8 Years of Modi Government: ಪ್ರಧಾನಿ ನರೇಂದ್ರ ಮೋದಿಯಿಂದ ವಿಶ್ವನಾಯಕರಿಗೆ ಅಮೂಲ್ಯ ಗಿಫ್ಟ್: ಇದುವರೆಗೆ ಯಾವೆಲ್ಲಾ ಉಡುಗೊರೆ ನೀಡಿದ್ದಾರೆ ಗೊತ್ತಾ?
ನರೇಂದ್ರ ಮೋದಿ ಅವರು ವಿಶ್ವನಾಯಕರನ್ನು ಭೇಟಿಯಾದ ಸಂದರ್ಭದಲ್ಲಿ ಭಾರತದ ಸಂಸ್ಕೃತಿಯನ್ನು ಬಿಂಬಿಸುವ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಆ ಮೂಲಕ ನೀಡಿದ ಉಡುಗೊರೆಯ ಹಿನ್ನೆಲೆಯನ್ನು ವಿಶ್ವಮಟ್ಟಕ್ಕೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ.
ನರೇಂದ್ರ ಮೋದಿ (Narendra Modi) ಅವರು ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ನಂತರ ಭಾರತದ ಸಂಸ್ಕೃತಿ, ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ಪಸರಿಸುವಂತೆ ಮಾಡಿದರು. ಮೋದಿಯವರು ವಿದೇಶಗಳಿಗೆ ಭೇಟಿಕೊಟ್ಟಾಗಲೆಲ್ಲಾ ಭಾರತದ ಸಂಸ್ಕೃತಿಯನ್ನು ಬಿಂಬಿಸುವ ವಿಶೇಷ ಉಡುಗೊರೆ (Gift)ಯನ್ನು ನೀಡುತ್ತಾ ಬಂದಿದ್ದಾರೆ. ಮೋದಿ ನೀಡಿದ ಗಿಫ್ಟ್ಗಳಲ್ಲಿ ಭಗವದ್ಗೀತೆಯೂ ಒಂದು. ಇಂಥ ಅನೇಕ ಉಡುಗೊರೆಗಳನ್ನು ವಿಶ್ವನಾಯಕರಿಗೆ ನೀಡಿದ್ದು, ಅವುಗಳು ಯಾವುವು? ಯಾವ ದೇಶದ ನಾಯಕರಿಗೆ ನೀಡಿದ್ದಾರೆ ಎಂಬುದನ್ನು ತಿಳಿಯೋಣ.
ಸಂಜಿ ಕಲಾಕೃತಿ: ಪ್ರಧಾನಿಯವರು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಸಂಜಿ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದರು. ಈ ಕಲಾಕೃತಿಯು ಉತ್ತರ ಪ್ರದೇಶದ ಮಥುರಾದಲ್ಲಿ ವಿಶಿಷ್ಟವಾಗಿದೆ. ಸಾಂಪ್ರದಾಯಿಕವಾಗಿ ಶ್ರೀಕೃಷ್ಣನ ಕಥೆಗಳ ಲಕ್ಷಣಗಳನ್ನು ಕೊರೆಯಚ್ಚುಗಳಲ್ಲಿ ರಚಿಸಲಾಗಿದೆ. ಈ ಕೊರೆಯಚ್ಚುಗಳನ್ನು ಕತ್ತರಿ ಅಥವಾ ಬ್ಲೇಡ್ ಬಳಸಿ ಕತ್ತರಿಸಲಾಗುತ್ತದೆ. ಸೂಕ್ಷ್ಮವಾದ ಸಂಜಿಯನ್ನು ಸಾಮಾನ್ಯವಾಗಿ ತೆಳುವಾದ ಕಾಗದದ ಹಾಳೆಗಳಿಂದ ಜೋಡಿಸಲಾಗುತ್ತದೆ. ಕ್ವಾಡ್ 2022 ಶೃಂಗಸಭೆಗಾಗಿ ಜಪಾನ್‌ಗೆ ಭೇಟಿ ನೀಡಿದ್ದ ವೇಳೆ ಗಿಫ್ಟ್ ಮಾಡಿದ್ದಾರೆ.
ಗೊಂಡ ವರ್ಣಚಿತ್ರ: ಪ್ರಧಾನಿ ಮೋದಿಯವರು ತಮ್ಮ ಆಸ್ಟ್ರೇಲಿಯಾದ ಸಹವರ್ತಿ ಆಂಥೋನಿ ಅಲ್ಬನೀಸ್ ಅವರಿಗೆ ಗೊಂಡ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಅತ್ಯಂತ ಮೆಚ್ಚುಗೆ ಪಡೆದ ಬುಡಕಟ್ಟು ಕಲಾ ಪ್ರಕಾರಗಳಲ್ಲಿ ಒಂದಾದ ಈ ಚಿತ್ರಕಲೆ, ಚುಕ್ಕೆಗಳು ಮತ್ತು ರೇಖೆಗಳಿಂದ ರಚಿಸಲ್ಪಟ್ಟಿದೆ. ಕ್ವಾಡ್ 2022 ಶೃಂಗಸಭೆಗಾಗಿ ಜಪಾನ್‌ಗೆ ಭೇಟಿ ನೀಡಿದ್ದ ವೇಳೆ ಗಿಫ್ಟ್ ಮಾಡಿದ್ದಾರೆ.
ರೋಗನ್ ಪೇಂಟಿಂಗ್: ರೋಗನ್ ಪೇಂಟಿಂಗ್ ಇರುವ ಮರದ ಕೈಯಿಂದ ಕೆತ್ತಿದ ಪೆಟ್ಟಿಗೆಯನ್ನು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಉಡುಗೊರೆಯಾಗಿ ನೀಡಿದರು. ಕ್ವಾಡ್ 2022 ಶೃಂಗಸಭೆಗಾಗಿ ಜಪಾನ್‌ಗೆ ಭೇಟಿ ನೀಡಿದ್ದ ವೇಳೆ ಗಿಫ್ಟ್ ಮಾಡಿದ್ದಾರೆ.
ಡೋಕ್ರಾ ದೋಣಿ: ಡೆನ್ಮಾರ್ಕ್‌ನ ಕ್ರೌನ್ ಪ್ರಿನ್ಸ್ ಫ್ರೆಡ್ರಿಕ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್‌ಗಢದಿಂದ ಡೋಕ್ರಾ ದೋಣಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಡೋಕ್ರಾ ನಾನ್-ಫೆರಸ್ ಲೋಹವಾಗಿದ್ದು, ಭಾರತದಲ್ಲಿ 4,000 ವರ್ಷಗಳಿಂದ ಬಳಕೆಯಲ್ಲಿದೆ.
ರೋಗನ್ ಪೇಂಟಿಂಗ್: ಡೆನ್ಮಾರ್ಕ್‌ನ ರಾಣಿ ಮಾರ್ಗರೆಥೆ II ಅವರಿಗೆ ನರೇಂದ್ರ ಮೋದಿ ಅವರು ರೋಗನ್ ಪೇಂಟಿಂಗ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ರೋಗನ್ ಪೇಂಟಿಂಗ್ ಎನ್ನುವುದು ಗುಜರಾತಿನ ಕಚ್‌ನಲ್ಲಿ ಮಾಡುವ ಬಟ್ಟೆಯ ಮುದ್ರಣದ ಒಂದು ರೂಪವಾಗಿದೆ. ಬೇಯಿಸಿದ ಎಣ್ಣೆ ಮತ್ತು ತರಕಾರಿ ಬಣ್ಣಗಳಿಂದ ಮಾಡಿದ ಬಣ್ಣವನ್ನು ಲೋಹದ ಬ್ಲಾಕ್ ಬಳಸಿ ಬಟ್ಟೆಯ ಮೇಲೆ ಚಿತ್ರ ಬಿಡಿಸಲಾಗುತ್ತದೆ. ಈ ಕರಕುಶಲತೆಯು 20ನೇ ಶತಮಾನದ ಅಂತ್ಯದಲ್ಲಿ ನಾಶವಾಯಿತು. ಆದರೂ ಬೆರಳೆಣಿಕೆಯ ಮನೆಗಳಲ್ಲಿ ಈ ಕರಕುಶಲತೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: 8 Years of Modi Government: ಏಕರೂಪ ನಾಗರಿಕ ಸಂಹಿತೆ: ಮೋದಿ ಸರ್ಕಾರದ ಎದುರು ಹಲವು ಸವಾಲುಗಳು
ಕೃಷ್ಣ ಪಂಖಿ: ಭಾರತಕ್ಕೆ ಭೇಟಿ ನೀಡಿದ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದಲ್ಲಿ ಶ್ರೀಗಂಧದ ಮರದಿಂದ ತಯಾರಿಸಿದ ‘ಕೃಷ್ಣ ಪಂಖಿ’ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ‘ಪಂಖಿ’ ಅನ್ನು ಸಾಂಪ್ರದಾಯಿಕ ಉಪಕರಣಗಳೊಂದಿಗೆ ಸಂಕೀರ್ಣವಾಗಿ ಕೆತ್ತಲಾಗಿದೆ. ರಾಷ್ಟ್ರ ಪಕ್ಷಿ ನವಿಲು ಆಕೃತಿಯನ್ನು ಮೇಲ್ಭಾಗದಲ್ಲಿ ಕೈಯಿಂದ ಕೆತ್ತಲಾಗಿದೆ. ಗಾಳಿಯ ಹರಿವಿನೊಂದಿಗೆ ಚಲಿಸುವ ಅದರ ಅಂಚುಗಳಲ್ಲಿ ಸಣ್ಣ ‘ಘುಂಗರೂ’ ಹೊಂದಿದೆ ಮತ್ತು ಒಳಗೆ ಹೆಚ್ಚು ಸಂಕೀರ್ಣವಾದ ಕೆತ್ತನೆಗಳೊಂದಿಗೆ ನಾಲ್ಕು ಮರೆಮಾಚುವ ಕಿಟಕಿಗಳನ್ನು ಹೊಂದಿದೆ.
ಬೆಳ್ಳಿಯ ಮೀನಾಕರಿ ಪಕ್ಷಿ: ಡೆನ್ಮಾರ್ಕ್‌ನ ಕ್ರೌನ್ ಪ್ರಿನ್ಸೆಸ್ ಮೇರಿ ಅವರಿಗೆ ಪ್ರಧಾನಿ ಮೋದಿ ವಾರಣಾಸಿಯಿಂದ ಬೆಳ್ಳಿಯ ಮೀನಾಕರಿ ಪಕ್ಷಿಯ ಆಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ವಾರಣಾಸಿಯಲ್ಲಿ ಸುಮಾರು 500 ವರ್ಷಗಳ ಹಿಂದಿನಿಂದ ಕಲಾಕೃತಿಯಾಗಿದೆ. ಬನಾರಸಿ ಮೀನಕಾರಿಯ ಅತ್ಯಂತ ವಿಶಿಷ್ಟ ಅಂಶವೆಂದರೆ ವಿವಿಧ ಉತ್ಪನ್ನಗಳ ಮೇಲೆ ವಿವಿಧ ಛಾಯೆಗಳಲ್ಲಿ ಗುಲಾಬಿ ಬಣ್ಣವನ್ನು ಬಳಸುವುದು. ಸಿದ್ಧಪಡಿಸಿದ ಉತ್ಪನ್ನವನ್ನು ಅರೆ-ಪ್ರಶಸ್ತ ಕಲ್ಲುಗಳು ಮತ್ತು ಮುತ್ತುಗಳಿಂದ ಅಲಂಕರಿಸಲಾಗುತ್ತದೆ.
ಟ್ರೀ ಆಫ್ ಲೈಫ್: ಫಿನ್‌ಲ್ಯಾಂಡ್‌ನ ಪ್ರಧಾನಿ ಸನ್ನಾ ಮರಿನ್ ಅವರಿಗೆ ಮೋದಿ ಅವರು ರಾಜಸ್ಥಾನದಿಂದ ‘ಟ್ರೀ ಆಫ್ ಲೈಫ್’ ಅನ್ನು ನೀಡಿದ್ದಾರೆ. ಟ್ರೀ ಆಫ್ ಲೈಫ್ ಜೀವನದ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಸಂಕೇತಿಸುತ್ತದೆ. ಮರದ ಕೊಂಬೆಗಳು ಮೇಲಕ್ಕೆ ಬೆಳೆಯುತ್ತವೆ. ಇದು ಅಭಿವೃದ್ಧಿ ಹೊಂದುವುದು ಸೇರಿದಂತೆ ವಿವಿಧ ಜೀವನ ರೂಪಗಳನ್ನು ಸೂಚಿಸುತ್ತದೆ. ಕೈಯಿಂದ ರಚಿಸಲಾದ ಗೋಡೆಯ ಅಲಂಕಾರಿಕ ಕಲಾ ತುಣುಕು ಹಿತ್ತಾಳೆಯಿಂದ ಮಾಡಲ್ಪಟ್ಟಿದೆ. ಮರದ ಬೇರುಗಳು ಭೂಮಿಯೊಂದಿಗಿನ ಸಂಪರ್ಕವನ್ನು ಪ್ರತಿನಿಧಿಸುತ್ತವೆ, ಎಲೆಗಳು ಮತ್ತು ಪಕ್ಷಿಗಳು ಜೀವನವನ್ನು ಪ್ರತಿನಿಧಿಸುತ್ತವೆ, ಕ್ಯಾಂಡಲ್ ಸ್ಟ್ಯಾಂಡ್ಗಳು ಬೆಳಕನ್ನು ಪ್ರತಿನಿಧಿಸುತ್ತವೆ.
ಭಗವದ್ಗೀತೆ: ಅಹಮದಾಬಾದ್ ಭೇಟಿ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಪ್ರಧಾನಿ ಮೋದಿ ಅವರು ಮಹಾತ್ಮ ಗಾಂಧಿ ಚರಕದ ಪ್ರತಿಕೃತಿ, ದಂಡಿ ಸತ್ಯಾಗ್ರಹದಲ್ಲಿದ್ದ ಗಾಂಧೀಜಿಯ ಐತಿಹಾಸಿಕ ಚಿತ್ರ, ಗಾಂಧಿ ಇನ್ ಅಹಮದಾಬಾದ್ ಪುಸ್ತಕ ಮತ್ತು ಚೀನಿ ಭಾಷೆಯಲ್ಲಿನ ಭಗವದ್ಗೀತೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಮೋದಿ ಈ ಹಿಂದೆ ಕ್ಸಿ ಅವರಿಗೆ ಬಿಳಿ ಖಾದಿ ಜಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ಇದನ್ನೂ ಓದಿ: 8 Years Of Modi Government: ಆರೋಗ್ಯ ವರ್ಧನೆಗೆ ಮೋದಿ ಬಿಟ್ಟ ಇಂದ್ರಧನುಷ್ ಎಂಬ ಬಾಣದ ಸುತ್ತ
ಪಶ್ಮಿನಾ ಸ್ಟೋಲ್: ಮೋದಿ ಅವರು ಸ್ವೀಡನ್‌ನ ಪ್ರಧಾನಿ ಮ್ಯಾಗ್ಡಲೀನಾ ಆಂಡರ್ಸನ್ ಅವರಿಗೆ ಪೇಪಿಯರ್ ಮ್ಯಾಚ್ ಬಾಕ್ಸ್‌ನಲ್ಲಿ ಪಶ್ಮಿನಾ ಸ್ಟೋಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅನಾದಿ ಕಾಲದಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿದ್ಧಪಡಿಸಲಾಗುವ ಪಾಶ್ಮಿನಾ ಸ್ಟೋಲ್‌ಗಳು, ಅಂದವಾದ ಕರಕುಶಲತೆ ಮತ್ತು ವಿನ್ಯಾಸಗಳಿಗಾಗಿ ಪ್ರಸಿದ್ಧಿಯಾಗಿದೆ.
ಭಗವದ್ಗೀತೆ ಮತ್ತು ಸ್ವಾಮಿ ವಿವೇಕಾನಂದರಿಗೆ ಸಂಬಂಧಿಸಿದ ಪುಸ್ತಕ: ಜಪಾನ್ ಭೇಟಿ ವೇಳೆ ಜಪಾನ್ ಪ್ರಧಾನಿ ಅಬೆ ಅವರಿಗೆ ಪ್ರಧಾನಿ ಮೋದಿ ಅವರು ಭಗವದ್ಗೀತೆಯ ಸಂಸ್ಕೃತ ಮತ್ತು ಜಪಾನ್ ಅವತರಣೆಕೆ ಹಾಗೂ ಸ್ವಾಮಿ ವಿವೇಕಾನಂದರಿಗೆ ಸಂಬಂಧಿಸಿದ ಪುಸ್ತಕದವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕಚ್ ಕಸೂತಿ: ಗೋಡೆಗೆ ನೇತಾಡಿಸುವ ಕಚ್ ಕಸೂತಿ (ಎಂಬ್ರಾಯ್ಡರಿ)ಯನ್ನು ಡೆನ್ಮಾರ್ಕ್‌ನ ಪ್ರಧಾನ ಮಂತ್ರಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಡುಗೊರೆಯಾಗಿ ನೀಡಿದ್ದಾರೆ. ಕಚ್ ಕಸೂತಿಯು ಗುಜರಾತ್ನಲ್ಲಿರುವ ಕಚ್‌ನ ಬುಡಕಟ್ಟು ಸಮುದಾಯದ ಕರಕುಶಲ ಮತ್ತು ಜವಳಿ ಸಂಪ್ರದಾಯವಾಗಿದೆ. ಜ್ಯಾಮಿತೀಯ ಆಕಾರದ ವಿನ್ಯಾಸಗಳ ಮೇಲೆ ‘ಅಭ್ಲಾ’ ಎಂಬ ಸಣ್ಣ ಕನ್ನಡಿಗಳನ್ನು ಹೊಲಿಸಿದಾಗ ವರ್ಣರಂಜಿತ ಕಸೂತಿಯು ಮಿಂಚುತ್ತದೆ.
ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Wed, 25 May 22