ಭಾರತಕ್ಕೆ 8 ಚೀತಾಗಳೇನೋ ಬಂದವು, ಆದರೆ 8 ವರ್ಷಗಳಲ್ಲಿ 16 ಕೋಟಿ ಉದ್ಯೋಗಗಳು ಏಕೆ ಬರಲಿಲ್ಲ: ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 18, 2022 | 8:51 AM

ಚೀತಾ ಸಂರಕ್ಷಣೆ ಯೋಜನೆಯನ್ನು ನಿರುದ್ಯೋಗಕ್ಕೆ ತಳಕು ಹಾಕಿ ಹಿಂದಿಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಭಾರತಕ್ಕೆ 8 ಚೀತಾಗಳೇನೋ ಬಂದವು, ಆದರೆ 8 ವರ್ಷಗಳಲ್ಲಿ 16 ಕೋಟಿ ಉದ್ಯೋಗಗಳು ಏಕೆ ಬರಲಿಲ್ಲ: ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ
Follow us on

ದೆಹಲಿ: ಭಾರತಕ್ಕೆ ಎಂಟು ಚೀತಾಗಳೇನೋ (Cheetah) ಬಂದವು. ಆಧರೆ 8 ವರ್ಷಗಳಲ್ಲಿ 16 ಕೋಟಿ ಉದ್ಯೋಗಗಳು ಏಕೆ ಸೃಷ್ಟಿಯಾಗಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ ಶನಿವಾರ 72ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದ ಎಂಟು ಚೀತಾಗಳನ್ನು ಬಿಡಲಾಯಿತು. ಭಾರತದಲ್ಲಿ ಅಳಿದುಹೋಗಿವೆ ಎಂದು ಘೋಷಿಸಿದ ಏಳು ದಶಕಗಳ ನಂತರ ಮಹತ್ವದ ಯೋಜನೆಯ ಭಾಗವಾಗಿ ಆಫ್ರಿಕಾದಿಂದ ಚೀತಾಗಳನ್ನು ತರಲಾಯಿತು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಹಲವು ಮಹತ್ವಾಕಾಂಕ್ಷೆ ಯೋಜನೆಗಳ ಪೈಕಿ ಒಂದಾಗಿದೆ.

ಚೀತಾ ಸಂರಕ್ಷಣೆ ಯೋಜನೆಯನ್ನು ನಿರುದ್ಯೋಗಕ್ಕೆ ತಳಕು ಹಾಕಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಎಂಟು ಚೀತಾಗಳು ಬಂದಿವೆ, ಎಂಟು ವರ್ಷಗಳಲ್ಲಿ 16 ಕೋಟಿ ಉದ್ಯೋಗಗಳು ಏಕೆ ಬರಲಿಲ್ಲ ಎಂದು ಈಗ ಹೇಳಿ’ ಎಂದು ಪ್ರಶ್ನಿಸಿದ್ದಾರೆ. ‘ನಮಗೆ ಉದ್ಯೋಗ ಬೇಕು ಎಂದು ದೇಶದ ಯುವಕರು ಗೋಳಾಡುತ್ತಿದ್ದಾರೆ’ ಎಂದು ‘ರಾಷ್ಟ್ರೀಯ ಬೆರೋಜ್​ಗಾರ್ ದಿವಸ್’ (Rashtriya Berozgar Diwas) ಹ್ಯಾಷ್​ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿನ ನಿರುದ್ಯೋಗ ಪರಿಸ್ಥಿತಿಯನ್ನು ಗಮನಿಸಿ ಯುವಕರು ಪ್ರಧಾನಿಯ ಜನ್ಮದಿನವನ್ನು ‘ರಾಷ್ಟ್ರೀಯ ನಿರುದ್ಯೋಗ ದಿನ’ವಾಗಿ ಆಚರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಕೇಂದ್ರ ಸರ್ಕಾರವು ಈ ಮೊದಲು ಭರವಸೆ ನೀಡಿದ್ದಂತೆ ಯುವಜನರಿಗೆ ಉದ್ಯೋಗ ಒದಗಿಸಬೇಕು’ ಎಂದು ಕಾಂಗ್ರೆಸ್ ಶನಿವಾರ ಒತ್ತಾಯಿಸಿದೆ.

ವಾರ್ಷಿಕ ಎರಡು ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಮೋದಿ ಭರವಸೆ ನೀಡಿದರು ಆದರೆ ಕಳೆದ ಎಂಟು ವರ್ಷಗಳಲ್ಲಿ ಕೇವಲ ಏಳು ಲಕ್ಷ ಜನರಿಗೆ ಮಾತ್ರ ಉದ್ಯೋಗ ನೀಡಲಾಗಿದೆ ಎಂದು ಅದು ಹೇಳಿದೆ.

Published On - 8:47 am, Sun, 18 September 22