8 Years of Modi Government: ಏಕರೂಪ ನಾಗರಿಕ ಸಂಹಿತೆ: ಮೋದಿ ಸರ್ಕಾರದ ಎದುರು ಹಲವು ಸವಾಲುಗಳು
Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿಯ ವಿಚಾರದಲ್ಲಿ ಮಾತ್ರ ಕೇಂದ್ರ ಸರ್ಕಾರಕ್ಕೆ ತನ್ನ ನಿರ್ಧಾರ ಇದು ಎಂದು ಪ್ರಕಟಿಸಲು ಆಗುತ್ತಿಲ್ಲ. ಆದರೆ ಜಾರಿಗೊಳಿಸುವ ಬಗ್ಗೆ ಸೂಚನೆಗಳನ್ನು ಮಾತ್ರ ಕೊಡುತ್ತಿದೆ.
ವಿವಿಧತೆಯಲ್ಲಿ ಏಕತೆ ಎನ್ನುವುದು ಬಿಜೆಪಿಯ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಹಲವು ವರ್ಷಗಳಿಂದ ಪ್ರತಿಪಾದಿಸುತ್ತಿರುವ ಪರಿಕಲ್ಪನೆ. ಬಿಜೆಪಿಯ ಚಿಂತನೆ ಮತ್ತು ಪ್ರಣಾಳಿಕೆಗಳೂ ಇದಕ್ಕೆ ಹೊರತಲ್ಲ. ರಾಮಮಂದಿರ ನಿರ್ಮಾಣ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮತ್ತು ಏಕರೂಪ ನಾಗರಿಕ ಸಂಹಿತೆ (Uniform Civil Code – UCC) ಎನ್ನುವ ಮೂರು ಅಂಶಗಳ ಬಗ್ಗೆ ಬಿಜೆಪಿಯ ಪೂರ್ವಾಶ್ರಮ ಜನಸಂಘದ ಕಾಲದಿಂದಲೂ ಚರ್ಚೆಗಳು ಆಗುತ್ತಲೇ ಇದ್ದವು. ಆದರೆ ಇಂಥ ಪ್ರಬಲ ನಿರ್ಧಾರಗಳನ್ನು ತೆಗೆದುಕೊಂಡು, ಜಾರಿಗೆ ತರಲು ಬೇಕಿರುವಷ್ಟು ಸಂಖ್ಯಾಬಲ ಬಿಜೆಪಿಗೆ ಸಿಕ್ಕಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ರಚನೆಯಾಗಿದ್ದ ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿಯೇ ಅತಿದೊಡ್ಡ ಪಕ್ಷವಾಗಿದ್ದರೂ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಹಿಂಜರಿದಿತ್ತು.
ನರೇಂದ್ರ ಮೋದಿ ಆಡಳಿತದ 8 ವರ್ಷಗಳ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಆದರೆ 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಭರ್ಜರಿ ಬಹುಮತ ಗಳಿಸಿ ಬಿಜೆಪಿಯು ಅಧಿಕಾರಕ್ಕೆ ಬಂದಾಗ ಈ ಮೂರು ಅಂಶಗಳ ಬಗ್ಗೆ ಮತ್ತೆ ಚರ್ಚೆಗಳು ಗರಿಗೆದರಿವು. ಆದರೆ ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದ ಮೋದಿ, ಅಗತ್ಯ ಸಿದ್ಧತೆಗಳನ್ನು ಆರಂಭಿಸಿದರು. ಜಮ್ಮು ಕಾಶ್ಮೀರಕ್ಕೆ ಸಾಕಷ್ಟು ಭದ್ರತಾ ಸಿಬ್ಬಂದಿ ರವಾನಿಸಿ, ಸಕಲ ರೀತಿಯಲ್ಲಿಯೂ ಸಜ್ಜಾದ ಮೇಲೆ ಆಗಸ್ಟ್ 5, 2019ರಂದು ಲೋಕಸಭೆಯಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ತೀರ್ಮಾನವನ್ನು ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದರು. ಸಂಖ್ಯಾಬಲವಿರುವ ಬಿಜೆಪಿಗೆ ಪ್ರತಿಪಕ್ಷಗಳ ಮರ್ಜಿ ಕಾಯಬೇಕಾದ ಅಗತ್ಯವಿರಲಿಲ್ಲ. ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯನ್ನೂ ಇದೇ ರೀತಿ ಜಾರಿ ಮಾಡಿದರು. ಆದರೆ ಏಕರೂಪ ನಾಗರಿಕ ಸಂಹಿತೆ ಜಾರಿಯ ವಿಚಾರದಲ್ಲಿ ಮಾತ್ರ ಕೇಂದ್ರ ಸರ್ಕಾರಕ್ಕೆ ತನ್ನ ನಿರ್ಧಾರ ಇದು ಎಂದು ಪ್ರಕಟಿಸಲು ಆಗುತ್ತಿಲ್ಲ. ಆದರೆ ಜಾರಿಗೊಳಿಸುವ ಬಗ್ಗೆ ಸೂಚನೆಗಳನ್ನು ಮಾತ್ರ ಕೊಡುತ್ತಿದೆ.
ಇತ್ತೀಚೆಗಷ್ಟೇ ನಡೆದ ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಚುನಾವಣೆ ವೇಳೆ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆಗಳು ಗರಿಗೆದರಿದ್ದವು. ‘ಬಿಜೆಪಿಯು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲಾಗುವುದು ಎಂದು ಅಲ್ಲಿನ ನಾಯಕರು ಹೇಳಿಕೊಂಡಿದ್ದರು. ಇಂಥ ಹೇಳಿಕೆಗಳ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು ಚುನಾವಣೆ ವಿಷಯ ಮಾಡಿದರೆ ಜನರ ಸ್ಪಂದನೆ ಹೇಗಿರಬಹುದು ಎಂಬುದನ್ನು ಬಿಜೆಪಿ ಪರಿಶೀಲಿಸಿತ್ತು. ಎರಡೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಮರಳಿದ್ದರಿಂದ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ನಿರೀಕ್ಷೆಗಳು ಗರಿಗೆದರಿದ್ದು, ಮತ್ತೆ ಚರ್ಚೆಗಳು ಆರಂಭವಾಗಿವೆ.
ಭಾರತದಲ್ಲಿ ಹಾಲಿ ಅಸ್ತಿತ್ವದಲ್ಲಿರುವ ಧರ್ಮ ಆಧರಿತ ಮದುವೆ, ವಂಶಪಾರಂಪರ್ಯ ಹಕ್ಕು, ವಿಚ್ಛೇದನ ನಿಯಮಗಳು ಸೇರಿದಂತೆ ಹಲವು ಅಂಶಗಳಲ್ಲಿ ಏಕರೂಪತೆ ತರಬೇಕು ಎನ್ನುವ ಬೇಡಿಕೆ ಒಂದು ವರ್ಗ ವ್ಯಕ್ತವಾಗುತ್ತಲೇ ಇದೆ. ಆದರೆ ಇದೇ ಹೊತ್ತಿಗೆ ಮತ್ತೊಂದು ವರ್ಗವು ‘ಧಾರ್ಮಿಕ ವಿಚಾರಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು’ ಎಂದು ವಿರೋಧಿಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆ 2024ಕ್ಕೆ ನಡೆಯಲಿದೆ. ಈಗಾಗಲೇ ಚುನಾವಣೆ ಸಿದ್ಧತೆಗೆ ಚಾಲನೆ ನೀಡಿರುವ ಬಿಜೆಪಿ, ಏಕರೂಪ ನಾಗರಿಕ ಸಂಹಿತೆಯನ್ನು ಚುನಾವಣೆಯ ಮುಖ್ಯ ವಿಷಯವಾಗಿಸಿದರೆ ಆಗಬಹುದಾದ ಸಾಧಕ ಬಾಧಕಗಳ ಕುರಿತು ಚಿಂತನೆ ಆರಂಭಿಸಿದೆ.
ತ್ರಿವಳಿ ತಲಾಖ್ ರದ್ದುಪಡಿಸಿದಾಗ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಟ್ವೀಟ್ ಇಲ್ಲಿದೆ.
An archaic and medieval practice has finally been confined to the dustbin of history!
Parliament abolishes Triple Talaq and corrects a historical wrong done to Muslim women. This is a victory of gender justice and will further equality in society.
India rejoices today!
— Narendra Modi (@narendramodi) July 30, 2019
ಏಕರೂಪ ನಾಗರಿಕ ಸಂಹಿತೆ ಎಂದರೇನು?
ಸಂವಿಧಾನದ 44ನೇ ವಿಧಿಯು ದೇಶದ ಎಲ್ಲ ಪ್ರಜೆಗಳಿಗೆ ಲಿಂಗ, ಧರ್ಮ, ಜಾತಿಯನ್ನು ಪರಿಗಣಿಸದೇ ಒಂದೇ ವೈಯಕ್ತಿಕ ಕಾನೂನು ರೂಪಿಸಬೇಕು ಎಂದು ಪ್ರಸ್ತಾಪಿಸುತ್ತದೆ. ಮುಖ್ಯವಾಗಿ ಮದುವೆ, ವಿಚ್ಛೇದನ, ದತ್ತು, ಪಿತ್ರಾರ್ಜಿತ ಆಸ್ತಿಯ ನಿರ್ವಹಣೆ ಮತ್ತು ವಂಶಪಾರಂಪರ್ಯ ಅಧಿಕಾರಗಳ ಬಗ್ಗೆ ಒಂದೇ ರೀತಿಯ ನಿಯಮಗಳು ಇರಬೇಕು ಎನ್ನುವುದು ಈ ವಿಧಿಯ ಆಶಯ ಎಂದು ಸಂವಿಧಾನ ಪರಿಣಿತರು ವಿಶ್ಲೇಷಿಸುತ್ತಾರೆ.
ವಿರೋಧ ಏಕೆ?
ಪ್ರಸ್ತುತ ನಮ್ಮ ದೇಶದಲ್ಲಿ ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ಆಶಯವಿದೆಯಾದರೂ, ಪ್ರತಿ ಧರ್ಮಕ್ಕೂ ವೈಯಕ್ತಿಕ ಕಾನೂನುಗಳು ಪ್ರತ್ಯೇಕವಾಗಿಯೇ ಇವೆ. ಈ ಪ್ರತ್ಯೇಕ ಕಾನೂನುಗಳನ್ನು ಪರಿಶೀಲಿಸಿ, ಏಕರೂಪದ ನಾಗರಿಕ ಸಂಹಿತೆ ರೂಪಿಸುವ ಪ್ರಯತ್ನಗಳಿಗೆ ಆರಂಭದಿಂದಲೂ ಮುಸ್ಲಿಂ ಸಮುದಾಯದ ವಿರೋಧ ವ್ಯಕ್ತವಾಗುತ್ತಿದೆ. ‘ನಮ್ಮ ಧಾರ್ಮಿಕ ವಿಚಾರಗಳಲ್ಲಿ ಸರ್ಕಾರಗಳು ಮೂಗು ತೂರಿಸಬಾರದು’ ಎನ್ನುವುದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ನಿಲುವು.
ಮಹಿಳೆಯರ ಮಾತೇನು?
ಮುಸ್ಲಿಮರೂ ಸೇರಿದಂತೆ ವಿವಿಧ ಧರ್ಮಗಳ ಮಹಿಳೆಯರು ಏಕರೂಪ ನಾಗರಿಕ ಸಂಹಿತೆಯ ಪರವಾಗಿ ಒಲವು ತೋರಿದ್ದಾರೆ. ಬಹುಪತ್ನಿತ್ವ ಮತ್ತು ವಿಚ್ಛೇದನಗಳ ವಿಚಾರದಲ್ಲಿ ಮುಸ್ಲಿಂ ಸಮುದಾಯದ ಪುರುಷರಿಗೆ ಕಾನೂನಿನ ಕಡಿವಾಣ ಬೇಕು ಎನ್ನುವ ಮಹಿಳೆಯರ ಹೇಳಿಕೆಗಳನ್ನು ‘ಸ್ಕ್ರಾಲ್’ ಜಾಲತಾಣ ವರದಿ ಮಾಡಿದೆ. ತ್ರಿವಳಿ ತಲಾಖ್ ರದ್ದು ಪಡಿಸಿದ ಬಿಜೆಪಿ ಸರ್ಕಾರವು ಇತರ ವಿಚಾರಗಳಲ್ಲಿಯೂ ಇಂಥದ್ದೇ ಬಿಗಿನಿಲುವು ತಳೆಯಬೇಕು ಎಂದು ಹಲವು ಆಶಯ ವ್ಯಕ್ತಪಡಿಸಿದ್ದಾರೆ.
ಮೋದಿ ಎದುರು ಇರುವ ಆಯ್ಕೆಗಳೇನು?
ಯಾವುದೇ ವಿಚಾರವನ್ನು ಹಲವು ಆಯಾಮಗಳಿಂದ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ. ಏಕರೂಪ ನಾಗರಿಕ ಸಂಹಿತೆಯ ವಿಚಾರದಲ್ಲಿಯೂ ಇಂಥದ್ದೇ ಪ್ರಯತ್ನಗಳು ಆರಂಭವಾಗಿವೆ. ಅಸ್ಸಾಂ ಮತ್ತು ಉತ್ತರಾಖಂಡದಲ್ಲಿ ಪ್ರಾಯೋಗಿಕವಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ. ಜನರ ಪ್ರತಿರೋಧ ಗಮನಿಸಿ, ಅಗತ್ಯ ಮಾರ್ಪಾಡುಗಳೊಂದಿಗೆ ಈ ಕಾಯ್ದೆಯನ್ನು ನಂತರದ ದಿನಗಳಲ್ಲಿ ಇಡೀ ದೇಶಕ್ಕೆ ಅಥವಾ ಬಿಜೆಪಿ ಆಡಳಿತದ ಇತರ ರಾಜ್ಯಗಳಿಗೆ ವಿಸ್ತರಿಸುವುದು ಮೋದಿ ಅವರ ಚಿಂತನೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ‘ಬ್ಲೂಮ್ಬರ್ಗ್’ ಜಾಲತಾಣ ವರದಿ ಮಾಡಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:34 pm, Wed, 25 May 22