ಎಲ್ಪಿಜಿಗೆ ಪ್ಯಾನಿಕ್ ಬುಕಿಂಗ್ ಬೇಡ; ಕೆಲ ವಲಯಗಳಿಗೆ ಆದ್ಯತೆ ಮೇರೆಗೆ ಕಮರ್ಷಿಯಲ್ ಗ್ಯಾಸ್ ನೀಡುತ್ತೇವೆ: ಸರ್ಕಾರದ ಹೇಳಿಕೆ
Oil ministry official Sujata Sharma briefs media on Oil crisis: ಎಲ್ಪಿಜಿ ದಾಸ್ತಾನು ಸಾಕಷ್ಟಿದೆ. ಜನರು ಆತಂಕದಿಂದ ಪ್ಯಾನಿಕ್ ಆಗಿ ಬುಕಿಂಗ್ ಮಾಡುವುದು ಬೇಡ ಎಂದು ಪೆಟ್ರೋಲಿಯಂ ಮತ್ತು ನ್ಯಾಚುವರಲ್ ಗ್ಯಾಸ್ ಮಿನಿಸ್ಟ್ರಿಯ ಅಧಿಕಾರಿ ಸುಜಾತಾ ಶರ್ಮಾ ಹೇಳಿದ್ದಾರೆ. ಕಮರ್ಷಿಯಲ್ ಎಲ್ಪಿಜಿ ಗ್ಯಾಸ್ ಅನ್ನು ಆದ್ಯತಾ ವಲಯಗಳಿಗೆ ಮೊದಲು ಬಿಡುಗಡೆ ಮಾಡಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ನವದೆಹಲಿ, ಮಾರ್ಚ್ 12: ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳನ್ನು (LPG) ಬಿಡುಗಡೆ ಮಾಡಲಾಗುವುದು. ಆದರೆ, ರಾಜ್ಯ ಸರ್ಕಾರಗಳು ಯಾರಿಗೆ ಕೊಡಬಹುದು ಎಂದು ಫಲಾನುಭವಿಗಳನ್ನು ಗುರುತಿಸುತ್ತವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ (Sujata Sharma) ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುಜಾತಾ ಶರ್ಮಾ, ಎಲ್ಪಿಜಿ ವಿಚಾರದಲ್ಲಿ ಜನರು ಆತಂಕ ಪಡಬಾರದು ಎಂದು ಮನವಿ ಮಾಡಿದ್ದಾರೆ.
‘ಗೃಹೇತರ ಬಳಕೆಯ ಎಲ್ಪಿಜಿ ಅಥವಾ ಕಮರ್ಷಿಯಲ್ ಎಲ್ಪಿಜಿ ವಿಚಾರದಲ್ಲಿ ನಾವು ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಂತಹ ಕೆಲ ವಲಯಗಳಿಗೆ ಆದ್ಯತೆ ಕೊಟ್ಟಿದ್ದೇವೆ. ಅದರಲ್ಲಿ ಫಲಾನುಭವಿಗಳ ಪಟ್ಟಿಯನ್ನು ಮಾಡುವಂತೆ ರಾಜ್ಯ ಸರ್ಕಾರಗಳಿಗೆ ನೀಡಿದ್ದೇವೆ. ಆದ್ಯತೆ ಮೇರೆಗೆ ಕಮರ್ಷಿಯಲ್ ಸಿಲಿಂಡರ್ಗಳನ್ನು ನೀಡಲಾಗುವುದು’ ಎಂದು ಸುಜಾತಾ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಎಲ್ಪಿಜಿ ಕೊರತೆ ಇಲ್ಲ: ಸಂಸತ್ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ
ಎಲ್ಪಿಜಿ ಪ್ಯಾನಿಕ್ ಬುಕಿಂಗ್ ಬೇಡ
‘ನಮಗೆ ಬೇಕಾದ ಎಲ್ಪಿಜಿಯಲ್ಲಿ ಶೇ. 60ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಶೇ. 90ರಷ್ಟು ಹಾರ್ಮುಜ್ ಮೂಲಕ ಬರುತ್ತದೆ. ಪರಿಸ್ಥಿತಿ ಕ್ಲಿಷ್ಟಕರವಾಗಿದೆಯಾದರೂ ಸರ್ಕಾರವು ಜನರಿಗೆ ಎಲ್ಪಿಜಿ ಪೂರೈಕೆ ಸಮರ್ಪಕವಾಗಿ ಆಗುವುದನ್ನು ಖಚಿಪಡಿಸಲು ಯತ್ನಿಸುತ್ತಿದೆ. ನಿತ್ಯವೂ 50 ಲಕ್ಷ ಸಿಲಿಂಡರ್ಗಳನ್ನು ಪೂರೈಸುತ್ತಿದ್ದೇವೆ. ಆದರೆ, ಜನರು ಆತಂಕದಿಂದ ಎಲ್ಪಿಜಿ ಬುಕಿಂಗ್ ಮಾಡುವುದು ಹೆಚ್ಚಾಗಿದೆ. ಈ ರೀತಿ ಪ್ಯಾನಿಕ್ ಬುಕಿಂಗ್ ತಪ್ಪಿಸಲು ನಾಗರಿಕರನ್ನು ಕೇಳಿಕೊಳ್ಳುತ್ತೇವೆ’ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿ ಮನವಿ ಮಾಡಿದ್ದಾರೆ.
ದೇಶೀಯ ಎಲ್ಪಿಜಿ ಉತ್ಪಾದನೆ ಶೇ. 28ಕ್ಕೆ ಏರಿಕೆ
‘ಮಾರ್ಚ್ 9ರಂದು ಅಗತ್ಯ ಸರಕುಗಳ ಕಾಯ್ದೆ ಅಡಿ ಎಲ್ಪಿಜಿ ಉತ್ಪಾದನೆ ಗರಿಷ್ಠಗೊಳಿಸುವಂತೆ ಎಲ್ಲಾ ರಿಫೈನರಿಗಳಿಗೆ ನಿರ್ದೇಶನ ನೀಡಲಾಗಿದೆ. ಅದರ ಪರಿಣಾಮವಾಗಿ ಎಲ್ಪಿಜಿ ಉತ್ಪಾದನೆ ಹೆಚ್ಚಾಗಿದೆ. ನಿನ್ನೆ ಶೇ. 25ಎಂದು ಹೇಳಿದ್ದೆ. ಈಗ ಅದು ಶೇ. 28 ಆಗಿದೆ. ಅಂದರೆ ದೇಶೀಯ ಎಲ್ಪಿಜಿ ಉತ್ಪಾದನೆಯಲ್ಲಿ ಹೆಚ್ಚಳ ಆಗಿದೆ. ನಮ್ಮಲ್ಲಿ ಬಹಳ ವಿಸ್ತೃತವಾದ ರೀಟೇಲ್ ಔಟ್ಲೆಟ್ಗಳ ಜಾಲ ಇದೆ. ಒಂದು ಲಕ್ಷ ರೀಟೇಲ್ ಔಟ್ಲೆಟ್ಗಳಿವೆ. ಇವ್ಯಾವುವೂ ಕೂಡ ದಾಸ್ತಾನು ಕೊರತೆ ವರದಿ ಮಾಡಿಲ್ಲ’ ಎಂದು ಸುಜಾತಾ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ದಾಟಿ ಮುಂಬೈ ಬಂದರು ತಲುಪಿದ ಭಾರತದ ಮೊದಲ ತೈಲ ಟ್ಯಾಂಕರ್
ಭಾರತದಲ್ಲಿ ರಿಫೈನರಿಗಳಿರುವುದು ಸಮಾಧಾನ
ಭಾರತದಲ್ಲಿ ನಿತ್ಯವೂ 55 ಬ್ಯಾರಲ್ ತೈಲವನ್ನು ಬಳಸಲಾಗುತ್ತದೆ. ಜಗತ್ತಿನ ನಾಲ್ಕನೇ ಅತಿದೊಡ್ಡ ರಿಫೈನರ್ ಎನಿಸಿದೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸಲ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆ ಯಾವಾಗಲೂ ಇರುತ್ತದೆ ಎಂಬ ವಿಚಾರವನ್ನು ಸುಜಾತಾ ಶರ್ಮಾ ತಿಳಿಸಿದ್ದಾರೆ.
ಎಲ್ಪಿಜಿ ಹಾಗೂ ಗ್ಯಾಸ್ ಉತ್ಪನ್ನಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರ ಪರ್ಯಾಯ ಇಂಧನ ಆಯ್ಕೆಗಳನ್ನು ಸಕ್ರಿಯಗೊಳಿಸಿದೆ. ಪ್ರತೀ ತ್ರೈಮಾಸಿಕದಲ್ಲಿ ರಾಜ್ಯಗಳಿಗೆ ಒಂದು ಲಕ್ಷ ಕಿಲೋಲೀಟರ್ ಕೆರೋಸಿನ್ (ಸೀಮೆ ಎಣ್ಣೆ) ನೀಡಲಾಗುತ್ತದೆ. ಇವತ್ತು 48,000 ಲೀಟರ್ ಸೀಮೆಎಣ್ಣೆ ನೀಡಲಾಗುತ್ತಿದೆ ಎಂದೂ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:03 pm, Thu, 12 March 26
