ಜಮ್ಮು-ಕಾಶ್ಮೀರದಲ್ಲಿ ಈಗಿರುವ ಉಗ್ರರನ್ನು ಹೊಡೆದುರುಳಿಸಲು, ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಹಾಕಲು ಭಾರತೀಯ ಸೇನಾ ಪಡೆಗಳು ನಿರಂತರವಾಗಿ ಶ್ರಮಿಸುತ್ತಿವೆ. ಕಳೆದ ಒಂದು ವಾರದಿಂದಲಂತೂ ಉಗ್ರರ ವಿರುದ್ಧ ದೊಡ್ಡಮಟ್ಟದ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಈಗಿರುವ ಹಲವು ಉಗ್ರಸಂಘಟನೆಗಳೊಂದಿಗೆ ಮತ್ತೆ ಹೊಸಹೊಸ ಭಯೋತ್ಪಾದಕ ಸಂಘಟನೆಗಳು ಹುಟ್ಟಿಕೊಳ್ಳುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಂಘಟನೆಗಳು ಬರೀ ಹೊಸಹೊಸ ಹೆಸರಿಟ್ಟುಕೊಂಡು ರಚಿತಗೊಳ್ಳುತ್ತಿಲ್ಲ..ಅದರ ಬದಲಾಗಿ ವಿಧವಿಧದ ನೂತನ ಯೋಜನೆಗಳೊಂದಿಗೆ ಉಪಟಳ ನೀಡಲು ಪ್ರಾರಂಭಿಸಿವೆ.
ಇದೀಗ ಹರ್ಕತ್ 313 (Harkat 313) ಎಂಬ ಹೊಸ ಭಯೋತ್ಪಾದಕ ಸಂಘಟನೆಯೊಂದು ಕಾಶ್ಮಿರದಲ್ಲಿ ಹಾನಿ ಮಾಡಲು ಮುಂದಾಗಿದೆ. ಸರ್ಕಾರ ನೀಡಿರುವ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಹೊಸ ಯೋಜನೆಯನ್ನು ಹಾಕಿಕೊಂಡಿದೆ . ಅದರಲ್ಲಿ ಉರಿ ವಲಯದಲ್ಲಿರುವ ಉರಿ-I ಮತ್ತು ಉರಿ-II ಜಲವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡಲು ಈ ಸಂಘಟನೆ ಹೊಂಚುಹಾಕುತ್ತಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಅಲ್ಲಿ ಭಾರತೀಯ ಸೇನೆಯಿಂದ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಈ ಎರಡೂ ಜಲವಿದ್ಯುತ್ ಸ್ಥಾವರಗಳೂ ಗಡಿ ನಿಯಂತ್ರಣಾ ರೇಖೆ (LoC)ಯ ಬಳಿಯೇ ಇದ್ದು, ಅಲ್ಲೀಗ ಹೆಚ್ಚಿನ ಭದ್ರತಾ ಸಿಬ್ಬಂಬಿ ನಿಯೋಜನೆಯಾಗಿದ್ದಾರೆ. ಹಾಗೇ, ಅನಂತ್ನಾಗ್ನಲ್ಲಿರುವ ತುರ್ತು ಲ್ಯಾಂಡಿಂಗ್ ಸ್ಟ್ರಿಪ್ಗಳ ಮೇಲೆ ಕೂಡ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನೂ ಗುಪ್ತಚರ ಇಲಾಖೆ ನೀಡಿದೆ. ಅದರೊಂದಿಗೆ ಕಾಶ್ಮೀರ ಕಣಿವೆಯಲ್ಲಿ ಕಾನೂನು-ಸುವ್ಯವಸ್ಥೆ ಕದಡಲು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಯೋಜನೆ ರೂಪಿಸುತ್ತಿದೆ..ಅದರ ಒಂದು ಭಾಗವಾಗಿ ಧಾರ್ಮಿಕ ಮುಖಂಡರ ಮೇಲೆ ದಾಳಿ ನಡೆಸಲಿದೆ ಎಂದೂ ಮಾಹಿತಿ ನೀಡಿದೆ. ಇದರೊಂದಿಗೆ ಕಾಶ್ಮೀರದ ಸರ್ಪಂಚ್ಗಳು ಮತ್ತು ಸ್ಥಳೀಯರಲ್ಲದ ಜನರ ಮೇಲೆ ನಿರಂತರವಾಗಿ ದಾಳಿ ನಡೆಸಲು ಲಷ್ಕರ್ ಇ ತೊಯ್ಬಾ ಹಾಗೂ ಟಿಆರ್ಎಫ್ ಉಗ್ರ ಸಂಘಟನೆಗಳು ಯೋಜನೆ ರೂಪಿಸಿವೆ. ಅದರಲ್ಲೂ ಈ ಟಿಆರ್ಎಫ್ ಸಂಘಟನೆಗೆ ಬಿಜೆಪಿ ನಾಯಕರೇ ಟಾರ್ಗೆಟ್ ಎಂದೂ ಹೇಳಲಾಗಿದೆ. ಈ ತಿಂಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಒಟ್ಟು 11 ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಬೀದಿಬದಿಯ ವ್ಯಾಪಾರಿಗಳು, ಸ್ಥಳೀಯರಲ್ಲದ ಕಾರ್ಮಿಕರು, ಶಿಕ್ಷಕರನ್ನು ಗುರಿಯಾಗಿಸಿಕೊಂಡು ಉಗ್ರದಾಳಿ ನಡೆಯುತ್ತಿದೆ.
ಭಯೋತ್ಪಾದಕರಿಂದ ಹತರಾದ ಕಾರ್ಮಿಕರ ಕುಟುಂಬಕ್ಕೆ ಪರಿಹಾರ
ಈಗಾಗಲೇ ಜಮ್ಮು-ಕಾಶ್ಮೀರದ ಹಲವು ಕಡೆಗಳಲ್ಲಿ ಕಾರ್ಮಿಕರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ನಿನ್ನೆ ಸಂಜೆ ಕೂಡ ಕುಲಗಾಂವ್ನಲ್ಲಿ ಇಬ್ಬರು ಬಿಹಾರ ಮೂಲದ ಕಾರ್ಮಿಕರನ್ನು ಕೊಂದಿದ್ದಾರೆ. ಮೃತ ಕಾರ್ಮಿಕರ ಕುಟುಂಬಕ್ಕೆ ಅನಂತ್ನಾಗ್ ಜಿಲ್ಲಾಡಳಿತ ತಲಾ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಜಿಲ್ಲಾ ರೆಡ್ಕ್ರಾಸ್ ನಿಧಿಯಿಂದ ಈ ಹಣ ನೀಡಲಾಗುವುದು ಎಂದೂ ಹೇಳಲಾಗಿದೆ. ಇನ್ನು ಮೃತ ಕಾರ್ಮಿಕರನ್ನು ಚಂದನ್ ಕುಮಾರ್ ಮತ್ತು ಸುರೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಭಾನುವಾರ ಸಂಜೆ ಕುಲಗಾಂವ್ನ ಲಾರನ್ ಗಂಗಿಪೋರಾ ವಾನ್ಪೋಹ್ ಎಂಬಲ್ಲಿ ಇಬ್ಬರನ್ನೂ ಹತ್ಯೆ ಮಾಡಲಾಗಿದೆ. ಇನ್ನೊಬ್ಬರಿಗೆ ಗಾಯವಾಗಿದೆ.
ಇದನ್ನೂ ಓದಿ: ಜನ ಮೆಚ್ಚಿಕೊಂಡ ‘ಕನ್ನಡತಿ’ ಜೋಡಿಗೆ ಸಿಕ್ತು ಅವಾರ್ಡ್; ಸಂಭ್ರಮಿಸಿದ ಕಿರಣ್ ರಾಜ್, ರಂಜನಿ ರಾಘವನ್
Pooja Bedi: ಕೊರೊನಾ ಲಸಿಕೆ ವಿರುದ್ಧ ಮಾತಾಡುತ್ತಿದ್ದ ಪೂಜಾ ಬೇಡಿಗೆ ಈಗ ಕೊವಿಡ್ ಪಾಸಿಟಿವ್; ಮುಂದೇನು ಕಥೆ?
Published On - 2:12 pm, Mon, 18 October 21