ಕೇಂದ್ರ ಸರ್ಕಾರದ ಏಕಪಕ್ಷೀಯ ಆದೇಶ ನೋಡಿ ಆಘಾತವಾಗಿದೆ, ಮುಖ್ಯ ಕಾರ್ಯದರ್ಶಿಯನ್ನು ಬಿಟ್ಟುಕೊಡುವುದಿಲ್ಲ: ಪ್ರಧಾನಿ ಮೋದಿಗೆ ಪತ್ರ ಬರೆದ ಮಮತಾ
Alapan Bandyopadhyay: ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯ್ ಅವರನ್ನು ಕೇಂದ್ರ ಸರ್ಕಾರವು, ಕೇಂದ್ರ ಸೇವೆಗೆ ಕರೆಸಿಕೊಂಡಿದ್ದು ಅವರನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ ಮಮತಾ ಬ್ಯಾನರ್ಜಿ.
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಕೇಂದ್ರದ “ಏಕಪಕ್ಷೀಯ ಆದೇಶ” ದಿಂದಾಗಿ ಆಘಾತ ಮತ್ತು ದಿಗ್ಭ್ರಮೆಗೊಳಗಾಗಿದ್ದೇನೆ ಎಂದಿದ್ದಾರೆ. ಅದೇ ವೇಳೆ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯ್ ಅವರನ್ನು ಕೇಂದ್ರ ಸರ್ಕಾರವು, ಕೇಂದ್ರ ಸೇವೆಗೆ ಕರೆಸಿಕೊಂಡಿದ್ದು ಅವರನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ ಮಮತಾ.
2021 ರ ಮೇ 28 ರಂದು ಭಾರತ ಸರ್ಕಾರವು ನಮಗೆ ಕಳುಹಿಸಿದ ಏಕಪಕ್ಷೀಯ ಆದೇಶದಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ಬೆರಗಾಗಿದ್ದೇನೆ . ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಐಎಎಸ್ ಆಲಾಪನ್ ಬಂದೋಪಾಧ್ಯಾಯ್ ಅವರನ್ನು ಬಿಟ್ಟುಕೊಡುವಂತೆ ಸರ್ಕಾರ ಹೇಳಿದ್ದು 2021 ರ ಮೇ 31 ರಂದು ಅವರು ಕೇಂದ್ರದ ಕೆಲಸಕ್ಕೆ ಹಾಜರಾಗಬೇಕಿದೆ . ಪಶ್ಚಿಮ ಬಂಗಾಳ ಸರ್ಕಾರದೊಂದಿಗೆ ಯಾವುದೇ ಪೂರ್ವ ಸಮಾಲೋಚನೆ ಇಲ್ಲದೆ ಏಕಪಕ್ಷೀಯ ‘ಆದೇಶ’ , ಅಧಿಕಾರಿಯ ಯಾವುದೇ ಇಚ್ಛೆ/ ಆಯ್ಕೆಯಿಲ್ಲದೆ, ಭಾರತೀಯ ಆಡಳಿತ ಸೇವೆ (ಕೇಡರ್) ನಿಯಮಗಳು, 1954, ಮತ್ತು ಇತರ ಅನ್ವಯವಾಗುವ ಯಾವುದೇ ಪೂರ್ವ ಷರತ್ತುಗಳನ್ನು ಪೂರೈಸದೆ ಬರುತ್ತದೆ. ಏಕಪಕ್ಷೀಯ ಆದೇಶ / ನಿರ್ದೇಶನವು ಕಾನೂನುಬದ್ಧವಾಗಿ ಸ್ವೀಕಾರಾರ್ಹವಲ್ಲ. ಇದು ಸಂಪೂರ್ಣವಾಗಿ ಅಸಂವಿಧಾನಿಕವಾಗಿದೆಎಂದು ಬ್ಯಾನರ್ಜಿ ಪತ್ರದಲ್ಲಿ ಬರೆದಿದ್ದಾರೆ.
“ಆದ್ದರಿಂದ ನಿಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳಲು, ವಾಪಸ್ ಪಡೆಯಲು, ಮರುಪರಿಶೀಲಿಸಲು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಇತ್ತೀಚಿನ ಆದೇಶವನ್ನು ರದ್ದುಗೊಳಿಸಲು ನಾನು ವಿನಮ್ರವಾಗಿ ವಿನಂತಿಸುತ್ತೇನೆ. ಅನ್ವಯವಾಗುವ ಕಾನೂನುಗಳಿಗೆ ಅನುಸಾರವಾಗಿ ಕಾನೂನುಬದ್ಧ ಸಮಾಲೋಚನೆಯ ನಂತರ ಹೊರಡಿಸಲಾದ ವಿಸ್ತರಣೆಯ ಹಿಂದಿನ ಆದೇಶವು ಕಾರ್ಯಕಾರಿ ಮತ್ತು ಮಾನ್ಯವಾಗಿ ಉಳಿದಿದೆ ಎಂಬ ನಮ್ಮ ತಿಳುವಳಿಕೆಯ ಆಧಾರದ ಮೇಲೆ ಪಶ್ಚಿಮ ಬಂಗಾಳ ಸರ್ಕಾರವು ಈ ನಿರ್ಣಾಯಕ ಗಳಿಗೆಯಲ್ಲಿ ಅದರ ಮುಖ್ಯ ಕಾರ್ಯದರ್ಶಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಇತ್ತೀಚಿನ ಆದೇಶವು ಅನ್ವಯವಾಗುವ ಕಾನೂನುಗಳ ಉಲ್ಲಂಘನೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ: ಇದು ಯಾವುದೇ ಸಂದರ್ಭದಲ್ಲಿ ಅನೂರ್ಜಿತವಾಗಿದೆ ಎಂದಿದ್ದಾರೆ ಮಮತಾ.
ಯಾಸ್ ಚಂಡಮಾರುತದಿಂದ ಹಾನಿಗೆ ಒಳಗಾಗಿದ್ದ ಪಶ್ಚಿಮ ಬಂಗಾಳದ ಜಿಲ್ಲೆಗಳ ವೈಮಾನಿಕ ಸಮೀಕ್ಷೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನಡೆಸಿದ್ದರು. ಆನಂತರ ಮೋದಿ ಅವರು ನಡೆಸಿದ ಪರಿಶೀಲನಾ ಸಭೆಗೆ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಗೈರು ಹಾಜರಾಗಿದ್ದರು.ಈ ಬೆಳವಣಿಗೆಯ ಕೆಲವೇ ಗಂಟೆಗಳಲ್ಲಿ ರಾಜ್ಯದ ಮುಖ್ಯಕಾರ್ಯದರ್ಶಿಯನ್ನು ಕೇಂದ್ರ ಸರ್ಕಾರವು ಕೇಂದ್ರ ಸೇವೆಗೆ ಕರೆಸಿಕೊಂಡಿರುವ ಬಗ್ಗೆ ಆದೇಶ ಹೊರಡಿಸಿತ್ತು. ಕೇಂದ್ರ ಸರ್ಕಾರದ ಆದೇಶದ ಅನ್ವಯ, ಮೇ 31ರ ಸೋಮವಾರ ಆಲಾಪನ್ ಅವರು ವರು ಕೇಂದ್ರ ಸೇವೆಗೆ ಹೋಗಬೇಕಿದೆ. ಸೋಮವಾರ ಅವರು ನಿವೃತ್ತಿಯೂ ಆಗಲಿದ್ದಾರೆ. ಇತ್ತ ಆಲಾಪನ್ ಅವರ ಅವರ ಅಧಿಕಾರಾವಧಿಯನ್ನು ಆಗಸ್ಟ್ 31 ರವರೆಗೆ ಮೂರು ತಿಂಗಳವರೆಗೆ ವಿಸ್ತರಿಸುವ ಪ್ರಸ್ತಾವನೆಯನ್ನು ಕೇಂದ್ರವು ಮೇ 24 ರಂದು ಅಂಗೀಕರಿಸಿತ್ತು.
ಕೇಂದ್ರವು “ಹಗೆತನದ ರಾಜಕೀಯ” ವನ್ನು ಅನುಸರಿಸುತ್ತಿದೆ ಎಂದು ಶನಿವಾರ ಮಮತಾ ಬ್ಯಾನರ್ಜಿ ಆರೋಪಿಸಿದರು.ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸರ್ಕಾರಕ್ಕೆ ಪ್ರತಿ ಹಂತದಲ್ಲೂ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಜತೆಗಿನ ಪರಿಶೀಲನಾ ಸಭೆಗೆ ಹಾಜರಾಗುವುದಿಲ್ಲ ಎಂದು ಅನುಮತಿ ಪಡೆದಿದ್ದೆ: ಮಮತಾ ಬ್ಯಾನರ್ಜಿ
(Wont be Relieving Chief Secretary Alapan Bandyopadhyay West Bengal CM Mamata Banerjee wrote to PM Narendra Modi)