ಹೈದರಾಬಾದ್: ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದಾಗ, ಆತನ 8 ವರ್ಷದ ಮಗಳು ದೊಡ್ಡದಾಗಿ ಅತ್ತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಈ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಮಾಸ್ಕ್ ಹಾಕಿಕೊಂಡ ವ್ಯಕ್ತಿಯೊಬ್ಬರು, ಪೊಲಿಸ್ ಅಧಿಕಾರಿಯೊಂದಿಗೆ ವಾದಕ್ಕೆ ಇಳಿದಿದ್ದಾರೆ. ಸುತ್ತಲೂ ಜನರು ಸೇರಿದ್ದಾರೆ. ನಾನು ಹೆಲ್ಮೆಟ್ ಹಾಕದೆ ಇರುವುದಕ್ಕೆ ಪೊಲೀಸ್ ಕಾನ್ಸ್ಟೆಬಲ್ವೊಬ್ಬರು ನನಗೆ ಹೊಡೆದಿದ್ದಾರೆ. ರೂಲ್ಸ್ ಅನುಸರಿಸದೆ ಇರುವುದಕ್ಕೆ ಪೊಲೀಸರು ಪ್ರಶ್ನಿಸಬಹುದು, ದಂಡ ವಿಧಿಸಬಹುದು. ಆದರೆ ಹೊಡೆಯುವ ಅಧಿಕಾರ ಕೊಟ್ಟವರಾರು ಎಂಬುದು ಈ ವ್ಯಕ್ತಿಯ ಪ್ರಶ್ನೆ. ಇವರು ಪೊಲೀಸರೊಂದಿಗೆ ವಾದ ಮಾಡುತ್ತಿರುವ ವಿಡಿಯೋ ಸಿಕ್ಕಿದೆ. ಆದರೆ ಪೊಲೀಸ್ ಇವರಿಗೆ ಹೊಡೆದ ವಿಡಿಯೋ ಲಭ್ಯವಾಗಿಲ್ಲ.
ಈ ವ್ಯಕ್ತಿಯ ಹೆಸರು ಶ್ರೀನಿವಾಸ್ ಎಂದಾಗಿದ್ದು, ತನ್ನ 8 ವರ್ಷದ ಮಗಳೊಂದಿಗೆ ತರಕಾರಿ ತರಲು ಹೋಗಿದ್ದರು. ಆದರೆ ಹೆಲ್ಮೆಟ್ ಧರಿಸಿ ಹೋಗಿರಲಿಲ್ಲ. ಇದೇ ಕಾರಣಕ್ಕೆ ಪೊಲೀಸ್ ಕಾನ್ಸ್ಟೆಬಲ್ವೊಬ್ಬರು ಶ್ರೀನಿವಾಸ್ನನ್ನು ತಡೆದಿದ್ದಾರೆ. ಆದರೆ ಅವರು ಬರೀ ಬಾಯ್ಮಾತಲ್ಲಿ ಎಚ್ಚರಿಕೆ ಕೊಡಬೇಕಿತ್ತು..ಇಲ್ಲದೆ ಇದ್ದರೆ ದಂಡ ವಿಧಿಸಬೇಕಿತ್ತು. ಅದು ಬಿಟ್ಟು ನನ್ನ ಮಗಳ ಎದುರೇ ನನ್ನ ಮೇಲೆ ಕೈಮಾಡಿದ್ದಾರೆ ಎಂಬುದು ಶ್ರೀನಿವಾಸ್ ಆರೋಪ. ಕಾನ್ಸ್ಟೆಬಲ್ ಮತ್ತು ಶ್ರೀನಿವಾಸ್ ನಡುವೆ ವಾಗ್ವಾದ ನಡೆಯುತ್ತಿದ್ದಾಗ ಸಬ್ ಇನ್ಸ್ಪೆಕ್ಟರ್ ಮುನೀರುಲ್ಲಾ ಮಧ್ಯಪ್ರವೇಶ ಮಾಡಿದ್ದಾರೆ. ಅವರ ಬಳಿಯೂ ಶ್ರೀನಿವಾಸ್ ದೂರು ನೀಡಿದ್ದಾರೆ.
ಆದರೆ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದ್ದು, ಅದನ್ನು ನೋಡಿದವರು ಖಂಡಿಸುತ್ತಿದ್ದಾರೆ. ಇದೇನು ಪೊಲೀಸ್ ರಾಜ್ಯನಾ ಎಂದು ಪ್ರಶ್ನಿಸಿದ್ದಾರೆ. ಹೊಡೆಯುವ ಅಗತ್ಯವಾದರೂ ಏನಿತ್ತು ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಸನ್ನಿವೇಶದಿಂದ ಭಯಗೊಂಡ ಪುಟ್ಟಹುಡುಗಿ ಒಮ್ಮೆಲೇ ದೊಡ್ಡದಾಗಿ ಅಳಲು ಶುರು ಮಾಡಿದ್ದರಿಂದ ನೆಟ್ಟಿಗರಿಗೆ ಇನ್ನಷ್ಟು ಅಸಮಾಧಾನವಾಗಿದೆ. ಅಳುವ ಮಗಳ ಬಳಿ, ನೀನು ಅಳಬೇಡ, ನಾವೇನೂ ತಪ್ಪು ಮಾಡಿಲ್ಲ ಎಂದು ಶ್ರೀನಿವಾಸ್ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು.
POLICE STATE?#Mahabubnagar police conducting a drive to ensure people are wearing masks/helmets &following rules. They stopped this man who was apparently going for vegetables& slapped him. The man says you can fine me but who gives a right to slap me in front of my child? pic.twitter.com/UpnQPEjk5M
— Revathi (@revathitweets) December 6, 2021
ಇನ್ನು ಘಟನೆ ಬಗ್ಗೆ ಪೊಲೀಸರು ಬೇರೆ ರೀತಿ ಹೇಳಿದ್ದಾರೆ. ಆ ವ್ಯಕ್ತಿ ಮನೀರುಲ್ಲಾರನ್ನು ನಿಂದಿಸಿದ್ದಾನೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಕೋಟಿ ರೆಡ್ಡಿ ಹೇಳಿದ್ದಾರೆ. ಬಾಲಕಿಯ ಹೇಳಿಕೆಯಿರುವ ವಿಡಿಯೋ ಕೂಡ ವೈರಲ್ ಆಗಿದ್ದು ಅದರಲ್ಲಿ ಆಕೆ, ಸಬ್ ಇನ್ಸ್ಪೆಕ್ಟರ್ ಅವರೇ ಹೊಡೆದಿದ್ದಾಗಿ ಹೇಳಿಕೊಂಡಿದ್ದಾಳೆ. ಒಟ್ಟಾರೆ ಸೋಷಿಯಲ್ ಮೀಡಿಯಾ ಬಳಕೆದಾರರು ಪೊಲೀಸರ ಅಹಂಕಾರ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Farmers Protest ಬಹುತೇಕ ಎಲ್ಲ ಬೇಡಿಕೆಗಳನ್ನು ಅಂಗೀಕರಿಸಿದ ಸರ್ಕಾರ, ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಪಡೆಯುವ ಸಾಧ್ಯತೆ
Published On - 5:04 pm, Tue, 7 December 21