‘2 ತಾಸಾದರೂ ನನ್ನ 5 ತಿಂಗಳ ಮಗುವನ್ನು ಒಬ್ಬರೂ ತಪಾಸಣೆ ಮಾಡಲಿಲ್ಲ..ಜೀವವೇ ಹೋಯ್ತು’-ಮೃತದೇಹ ತೋಳಲ್ಲಿ ಅಪ್ಪಿ ತಂದೆಯ ಕಣ್ಣೀರು

|

Updated on: Jun 01, 2021 | 12:36 PM

ಕೊವಿಡ್ 19 ವಿರುದ್ಧ ಹೋರಾಡುತ್ತೇವೆಂದು ಎಲ್ಲರೂ ಹೇಳಿಕೊಳ್ಳುತ್ತಾರೆ. ಆದರೆ ಕೊರೊನಾ ಭಯದಿಂದ ಯಾರೊಬ್ಬರೂ ರೋಗಿಗಳನ್ನು ಮುಟ್ಟಲು ಬರುವುದಿಲ್ಲ ಎಂದು ಮಗುವಿನ ತಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘2 ತಾಸಾದರೂ ನನ್ನ 5 ತಿಂಗಳ ಮಗುವನ್ನು ಒಬ್ಬರೂ ತಪಾಸಣೆ ಮಾಡಲಿಲ್ಲ..ಜೀವವೇ ಹೋಯ್ತು’-ಮೃತದೇಹ ತೋಳಲ್ಲಿ ಅಪ್ಪಿ ತಂದೆಯ ಕಣ್ಣೀರು
ಪ್ರಾತಿನಿಧಿಕ ಚಿತ್ರ
Follow us on

ಸರ್ಕಾರಿ ಆಸ್ಪತ್ರೆಯ ಹೊರಗೆ ವ್ಯಕ್ತಿಯೊಬ್ಬ ತನ್ನ 5 ತಿಂಗಳ ಮಗುವಿನ ಮೃತದೇಹವನ್ನು ತೋಳಲ್ಲಿ ಅಪ್ಪಿಕೊಂಡು, ಅಳುತ್ತ ನಿಂತಿರುವ ದೃಶ್ಯವೊಂದು ವೈರಲ್​ ಆಗಿದ್ದು, ಇದು ಉತ್ತರ ಪ್ರದೇಶದ ಬಾರ್ಬಂಕಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಬಳಿ ಕಂಡುಬಂದ ದೃಶ್ಯವೆಂದು ಹೇಳಲಾಗಿದೆ. ನನ್ನ ಮಗುವಿನ ಆರೋಗ್ಯ ಗಂಭೀರ ಸ್ಥಿತಿ ತಲುಪಿದ್ದರೋ ಒಬ್ಬೇಒಬ್ಬ ವೈದ್ಯ ಬಂದು ನೋಡಲಿಲ್ಲ. ಎರಡು ತಾಸುಗಳ ಬಳಿಕ ವೈದ್ಯರು ನೋಡಿದರೂ, ಅಷ್ಟರಲ್ಲಿ ನನ್ನ ಹೆಣ್ಣುಮಗುವಿನ ಜೀವಕ್ಕೆ ಅಪಾಯ ಆಗಿತ್ತು ಎಂದು ಆ ತಂದೆ ಅಳಲು ತೋಡಿಕೊಂಡಿದ್ದಾರೆ.

ಕೊವಿಡ್ 19 ವಿರುದ್ಧ ಹೋರಾಡುತ್ತೇವೆಂದು ಎಲ್ಲರೂ ಹೇಳಿಕೊಳ್ಳುತ್ತಾರೆ. ಆದರೆ ಕೊರೊನಾ ಭಯದಿಂದ ಯಾರೊಬ್ಬರೂ ರೋಗಿಗಳನ್ನು ಮುಟ್ಟಲು ಬರುವುದಿಲ್ಲ. ನನ್ನ ಮಗುವನ್ನು ತಪಾಸಣೆ ಮಾಡಲು ಒಬ್ಬರೂ ಇರಲಿಲ್ಲ. ಇದ್ಯಾವ ವ್ಯವಸ್ಥೆ ಎಂದು ಆ ವ್ಯಕ್ತಿ ಕಿಡಿಕಾರಿದ್ದಾರೆ. ಆದರೆ ಆಸ್ಪತ್ರೆ ವ್ಯಕ್ತಿಯ ಆರೋಪವನ್ನು ತಳ್ಳಿ ಹಾಕಿದೆ. ಈ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಮೃತಪಟ್ಟಿತ್ತು ಎಂದು ಹೇಳಿದ್ದಾರೆ.
ಬಾರ್ಬಂಕಿ ಮುಖ್ಯ ವೈದ್ಯಾಧಿಕಾರಿ ಬಿಕೆಎಸ್​ ಚೌಹಾಣ್​ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಬಂದ ಮಗುವನ್ನು ತಪಾಸಣೆ ಮಾಡಲಾಯಿತು. ಆದರೆ ಮನೆಯಿಂದ ಕರೆದುಕೊಂಡು ಬರುವಷ್ಟರಲ್ಲಿಯೇ ಮಗು ಮೃತಪಟ್ಟಾಗಿತ್ತು. ವೈದ್ಯರು ಮತ್ತು ಪ್ಯಾರಾಮೆಡಿಕಲ್​ ಸಿಬ್ಬಂದಿ ಇಬ್ಬರೂ ಮಗುವನ್ನು ಪರೀಕ್ಷೆ ಮಾಡಿದ್ದಾರೆ ಎಂದು ನನಗೆ ಆಸ್ಪತ್ರೆಯ ಸೂಪರಿಂಟೆಂಡೆಂಟ್​ ತಿಳಿಸಿದ್ದಾರೆ. ಈ ಮಗು ಟೆರೇಸ್​ನಿಂದ ಕೆಳಗೆ ಬಿದ್ದಿತ್ತು ಎಂದು ಅದರ ಪಾಲಕರೇ ತಿಳಿಸಿದ್ದಾರೆ ಎಂದು ಚೌಹಾಣ್​ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆ ಹೊರಗಡೆ ಅಳುತ್ತ ನಿಂತಿದ್ದ ವ್ಯಕ್ತಿಯ ಬಳಿ ಇನ್ನೊಬ್ಬ ಬಂದು, ತಾಳ್ಮೆಯಿಂದ ಇರು ಎನ್ನುತ್ತಾರೆ. ಏನು ತಾಳ್ಮೆ. ನನ್ನ ಮಗುವನ್ನು ಕರೆದುಕೊಂಡು ಬಂದು 2 ತಾಸು ಆಯ್ತು. ಒಬ್ಬ ವೈದ್ಯನೂ ಬಂದು ತಪಾಸಣೆ ಮಾಡುತ್ತಿಲ್ಲ ಎಂದು ಈ ವ್ಯಕ್ತಿ ಹೇಳುತ್ತಾರೆ. ಅಷ್ಟರಲ್ಲಿ ಬಂದ ಪೊಲೀಸ್​ ಒಬ್ಬರು, ಏನಿದು ನಾಟಕ? ಎಂದು ಪ್ರಶ್ನಿಸುತ್ತಾರೆ. ನನ್ನ ಮಗು ಸಾವನ್ನಪ್ಪಿದೆ.. ನಾನ್ಯಾಕೆ ಡ್ರಾಮಾ ಮಾಡಲಿ ಎಂದು ಮಗುವಿನ ತಂದೆ ಹೇಳುವಂಥ ವಿಡಿಯೋಗಳು ವೈರಲ್ ಆಗಿವೆ. ಅದಕ್ಕೆ ಪ್ರತಿಯಾಗಿ ಪೊಲೀಸರು ಒಂದು ಲಿಖಿತ ದೂರು ನೀಡುವಂತೆ ಕೇಳುವುದನ್ನೂ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: World Milk Day 2021 ಕೊರೊನಾ ಸಮಯದಲ್ಲಿ ಇಮ್ಮ್ಯುನಿಟಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಹಾಲಿನ ಮೂರು ಬೆಸ್ಟ್ ಉತ್ಪನ್ನ