ಭಾರತೀಯ ರೂಪಾಂತರಿ ಎನ್ನುವುದು ಅಸಮಂಜಸ; ಹೊಸ ಮಾದರಿಗೆ ಡೆಲ್ಟಾ ರೂಪಾಂತರಿ ಎಂದು ನಾಮಕರಣ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ
ಯಾವುದೇ ದೇಶ ಅಥವಾ ರಾಜ್ಯದಲ್ಲಿ ಹೊಸ ಮಾದರಿಯ ವೈರಾಣು ಪತ್ತೆಯಾದ ಮಾತ್ರಕ್ಕೆ ಅದರೊಂದಿಗೆ ದೇಶದ ಹೆಸರು ತಳುಕು ಹಾಕಿ ಕರೆಯುವುದು ಅಸಮಂಜಸ. ಅಲ್ಲದೇ, ದೇಶದ ಹೆಸರಿನೊಂದಿಗೆ ಗುರುತಿಸುವ ಬದಲು ಅದಕ್ಕೆ ನಿರ್ದಿಷ್ಟ ಹೆಸರನ್ನೇ ನೀಡುವುದಾದರೆ ಯಾವುದೇ ರಾಷ್ಟ್ರ ತಮ್ಮಲ್ಲಿ ಪತ್ತೆಯಾದ ವೈರಾಣುವಿನ ಬಗ್ಗೆ ಬಹಿರಂಗವಾಗಿ ಮಾಹಿತಿ ನೀಡಲು ಹಿಂದೇಟು ಹಾಕಲಾರದು.
ದೆಹಲಿ: ಭಾರತದಲ್ಲಿ ಎರಡನೇ ಅಲೆಗೆ ಕಾರಣವಾದ ರೂಪಾಂತರಿ ಕೊರೊನಾ ವೈರಾಣುವಿನ B.1.617.2 ಎಂಬ ವೈಜ್ಞಾನಿಕ ಹೆಸರುಳ್ಳ ಮಾದರಿ ಭಾರತೀಯ ರೂಪಾಂತರಿ ಎಂದೇ ಪ್ರಚಲಿತದಲ್ಲಿದೆ. ಅಲ್ಲದೇ, ವಿರೋಧ ಪಕ್ಷಗಳು ಈ ಮಾದರಿಗೆ ಮೋದಿ ಹೆಸರನ್ನೂ ಅಂಟಿಸಿರುವ ಕಾರಣ ಕೊರೊನಾಕ್ಕೆ ರಾಜಕಾರಣದ ಲೇಪನವೂ ಆಗಿದೆ. ಆದರೆ, ಇದೀಗ ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ಪತ್ತೆಯಾದ ರೂಪಾಂತರಿಗೆ ಅಧಿಕೃತವಾಗಿ ನಾಮಕರಣ ಮಾಡಿದ್ದು ಅದನ್ನು ಡೆಲ್ಟಾ ವೇರಿಯಂಟ್ (ಡೆಲ್ಟಾ ರೂಪಾಂತರಿ) ಎಂದು ಕರೆದಿದೆ.
ಒಂದೂವರೆ ವರ್ಷದ ಅವಧಿಯಲ್ಲಿ ಜಗತ್ತಿನ ವಿವಿಧೆಡೆ SARS-CoV-2 ಕೊರೊನಾ ವೈರಾಣು ರೂಪಾಂತರಗೊಂಡಿದ್ದು ಅವುಗಳ ಬಗೆಗಿನ ಗೊಂದಲ ಬಗೆಹರಿಸಲು ಹಾಗೂ ಸುಲಭವಾಗಿ ಉಚ್ಛರಿಸಲು ಅನುವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆ ರೂಪಾಂತರಿಗಳಿಗೆ ತಾನೇ ನಾಮಕರಣ ಮಾಡಿದೆ. ಗ್ರೀಕ್ ಆಲ್ಫಾಬೆಟ್ಗಳ ಮೂಲಕ ಈ ರೂಪಾಂತರಿಗಳನ್ನು ಗುರುತಿಸಲಾಗಿದ್ದು ಭಾರತದಲ್ಲಿ ಸದ್ಯ ತಲ್ಲಣ ಸೃಷ್ಟಿಸಿರುವ ಮಾದರಿಗೆ ಡೆಲ್ಟಾ ಎಂದು ಕರೆದಿದೆ. ಅಲ್ಲದೇ, 2020ರಲ್ಲಿ ಭಾರತದಲ್ಲಿ ಪತ್ತೆಯಾಗಿದ್ದ B.1.617.1 ಮಾದರಿಗೆ ಕಪ್ಪ ಎಂದು ಹೆಸರಿಸಲಾಗಿದೆ.
ಆದರೆ, ಈ ಹೊಸ ಹೆಸರುಗಳು ವೈಜ್ಞಾನಿಕ ಹೆಸರಿಗೆ ಪರ್ಯಾಯವಲ್ಲ ಬದಲಾಗಿ ಜನರಿಗೆ ಸುಲಭವಾಗಿ ಉಲ್ಲೇಖಿಸಲು ಅನುಕೂಲವಾಗುವಂತೆ ಹೆಸರು ನೀಡಲಾಗಿದೆ. ಯಾವುದೇ ದೇಶ ಅಥವಾ ರಾಜ್ಯದಲ್ಲಿ ಹೊಸ ಮಾದರಿಯ ವೈರಾಣು ಪತ್ತೆಯಾದ ಮಾತ್ರಕ್ಕೆ ಅದರೊಂದಿಗೆ ದೇಶದ ಹೆಸರು ತಳುಕು ಹಾಕಿ ಕರೆಯುವುದು ಅಸಮಂಜಸ. ಅಲ್ಲದೇ, ದೇಶದ ಹೆಸರಿನೊಂದಿಗೆ ಗುರುತಿಸುವ ಬದಲು ಅದಕ್ಕೆ ನಿರ್ದಿಷ್ಟ ಹೆಸರನ್ನೇ ನೀಡುವುದಾದರೆ ಯಾವುದೇ ರಾಷ್ಟ್ರ ತಮ್ಮಲ್ಲಿ ಪತ್ತೆಯಾದ ವೈರಾಣುವಿನ ಬಗ್ಗೆ ಬಹಿರಂಗವಾಗಿ ಮಾಹಿತಿ ನೀಡಲು ಹಿಂದೇಟು ಹಾಕಲಾರದು ಎನ್ನುವುದು ನಮ್ಮ ಅನಿಸಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೊರೊನಾ ವೈರಾಣು ಬಗೆಗಿನ ಬೆಳವಣಿಗೆಗಳನ್ನು ನೋಡಿಕೊಳ್ಳುವ ಮುಖ್ಯ ಅಧಿಕಾರಿ ಮೇರಿಯಾ ವಾನ್ ಕೇರ್ಖೊವೆ ಹೇಳಿದ್ದಾರೆ.
Today, @WHO announces new, easy-to-say labels for #SARSCoV2 Variants of Concern (VOCs) & Interest (VOIs)
They will not replace existing scientific names, but are aimed to help in public discussion of VOI/VOC
Read more here (will be live soon): https://t.co/VNvjJn8Xcv#COVID19 pic.twitter.com/L9YOfxmKW7
— Maria Van Kerkhove (@mvankerkhove) May 31, 2021
ಈ ಮೂಲಕ ಬ್ರಿಟನ್ನಲ್ಲಿ ಪತ್ತೆಯಾಗಿದ್ದ B.1.1.7 ಮಾದರಿಯನ್ನು ಆಲ್ಫಾ ಎಂದೂ, ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದ B.1.351 ಮಾದರಿಯನ್ನು ಬೀಟಾ ಎಂದೂ, ಬ್ರೆಜಿಲ್ನಲ್ಲಿ ಕಂಡುಬಂದ P.1 ಮಾದರಿಯನ್ನು ಗಾಮಾ ಎಂದೂ, ಭಾರತದಲ್ಲಿ ಕಂಡುಬಂದ B.1.617.2 ಮಾದರಿಯನ್ನು ಡೆಲ್ಟಾ ಎಂದೂ ಹಾಗೂ ಭಾರತದಲ್ಲಿ ಮೊದಲು ಪತ್ತೆಯಾಗಿದ್ದ B.1.617.1 ಮಾದರಿಯನ್ನು ಕಪ್ಪ ಎಂದೂ ಕರೆಯಲು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ರೂಪಾಂತರಿ ವೈರಾಣುಗಳಿಗೆ ಸಾಮಾನ್ಯ ಹೆಸರಿಡುವ ಮೂಲಕ ಗುರುತಿಸುವಿಕೆ ಸುಲಭವಾಗಿಸಬೇಕೆಂದು ಹಲವು ತಿಂಗಳುಗಳಿಂದ ಯೋಚಿಸಲಾಗುತ್ತಿತ್ತು. ಇದೀಗ ಅದನ್ನು ಕಾರ್ಯಗತಗೊಳಿಸಲಾಗಿದೆ. ಗ್ರೀಕ್ನ 24 ಅಕ್ಷರಗಳನ್ನೂ ಒಂದೊಂದು ಮಾದರಿಗೆ ಹೆಸರಿಸಿದ ನಂತರ ಮತ್ತೆ ಹೊಸ ಸರಣಿಯೊಂದಿಗೆ ನಾಮಕರಣ ಆರಂಭಿಸಲಾಗುವುದು ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.
ಕೆಲ ದಿನಗಳ ಹಿಂದಷ್ಟೇ ಭಾರತ ಸರ್ಕಾರ ಸಾಮಾಜಿಕ ಜಾಲತಾಣಗಳು ಹಾಗೂ ಬೇರೆ ಬೇರೆ ವೇದಿಕೆಗಳಲ್ಲಿ ಭಾರತೀಯ ಮಾದರಿ ಎಂದು ಕರೆದಿರುವುದನ್ನು ಹಿಂಪಡೆಯುವಂತೆ ಸಲಹೆ ನೀಡಿತ್ತು. ಸಿಂಗಾಪುರ ಕೂಡಾ ತನ್ನ ದೇಶದ ಹೆಸರಿನೊಂದಿಗೆ ರೂಪಾಂತರಿಯನ್ನು ಗುರುತಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ವಿಶ್ವ ಆರೋಗ್ಯ ಸಂಸ್ಥೆಯೇ ದೇಶಗಳ ಹೆಸರಿನೊಂದಿಗೆ ರೂಪಾಂತರಿಯನ್ನು ಗುರುತಿಸುವುದಕ್ಕೆ ತಡೆ ನೀಡಿದ್ದು ಹೊಸ ಹೆಸರುಗಳನ್ನು ಸೂಚಿಸಿದೆ.
ಇದನ್ನೂ ಓದಿ: ಭಾರತ ಮತ್ತು ಬ್ರಿಟನ್ ದೇಶಗಳ ರೂಪಾಂತರಿ ಕೊರೊನಾ ವೈರಾಣು ಸಮ್ಮಿಶ್ರಣದಿಂದ ಸಂಕಷ್ಟಕ್ಕೆ ಸಿಲುಕಿದ ವಿಯೆಟ್ನಾಂ
ಕೊವಿಡ್ ರೂಪಾಂತರಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ Indian ಪದ ಬಳಸಿಲ್ಲ