ಆಗ್ರಾ: ವ್ಯಕ್ತಿಯೊಬ್ಬ ಪೊಲೀಸರ ಎದುರು ಮೊಣಕಾಲೂರಿ ಕುಳಿತು, ಶಿರಬಾಗಿ ನಮಸ್ಕರಿಸಿ ಆಕ್ಸಿಜನ್ಗಾಗಿ ಬೇಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಇದು ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಘಟನೆ ಎಂದು ಹೇಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು, ಇದು ಭಾರತದಲ್ಲಿನ ಕೊವಿಡ್ ಸ್ಥಿತಿ ಭೀಕರತೆಗೆ ಉದಾಹರಣೆ ಎಂದು ಹೇಳಿದ್ದಾರೆ.
ಪಿಪಿಇ ಕಿಟ್ ಧರಿಸಿದ ವ್ಯಕ್ತಿಯೊಬ್ಬ ಪೊಲೀಸರ ಎದುರು ಮೊಣಕಾಲೂರಿ ಕುಳಿತು ಕೈಮುಗಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈತ ತನ್ನ ತಾಯಿಯಾಗಿ ತಂದಿದ್ದ ಆಕ್ಸಿಜನ್ ಸಿಲಿಂಡರ್ನ್ನು ಮುಂದೆ ತೆಗೆದುಕೊಂಡು ಹೋಗಲು ಪೊಲೀಸರು ಕೊಡದೆ ಇರುವ ಕಾರಣಕ್ಕೆ ಈತ ಹೀಗೆ ಬೇಡಿಕೊಳ್ಳುತ್ತಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ, ಉತ್ತರ ಪ್ರದೇಶದ ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ. ಹಾಗೇನೂ ಇಲ್ಲ, ಒಂದು ಖಾಲಿ ಸಿಲಿಂಡರ್ ತೆಗೆದುಕೊಂಡು ಹೋಗಲು ಆತ ಹೀಗೆ ಮನವಿ ಮಾಡುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ನಾನು ನಿಮ್ಮ ಪಾದವನ್ನು ಮುಟ್ಟಿ ಮನವಿ ಮಾಡಿಕೊಳ್ಳುತ್ತಿದ್ದೇನೆ..ದಯವಿಟ್ಟು ನನ್ನ ಅಮ್ಮನನ್ನು ಉಳಿಸಿಕೊಡಿ ಎಂದು ಈ ವ್ಯಕ್ತಿ ಅಳುತ್ತ ಹೇಳುವುದು ವಿಡಿಯೋದಲ್ಲಿ ಕೇಳುತ್ತದೆ. ಹಾಗೇ ಘಟನೆ ನಡೆದಿದ್ದು ಆಗ್ರಾದ ಉಪಾಧ್ಯಾಯ ಆಸ್ಪತ್ರೆಯ ಹೊರಗೆ ಎಂದ ಹೇಳಿದೆ.
ಇನ್ನು ಈ ವಿಡಿಯೋವನ್ನಿಟ್ಟುಕೊಂಡು ಉತ್ತರ ಪ್ರದೇಶದ ಯುವ ಕಾಂಗ್ರೆಸ್ ಘಟಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕೆಂಡಕಾರಿದೆ. ಇದು ನಿಜಕ್ಕೂ ನೋವು ತರುವಂಥ ಸನ್ನಿವೇಶ. ಒಬ್ಬ ವ್ಯಕ್ತಿ ತನ್ನ ಅಮ್ಮನ ರಕ್ಷಣೆಗಾಗಿ ಪೊಲೀಸರೆದುರು ಬೇಡುತ್ತಿದ್ದಾನೆ. ಅಷ್ಟಾದರೂ ಅವರು ಕರಗುತ್ತಿಲ್ಲ. ಇದು ನಿಜಕ್ಕೂ ಪೊಲೀಸರ ಅಮಾನವೀಯ ವರ್ತನೆ ಎಂದು ಹೇಳಿದೆ. ಪೊಲೀಸರು ತಮ್ಮದೇನೂ ತಪ್ಪಿಲ್ಲ ಎಂದು ವಾದಿಸುತ್ತಿದ್ದು, ವಿಡಿಯೋದ ಹಿಂದಿನ ಸತ್ಯಾಂಶ ಗೊತ್ತಾಗುತ್ತಿಲ್ಲ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸುಮಾರು 3000 ಕೊರೊನಾ ಸೋಂಕಿತರು ನಾಪತ್ತೆ: ಸಚಿವ ಆರ್. ಅಶೋಕ್
ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಗರ್ಭಿಣಿ ವೈದ್ಯೆ ಕೊರೊನಾಗೆ ಬಲಿ
Published On - 5:44 pm, Thu, 29 April 21