8 Years Of Modi Government: ಸಹೋದರ ಮೋದಿ ಪ್ರಧಾನಿಯೇ ಆದರೂ ಕುಟುಂಬದವರಿಗೆ ರಾಜಕೀಯದ ಗಂಧಗಾಳಿ ತಾಕಿಲ್ಲ! ಮೋದಿ ಸಹೋದರಿ ಏನ್ಮಾಡ್ತಿದ್ದಾರೆ?
PM Modi family members in Gujrat: ಕುಟುಂಬದಲ್ಲಿ ಒಬ್ಬ ಸದಸ್ಯ ದೇಶದ ಪ್ರಧಾನಿಯೇ ಆದರೂ ಕುಟುಂಬದ ಇತರೆ ಸದಸ್ಯರು ಎಲೆಮರೆಯ ಕಾಯಿಯಂತೆ ಸ್ವಾವಲಂಬಿ, ಸ್ವಾಭಿಮಾನೀ ಜೀವನ ಮುನ್ನಡೆಸುತ್ತಿದ್ದಾರೆ. ಯಾರೊಬ್ಬರೂ ಪ್ರಧಾನಿ ಮೋದಿಯ ಆಶ್ರಯದಲ್ಲಿ ನೆರಳಲ್ಲಿ ಇಲ್ಲ. ಯಾರೊಬ್ಬರೂ ದೆಹಲಿಯತ್ತ ಹೆಜ್ಜೆ ಹಾಕಿಲ್ಲ. ಹಾಗಾಗಿ ಮೋದಿ ಸಂಬಂಧಿಕರ ಬಗ್ಗೆ ಜನಕ್ಕೆ ಅಷ್ಟಾಗಿ ಪರಿಚಯ ಇಲ್ಲ.
ನರೇಂದ್ರ ದಾಮೋದರದಾಸ್ ಮೋದಿ (Narendra Damodardas Modi) ಅವರಿಗೆ ಈಗ 71 ವರ್ಷ ವಯಸ್ಸು (ಸೆಪ್ಟೆಂಬರ್ 17, 1950). ಅಜಮಾಸು ಈ ಐದಾರು ದಶಕಗಳಲ್ಲಿ ಬಹುತೇಕ ಅವರು ದೇಶ ಸೇವೆ, ಸಮಾಜ ಸೇವೆ ಮತ್ತು ರಾಜಕೀಯವನ್ನೇ ಉಸಿರಾಡುತ್ತಾ ಅದನ್ನು ಮೈಮನಗಳಲ್ಲಿ ತುಂಬಿಕೊಂಡವರು. ಇದೀಗ ಅವರು ದೇಶದ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿ 8 ವರ್ಷ ತುಂಬಿದೆ. ಮೋದಿ ಅತ್ಯಂತ ಸರಳ ಕುಟುಂಬದಿಂದ ಬಂದವರು. ಆದರೆ ಅಪ್ಪಟ ಸ್ವಾಭಿಮಾನಿಗಳು, ದೇಶಾಭಿಮಾನದ ಕುಟುಂಬ ಅವರದು. ಆದರೆ ಅವರ ಕುಟುಂಬದವರ ಬಗ್ಗೆ ಹೆಚ್ಚು ಜನಕ್ಕೆ ತಿಳಿದಿಲ್ಲ. ಕುಟುಂಬದಲ್ಲಿ ಒಬ್ಬ ಸದಸ್ಯ ದೇಶದ ಪ್ರಧಾನಿಯೇ ಆದರೂ ಅವರ ಕುಟುಂಬದ ಇತರೆ ಸದಸ್ಯರು ಎಲೆಮರೆಯ ಕಾಯಿಯಂತೆ ಸ್ವಾವಲಂಬಿ, ಸ್ವಾಭಿಮಾನೀ ಜೀವನವನ್ನು ಮುನ್ನಡೆಸುತ್ತಿದ್ದಾರೆ. ಯಾರೊಬ್ಬರೂ ಪ್ರಧಾನಿ ಮೋದಿಯ ಆಶ್ರಯದಲ್ಲಿ ನೆರಳಲ್ಲಿ ಇಲ್ಲ. ಅವರ ತಾಯಿಯಿಂದ ಹಿಡಿದು ಎಲ್ಲರೂ ಸ್ವತಂತ್ರವಾಗಿ ತಮ್ಮ ತಮ್ಮ ಸ್ವಂತ ಊರುಗಳಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಯಾರೊಬ್ಬರೂ ದೆಹಲಿಯತ್ತ ಹೆಜ್ಜೆ ಹಾಕಿಲ್ಲ (PM Modi family members in Gujrat). ಹಾಗಾಗಿಯೆ ಅವರ ಸಂಬಂಧಿಕರ ಬಗ್ಗೆ ಜನಕ್ಕೆ ಅಷ್ಟಾಗಿ ಪರಿಚಯ ಇಲ್ಲ. ಹಾಗಾದರೆ ಬನ್ನೀ ಮೋದಿನ ಕುಟುಂಬದ ಬಗ್ಗೆ ಒಂದಷ್ಟು ವಿಚಾರ ತಿಳಿಯೋಣ:
ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಶತಾಯುಷಿ. ಗುಜರಾತಿನ ಮೆಹಸಾಣಾ ಜಿಲ್ಲೆಯ ವಾಡನಗರದವರು (Vadnagar). ಅವರು ಮೋಧ್ ಘಂಚಿ ಸಮುದಾಯದವರು. ಹಿಂದುಳಿದ ವರ್ಗಕ್ಕೆ ಸೇರಿದವರು (Other Backward Class -OBC). ಹೀರಾಬೆನ್ ಪತಿಯ ಹೆಸರು ದಾಮೋದರದಾಸ್ ಮೂಲ್ಚಂದ್ ಮೋದಿ. ಇವರಿಗೆ ಐದು ಮಂದಿ ಪುತ್ರರು ಮತ್ತು ಒಬ್ಬ ಪುತ್ರಿ.
1. ಸೋಮ ಮೋದಿ -ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ. ಈಗ ವೃದ್ಧಾಶ್ರಮ ನಡೆಸ್ತಾ ಇದಾರೆ. 2. ಪಂಕಜ್ ಮೋದಿ -ವಾರ್ತಾ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದರು. ಗಾಂಧಿನಗರದಲ್ಲಿ ತಾಯಿ ಹೀರಾಬೆನ್ ಜೊತೆ ವಾಸವಿದ್ದಾರೆ. 3. ನರೇಂದ್ರ ಮೋದಿ 4. ಅಮೃತ್ ಮೋದಿ -ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೂ ಇವರು ಲೇಥ್ ಆಪರೇಟರ್ ಆಗಿದ್ದರು. 5. ಪಹ್ಲಾದ್ ಮೋದಿ -ಅಹಮದಾಬಾದಿನಲ್ಲಿಅಂಗಡಿ ಇಟ್ಕೊಂಡಿದ್ದಾರೆ), ಮತ್ತು ಸಹೋದರಿ. 6. ವಸಂತಿ ಬೆನ್ ಹಸ್ಮುಖ್ಲಾಲ್ ಮೋದಿ -ಪುತ್ರಿ ಇವರು ವಿಷ್ನಗರದಲ್ಲಿ ವಾಸವಾಗಿದ್ದಾರೆ. ಇವರ ಪತಿ ಭಾರತೀಯ ಜೀವ ವಿಮಾ ನಿಗಮದಲ್ಲಿದ್ದಾರೆ.
ನರೇಂದ್ರ ಮೋದಿಯನ್ನು ಹೊರತು ಪಡಿಸಿ, ಅವರ ಕುಟುಂಬಸ್ಥರು ಬೇರೆ ಯಾರೂ ವಿಮಾನದಲ್ಲಿ ಸಂಚರಿಸಿಲ್ಲ. ಮೋದಿ ಪ್ರಧಾನಿ ಆಗಿದ್ದಾಗ ಅವರ ಸೋದರ ಒಬ್ಬರು ಕರ್ನಾಟಕಕ್ಕೆ ಬಂದಿದ್ದಾಗ ಟ್ರೈನಿನಲ್ಲಿ ಬಂದುಹೋಗಿದ್ದರು. ಸಹೋದರ ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾದರೂ, ದೇಶದ ಪ್ರಧಾನಿಯೇ ಆದರೂ ಕುಟುಂಬದ ಇತರೆ ಸದಸ್ಯರಿಗೆ ರಾಜಕೀಯದ ಗಂಧಗಾಳಿ ತಾಕಿಲ್ಲ!
ಕೊನೆಯ ಮಾತು: ಭಾರತದ ಇದುವರೆಗಿನ ಪ್ರಧಾನ ಮಂತ್ರಿಗಳೆಲ್ಲಾ ಕುಟುಂಬದವರ ಮಧ್ಯೆ ಜೀವನ ನಡೆಸಿದವರು. ಪ್ರಧಾನ ಮಂತ್ರಿಯಾಗಿ ಜವಾಹರ ಲಾಲ ನೆಹರೂ ಇಂದಿರಾ ಗಾಂಧಿಯನ್ನು ತಮ್ಮ ಕಣ್ಣಂಚಿನಲ್ಲಿಯೆ ಬೆಳೆಸಿದವರು. ಲಾಲ ಬಹಾದೂರ್ ಶಾಸ್ತ್ರಿಯವರು ತಮ್ಮ ದೂರದ ಕುಟುಂಬದವರ ಜೊತೆ ಮಕ್ಕಳು, ಮೊಮ್ಮಕ್ಕಳ ಜೊತೆ ನಂಬರ್ 1 ಮೋತಿಲಾಲ್ ನೆಹರೂ ಪ್ಯಾಲೇಸ್ನಲ್ಲಿ ವಾಸವಿದ್ದರು. ಇನ್ನು ಮಕ್ಕಳಾದ ಸಂಜಯ ಗಾಂಧಿ ಮತ್ತು ರಾಜೀವ್ ಗಾಂಧಿ ತಮ್ಮ ತಾಯಿ, ಪ್ರಧಾನಿ ಇಂದಿರಾ ಗಾಂಧಿ ಜೊತೆಯಲ್ಲೆ ವಾಸವಿದ್ದರು. ಬ್ರಹ್ಮಚಾರಿ ವಾಜಪೇಯಿ ಅವರೂ ತಮ್ಮ ಸಾಕು ಮಗಳು-ಅಳಿಯ ಜೊತೆ ನಂಬರ್ 7, ರೇಸ್ ಕೋರ್ಸ್ ರಸ್ತೆಯಲ್ಲಿ 1998ರಲ್ಲಿ ವಾಸವಿದ್ದರು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 8 Years Of Modi Government: ಆರೋಗ್ಯ ವರ್ಧನೆಗೆ ಮೋದಿ ಬಿಟ್ಟ ಇಂದ್ರಧನುಷ್ ಎಂಬ ಬಾಣದ ಸುತ್ತ
Published On - 5:10 pm, Wed, 25 May 22