ಕೇಂದ್ರ-ಮಮತಾ ಕಾದಾಟಕ್ಕೆ ನಾಟಕೀಯ ತಿರುವು, ಸೇವೆಗೆ ನಿವೃತ್ತಿ ಘೋಷಿಸಿದ ಮುಖ್ಯ ಕಾರ್ಯದರ್ಶಿ ಈಗ ಬಂಗಾಳ ಸರ್ಕಾರದ ಮುಖ್ಯ ಸಲಹೆಗಾರ!

ಕೇಂದ್ರ-ಮಮತಾ ಕಾದಾಟಕ್ಕೆ ನಾಟಕೀಯ ತಿರುವು, ಸೇವೆಗೆ ನಿವೃತ್ತಿ ಘೋಷಿಸಿದ ಮುಖ್ಯ ಕಾರ್ಯದರ್ಶಿ ಈಗ ಬಂಗಾಳ ಸರ್ಕಾರದ ಮುಖ್ಯ ಸಲಹೆಗಾರ!
ಅಲಾಪನ್ ಬಂಡೋಪಾಧ್ಯಾಯ

ಕೇಂದ್ರದ ಆದೇಶದ ಪ್ರಕಾರ ಬಂಡೋಪಾಧ್ಯಾಯ ಅವರನ್ನು ದೆಹಲಿಗೆ ವರ್ಗ ಮಾಡುವುದಕ್ಕೆ ತಾನು ಅವಕಾಶ ನೀಡುವುದಿಲ್ಲವೆಂದು ಮಮತಾ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ತಮ್ಮ ಪತ್ರಕ್ಕೆ ಉತ್ತರಿಸಿರುವ ಕೇಂದ್ರವು ಬಂಡೋಪಾಧ್ಯಾಯ ದೆಹಲಿಗೆ ರಿಪೋರ್ಟ್​ ಮಾಡಿಕೊಳ್ಳಲೇಬೇಕೆಂದು ಹೇಳಿದೆ ಅಂತ ಮಮತಾ ತಿಳಿಸಿದ್ದಾರೆ.

Arun Belly

|

May 31, 2021 | 11:31 PM

ಕೊಲ್ಕತಾ: ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಆಲಾಪನ್ ಬಂಡೋಪಾಧ್ಯಾಯ ಕೇಂದ್ರ ಸರ್ಕಾರಕ್ಕೆ ರಿಪೋರ್ಟ್​ ಮಾಡಿಕೊಳ್ಳುವ ಬದಲು ಸೇವೆಯಿಂದ ನಿವೃತ್ತರಾಗಿದ್ದಾರೆ. ಬಂಡೋಪಾಧ್ಯಾಯ ಸೋಮವಾರ ಸರ್ಕಾರೀ ಸೇವೆಗೆ ನಿವೃತ್ತ ಘೋಷಿಸಿದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಡುವೆ ನಡೆಯುತ್ತಿರುವ ಕಾದಾಟ ನಾಟಕೀಯ ತಿರುವು ಪಡೆದುಕೊಂಡಿದೆ. ಮಮತಾ ಅವರು ಬಂಡೋಪಾಧ್ಯಾಯರನ್ನು ಮೂರು ವರ್ಷ ಅವಧಿಗೆ ಬಂಗಾಳ ಸರ್ಕಾರದ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಆದರೆ, ಈ ನೇಮಕಾತಿ ಅವರನ್ನು ಕೇಂದ್ರದ ಅಸಾಮಾಧಾನದಿಂದ ಉಳಿಸಲಾರದು. ಸರ್ಕಾರದ ಆದೇಶವನ್ನು ಧಿಕ್ಕರಿಸಿದ ಚಾರ್ಜ್​ಶೀಟ್​ ಅವರ ವಿರುದ್ಧ ದಾಖಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಹೆಚ್ ಕೆ ದ್ವಿವೇದಿಯವರನ್ನು ಬಂಗಾಳದ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಕೇಂದ್ರದ ಆದೇಶದ ಪ್ರಕಾರ ಬಂಡೋಪಾಧ್ಯಾಯ ಅವರನ್ನು ದೆಹಲಿಗೆ ವರ್ಗ ಮಾಡುವುದಕ್ಕೆ ತಾನು ಅವಕಾಶ ನೀಡುವುದಿಲ್ಲವೆಂದು ಮಮತಾ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ತಮ್ಮ ಪತ್ರಕ್ಕೆ ಉತ್ತರಿಸಿರುವ ಕೇಂದ್ರವು ಬಂಡೋಪಾಧ್ಯಾಯ ದೆಹಲಿಗೆ ರಿಪೋರ್ಟ್​ ಮಾಡಿಕೊಳ್ಳಲೇಬೇಕೆಂದು ಹೇಳಿದೆ ಅಂತ ಮಮತಾ ತಿಳಿಸಿದ್ದಾರೆ.

‘ಇದು ಪ್ರತೀಕಾರದ ಧೊರಣೆಯಲ್ಲದೆ ಮತ್ತೇನೂ ಅಲ್ಲ, ಇಷ್ಟು ಕ್ರೂರ ವರ್ತನೆಯನ್ನು ನಾನು ಯಾವತ್ತೂ ನೋಡಿಲ್ಲ. ಅವರಿಗೆ ನನ್ನ ಮೇಲೆ ಆಕ್ರಮಣ ಮಾಡಬೇಕಿತ್ತು, ಆದರೆ ಮುಖ್ಯ ಕಾರ್ಯದರ್ಶಿಯನ್ನು ಗುರಿಮಾಡಿದ್ದಾರೆ. ಗಾಯದ ಮೇಲೆ ಬರೆ ಎಳೆಯುವ ಕೆಲಸವಿದು. ಯಾವುದೇ ಮಾತುಕತೆಯಿಲ್ಲದೆ ನೀವು ಅದು ಹೇಗೆ ಇಂಥ ನಿರ್ಧಾರ ತೆಗೆದಕೊಳ್ಳುತ್ತೀರಿ? ಚುನಾವಣೆಯಲ್ಲಿ ಸೋತಿರುವುದಕ್ಕೆ ಇದನ್ನೆಲ್ಲ ಮಾಡುತ್ತಿದ್ದೀರಾ? ನಿಮಗೆ ಮಮತಾ ಬ್ಯಾನರ್ಜಿ ಇಷ್ಟವಿಲ್ಲ ಅಂತ ನನಗೆ ಗೊತ್ತು. ಕೇಂದ್ರಕ್ಕೆ ಬಂಡೋಪಾಧ್ಯಾಯ ನಿವೃತ್ತರಾಗಿರುವ ವಿಷಯ ಗೊತ್ತಿದ್ದಂತಿಲ್ಲ. ಅವರ ಕೇಂದ್ರ ಸರ್ಕಾರ ಸೇವೆಗೆ ಈಗ ಲಭ್ಯರಿಲ್ಲ. ಕೋವಿಡ್​ ಪಿಡುಗು ಒಡ್ಡಿರುವ ಸಂಕಷ್ಟದ ಸಮಯದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳಲು ನಾನು ನಿರ್ಧರಿಸಿದ್ದೇನೆ. ಕೋವಿಡ್ ಮತ್ತು ಯಾಸ್ ಚಂಡಮಾರುತದಿಂದ ತೊಂದರೆಗೊಳಗಾಗಿರುವವ ಬಡಜನರಿಗೆ, ರಾಜ್ಯಕ್ಕೆ, ದೇಶಕ್ಕೆ ಮತ್ತು ಸಂತ್ರಸ್ತರಿಗೆ ಅವರ ಸೇವೆಯ ಅವಶ್ಯಕತೆಯಿದೆ,’ ಎಂದು ಮಮತಾ ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಿಗಳನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಾರೆ ಎಂದು ಮಮತಾ ಆರೋಪಿದ್ದಾರೆ. ‘ತನ್ನ ಬದುಕಿನಿಡೀ ಸರ್ಕಾರಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುವ ಅಧಿಕಾರಿಗೆ ಅವಮಾನ ಮಾಡಿರುವ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಜನರಿಗೆ ಯಾವ ಸಂದೇಶವನ್ನು ನೀಡುತ್ತಿದ್ದಾರೆ? ಕೇಂದ್ರದಲ್ಲಿ ಬಂಗಾಳ ಕೇಡರ್​ನ ಅನೇಕ ಅಧಿಕಾರಿಗಳಿದ್ದಾರೆ. ಯಾವುದೇ ಮಾತುಕತೆಯಿಲ್ಲದ ನಾನು ಅವರನ್ನು ವಾಪಸ್ಸು ಕರೆಸಿಕೊಳ್ಳಬಹುದೆ? ಹೇಳಿ ಮಾನ್ಯ ಪ್ರಧಾನ ಮಂತ್ರಿಗಳೇ? ಬ್ಯೂಸಿಯಾಗಿರುವ ಮಾನ್ಯ ಪ್ರಧಾನ ಮಂತ್ರಿಗಳೇ? ಮಾನ್ಯ ಮನ್-ಕೀ-ಬಾತ್ ಪ್ರಧಾನ ಮಂತ್ರಿಗಳೇ?,’ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಸದಾ ಜಗಳ ಕಾಯುವ ಸ್ವಭಾವನ್ನು ಪ್ರದರ್ಶಿಸುವ ಮಮತಾ ಅವರು ಪ್ರಧಾನಿ ಮೋದಿಯವರಿಗೆ ‘ಅಡಾಲ್ಫ್ ಹಿಟ್ಲರ್ ಮತ್ತು ಸ್ಟ್ಯಾಲಿನ್’ ಪದಗಳನ್ನು ಬಳಸಿ ಹೀಗೆ ಹೇಳಿದ್ದಾರೆ: ಅಧಿಕಾರ ವರ್ಗವನ್ನು ಬೆದರಿಸುವ ಇರಾದೆ ನಿಮಗಿದೆ. ಆದರೆ, ನಾವು ಹೆದರುವುದಿಲ್ಲ. ನನಗೆ ನಿಮ್ಮ ಭಯವಿಲ್ಲ. ಹೆದರುವವರು ನೆಲಕ್ಕೆ ಬೀಳುತ್ತಾರೆ. ಆದರೆ ನಾವು ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ,’ ಎಂದು ಆಕೆ ಹೇಳಿದ್ದಾರೆ.

ಇತ್ತೀಚಿಗೆ ಮೂರು-ತಿಂಗಳ ಅವಧಿಗೆ ಸೇವಾ ವಿಸ್ತರಣೆ ಪಡೆದಿದ್ದ ಬಂಡೋಪಾಧ್ಯಾಯ ಅವರನ್ನು ಶುಕ್ರವಾರದಂದು ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಜೊತೆ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ಯಾಸ್​ನಿಂದಾದ ಹಾನಿ ಕುರಿತ ಪರಿಶೀಲನಾ ಸಭೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಗೈರಾದ ಕೆಲ ಗಂಟೆಗಳ ನಂತರ ಕೇಂದ್ರಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶಿಸಲಾಗಿತ್ತು.

ಪ್ರಧಾನಿಗಳ ಹೆಲಕ್ಯಾಪ್ಟರ್ ಕಲೈಕುಂಡಾ ವಾಯು ನೆಲೆಯಲ್ಲಿ ಇಳಿದ ನಂತರ ಮಮತಾ ಅವರು ಸಂಕ್ಷಿಪ್ತವಾಗಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಮತ್ತೊಂದು ಮೀಟಿಂಗ್ ಇದೆ ಅಂತ ಹೇಳಿ ಅಲ್ಲಿಂದ ನಿರ್ಗಮಿಸಿದರು.

ಅವರ ವರ್ತನೆಯನ್ನು ‘ಉದ್ಧಟತನ’ ಎಂದು ಬಣ್ಣಿಸಿದ ಕೇಂದ್ರ ಸರ್ಕಾರದ ಉನ್ನತ ಮೂಲಗಳು, ‘ಭಾರತೀಯ ಗಣತಂತ್ರದ ಇತಿಹಾಸದಲ್ಲಿಯೇ ಮುಖ್ಯಮಂತ್ರಿಯೊಬ್ಬರು ಪ್ರಧಾನ ಮಂತ್ರಿಗಳೊಂದಿಗೆ ಇಷ್ಟು ಕೆಟ್ಟದ್ದಾಗಿ, ಅಗೌರವ ಮತ್ತ ದುರಹಂಕಾರದಿಂದ ವರ್ತಿಸಿರಲಿಲ್ಲ,’ ಎಂದು ಹೇಳಿವೆ.

ಪ್ರಧಾನ ಮಂತ್ರಿಗಳಿಗೆ ತಾವು ಬರೆದಿರುವ 5-ಪುಟಗಳ ಪತ್ರದಲ್ಲಿ ಮಮತಾ ಅವರು, ‘ರಾಜ್ಯ ಎದುರಿಸುತ್ತಿರುವ ಇಂಥ ಸಂಕಷ್ಟದ ಗಳಿಗೆಯಲ್ಲಿ ಬಂಗಾಳ ಸರ್ಕಾರವು ತನ್ನ ಮುಖ್ಯ ಕಾರ್ಯದರ್ಶಿಯನ್ನು ಬಿಡುಗಡೆ ಮಾಡಲಾಗದು ಮತ್ತು ಮಾಡುತ್ತಿಲ್ಲ. ಇದಕ್ಕೆ ಮುನ್ನ ಅವರ ಸೇವೆ ವಿಸ್ತರಣಗೆ ಸಂಬಂಧಿಸಿದಂತೆ ಅನ್ವಯಿಸಬಹುದಾದ ಎಲ್ಲ ನಿಯಮಗಳ ಅಡಿಯಲ್ಲಿ ನಡೆದ ಕಾನೂನಾತ್ಮಕ ಸಮಾಲೋಚನೆ ಮಾನ್ಯವಾಗಿದೆ ಮತ್ತು ಜಾರಿಯಲ್ಲಿಯೂ ಇದೆ,’ ಎಂದಿದ್ದಾರೆ

ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಜಿದ್ದಾಜಿದ್ದಿನ ಹೋರಾಟ ನಡೆಸಿ ಭಾರೀ ಬಹುಮತದಿಂದ ಗೆದ್ದ ಮಮತಾ ಮತ್ತು ಬಿಜೆಪಿ ಆಡಳಿತವಿರುವ ಕೇಂದ್ರ ಸರ್ಕಾರದ ನಡುವೆ ಇಂದು ಹೊಸ ಸುತ್ತಿನ ಕಾದಾಟವಾಗಿದೆ.

ಇದು ಮುಗಿಯುವ ಲಕ್ಷಣಗಳಂತೂ ಇಲ್ಲ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಏಕಪಕ್ಷೀಯ ಆದೇಶ ನೋಡಿ ಆಘಾತವಾಗಿದೆ, ಮುಖ್ಯ ಕಾರ್ಯದರ್ಶಿಯನ್ನು ಬಿಟ್ಟುಕೊಡುವುದಿಲ್ಲ: ಪ್ರಧಾನಿ ಮೋದಿಗೆ ಪತ್ರ ಬರೆದ ಮಮತಾ

Follow us on

Related Stories

Most Read Stories

Click on your DTH Provider to Add TV9 Kannada