ಆಂಧ್ರಪ್ರದೇಶದ ವಿಜಯನಗರಂನ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ನಾಲೇಡ್ಜ್ ಟೆಕ್ನಾಲಜೀಸ್ (ಐಐಐಟಿ-ಶ್ರೀಕಾಕುಲಂ)ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 16ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಕಾಲೇಜಿನ ಹಾಸ್ಟೆಲ್ ಕೋಣೆಯಲ್ಲೇ ಫೆ.16ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಹಪಾಠಿಗಳು ಬುಧವಾರ ಬಂದು ಬಾಗಿಲು ಬಡಿದರೂ ಯುವತಿ ಬಾಗಿಲು ತೆರೆಯಲಿಲ್ಲ. ಅನುಮಾನ ಬಂದು ಕಾಲೇಜಿನ ಸಿಬ್ಬಂದಿಗೆ ತಿಳಿಸಲಾಯಿತು. ಅವರೆಲ್ಲ ಬಂದು ಬಾಗಿಲು ಒಡೆದು ನೋಡಿದರೆ, ವಿದ್ಯಾರ್ಥಿನಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಳು.
ಮೃತ ಹುಡುಗಿಯ ಹೆಸರು ಕೊಂಡಪಲ್ಲಿ ಮನೀಶಾ ಅಂಜು. ಈಕೆ ವಿಜಯನಗರಂನ ನೆಲ್ಲಿಮಾರ್ಲ ನಿವಾಸಿ. ಐಐಐಟಿ-ಶ್ರೀಕಾಕುಲಂನಲ್ಲಿ ಮೊದಲ ವರ್ಷದ ಪಿಯುಸಿ ಓದುತ್ತಿದ್ದಳು. ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಪಾಲಕರು ಮಾಡಿದ ಒತ್ತಾಯ ಎಂದು ಹೇಳಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಶುರುವಾದಾಗಿನಿಂದ ಇಲ್ಲಿಯವರೆಗೂ ಆಕೆ ಮನೆಯಲ್ಲೇ ಮನೆಯಲ್ಲೇ ಇದ್ದುಕೊಂಡು ಆನ್ಲೈನ್ ಕ್ಲಾಸ್ ಮೂಲಕ ಶಿಕ್ಷಣ ಪಡೆಯುತ್ತಿದ್ದಳು. ಆದರೆ ಇದೀಗ ಕಾಲೇಜುಗಳೆಲ್ಲ ಶುರುವಾದ ಹಿನ್ನೆಲೆಯಲ್ಲಿ ಪಾಲಕರು, ನೀನು ಕಾಲೇಜಿಗೇ ಹೋಗಿ, ಆಫ್ಲೈನ್ ಕ್ಲಾಸ್ಗೆ ಹಾಜರಾಗು ಎಂದು ಹೇಳಿದ್ದಾರೆ. ಅವಳಿಗೆ ಇಷ್ಟವಿಲ್ಲದೆ ಇದ್ದರೂ, ಬಲವಂತವಾಗಿ ಕರೆತಂದು ಹಾಸ್ಟೆಲ್ನಲ್ಲಿ ಬಿಟ್ಟಿದ್ದಾರೆ. ಇದೇ ಕಾರಣಕ್ಕೆ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.
ಕೊವಿಡ್ 19 ಜಾಸ್ತಿ ಇದ್ದಾಗ ಈ ಕಾಲೇಜು ಆನ್ಲೈನ್ ಕ್ಲಾಸ್ ಪ್ರಾರಂಭ ಮಾಡಿತ್ತು. ಇದೀಗ ಕೊರೊನಾ ಕಡಿಮೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಫ್ಲೈನ್ ಕ್ಲಾಸ್ಗೆಂದು ಕಾಲೇಜಿಗೆ ಬೇಕಾದರೂ ಬರಬಹುದು. ಹಾಗೊಮ್ಮೆ ಇಲ್ಲಿ ಬರಲು ತೊಂದರೆಯಿದ್ದವರು, ಇಷ್ಟವಿಲ್ಲದೆ ಇದ್ದವರು ಮನೆಯಲ್ಲೇ ಇದ್ದು, ಪ್ರತಿದಿನ ಆನ್ಲೈನ್ ಕ್ಲಾಸ್ ಅಟೆಂಡ್ ಆಗಬೇಕು ಎಂದು ಕಾಲೇಜು ಹೇಳಿತ್ತು. ಹುಡುಗಿಗೆ ಮನೆಯಲ್ಲೇ ಇದ್ದು ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುವ ಆಸೆ. ಆದರೆ ಪಾಲಕರಿಗೆ ಆಕೆ ಕಾಲೇಜಿಗೆ ಹೋಗಲಿ ಎಂಬ ಬಯಕೆ. ಅವರೇ ಬಲವಂತವಾಗಿ ಹಾಸ್ಟೆಲ್ಗೆ ಕರೆತಂದು ಬಿಟ್ಟಿದ್ದರು. ಇದರಿಂದಾಗಿ ಹುಡುಗಿಗೆ ಕೋಪ ಕೂಡ ಬಂದಿತ್ತು. ಬಸ್ನಲ್ಲಿ ಬರುತ್ತಿದ್ದಾಗಲೇ ಅವಳು ತನ್ನ ಮೊಬೈಲ್ನ್ನು ಎಸೆದಿದ್ದಳು. ಮರುದಿನವೇ ಪಾಲಕರು ಹೊಸ ಮೊಬೈಲ್ ತಂದು ಕೊಟ್ಟಿದ್ದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
ಇದನ್ನೂ ಓದಿ: ತೆಲಂಗಾಣ ಸಿಎಂ ಕೆ ಚಂದ್ರಶೇಖರರಾವ್ 68ನೆ ಹುಟ್ಟುಹಬ್ಬ: ಕೋಳಿ ವಿತರಣೆ ಮಾಡಿದ ಕರೀಂನಗರ ಮೇಯರ್!
Published On - 9:51 am, Thu, 17 February 22