ಜೂನ್ 1 ರಿಂದ ಎರಡು ತಿಂಗಳುಗಳ ಕಾಲ ಮೀನುಗಾರಿಕೆ ಸ್ಥಗಿತ; ಮೀನುಗಾರರ ನೆರವಿಗೆ ಧಾವಿಸುವಂತೆ ಸರ್ಕಾರಕ್ಕೆ ಮನವಿ

ಜೂನ್ 1 ರಿಂದ ಎರಡು ತಿಂಗಳುಗಳ ಕಾಲ ಮೀನುಗಾರಿಕೆ ಸ್ಥಗಿತ; ಮೀನುಗಾರರ ನೆರವಿಗೆ ಧಾವಿಸುವಂತೆ ಸರ್ಕಾರಕ್ಕೆ  ಮನವಿ
ಮತ್ಸ್ಯ ಬೇಟೆಯಲ್ಲಿ ಗಣನೀಯ ಇಳಿಕೆ

ಈ ಬಾರಿ ಕೊರೊನಾ ಎರಡನೇ ಅಲೆ ಲಾಕ್‌ಡೌನ್ ಜಾರಿ ಹಾಗೂ ತೌಕ್ತೆ ಚಂಡಮಾರುತ ಎದುರಾದ ಹಿನ್ನಲೆ ಮೇ ತಿಂಗಳ ಪ್ರಾರಂಭದಲ್ಲೇ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಬಹುತೇಕ ಪರ್ಸಿನ್ ಬೋಟುಗಳು ಸಮುದ್ರಕ್ಕೆ ಇಳಿಯದೇ ದಡದಲ್ಲೇ ಲಂಗರು ಹಾಕಿ ನಿಂತಿವೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಾದ ನಾಗರಾಜ್ ತಿಳಿಸಿದ್ದಾರೆ.

preethi shettigar

|

Jun 01, 2021 | 11:37 AM

ಉತ್ತರ ಕನ್ನಡ : ಸರ್ಕಾರದ ಆದೇಶದಂತೆ ಪ್ರತಿವರ್ಷ ಜೂನ್ 1 ರಿಂದ ಎರಡು ತಿಂಗಳುಗಳ ಕಾಲ ಮೀನುಗಾರಿಕೆಯನ್ನ ಸ್ಥಗಿತಗೊಳಿಸಲಾಗುತ್ತದೆ. ಆದರೆ ದುರದೃಷ್ಟ ಎನ್ನುವಂತೆ ಕೊರೊನಾ ಅಟ್ಟಹಾಸದಿಂದಾಗಿ ಕಳೆದ ವರ್ಷದಿಂದಲೂ ಉತ್ತಮ ಮೀನುಗಾರಿಕೆ ಮಾಡಲಾಗದೇ ಮೀನುಗಾರರು ಪರದಾಡುವಂತಾಗಿದೆ. ಈ ಬಾರಿ ಸಹ ಚಂಡಮಾರುತ ಹಾಗೂ ಲಾಕ್‌ಡೌನ್‌‌ನಿಂದಾಗಿ ಅವಧಿಗೆ ಮುನ್ನವೇ ಮೀನುಗಾರಿಕೆ ಸ್ಥಗಿತಗೊಂಡಿದ್ದು, ನಷ್ಟದಲ್ಲಿರುವ ಮೀನುಗಾರರಿಗೆ ಸರ್ಕಾರ ನೆರವು ನೀಡಬೇಕು ಎಂದು ಸದ್ಯ ಮೀನುಗಾರರು ಮನವಿ ಮಾಡಿಕೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಮೀನುಗಾರರಿಗೆ ಮೀನುಗಾರಿಕೆ ನಡೆಸುವುದೇ ಸಾಧ್ಯವಾಗದಂತಾಗಿದೆ. ಕಳೆದ ವರ್ಷ ವಕ್ಕರಿಸಿದ ಕೊರೊನಾದಿಂದಾಗಿ ಮೀನುಗಾರಿಕೆ ನಡೆಸಲು ಕಾರ್ಮಿಕರಿಲ್ಲದೇ ಪರದಾಡುವಂತಾಗಿತ್ತು. ಬಳಿಕ ಸ್ಥಳೀಯ ಕಾರ್ಮಿಕರನ್ನೇ ಬಳಸಿಕೊಂಡು ಮೀನುಗಾರಿಕೆಗೆ ತೆರಳಿದರೂ ಮತ್ಸ್ಯಕ್ಷಾಮ ಎದುರಾಗಿದ್ದರಿಂದ ಮೀನುಗಾರಿಕೆ ಕುಂಟುತ್ತಾ ಸಾಗಿತ್ತು. ಈ ಬಾರಿ ಸಹ ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿದ್ದ ಅವಧಿಯಲ್ಲೇ ಮತ್ತೆ ಕೊರೊನಾ ಹೆಚ್ಚಾಗಿ ಲಾಕ್‌ಡೌನ್ ಜಾರಿಯಾಗಿದ್ದು, ಅವಧಿಗೆ ಮುನ್ನವೇ ಮೀನುಗಾರಿಕೆ ಸ್ಥಗಿತಗೊಂಡಿದೆ.

ಸರ್ಕಾರದ ಆದೇಶದಂತೆ ಪ್ರತಿ ವರ್ಷ ಜೂನ್, ಜುಲೈ ತಿಂಗಳ ಮಳೆಗಾಲ ಪ್ರಾರಂಭದ ಅವಧಿಯಲ್ಲಿ ಮೀನುಗಾರಿಕೆಯನ್ನ ಸ್ಥಗಿತಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ಸಮುದ್ರದಲ್ಲಿ ಮೀನುಗಳು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗುವುದರಿಂದ 61 ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯುವುದಿಲ್ಲ. ಆದರೆ ಈ ಬಾರಿ ಕೊರೊನಾ ಎರಡನೇ ಅಲೆ ಲಾಕ್‌ಡೌನ್ ಜಾರಿ ಹಾಗೂ ತೌಕ್ತೆ ಚಂಡಮಾರುತ ಎದುರಾದ ಹಿನ್ನಲೆ ಮೇ ತಿಂಗಳ ಪ್ರಾರಂಭದಲ್ಲೇ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಬಹುತೇಕ ಪರ್ಸಿನ್ ಬೋಟುಗಳು ಸಮುದ್ರಕ್ಕೆ ಇಳಿಯದೇ ದಡದಲ್ಲೇ ಲಂಗರು ಹಾಕಿ ನಿಂತಿವೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಾದ ನಾಗರಾಜ್ ತಿಳಿಸಿದ್ದಾರೆ.

ಮೀನುಗಾರಿಕೆ ನಿಷೇಧದ ಎರಡು ತಿಂಗಳ ಅವಧಿಯಲ್ಲಿ ಮೀನುಗಾರರು ಬೋಟು, ಬಲೆಗಳ‌ ರಿಪೇರಿಯಲ್ಲಿ ತೊಡಗಿಕೊಳ್ಳುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣವನ್ನ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಳ್ಳುವ ಮೀನುಗಾರರಿಗೆ ಉತ್ತಮ ಮೀನುಗಾರಿಕೆ ನಡೆದಲ್ಲಿ ಮಾತ್ರ ಅದನ್ನು ತೀರಿಸುವುದು ಸಾಧ್ಯವಾಗಲಿದೆ. ಆದರೆ ಕಳೆದ ವರ್ಷದಿಂದ ಕೊರೊನಾ, ಮತ್ಸ್ಯಕ್ಷಾಮ ಹಾಗೂ ಚಂಡಮಾರುತದಂತಹ ವ್ಯತಿರಿಕ್ತ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಸಮರ್ಪಕವಾಗಿ ಮೀನುಗಾರಿಕೆ ನಡೆದಿಲ್ಲ. ಇದರಿಂದ ಮೀನುಗಾರರು ನಷ್ಟದಲ್ಲಿದ್ದು, ಸರ್ಕಾರದಿಂದಲೂ ಸೂಕ್ತ ನೆರವು ಸಿಗದೇ ಪರದಾಡುವಂತಾಗಿದೆ. ಮುಖ್ಯಮಂತ್ರಿಗಳು ಮೀನುಗಾರ ಸಮುದಾಯದವರ ಸಂಕಷ್ಟವನ್ನು ಪರಿಹರಿಸಬೇಕು ಎಂದು ಮೀನುಗಾರರಾದ ವಿನಾಯಕ ಹರಿಕಂತ್ರ ಮನವಿ ಮಾಡಿದ್ದಾರೆ.

ಒಟ್ಟಾರೆ ಒಂದಿಲ್ಲೊಂದು ಅಡೆತಡೆಗಳಿಂದಾಗಿ ಮೀನುಗಾರಿಕೆ ನಡೆಯದೇ ಮೀನುಗಾರರ ಸಮುದಾಯ ಸಂಕಷ್ಟದಲ್ಲಿದ್ದು ಸರ್ಕಾರ ಈ ಬಾರಿಯಾದರೂ ಸೂಕ್ತ ನೆರವು ನೀಡಬೇಕಿದೆ. ಕೃಷಿಯಂತೆ ಮೀನುಗಾರಿಕೆಯನ್ನೇ ಅವಲಂಬಿಸಿ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಸರ್ಕಾರ ನೆರವಿಗೆ ಬಾರದಿದ್ದಲ್ಲಿ ಮೀನುಗಾರಿಕೆ ಸ್ಥಗಿತಗೊಂಡರೂ ಅಚ್ಚರಿಯಿಲ್ಲ.

ಇದನ್ನೂ ಓದಿ:

ಗಡಿ ಮೀರಿ ಮೀನುಗಾರಿಕೆ: ತಪಾಸಣೆಗೆ ಬಂದ ಪೊಲೀಸರನ್ನೇ ಬಂಧಿಸಿ ಬಂದರಿಗೆ ಕರೆತಂದ ಮೀನುಗಾರರು, ಯಾವೂರಲ್ಲಿ?

ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ ಮೀನುಗಾರರು; ಮೀನು ವ್ಯಾಪರಕ್ಕೆ ಅವಕಾಶ ನೀಡುವಂತೆ ಒತ್ತಾಯ

Follow us on

Most Read Stories

Click on your DTH Provider to Add TV9 Kannada