ಮಮತಾ ಬ್ಯಾನರ್ಜಿ ಮುಖ್ಯ ಸಲಹೆಗಾರನ ಬೆನ್ನು ಬಿಡದ ಕೇಂದ್ರ ಸರ್ಕಾರ; ಆಲಾಪನ್ ಬಂಡೋಪಾಧ್ಯಾಯರಿಗೆ ಶೋಕಾಸ್ ನೋಟಿಸ್​

ಮಮತಾ ಬ್ಯಾನರ್ಜಿ ಮುಖ್ಯ ಸಲಹೆಗಾರನ ಬೆನ್ನು ಬಿಡದ ಕೇಂದ್ರ ಸರ್ಕಾರ; ಆಲಾಪನ್ ಬಂಡೋಪಾಧ್ಯಾಯರಿಗೆ ಶೋಕಾಸ್ ನೋಟಿಸ್​
ಅಲಾಪನ್ ಬಂಡೋಪಾಧ್ಯಾಯ

ಬಂಡೋಪಾಧ್ಯಾಯ ಅವರನ್ನು ವರ್ಗಾವಣೆ ಮಾಡಿ ಕೇಂದ್ರ ಆದೇಶ ಹೊರಡಿಸಿದ ಬೆನ್ನಲ್ಲೇ ಮಮತಾ ಬ್ಯಾನರ್ಜಿಯವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ತಾವು ಅವರನ್ನು ಕಳಿಸುವುದಿಲ್ಲ ಎಂದು ಹೇಳಿದ್ದರು.

Lakshmi Hegde

|

Jun 01, 2021 | 12:37 PM

ಕೋಲ್ಕತ್ತ: ಪಶ್ಚಿಮಬಂಗಾಳ ಸರ್ಕಾರದ ಮುಖ್ಯಕಾರ್ಯದರ್ಶಿ ಸ್ಥಾನದಿಂದ ನಿವೃತ್ತಿ ಪಡೆದು, ನಂತರ ಸರ್ಕಾರದ ಮುಖ್ಯ ಸಲಹೆಗಾರನಾಗಿ ನೇಮಕಗೊಂಡ ಆಲಾಪನ್​ ಬಂಡೋಪಾಧ್ಯಾಯರಿಗೆ ಕೇಂದ್ರ ಸರ್ಕಾರ ಶೋಕಾಸ್​ ನೋಟಿಸ್​ ನೀಡಿದೆ. ಇತ್ತೀಚೆಗೆ ಪ್ರಧಾನಿ ಮೋದಿಯವರು ಯಾಸ್​ ಚಂಡಮಾರುತದ ಹಾನಿ ಬಗ್ಗೆ ಪರಿಶೀಲನಾ ಸಭೆ ನಡೆಸಲು ಪಶ್ಚಿಮಬಂಗಾಳಕ್ಕೆ ಆಗಮಿಸಿದ್ದಾಗ ಆಲಾಪನ್​ ಬಂಡೋಪಾಧ್ಯಾಯ ಮತ್ತು ಮಮತಾ ಬ್ಯಾನರ್ಜಿಯವರು ಅವರ ಸಭೆಗೆ 30 ನಿಮಿಷ ತಡವಾಗಿ ಬಂದಿದ್ದರು. ಒಬ್ಬ ಮುಖ್ಯಕಾರ್ಯದರ್ಶಿಯಾಗಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಯವರಿಗೆ ಅಗೌರವ ತೋರಿಸಿದ್ದಾರೆಂದು ಹಲವು ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಾಗಿ ಒಂದೇ ದಿನದಲ್ಲಿ ಆಲಾಪನ್​ರಿಗೆ ದೆಹಲಿಗೆ ವರ್ಗಾವಣೆಯಾಗಿತ್ತು.

ದೆಹಲಿಗೆ ವರ್ಗಾವಣೆಯಾದರೂ ಅಲ್ಲಿಗೆ ತೆರಳಲು ನಿರಾಕರಿಸಿದ ಆಲಾಪನ್​ ಬಂಡೋಪಾಧ್ಯಾಯ ತಮ್ಮ ಸೇವೆಗೆ ನಿವೃತ್ತಿ ಘೋಷಿಸಿದ್ದರು. ಹಾಗೇ ಮಮತಾ ಬ್ಯಾನರ್ಜಿಯವರ ಆಪ್ತ ಸಲಹೆಗಾರನಾಗಿ ಮುಂದಿನ ಮೂರು ವರ್ಷಕ್ಕೆ ನೇಮಕಗೊಂಡಿದ್ದರು. ಅವರಿಗೀಗ ಕೇಂದ್ರ ಸರ್ಕಾರ ಶೋಕಾಸ್​ ನೋಟಿಸ್​ ನೀಡಿದ್ದು, ಮಂಗಳವಾರ ಬೆಳಗ್ಗೆ 10ಗಂಟೆಗೆ ದೆಹಲಿಯ ನಾರ್ತ್​ಬ್ಲಾಕ್​​ನಲ್ಲಿರುವ ಗೃಹಸಚಿವಾಲಯದ ಕಚೇರಿಯಲ್ಲಿ ಹಾಜರಿರಲು ಸೂಚಿಸಲಾಗಿತ್ತು. ಆದರೆ ಯಾಕೆ ಸೇರ್ಪಡೆಯಾಗಲಿಲ್ಲ ಎಂಬುದಕ್ಕೆ ವಿವರಣೆ ಕೊಡಬೇಕು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರ ಸಭೆಯಲ್ಲಿ ಪಾಲ್ಗೊಳ್ಳದೆ ಇರುವುದಕ್ಕೆ ಕಾರಣವೇನು ಎಂಬುದರ ಬಗ್ಗೆಯೂ ಸರಿಯಾದ ವಿವರಣೆ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ಸಭೆಯನ್ನು ಮಮತಾ ಬ್ಯಾನರ್ಜಿಯವರು ತಪ್ಪಿಸಿಕೊಂಡ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಪರ-ವಿರೋಧ ಮಾತುಗಳು ಕೇಳಿಬಂದಿದ್ದವು. ಇನ್ನು ಬಂಡೋಪಾಧ್ಯಾಯ ಅವರನ್ನು ವರ್ಗಾವಣೆ ಮಾಡಿ ಕೇಂದ್ರ ಆದೇಶ ಹೊರಡಿಸಿದ ಬೆನ್ನಲ್ಲೇ ಮಮತಾ ಬ್ಯಾನರ್ಜಿಯವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ತಾವು ಅವರನ್ನು ಕಳಿಸುವುದಿಲ್ಲ ಎಂದು ಹೇಳಿದ್ದರು. ಇದು ಪ್ರತೀಕಾರದ ಧೋರಣೆ. ಇಷ್ಟು ಕ್ರೂರತನವನ್ನು ನಾನೆಂದೂ ನೋಡಿಲ್ಲ ಎಂದು ಕಿಡಿಕಾರಿದ್ದರು.

ಇದನ್ನೂ ಓದಿ:  ಕೇಂದ್ರ-ಮಮತಾ ಕಾದಾಟಕ್ಕೆ ನಾಟಕೀಯ ತಿರುವು, ಸೇವೆಗೆ ನಿವೃತ್ತಿ ಘೋಷಿಸಿದ ಮುಖ್ಯ ಕಾರ್ಯದರ್ಶಿ ಈಗ ಬಂಗಾಳ ಸರ್ಕಾರದ ಮುಖ್ಯ ಸಲಹೆಗಾರ!

ಜೂನ್ 1 ರಿಂದ ಎರಡು ತಿಂಗಳುಗಳ ಕಾಲ ಮೀನುಗಾರಿಕೆ ಸ್ಥಗಿತ; ಮೀನುಗಾರರ ನೆರವಿಗೆ ಧಾವಿಸುವಂತೆ ಸರ್ಕಾರಕ್ಕೆ ಮನವಿ

Follow us on

Related Stories

Most Read Stories

Click on your DTH Provider to Add TV9 Kannada