ತಮಿಳುನಾಡು ಮುಖ್ಯಮಂತ್ರಿ ಇಪಿಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ: ಡಿಎಂಕೆ ನಾಯಕ ಎ.ರಾಜಾಗೆ 2 ದಿನ ಚುನಾವಣಾ ಪ್ರಚಾರದಿಂದ ನಿರ್ಬಂಧ

| Updated By: guruganesh bhat

Updated on: Apr 01, 2021 | 3:09 PM

Tamilnadu Assembly Elections 2021: ಇ.ಪಳನಿಸ್ವಾಮಿ ಅವರ ತಾಯಿಯ ಬಗ್ಗೆ ಹಾಗೂ ಪಳನಿಸ್ವಾಮಿ ಅವರ ಹುಟ್ಟಿನ ಬಗ್ಗೆ ರಾಜಾ ನೀಡಿದ್ದ ಹೇಳಿಕೆಯನ್ನು ‘ಅಶ್ಲೀಲ’ ಮತ್ತು ‘ಮಹಿಳೆಯ ಘನತೆಗೆ ಕುಂದು ತರುವಂಥದ್ದು’ ಎಂದು ಚುನಾವಣಾ ಆಯೋಗ ಪರಿಗಣಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಇಪಿಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ: ಡಿಎಂಕೆ ನಾಯಕ ಎ.ರಾಜಾಗೆ 2 ದಿನ ಚುನಾವಣಾ ಪ್ರಚಾರದಿಂದ ನಿರ್ಬಂಧ
ಚುನಾವಣಾ ಆಯೋಗ
Follow us on

ದೆಹಲಿ: ತಮಿಳುನಾಡು ರಾಜಕಾರಣದಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದ್ದ ಎ.ರಾಜಾ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಶಿಸ್ತುಕ್ರಮ ಜರುಗಿಸಿದೆ. ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರ ತಾಯಿಯ ಬಗ್ಗೆ ಹಾಗೂ ಪಳನಿಸ್ವಾಮಿ ಅವರ ಹುಟ್ಟಿನ ಬಗ್ಗೆ ರಾಜಾ ನೀಡಿದ್ದ ಹೇಳಿಕೆಯನ್ನು ‘ಅಶ್ಲೀಲ’ ಮತ್ತು ‘ಮಹಿಳೆಯ ಘನತೆಗೆ ಕುಂದು ತರುವಂಥದ್ದು’ ಎಂದು ಪರಿಗಣಿಸಿರುವ ಚುನಾವಣಾ ಆಯೋಗ ಚುನಾವಣಾ ಪ್ರಚಾರದಿಂದ ಎರಡು ದಿನಗಳ ಅವಧಿಗೆ (48 ಗಂಟೆ) ರಾಜಾ ಅವರನ್ನು ನಿರ್ಬಂಧಿಸಿದೆ. ಈ ಅವಧಿಯಲ್ಲಿ ರಾಜಾ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಆಯೋಗವು ಹೇಳಿದೆ.

ಇದಕ್ಕೂ ಮೊದಲು ಎ.ರಾಜಾ ಅವರಿಗೆ ಪಳನಿಸ್ವಾಮಿ ಕುರಿತು ನೀಡಿದ ಹೇಳಿಕೆಗಳ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗ ಸೂಚಿಸಿತ್ತು. ‘ಎ.ರಾಜಾ ಅವರ ಹೇಳಿಕೆಯು ಕೇವಲ ಮಾನಹಾನಿಕರ ಮಾತ್ರವೇ ಅಲ್ಲ. ಅಶ್ಲೀಲ ಮತ್ತು ಮಹಿಳೆಯ ತಾಯ್ತನವನ್ನು ಹೀಗಳೆಯುವ ಪ್ರಯತ್ನ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ’ ಎಂದು ಆಯೋಗವು ಹೇಳಿತ್ತು.

ತಮ್ಮ ಪಕ್ಷದ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರನ್ನು ಮುಖ್ಯಮಂತ್ರಿ ಪಳನಿಸ್ವಾಮಿ ಅವರೊಂದಿಗೆ ಹೋಲಿಸಿದ್ದ ಎ.ರಾಜಾ, ‘ಸ್ಟಾಲಿನ್ ಸರಿಯಾದ ಕ್ರಮದಲ್ಲಿ ಅಂದರೆ ಮದುವೆ ವಿಧಿವಿಧಾನಗಳು ನಡೆದ 9 ತಿಂಗಳ ನಂತರ ಹುಟ್ಟಿದ್ದಾರೆ. ಆದರೆ ಎಡಪ್ಪಾಡಿ ಪಳನಿಸ್ವಾಮಿ ಹಾಗಲ್ಲ. ಅವರು ಇದ್ದಕ್ಕಿದ್ದಂತೆ ಹುಟ್ಟಿದವರು, ಆತುರಕ್ಕೆ ಹುಟ್ಟಿದ ಮಗುವಿದ್ದಂತೆ’ ಎಂದು ಟೀಕಿಸಿದ್ದರು.

ಕಣ್ಣೀರಿಟ್ಟಿದ್ದ ಪಳನಿಸ್ವಾಮಿ
ಎ.ರಾಜಾ ನೀಡಿದ ಹೇಳಿಕೆಯಿಂದ ನೊಂದುಕೊಂಡಿದ್ದ ಮುಖ್ಯಮಂತ್ರಿ ಪಳನಿಸ್ವಾಮಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಕಣ್ಣೀರು ಹಾಕಿದರು. ಈ ಹೇಳಿಕೆಯ ಬಗ್ಗೆ ಉತ್ತರ ಚೆನ್ನೈನ ತಿರುವೊಟ್ಟಿಯೂರ್​ನಲ್ಲಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಪಳನಿಸ್ವಾಮಿ, ‘ನಾನು ನನ್ನೊಬ್ಬನ ಬಗ್ಗೆ ಮಾತಾಡುತ್ತಿಲ್ಲ. ಎಲ್ಲ ತಾಯಂದಿರು ಮತ್ತು ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ. ಮುಖ್ಯಮಂತ್ರಿಯ ತಾಯಿಯ ಬಗ್ಗೆ ಈ ರೀತಿ ಮಾತನಾಡಿದರೆ ಉಳಿದವರ ಪಾಡೇನು? ಅವರು ಅಧಿಕಾರಕ್ಕೆ ಏನಾಗಬಹುದು’ ಎಂದು ಪ್ರಶ್ನಿಸಿದ್ದರು. ರಾಜಾ ನನ್ನ ತಾಯಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಸಾರ್ವಜನಿಕ ಸಭೆಯಲ್ಲಿ ಕಣ್ಣೀರು ಹಾಕಿದ್ದರು.

‘ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸಬೇಕು ಎಂದು ನಾನು ಅಂದುಕೊಂಡಿರಲಿಲ್ಲ. ಆದರೆ ಇಲ್ಲಿರುವ ತಾಯಂದಿರನ್ನು ನೋಡಿ ನಾನು ಭಾವುಕನಾದೆ. ಸಮಾಜದಲ್ಲಿ ತಾಯಿಗೆ ದೊಡ್ಡಸ್ಥಾನವಿದೆ. ಆಕೆ ಶ್ರೀಮಂತೆ ಅಥವಾ ಬಡವಳಾದರೂ ಸರಿ, ಮಹಿಳೆಯನ್ನು ನಿಂದಿಸಿದವರಿಗೆ ದೇವರು ತಕ್ಕಶಿಕ್ಷೆ ಕೊಡಬೇಕು. ಮಾತೃನಿಂದನೆ ಮಾಡುವ ರಾಜಾರಂಥ ನಾಯಕರಿಗೆ ಜನರು ಮತದಾನದ ದಿನ ಸರಿಯಾದ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದರು.

ಕ್ಷಮೆಯಾಚಿಸಿದ್ದ ರಾಜಾ
‘ಇಬ್ಬರು ನಾಯಕರ ಬಗ್ಗೆ ವೈಯಕ್ತಿಕವಾಗಿ ಟೀಕಿಸುವುದು ನನ್ನ ಹೇಳಿಕೆಯ ಉದ್ದೇಶವಾಗಿರಲಿಲ್ಲ. ಇಬ್ಬರು ನಾಯಕರ ಸಾರ್ವಜನಿಕ ಬದುಕನ್ನು ಹೋಲಿಸುವುದು ನನ್ನ ಉದ್ದೇಶವಾಗಿತ್ತು’ ಎಂದು ಎ.ರಾಜಾ ತಮ್ಮ ಹೇಳಿಕೆಗೆ ಸಮರ್ಥನೆ ನೀಡಲು ಯತ್ನಿಸಿದ್ದರು. ‘ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಗೆ ನನ್ನ ಮಾತಿನಿಂದ ನೋವಾಗಿರುವ ವಿಷಯ ತಿಳಿದು ನನಗೂ ಬೇಸರವಾಯಿತು. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಯಿತು. ಆದರೂ ನಾನು ಹೃದಯದ ಆಳದಿಂದ ವಿಷಾದ ವ್ಯಕ್ತಪಡಿಸುತ್ತೇನೆ. ರಾಜಕೀಯ ಕಾರಣಗಳನ್ನು ಹೊರತುಪಡಿಸಿ ಪಳನಿಸ್ವಾಮಿ ಅವರಿಗೆ ನೋವಾಗಿದ್ದರೆ ನಾನು ಹೃದಯಪೂರ್ವಕ ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದ್ದರು.

ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ. 234 ಸದಸ್ಯಬಲದ ತಮಿಳುನಾಡು ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು 118 ಸ್ಥಾನಗಳು ಬೇಕು. ಎಐಎಡಿಎಂಕೆ-ಬಿಜೆಪಿ ಮತ್ತು ಡಿಎಂಕೆ-ಕಾಂಗ್ರೆಸ್​ ಮೈತ್ರಿಕೂಟಗಳು ತೀವ್ರ ಪ್ರಚಾರ ನಡೆಸುತ್ತಿವೆ.

ಇದನ್ನೂ ಓದಿ: ‘ಛೇ ಇದೆಂಥ ಮಾತು’, ತಾಯಿ ನಿಂದನೆ ಕೇಳಿ ತಮಿಳುನಾಡು ಮುಖ್ಯಮಂತ್ರಿ ಕಣ್ಣೀರು; ಪಳನಿಸ್ವಾಮಿಯ ಕ್ಷಮೆ ಯಾಚಿಸಿದ ಡಿಎಂಕೆ ನಾಯಕ ಎ.ರಾಜಾ

ಇದನ್ನೂ ಓದಿ: ತಮಿಳುನಾಡು ಸಿಎಂ ಪಳನಿಸ್ವಾಮಿ ಅವರು ನರೇಂದ್ರ ಮೋದಿ ಪಾದಕ್ಕೆ ನಮಸ್ಕರಿಸುವುದನ್ನು ನೋಡಲಾಗುತ್ತಿಲ್ಲ: ರಾಹುಲ್ ಗಾಂಧಿ

Published On - 3:00 pm, Thu, 1 April 21