ಸೋಲಾರ್ ಪ್ಯಾನೆಲ್ ಅಳವಡಿಸಲು ಪ್ರತಿ ಮನೆಗೆ 75ರಿಂದ 80 ಸಾವಿರ ನೀಡುತ್ತೇವೆ; ಜಾರ್ಖಂಡ್‌ನಲ್ಲಿ ಮೋದಿ ಘೋಷಣೆ

ಜಾರ್ಖಂಡ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಲಾರ್ ಪ್ಯಾನೆಲ್‌ನಿಂದ ಉತ್ಪಾದಿಸುವ ವಿದ್ಯುತ್‌ಗೆ ಶೂನ್ಯ ವಿದ್ಯುತ್ ಬಿಲ್ ಇರಲಿದೆ ಮತ್ತು ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಇದ್ದರೆ ಸರ್ಕಾರವು ಆ ವಿದ್ಯುತ್ ಅನ್ನು ಖರೀದಿಸುತ್ತದೆ ಎಂದು ಹೇಳಿದ್ದಾರೆ.

ಸೋಲಾರ್ ಪ್ಯಾನೆಲ್ ಅಳವಡಿಸಲು ಪ್ರತಿ ಮನೆಗೆ 75ರಿಂದ 80 ಸಾವಿರ ನೀಡುತ್ತೇವೆ; ಜಾರ್ಖಂಡ್‌ನಲ್ಲಿ ಮೋದಿ ಘೋಷಣೆ
ಜಾರ್ಖಂಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ

Updated on: Nov 13, 2024 | 6:31 PM

ರಾಂಚಿ: ಪ್ರಧಾನಿ ನರೇಂದ್ರ ಮೋದಿ ಇಂದು (ಬುಧವಾರ) ಜಾರ್ಖಂಡ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದು, ಸೋಲಾರ್ ಪ್ಯಾನೆಲ್​ಗಳನ್ನು ಅಳವಡಿಸಲು ಕೇಂದ್ರ ಸರ್ಕಾರವು ಪ್ರತಿ ಮನೆಗೆ 75,000ರಿಂದ 80,000 ರೂ. ನೀಡುತ್ತದೆ. ಇದರಿಂದ ಉತ್ಪಾದಿಸುವ ವಿದ್ಯುತ್‌ಗೆ ಶೂನ್ಯ ವಿದ್ಯುತ್ ಬಿಲ್ ಇರುತ್ತದೆ ಮತ್ತು ನಿಮ್ಮ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಇದ್ದರೆ ಸರ್ಕಾರ ನಿಮ್ಮ ವಿದ್ಯುತ್ ಅನ್ನು ಖರೀದಿಸುತ್ತದೆ ಎಂದು ಹೇಳಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ನಿಮ್ಮ ವಿದ್ಯುತ್ ಬಿಲ್ ಅನ್ನು ಶೂನ್ಯ ಮಾಡಲು ಹೊರಟಿದ್ದಾರೆ. ನಾವು ಪ್ರತಿ ಮನೆಗೆ ಸೋಲಾರ್ ಪ್ಯಾನಲ್ ಅಳವಡಿಸಲು 75,000 ರಿಂದ 80,000 ರೂ. ನೀಡುತ್ತೇವೆ. ಇದರಿಂದ ಉತ್ಪಾದಿಸುವ ವಿದ್ಯುತ್ ಶೂನ್ಯ ವಿದ್ಯುತ್ ಬಿಲ್ ಅನ್ನು ಒಳಗೊಂಡಿರುತ್ತದೆ. ನಿಮ್ಮ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಇದ್ದರೆ ಸರ್ಕಾರವೇ ನಿಮ್ಮ ವಿದ್ಯುತ್ ಖರೀದಿಸುತ್ತದೆ,” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ, ಮೋದಿ ಬ್ಯಾಗನ್ನೂ ಚೆಕ್ ಮಾಡುತ್ತೀರಾ?; ಚುನಾವಣಾ ಆಯೋಗದ ಅಧಿಕಾರಿಗಳ ಜೊತೆ ಉದ್ಧವ್ ಠಾಕ್ರೆ ವಾಗ್ವಾದ

ಚುನಾವಣಾ ರ್ಯಾಲಿಯಲ್ಲಿ ಪಿಎಂ ನರೇಂದ್ರ ಮೋದಿ ಅವರು ಕಾಂಗ್ರೆಸ್, ಆರ್‌ಜೆಡಿ ಮತ್ತು ಜೆಎಂಎಂನಂತಹ ವಿವಿಧ ಪಕ್ಷಗಳು ಈ ಪ್ರದೇಶವನ್ನು ದೀರ್ಘಕಾಲ ಆಳಿದವು. ಆದರೆ, ಅವರು ಸಂತಾಲ್ ಸಮುದಾಯಕ್ಕೆ ವಲಸೆ, ಬಡತನ ಮತ್ತು ನಿರುದ್ಯೋಗವನ್ನು ಮಾತ್ರ ನೀಡಿದ್ದಾರೆ. ಮುಖ್ಯಮಂತ್ರಿಗಳೇ ಈ ಭಾಗದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ. ಆದರೆ, ಇಲ್ಲಿನ ಜನರು ಕೆಲಸಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.


ಕಾಂಗ್ರೆಸ್ ಪಕ್ಷವು ಮೀಸಲಾತಿ ನೀತಿಗಳನ್ನು ನಿರಂತರವಾಗಿ ವಿರೋಧಿಸುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಈ ಗುಂಪುಗಳ ಹಕ್ಕುಗಳನ್ನು ದುರ್ಬಲಗೊಳಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಸ್‌ಸಿ / ಎಸ್‌ಟಿ / ಒಬಿಸಿ ಮೀಸಲಾತಿಯನ್ನು ಕೊನೆಗೊಳಿಸಲು ಬಯಸುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ತಂದೆ (ರಾಜೀವ್ ಗಾಂಧಿ) ಕಾಂಗ್ರೆಸ್‌ನ ಸರ್ವೋಚ್ಚ ನಾಯಕರಾಗಿದ್ದಾಗ ಅವರು ಕೂಡ ಮೀಸಲಾತಿ ರದ್ದುಗೊಳಿಸುವುದಾಗಿ ಘೋಷಿಸಿದ್ದರು. ಆದರೆ ಎಸ್‌ಸಿ/ಎಸ್‌ಟಿ/ಒಬಿಸಿಯ ಒಗ್ಗಟ್ಟಿನಿಂದಾಗಿ ಅಂದಿನಿಂದ ಇಂದಿನವರೆಗೆ, ಎಸ್‌ಸಿ/ಎಸ್‌ಟಿ/ಒಬಿಸಿ ಇರುವ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಸಂಪೂರ್ಣ ಬಹುಮತ ಸಿಕ್ಕಿಲ್ಲ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಸುಳ್ಳು ಭರವಸೆ ನೀಡಿದ ಕಾಂಗ್ರೆಸನ್ನು ಮಹಾರಾಷ್ಟ್ರದಿಂದ ದೂರವಿಡಿ; ಪುಣೆಯಲ್ಲಿ ಪ್ರಧಾನಿ ಮೋದಿ

ಅವರ ಸಾಮೂಹಿಕ ಪ್ರಭಾವವನ್ನು ದುರ್ಬಲಗೊಳಿಸುವ ಸಲುವಾಗಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳನ್ನು ವಿಭಜಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಅದಕ್ಕಾಗಿಯೇ ಕಾಂಗ್ರೆಸ್ ಹೊಸ ಷಡ್ಯಂತ್ರ ರೂಪಿಸಿದೆ. ನಿಮ್ಮ ಕಣ್ಣಿಗೆ ಮಣ್ಣೆರಚಲು ಕಾಂಗ್ರೆಸ್ ಹೊಸ ಆಟವಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದ್ದು, ರಾಜ್ಯದ 81 ಸ್ಥಾನಗಳ ಪೈಕಿ 43 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಉಳಿದ 38 ಸ್ಥಾನಗಳಿಗೆ ನವೆಂಬರ್ 20ರಂದು ಚುನಾವಣೆ ನಡೆಯಲಿದೆ. ನವೆಂಬರ್ 23ರಂದು ಮತಗಳ ಎಣಿಕೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ