ಸಿಬಿಎಸ್ಇ 12ನೇ ತರಗತಿಗೆ ಆಫ್ಲೈನ್ ಪರೀಕ್ಷೆ ಪ್ರಶ್ನಿಸಿ ಭಾರತದ ಮುಖ್ಯ ನ್ಯಾಯಮೂರ್ತಿಯವರಿಗೆ 300ಕ್ಕೂ ಹೆಚ್ಚು ಮಕ್ಕಳಿಂದ ಅರ್ಜಿ
CBSE 12th Board Exams 2021: ದೇಶದೆಲ್ಲೆಡೆ ಕೊರೊನಾ ವ್ಯಾಪಿಸಿರುವ ಸಂದರ್ಭದಲ್ಲಿ ಆಫ್ಲೈನ್ ಪರೀಕ್ಷೆ ನಡೆಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿರುವ ವಿದ್ಯಾರ್ಥಿಗಳು ಶಿಕ್ಷಣ ಮಂಡಳಿಯ ನಿರ್ಧಾರವನ್ನು ರದ್ದುಗೊಳಿಸಬೇಕೆಂದು ಕೋರಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಮೊರೆ ಹೋಗಿದ್ದಾರೆ.
ದೆಹಲಿ: ಕೊರೊನಾತಂಕದ ನಡುವೆಯೇ 12ನೇ ತರಗತಿಯ ಮಕ್ಕಳಿಗೆ ಆಫ್ಲೈನ್ ಪರೀಕ್ಷೆ ನಡೆಸಲು ನಿರ್ಧರಿಸಿರುವ ಸಿಬಿಎಸ್ಇ ಬೋರ್ಡ್ ನಿರ್ಣಯವನ್ನು ಪ್ರಶ್ನಿಸಿ ಸುಮಾರು 300 ವಿದ್ಯಾರ್ಥಿಗಳು ಭಾರತದ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದಿದ್ದಾರೆ. ದೇಶದೆಲ್ಲೆಡೆ ಕೊರೊನಾ ವ್ಯಾಪಿಸಿರುವ ಸಂದರ್ಭದಲ್ಲಿ ಆಫ್ಲೈನ್ ಪರೀಕ್ಷೆ ನಡೆಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿರುವ ವಿದ್ಯಾರ್ಥಿಗಳು ಶಿಕ್ಷಣ ಮಂಡಳಿಯ ನಿರ್ಧಾರವನ್ನು ರದ್ದುಗೊಳಿಸಬೇಕೆಂದು ಕೋರಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಮೊರೆ ಹೋಗಿದ್ದಾರೆ.
ಅರ್ಜಿಯಲ್ಲಿ ಆಫ್ಲೈನ್ ಪರೀಕ್ಷೆಗೆ ಪರ್ಯಾಯ ವ್ಯವಸ್ಥೆ ಸಿದ್ಧಪಡಿಸಬೇಕೆಂದಿರುವ ವಿದ್ಯಾರ್ಥಿಗಳು, ಕೇಂದ್ರ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಪರೀಕ್ಷೆಗಳನ್ನು ಆಯೋಜಿಸುವ ಬಗ್ಗೆ ನಡೆದ ಸಭೆಯ ಬೆನ್ನಲ್ಲೇ ವಿದ್ಯಾರ್ಥಿಗಳು ಮುಖ್ಯ ನ್ಯಾಯಮೂರ್ತಿಯವರಿಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಸ್ತುತ ಸಿಬಿಎಸ್ಇ 12ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸಲು ಯೋಚಿಸುತ್ತಿರುವ ಕೇಂದ್ರ ಸರ್ಕಾರ ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ. ಕೊರೊನಾ ಹತೋಟಿಗೆ ಬರುವ ಸೂಚನೆ ಸಿಗುತ್ತಿದ್ದಂತೆಯೇ ಪರೀಕ್ಷೆ ನಡೆಸುವ ಸಾಧ್ಯತೆ ಇದ್ದು, ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮೇ 30ರಂದು ಸಭೆ ನಡೆಸಲಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ.
ಕಳೆದ ಏಪ್ರಿಲ್ ತಿಂಗಳ 14ನೇ ತಾರೀಖಿನಂದು ಸಿಬಿಎಸ್ಇ 12ನೇ ತರಗತಿ ಮಕ್ಕಳ ಪರೀಕ್ಷೆಯನ್ನು (CBSE 12th Board Exams 2021) ಕೊರೊನಾ ಕಾರಣದಿಂದ ಮುಂದೂಡುತ್ತಿರುವುದಾಗಿ ಪ್ರಕಟಣೆ ಹೊರಡಿಸಿದ್ದ ಶಿಕ್ಷಣ ಮಂಡಳಿ, ಜೂನ್ 1ರ ಆಸುಪಾಸಿನಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಯೋಚಿಸುವುದಾಗಿ ಹೇಳಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಕಷ್ಟವಾಗಿರುವುದರಿಂದ ಮುಂದಿನ ಹಂತದಲ್ಲಿ ಯಾವ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.
(CBSE class xii 2021 exams around 300 students writes to CJI against offline examination)
CBSE Class 12 Exam 2021: ಸಿಬಿಎಸ್ಇ ಹತ್ತರಂತೆ, ಕ್ಲಾಸ್ 12 ಪರೀಕ್ಷೆ ಸಹ ಕ್ಯಾನ್ಸಲ್? ಹಾಗಾದ್ರೆ ಮುಂದೇನು?