೆರಳಿ, ಗಲಾಟೆ-ಪ್ರತಿಭಟನೆ ನಡೆಸಿದರು. ಇದರಿಂದಾಗಿ ಅಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪೊಲೀಸರೊಂದಿಗೆ ವಾಗ್ವಾದವನ್ನೂ ನಡೆಸಿದ್ದರು. ಸದ್ಯ ಬಂಧಿತರ ವಿರುದ್ಧ ಎರಡು-ಮೂರು ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ‘ನನಗೆ ಶಾಕ್ ಆಗಿ ಅಳಲು ಆರಂಭಿಸಿದೆ’; ಗೆಳೆಯ ಪ್ರಪೋಸ್ ಮಾಡಿದ ಸಂದರ್ಭ ವಿವರಿಸಿದ ಖ್ಯಾತ ನಟಿ
Published On - 6:43 pm, Mon, 3 January 22