ನೀನು ಬೇಕು ಎನ್ನು, ಚಂದ್ರನನ್ನೇ ತಂದುಕೊಡ್ತೇನೆ ಎನ್ನಲಿಲ್ಲ ಈ ಯುವಕ; ಬಾವಿ ಪತ್ನಿಗಾಗಿ ಚಂದ್ರನ ಮೇಲೆ ಜಾಗವನ್ನೇ ಖರೀದಿಸಿಬಿಟ್ಟ !

ದಾಖಲೆ ಲಿಖಿತವಾಗಿದೆ. ಅದರಲ್ಲಿ ಚಂದ್ರನ ಮೇಲಿನ ಭೂಮಿಗೆ ಹೇಮಾಲಿ ಮಾಲೀಕಳು ಎಂದೇ ಹೇಳಲಾಗಿದೆ. ಆದರೆ ಇದೊಂದು ಡಿಜಿಟಲ್​ ಆಸ್ತಿ ಎಂದೇ ಪರಿಗಣಿಸಲ್ಪಡುತ್ತದೆ.

ನೀನು ಬೇಕು ಎನ್ನು, ಚಂದ್ರನನ್ನೇ ತಂದುಕೊಡ್ತೇನೆ ಎನ್ನಲಿಲ್ಲ ಈ ಯುವಕ; ಬಾವಿ ಪತ್ನಿಗಾಗಿ ಚಂದ್ರನ ಮೇಲೆ ಜಾಗವನ್ನೇ ಖರೀದಿಸಿಬಿಟ್ಟ !
ಸಾಂಕೇತಿಕ ಚಿತ್ರ
Updated By: Lakshmi Hegde

Updated on: Mar 17, 2022 | 6:12 PM

ಬಾನಲ್ಲಿ ಮೂಡುವ ಚಂದ್ರ (Moon) ಶತಮಾನಗಳ ಕೌತುಕ. ಪ್ರತಿ ವ್ಯಕ್ತಿಯೂ ತನಗೆ ಬೇಕಾದಂತೆ ಚಂದ್ರನನ್ನು ಭಾವಿಸಿಕೊಳ್ಳುತ್ತಾನೆ. ಕೆಲವರ ಪಾಲಿಗೆ ಅದೊಂದು ಆಕಾಶಕಾಯವಷ್ಟೇ. ಆದರೆ ಪ್ರೇಮಿಗಳ ಪಾಲಿಗಂತೂ ಈ ಚಂದ್ರ ಸಾವಿರ ಭಾವನೆಗಳ ಬುತ್ತಿ. ತಾವು ಪ್ರೀತಿಸಿದವರ ಸಲುವಾಗಿ ಏನು ಮಾಡಲೂ ಸಿದ್ಧರಿದ್ದೇವೆ ಎಂಬುದನ್ನು ಚಂದ್ರನ ಉದಾಹರಣೆ ಕೊಟ್ಟು ಹೇಳುವವರು ಅದೆಷ್ಟೋ ಮಂದಿ. ‘ನೀನು ಬೇಕು ಅನ್ನು, ಆ ಚಂದ್ರ, ನಕ್ಷತ್ರಗಳನ್ನೇ ತಂದುಕೊಡುತ್ತೇನೆ’ ಎಂಬ ಡೈಲಾಗ್​ ಪ್ರೇಮಿಗಳ ಪಾಲಿಗಂತೂ ಸಾಮಾನ್ಯವಾಗಿಬಿಟ್ಟಿದೆ.  

ಆದರೆ ಅದೆಲ್ಲಕ್ಕಿಂತಲೂ ವಿಭಿನ್ನ ಎನ್ನಿಸುವುದು ಈಗ ನಾವು ಹೇಳ್ತಿರೋ ಸ್ಟೋರಿ. ವಡೋದರಾದ ಹೇಮಾಲಿ ಪಟೇಲ್​ ಎಂಬ ಯುವತಿಯ ಪಾಲಿಗೆ ಚಂದ್ರ ಕೈಗೆಟುಕದ, ಬರೀ ಭರವಸೆಯ ಮಾತಾಗಿ ಉಳಿದಿಲ್ಲ. ಈಕೆಯನ್ನು ವರಿಸಲಿರುವ ಯುವಕ 25 ವರ್ಷದ ಉದ್ಯಮಿ ಮಯೂರ್​ ಪಟೇಲ್​​, ಹೇಮಾಲಿ ಹೆಸರಿನಲ್ಲಿ, ಚಂದ್ರನ ಮೇಲೆ ಒಂದು ಎಕರೆ ಜಾಗವನ್ನೇ ಖರೀದಿಸಿಬಿಟ್ಟಿದ್ದಾರೆ. ! ಹೇಮಾಲಿ ವೃತ್ತಿಯಲ್ಲಿ ಇಂಜಿನಿಯರ್​. ಫೆ.27ರಂದು ಮಯೂರ್​ ಜತೆ ನಿಶ್ಚಿತಾರ್ಥವಾಗಿತ್ತು. ಇವರಿಬ್ಬರೂ ರಿಲೇಶನ್​ಶಿಪ್​​ನಲ್ಲಿದ್ದೇ ಎರಡೂವರೆ ವರ್ಷವಾಗಿತ್ತು.

ನಿಶ್ಚಿತಾರ್ಥವಾಗುತ್ತಿದ್ದಂತೆ ಹೇಮಾಲಿ ತನ್ನ ಬಾವಿ ಪತಿ ತನಗೆ ಡೈಮಂಡ್ ಉಂಗುರವನ್ನೋ, ಚಿನ್ನದ ನೆಕ್ಲೆಸ್​ನ್ನೋ ಕೊಡಬಹುದು ಎಂದು ಭಾವಿಸಿದ್ದಳು. ಆದರೆ ಮಯೂರ್​ ಚಂದ್ರನ ಮೇಲೆ ಸ್ಥಳ ಖರೀದಿಸಿ, ಅದರ ದಾಖಲೆಗಳನ್ನು ತಂದು ಹೇಮಾಲಿ ಕೈಯಿಗೆ ಕೊಟ್ಟಿದ್ದಾನೆ. ಆ ಸ್ಥಳಕ್ಕೆ ಹೇಮಾಲಿ ಮಾಲೀಕಳು ಎಂಬುದು ಆ ದಾಖಲೆಗಳಲ್ಲಿ ನಮೂದಾಗಿದೆ. ಅದನ್ನು ನೋಡಿ ಹೇಮಾಲಿ ಒಂದು ಸಲ ಚಂದ್ರನವರೆಗೆ ಹೋಗಿಬಂದಷ್ಟು ಖುಷಿಪಟ್ಟಿದ್ದಾರೆ.

ದಾಖಲೆ ಲಿಖಿತವಾಗಿದೆ. ಅದರಲ್ಲಿ ಚಂದ್ರನ ಮೇಲಿನ ಭೂಮಿಗೆ ಹೇಮಾಲಿ ಮಾಲೀಕಳು ಎಂದೇ ಹೇಳಲಾಗಿದೆ. ಆದರೆ ಇದೊಂದು ಡಿಜಿಟಲ್​ ಆಸ್ತಿ ಎಂದೇ ಪರಿಗಣಿಸಲ್ಪಡುತ್ತದೆ. ವಾಸ್ತವವಾಗಿ ಚಂದ್ರ ಸೇರಿ ಇನ್ಯಾವುದೇ ಆಕಾಶ ಕಾಯಗಳ ಮೇಲೆ ಜಾಗ ಖರೀದಿ ಸಾಧ್ಯವೇ ಇಲ್ಲ. ಚಂದ್ರ ಮತ್ತು ಇತರ ಆಕಾಶ ಕಾಯ ಎಲ್ಲರಿಗೂ ಸೇರಿದ್ದು, ಯಾವುದೇ ರಾಷ್ಟ್ರಗಳೂ ಅದರ ಮೇಲೆ ಹಕ್ಕು ಸಾಧಿಸಲಾಗದು. ಅದು ಮಾನವಕುಲದ ಸಾಮಾನ್ಯ ಪರಂಪರೆ ಎಂಬುದನ್ನು ದಿ ಔಟರ್ ಸ್ಪೇಸ್​ ಟ್ರೀಟಿ ಆಫ್​ 1967 ಒಪ್ಪಂದ ಹೇಳುತ್ತದೆ. ಇದಕ್ಕೆ ಸುಮಾರು 104 ರಾಷ್ಟ್ರಗಳು ಸಹಿ ಹಾಕಿವೆ. ಹಾಗಿದ್ದಾಗ್ಯೂ ಕೆಲವು ವೆಬ್​ಸೈಟ್​ಗಳು, ಚಂದ್ರನ ಮೇಲಿನ ಜಾಗ ಮಾರಾಟ ಮಾಡುತ್ತವೆ. ಅದನ್ನೊಂದು ಡಿಜಿಟಲ್​ ಆಸ್ತಿಯಂತೆ ಕೊಟ್ಟು, ಲಿಖಿತ ದಾಖಲೆ ನೀಡುತ್ತವೆ. ಈ ಉದ್ಯಮಿ ಕೂಡ ಅದನ್ನೇ ಮಾಡಿದ್ದು.

ಇದನ್ನೂ ಓದಿ: ಜರ್ಮನ್​ ಸಂಸತ್ತನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿದ ಉಕ್ರೇನ್​ ಅಧ್ಯಕ್ಷ; ಎದ್ದುನಿಂತು ಗೌರವ ಸಲ್ಲಿಸಿದ ಜನಪ್ರತಿನಿಧಿಗಳು

Published On - 6:11 pm, Thu, 17 March 22