ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಲವು ವೇದಿಕೆಗಳಲ್ಲಿ ಭಾರತವು ವಿಶ್ವದ ಫಾರ್ಮಸಿಯಾಗಬೇಕು. ಅರ್ಥಾತ್ ಜಗತ್ತಿಗೆ ಅಗತ್ಯ ಔಷಧಗಳನ್ನು ಪೂರೈಸುವ ರಾಷ್ಟ್ರವಾಗಬೇಕು ಎಂದು ಹೇಳಿದ್ದರು. ಪಾಶ್ಚಾತ್ಯ ರಾಷ್ಟ್ರಗಳು ದುಬಾರಿ ಬೆಲೆಯಲ್ಲಿ ಔಷಧಗಳನ್ನು ಮಾರಾಟ ಮಾಡುತ್ತವೆ. ಒಂದು ವೇಳೆ ಭಾರತದಲ್ಲೇ ಅವುಗಳು ಉತ್ಪಾದನೆಯಾದರೆ ಅದನ್ನು ಇಲ್ಲಿನ ಜನರಿಗೆ ಕಡಿಮೆ ಬೆಲೆಯಲ್ಲಿ ಪೂರೈಸಬಹುದಲ್ಲದೇ ಅಗತ್ಯವಿರುವ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ರಫ್ತು ಮಾಡಬಹುದು ಎನ್ನುವುದು ಇದರ ಹಿಂದಿನ ಯೋಚನೆ. ಪ್ರಧಾನಿ ಪ್ರಸ್ತಾಪಿಸಿದ್ದ ಈ ಅಂಶ ‘ಕೊರೊನಾ ಲಸಿಕೆ ನೀಡಿಕೆ’ ಯೋಜನೆಯಲ್ಲಿ ಯಥಾವತ್ತು ಅನುಷ್ಠಾನವಾಗಿದೆ. ಜತೆಗೆ ಇತರ ದೇಶಗಳೊಂದಿಗೆ ಭಾರತದ ರಾಜತಾಂತ್ರಿಕ ಸಂಬಂಧಕ್ಕೂ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದೆ. ಕೊರೊನಾ ಲಸಿಕೆಯನ್ನು ಕೆಲವು ನೆರೆಯ ದೇಶಗಳಿಗೆ ‘ಲಸಿಕಾ ಮೈತ್ರಿ’ಯಡಿ ಉಚಿತವಾಗಿ ತಲುಪಿಸುವ ನಿರ್ಧಾರವನ್ನು ಪ್ರಧಾನಿ ಮೋದಿ ಕೈಗೊಂಡಿದ್ದರು. ಸ್ಥಳೀಯ ರಾಜನೀತಿಯನ್ನು ಬಲಪಡಿಸುವ ಚಾಣಾಕ್ಷ ಉದ್ದೇಶವನ್ನು ಇದು ಹೊಂದಿತ್ತು. ಈ ನಿರ್ಧಾರ ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳ ಪರವಾಗಿದೆ ಎಂಬ ಸಂದೇಶವನ್ನು ಎಲ್ಲಾ ರಾಷ್ಟ್ರಗಳಿಗೆ ತಲುಪಿಸಿತ್ತು.
ಕೊರೊನಾ ಸಾಂಕ್ರಾಮಿಕ ಕಾಣಿಸಿಕೊಂಡಿದ್ದು ಮೊದಲು ಚೀನಾದಲ್ಲಿ. ಆ ದೇಶವು ಲಸಿಕೆಯನ್ನು ಪಾಕಿಸ್ತಾನ ಸೇರಿದಂತೆ ಕೆಲವು ರಾಷ್ಟ್ರಗಳಿಗೆ ಮಾತ್ರ ಪೂರೈಸಿತ್ತು. ಆದರೆ ಭಾರತವು ಉಚಿತವಾಗಿ ನೆರೆಹೊರೆಯ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲದೇ ಬ್ರಿಕ್ಸ್ ಭಾಗವಾಗಿರುವ ಬ್ರೆಜಿಲ್ ಸೇರಿದಂತೆ ವಿವಿಧ ದೇಶಗಳಿಗೆ ಲಸಿಕೆ ಪೂರೈಸಿತ್ತು. ಇದು ಜಾಗತಿಕ ಮಟ್ಟದಲ್ಲಿ ಭಾರತವು ಕೊವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಹೊಂದಿರುವ ಬದ್ಧತೆಯನ್ನು ಸ್ಪಷ್ಟವಾಗಿ ತಿಳಿಸಿತ್ತು.
ಅಲ್ಲದೇ ಸಾಂಕ್ರಾಮಿಕವನ್ನು ಎದುರಿಸಲು ಭಾರತವು ಹಲವು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿತ್ತು. ಪಿಪಿಇ ಕಿಟ್ಗಳು, ವೆಂಟಿಲೇಟರ್ಗಳನ್ನು ಇಲ್ಲಿಯೇ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿತ್ತು. ಇದಲ್ಲದೇ ಗಲ್ಫ್ ಸೇರಿದಂತೆ ಸಾಂಕ್ರಾಮಿಕಕ್ಕೆ ನಲುಗಿದ್ದ ವಿಶ್ವದ ಹಲವು ಅಗತ್ಯ ರಾಷ್ಟ್ರಗಳಿಗೆ ಭಾರತವು ವೈದ್ಯರು, ದಾದಿಯರ ತಂಡವನ್ನೂ ಕಳುಹಿಸಿ ಸಹಾಯ ಹಸ್ತ ಚಾಚಿತ್ತು.
ಭಾರತದಂತಹ ದೊಡ್ಡ ಜನಸಂಖ್ಯೆಯ ದೇಶವು ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಇತರ ದೇಶಗಳ ಮೇಲೆ ಅವಲಂಬಿತವಾಗಿರಲಿಲ್ಲ. ಈಗಲೂ ಭಾರತವೇ ಇತರ ರಾಷ್ಟ್ರಗಳಿಗೆ ಸಹಾಯ ಹಸ್ತ ಚಾಚುತ್ತಿದೆ. ಆದರೆ ಬೇರೆ ದೇಶಗಳಿಂದ ಇಲ್ಲಿಗೆ ವೈದ್ಯಕೀಯ ಕ್ಷೇತ್ರಕ್ಕೆ ನೆರವು ಕೇಳುತ್ತಿರುವುದು ಕಡಿಮೆ. ಅಷ್ಟರಮಟ್ಟಿಗೆ ಸಾಂಕ್ರಾಮಿಕವನ್ನು ತಡೆಯಲು ಇಲ್ಲಿಯೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ ಬೇರೆಲ್ಲಾ ದೇಶಗಳಿಗಿಂತ ಇಲ್ಲಿ ಕೊವಿಡ್ ಸಾಂಕ್ರಾಮಿಕವನ್ನು ಹೆಚ್ಚು ಸಮರ್ಥವಾಗಿ ಎದುರಿಸಲಾಗಿದೆ.
ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಭಾರತ ಹಾಗೂ ಪ್ರಧಾನಿ ಮೋದಿ ತೆಗೆದುಕೊಂಡ ದಿಟ್ಟ ನಿರ್ಧಾರಗಳು ಮೂರನೇ ಅಲೆಯ ಸಮಯದಲ್ಲಿ ದೇಶಕ್ಕೆ ವರದಾನವಾಗಿತ್ತು. ಉಚಿತ ಲಸಿಕೆ ನೀಡಿಕೆಯು ದೇಶವನ್ನು ಮತ್ತೆ ಕೊರೊನಾದ ಆಪತ್ತಿನಿಂದ ಪಾರು ಮಾಡಿದ್ದಲ್ಲದೇ ಜನಜೀವನವು ಸಾಮಾನ್ಯ ಸ್ಥಿತಿಗೆ ಬರಲು ಸಹಾಯ ಮಾಡಿತ್ತು.
100 ರಾಷ್ಟ್ರಗಳಿಗೆ ಲಸಿಕೆ ಪೂರೈಸಿರುವ ಭಾರತ
ಭಾರತದ ಲಸಿಕೆ ರಾಜನೀತಿಯ ಬಗ್ಗೆ ಇತ್ತೀಚೆಗೆ ಜಪಾನ್ನಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದರು. ಭಾರತವು ಇತರ ರಾಷ್ಟ್ರಗಳಿಗೆ ಸಹಾಯ ಹಸ್ತ ಚಾಚಿದ್ದರ ಬಗ್ಗೆ ಅವರು ಮಾತನಾಡುತ್ತಾ, ‘ವ್ಯಾಕ್ಸಿನ್ ಮೈತ್ರಿ ಯೋಜನೆಯಡಿ 100ಕ್ಕೂ ಅಧಿಕ ರಾಷ್ಟ್ರಗಳಿಗೆ ಕೊರೊನಾ ಲಸಿಕೆಯನ್ನು ಭಾರತವು ಕಳುಹಿಸಿಕೊಟ್ಟಿದೆ. 100 ವರ್ಷಗಳಲ್ಲೇ ವಿಶ್ವ ಎದುರಿಸುತ್ತಿರುವ ಅತ್ಯಂತ ದೊಡ್ಡ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ಜಗತ್ತಿಗೆ ಮಾನವೀಯತೆಯ ಸೇವೆ ಮಾಡುತ್ತಿದೆ’ ಎಂದು ಹೇಳಿದ್ದರು.
ಜಗತ್ತು ಕೊರೊನಾ ಸಾಂಕ್ರಾಮಿಕದ ಕಷ್ಟಕಾಲದಲ್ಲಿ ಹಾಗೂ ಅದರ ನಂತರದ ಪರಿಣಾಮಗಳನ್ನು ಎದುರಿಸಲು ಕಷ್ಟಪಡುತ್ತಿರುವಾಗ ಭಾರತವು ಔಷಧೀಯ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದೆ. ಇದನ್ನು ನಿರ್ವಹಿಸುವಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ ಚಾಣಾಕ್ಷ ನಿರ್ಧಾರಗಳು, ಆಧುನಿಕ ಮೂಲ ಸೌಕರ್ಯಗಳನ್ನು ಬಳಸಿಕೊಂಡ ಬಗೆ ಹಾಗೂ ರಾಜತಾಂತ್ರಿಕ ನಿಲುವುಗಳು ಈ ಯಶಸ್ಸಿಗೆ ಅಮೂಲಾಗ್ರ ಕೊಡುಗೆ ನೀಡಿದೆ. ಹೀಗಾಗಿಯೇ ಜಾಗತಿಕ ಮಟ್ಟದಲ್ಲಿ ಭಾರತ ನೀಡಿರುವ ನೆರವು ದೇಶದ ಖ್ಯಾತಿಯನ್ನು ಹೆಚ್ಚಿಸಿರುವುದಲ್ಲದೇ ಎಲ್ಲಾ ರಾಷ್ಟ್ರಗಳು ಭಾರತವನ್ನು ಆಪ್ತ ದೇಶವಾಗಿ ಗುರುತಿಸಿವೆ.
ಭಾರತದ ಲಸಿಕೆ ಮೈತ್ರಿಯು ವಿಶ್ವ ಮಟ್ಟದಲ್ಲಿ ಭಾರತದ ನಿಲುವುಗಳಿಗೆ ಅಗತ್ಯವಿರುವ ಧ್ವನಿಯನ್ನು ಬಲಪಡಿಸಿದೆ. ಇದು ಜಾಗತಿಕ ಮಟ್ಟದಲ್ಲಿ ದೇಶದ ಗೌರವವನ್ನು ಹೆಚ್ಚಿಸಲು ಮತ್ತಷ್ಟು ಸಹಕಾರಿಯಾಗಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Wed, 25 May 22