ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದತಿ ಬಗ್ಗೆ ಎರಡು ದಿನದೊಳಗೆ ತೀರ್ಮಾನ: ಸುಪ್ರೀಂಗೆ ಸರ್ಕಾರದಿಂದ ಮಾಹಿತಿ
CBSE Board Exam 2021: ಪರೀಕ್ಷೆ ರದ್ದತಿ ಮಾಡುವ ಬಗ್ಗೆ ಇನ್ನು ಎರಡು ದಿನಗಳೊಳಗೆ ಮಾಹಿತಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ದೆಹಲಿ: ಕೊರೊನಾ ಎರಡನೇ ಅಲೆ ಭೀತಿಯ ನಡುವೆ ಸಿಬಿಎಸ್ಇ ಮತ್ತು ಐಸಿಎಸ್ಇ 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಬಗ್ಗೆ ಆಕ್ಷೇಪ ಕೇಳಿ ಬರುತ್ತಿದೆ. ಈ ಹಂತದಲ್ಲಿ ಪರೀಕ್ಷೆ ರದ್ದತಿ ಮಾಡುವ ಬಗ್ಗೆ ಇನ್ನು ಎರಡು ದಿನಗಳೊಳಗೆ ಮಾಹಿತಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಹೀಗಾಗಿ ಪರೀಕ್ಷೆ ರದ್ದುಪಡಿಸುವ ಬಗ್ಗೆ ಸ್ಪಷ್ಟ ನಿಲುವು ಗುರುವಾರದಂದು ಲಭ್ಯವಾಗುವ ಸಾಧ್ಯತೆ ಇದೆ. ಅಲ್ಲದೇ, ಸರ್ವೋಚ್ಛ ನ್ಯಾಯಾಲಯವು ಸರ್ಕಾರಕ್ಕೆ ಸಕಾರಣಗಳನ್ನಿಟ್ಟುಕೊಂಡು ತನ್ನ ನಿಲುವನ್ನು ತಿಳಿಸಲು ಸೂಚಿಸಿದೆ. ಕಳೆದ ಬಾರಿ ಪರೀಕ್ಷೆಯ ಕುರಿತು ವಿಸ್ತೃತವಾಗಿ ಚರ್ಚಿಸಿ ನಿಲುವು ತೆಗೆದುಕೊಂಡ ರೀತಿಯಲ್ಲೇ ಈ ಬಾರಿಯೂ ಎಲ್ಲಾ ಆಯಾಮಗಳಲ್ಲಿ ಯೋಚಿಸಿ ಅಂತಿಮ ನಿಲುವು ಏನೆಂದು ತಿಳಿಸಲು ಹೇಳಿದೆ.
ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ನಡೆಸದಂತೆ ಸಲ್ಲಿಸಲಾಗಿದ್ದ ಅರ್ಜಿಯ ಬಗ್ಗೆ ಮೇ 28ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಇಂದಿಗೆ (ಮೇ 31) ವಿಚಾರಣೆಯನ್ನು ಮುಂದೂಡಿತ್ತು. ಈಗಾಗಲೇ ಸಿಬಿಎಸ್ಇ ಪರೀಕ್ಷೆ ನಡೆಸಲು ತೀರ್ಮಾನಿಸಿರುವ ಶಿಕ್ಷಣ ಸಚಿವಾಲಯವು ನಾಳೆ (ಜೂನ್1) ವೇಳಾಪಟ್ಟಿ ಮತ್ತು ಪರೀಕ್ಷೆಯ ಸ್ವರೂಪವನ್ನು ಪ್ರಕಟಿಸುವುದಾಗಿ ಹೇಳಿದೆ ಆದರೆ ದೇಶದಲ್ಲಿ ಕೊವಿಡ್ ಸೋಂಕು ತೀವ್ರವಾದ ಹಿನ್ನೆಲೆ ಸಿಬಿಎಸ್ಇ ಪರೀಕ್ಷೆಗಳನ್ನು ರದ್ದು ಕೋರಿ ಅರ್ಜಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದ್ದು, ಸಿಬಿಎಸ್ಇ 12ನೇ ತರಗತಿಯ ಸುಮಾರು 300 ವಿದ್ಯಾರ್ಥಿಗಳು ಪರೀಕ್ಷೆ ನಡೆಸದಂತೆ ಸುಪ್ರೀಕೋರ್ಟ್ ಮೊರೆ ಹೋಗಿದ್ದಾರೆ.
ಕೊವಿಡ್ ಪಿಡುಗಿನ ನಡುವೆ ಸಿಬಿಎಸ್ಇ 12 ತರಗತಿ ಪರೀಕ್ಷೆ ನಡೆಸುವ ಕುರಿತು ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಒಮ್ಮತದ ನಿರ್ಧಾರ ಹೊರಹೊಮ್ಮಿರಲಿಲ್ಲ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಜೂನ್ 1ರಂದು ಪರೀಕ್ಷೆ ನಡೆಸುವ ಪದ್ಧತಿಯ ಬಗ್ಗೆ ಸುದ್ದಿಗೋಷ್ಠಿ ನಡೆಸಿ ವಿವರಿಸಲಿದ್ದಾರೆ ಎಂದು ಹೇಳಲಾಗಿದೆ. ಸಭೆಯಲ್ಲಿ ಚರ್ಚೆಯಾದ ಅಭಿಪ್ರಾಯಗಳ ಸಾರಾಂಶವನ್ನು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ತಲುಪಿಸಲಾಗಿದ್ದು, ಪ್ರಧಾನ ಮಂತ್ರಿಗಳ ಕಚೇರಿಯಿಂದ ಅಂತಿಮ ನಿರ್ಣಯ ಹೊರಬೀಳಲಿದೆ ಎಂದು ಸಹ ಹೇಳಲಾಗಿದೆ.
ಸಚಿವ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್ ಮತ್ತು ಎಲ್ಲಾ ರಾಜ್ಯ ಸರ್ಕಾರಗಳ ಶಿಕ್ಷಣ ಸಚಿವರು ಭಾಗವಹಿಸಿದ್ದ ಸಭೆಯಲ್ಲಿ ಆಫ್ಲೈನ್ ಪರೀಕ್ಷೆಗಳನ್ನು ನಡೆಸುವ ಕುರಿತು ಎರಡು ಅಭಿಪ್ರಾಯಗಳು ವ್ಯಕ್ತವಾಗಿತ್ತು. ಕೊವಿಡ್ ಒಂದು ಹಂತಕ್ಕೆ ಹತೋಟಿಗೆ ಬಂದ ನಂತರ ಜುಲೈನಲ್ಲಿ ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ನಡೆಸುವ ಸಾಧ್ಯತೆಯ ಕುರಿತು ಹೆಚ್ಚಿನವರು ಒಲವು ತೋರಿದ್ದರು. ಅಲ್ಲದೇ, ಪರೀಕ್ಷೆಗಳನ್ನು ನಡೆಸಲು 3 ತಿಂಗಳ ಕಾಲಾವಧಿ ಬಳಸಿಕೊಳ್ಳಬೇಕು. ಮೊದಲ ತಿಂಗಳಲ್ಲಿ ಪರೀಕ್ಷಾ ಪೂರ್ವ ಸಿದ್ಧತೆಗೆ, ಇನ್ನುಳಿದ ಎರಡು ತಿಂಗಳನ್ನು ಪರೀಕ್ಷೆ ನಡೆಸಲು ಮತ್ತು ಫಲಿತಾಂಶ ಘೋಷಣೆಗೆ ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಅಲ್ಲದೇ, ಕಿರು ಅವಧಿಯ ಪರೀಕ್ಷೆ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿತ್ತು. ಪ್ರಮುಖ 19 ವಿಷಯಗಳಿಗೆ 90 ನಿಮಿಷಗಳ ಕಿರು ಅವಧಿಯ ಪರೀಕ್ಷೆ ನಡೆಸಿ, ಮಿಕ್ಕ ವಿಷಯಗಳಿಗೆ ವಿದ್ಯಾರ್ಥಿಗಳ ಈವರೆಗಿನ ಅಧ್ಯಯನದ ಆಧಾರದ ಮೇಲೆ ಅಂಕಗಳನ್ನು ನೀಡುವ ಕುರಿತೂ ಚರ್ಚಿಸಲಾಗಿತ್ತು.
Published On - 11:49 am, Mon, 31 May 21