ಪುಣೆ, ಜು.24: 57 ವರ್ಷದ ಸಹಾಯಕ ಪೊಲೀಸ್ ಕಮಿಷನರ್ರೊಬ್ಬರು (ಎಸಿಪಿ) ಇಂದು (ಜು.24) ಬೆಳಿಗ್ಗೆ ತಮ್ಮ ಮನೆಯಲ್ಲೇ ಗುಂಡು ಹಾರಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ. ತನ್ನ ಮನೆಯಲ್ಲಿ ಗುಂಡು ಹಾರಿಸಿಕೊಂಡಿದ್ದಾರೆ. ಜತೆಗೆ ತನ್ನ ಪತ್ನಿ ಮತ್ತು ಸೋದರಳಿಯನನ್ನು ಕೂಡ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾನೇರ್ ಪ್ರದೇಶದ ಎಸಿಪಿ ಭರತ್ ಗಾಯಕ್ವಾಡ್ ಅವರ ಬಂಗಲೆಯಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ ಎಂದು ಚತುರ್ಶೃಂಗಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಭರತ್ ಗಾಯಕ್ವಾಡ್ ಅವರನ್ನು ಅಮರಾವತಿಯಲ್ಲಿ ಎಸಿಪಿಯಾಗಿ ನಿಯೋಜಿಸಲಾಗಿತ್ತು. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಎಸಿಪಿ ಭರತ್ ಗಾಯಕ್ವಾಡ್ ಅವರು ತಮ್ಮ ಪತ್ನಿಯ ತಲೆಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನ ಸದ್ದು ಕೇಳಿದ ತಕ್ಷಣ ಅವರ ಮಗ ಮತ್ತು ಸೋದರಳಿಯ ರೂಮ್ನಿಂದ ಓಡಿಬಂದಿದ್ದಾರೆ. ಮೊದಲು ರೂಮ್ ಬಾಗಿಲು ತೆರೆದು ಹೊರಗೆ ಬಂದ ತಮ್ಮ ಸೋದರಳಿಯನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಭರತ್ ಗಾಯಕ್ವಾಡ್ ಕೂಡ ತಮ್ಮ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನೂ ಓದಿ:ಪತ್ನಿಯನ್ನು ಕೊಲೆ ಮಾಡಿ, ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪಶುವೈದ್ಯ
ಗುಂಡೇಟಿನಿಂದ ಸಾವನ್ನಪ್ಪಿರುವವರನ್ನು ಎಸಿಪಿ ಭರತ್ ಗಾಯಕ್ವಾಡ್ ಅವರ ಪತ್ನಿ ಮೋನಿ ಗಾಯಕ್ವಾಡ್ (44) ಮತ್ತು ಸೋದರಳಿಯ ದೀಪಕ್ (35) ಎಂದು ಗುರುತಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ