ಆಧಾರ್ ಕಾರ್ಡ್ ಬಳಕೆ: ಕಾನೂನು Vs ವಾಸ್ತವ – ನಿಮ್ಮ ಹಕ್ಕುಗಳು ಮತ್ತು ಗೌಪ್ಯತೆ

Santosh Nair's article in 'Your India' series: ನಿಮ್ಮ ಆಧಾರ್ ಕಾರ್ಡ್‌ ಅನ್ನು ಅನಗತ್ಯವಾಗಿ ಜೆರಾಕ್ಸ್ ಪ್ರತಿಗಳನ್ನು ನೀಡುತ್ತಿದ್ದೀರಾ? ಆಧಾರ್‌ ಕೇವಲ ಗುರುತು ದೃಢೀಕರಣಕ್ಕೆ ಹೊರತು ಪೌರತ್ವಕ್ಕಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಕಲ್ಯಾಣ ಯೋಜನೆ ಹೊರತುಪಡಿಸಿ, ಶಾಲೆ, ಮೊಬೈಲ್ ಕಂಪನಿಗಳು, ಖಾಸಗಿ ಸಂಸ್ಥೆಗಳು ಆಧಾರ್ ಕೇಳುವಂತಿಲ್ಲ. ಆದರೂ ವಾಸ್ತವದಲ್ಲಿ ಇಂದಿಗೂ ಅನಗತ್ಯ ಬಳಕೆ ಪ್ರಚಲಿತವಾಗಿದೆ. ಬಯೋಮೆಟ್ರಿಕ್ ಸಮಸ್ಯೆಗಳೂ ಇವೆ.

ಆಧಾರ್ ಕಾರ್ಡ್ ಬಳಕೆ: ಕಾನೂನು Vs ವಾಸ್ತವ – ನಿಮ್ಮ ಹಕ್ಕುಗಳು ಮತ್ತು ಗೌಪ್ಯತೆ
ಆಧಾರ್
Image Credit source: Getty Images
Edited By:

Updated on: Nov 11, 2026 | 5:26 PM

ನಿವೃತ್ತ ಶಾಲಾ ಶಿಕ್ಷಕರಾದ ಶ್ರೀ ವರ್ಮಾ ಅವರು ತಮ್ಮ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಯನ್ನು ಎಷ್ಟು ಬಾರಿ ನೀಡಿದ್ದಾರೆ ಎಂದು ಒಮ್ಮೆ ಎಣಿಸಲು ಪ್ರಯತ್ನಿಸಿದರು. ಮೂವತ್ತೊಂದಕ್ಕೆ ನಿಂತು ಪೆನ್ಸಿಲನ್ನು ಪಕ್ಕಕ್ಕಿಟ್ಟರು. ಬ್ಯಾಂಕ್​ಗೆ ಒಂದನ್ನು ನೀಡಲಾಗಿತ್ತು. ಫೋನ್ ಅಂಗಡಿ, ಗ್ಯಾಸ್ ಏಜೆನ್ಸಿ, ಅವರ ಮಗ ಸೇರಿಸಿದ್ದ ಜಿಮ್​ನಲ್ಲಿ ಇವರ ಆಧಾರ್ ನೀಡಲಾಗಿತ್ತು. ಮತ್ತು 2019 ರಲ್ಲಿ ಒಂದೇ ಒಂದು ರಾತ್ರಿ ಕಳೆದಿದ್ದ ಗಿರಿಧಾಮದ ಹೋಟೆಲ್ ಕೂಡ ಅದನ್ನು ಹೊಂದಿತ್ತು. ಈ ಪ್ರತಿಯೊಂದು ಸ್ಥಳದ ಡ್ರಾಯರ್‌ನಲ್ಲಿ ಎಲ್ಲೋ ಒಂದು ಕಡೆ ಅವರ ಮುಖ, ಅವರ ಸಂಖ್ಯೆ ಮತ್ತು ಅವರ ವಿಳಾಸವಿತ್ತು. ಅದ್ಯಾಕಾಗಿ ಬೇಕು ಎಂದು ಯಾರೂ ಅವರಿಗೆ ಎಂದಿಗೂ ವಿವರಿಸಿಲ್ಲ.

ಈ ಕಾರ್ಡ್‌ನ ವಿಚಿತ್ರ ಸಂಗತಿಯೇ ಅದು. ಇದು ಬಹುಶಃ ದೇಶದಲ್ಲಿ ಯಾವುದೇ ನಿರ್ಬಂಧವಿಲ್ಲದೆ ಅತಿ ಹೆಚ್ಚು ಜೆರಾಕ್ಸ್ ಮಾಡಲ್ಪಡುವ ದಾಖಲೆಯಾಗಿದೆ. ಈ ಕಾರ್ಡ್ ಕೇಳುವ ವ್ಯಕ್ತಿಗೆ ಅದನ್ನು ಕೇಳಲು ಅಧಿಕಾರವಿದೆಯೇ ಎಂದು ನಮ್ಮಲ್ಲಿ ಯಾರೂ ನಿಂತು ಪ್ರಶ್ನಿಸಿಲ್ಲ. ಅವರ ಮೊಮ್ಮಗ ರೋಹನ್​ಗೆ ಆಧಾರ್ ವಿಷಯದ ಬಗ್ಗೆ ಶಾಲಾ ಪ್ರಾಜೆಕ್ಟ್ ಪಡೆದಿದ್ದ. ಆತ ಇದರ ಬಗ್ಗೆ ತಿಳಿದುಕೊಳ್ಳಲು ನಿರ್ಧರಿಸಿದನು.

Loading...

ಮೊದಲಿಗೆ, ರೋಹನ್ ಆ ಕಾರ್ಡ್ ಎಂದರೇನು ಎಂದು ತಿಳಿದುಕೊಂಡನು. ಆಧಾರ್ ಎಂಬುದು ಹನ್ನೆರಡು ಅಂಕಿಯ ಸಂಖ್ಯೆಯಾಗಿದ್ದು, ಇದು ವ್ಯಕ್ತಿಯ ಬೆರಳಚ್ಚುಗಳು, ಕಣ್ಣಿನ ಐರಿಸ್ ಸ್ಕ್ಯಾನ್ ಮತ್ತು ಫೋಟೋಗೆ ಜೋಡಿಸಲ್ಪಟ್ಟಿರುತ್ತದೆ. ಮತ್ತು ಇದು ಒಂದೇ ಒಂದು ವಿಷಯವನ್ನು ಸಾಬೀತುಪಡಿಸಲು ನಿರ್ಮಿಸಲಾಗಿದೆ: ನೀವು ನೀವೇ ಎಂದು ಸಾಬೀತುಪಡಿಸುವುದು. ಅದೇ ಗುರುತು (Identity). ಅದು ಪೌರತ್ವವಲ್ಲ. ಆಧಾರ್ ಕಾಯಿದೆಯೇ ಈ ಸಂಖ್ಯೆಯು ಸ್ವತಃ ಯಾವುದೇ ಪೌರತ್ವ ಅಥವಾ ನಿವಾಸದ ಹಕ್ಕನ್ನು ನೀಡುವುದಿಲ್ಲ ಮತ್ತು ಎರಡಕ್ಕೂ ಸಾಕ್ಷಿಯಲ್ಲ ಎಂದು ಹೇಳುತ್ತದೆ. ಈ ಕಾರ್ಡ್ ಅನ್ನು ಕೇವಲ ಪೌರರಿಗೆ ಮಾತ್ರವಲ್ಲದೆ ಭಾರತದ ನಿವಾಸಿಗಳಿಗೂ ನೀಡಿರುವುದರಿಂದ ಇದನ್ನು ಅರ್ಥಮಾಡಿಕೊಳ್ಳುವುದು ಸುಲಭ. 2025 ರಲ್ಲಿ, ಬಿಹಾರದ ಮತದಾರರ ಪಟ್ಟಿಯ ವಿವಾದದ ಸಂದರ್ಭದಲ್ಲಿ, ಆಧಾರ್ ಎನ್ನುವುದು ಪೌರತ್ವಕ್ಕೆ ಅಂತಿಮ ಪುರಾವೆಯಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿತು.

ಇದನ್ನೂ ಓದಿ: ಯುಪಿಐ ಕ್ರಾಂತಿ: ಸಣ್ಣ ವ್ಯಾಪಾರಿಗಳ ಸಬಲೀಕರಣ, ಭಾರತದ ಆರ್ಥಿಕ ರೂಪಾಂತರ

ನಂತರ ಅವನಿಗೆ ಹೆಚ್ಚು ಕಠಿಣವಾದ ಪ್ರಶ್ನೆ ಕಂಡಿತು. ಕಾರ್ಡ್ ಅನ್ನು ಯಾರು ಮತ್ತು ಯಾವ ಉದ್ದೇಶಕ್ಕಾಗಿ ಕೋರಬಹುದು ಎಂಬುದು ಆ ಪ್ರಶ್ನೆ. ನ್ಯಾ| ಕೆ.ಎಸ್. ಪುಟ್ಟಸ್ವಾಮಿ ಹೂಡಿದ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ 2018 ರ ಸೆಪ್ಟೆಂಬರ್ 26 ರಂದು ನೀಡಿದ ತೀರ್ಪಿನಲ್ಲಿ ಆ ಪ್ರಶ್ನೆಗೆ ಉತ್ತರ ಸಿಕ್ಕಿತು. ಕೋರ್ಟ್ ಆಧಾರ್ ಅನ್ನು ಎತ್ತಿಹಿಡಿಯಿತಾದರೂ ಅದರ ಸುತ್ತಲೂ ಗೆರೆಗಳನ್ನು ಎಳೆಯಿತು. ಕಲ್ಯಾಣ ಯೋಜನೆಗಳು ಮತ್ತು ಸಬ್ಸಿಡಿಗಳಿಗೆ ಅದನ್ನು ಕೇಳಬಹುದು. ಏಕೆಂದರೆ ಇದು ಹಣವು ಸರಿಯಾದ ವ್ಯಕ್ತಿಯನ್ನು ತಲುಪಲು ಸಹಾಯ ಮಾಡುತ್ತದೆ. ಮೊಬೈಲ್ ಕಂಪನಿಗಳು ಸಿಮ್ ಕಾರ್ಡ್‌ಗೆ ಅದನ್ನು ಕಡ್ಡಾಯಗೊಳಿಸುವಂತಿಲ್ಲ. ಮತ್ತು ಅವು ಸಂಗ್ರಹಿಸಿದ್ದ ಬೆರಳಚ್ಚು ಹಾಗೂ ಐರಿಸ್ ದತ್ತಾಂಶವನ್ನು ಅಳಿಸಲು ಸೂಚಿಸಲಾಯಿತು. ಶಿಕ್ಷಣವು ಒಂದು ಹಕ್ಕಾಗಿರುವುದರಿಂದ ಶಾಲೆಗಳು ಮತ್ತು ಪರೀಕ್ಷಾ ಮಂಡಳಿಗಳು ಪ್ರವೇಶಾತಿಗೆ ಆಧಾರ್ ಬೇಕೆಂದು ಒತ್ತಾಯಿಸುವಂತಿಲ್ಲ. ಖಾಸಗಿ ಕಂಪನಿಗಳು ಗ್ರಾಹಕರ ಮೇಲೆ ಅದನ್ನು ಹೇರುವಂತಿಲ್ಲ. ಮಗುವನ್ನು ಪೋಷಕರ ಒಪ್ಪಿಗೆಯೊಂದಿಗೆ ಮಾತ್ರ ಆಧಾರ್​ಗೆ ಎನ್​ರೋಲ್ ಮಾಡಬಹುದು. ಹದಿನೆಂಟನೇ ವಯಸ್ಸಿನಲ್ಲಿ ಹೊರನಡೆಯಬಹುದು. ಈ ತೀರ್ಪು ಸರ್ವಾನುಮತದಿಂದ ಕೂಡಿರಲಿಲ್ಲ. ಹಲವು ವಿಚಾರಗಳಲ್ಲಿ ಆ ನ್ಯಾಯಪೀಠದಲ್ಲಿ ಒಬ್ಬ ನ್ಯಾಯಮೂರ್ತಿಗಳ ಸಮ್ಮತಿ ಇರಲಿಲ್ಲ. ಇದು ಜಾಗರೂಕ ಮನಸ್ಸುಗಳು ಒಂದೇ ಕಾರ್ಡ್ ಅನ್ನು ಹೇಗೆ ವಿಭಿನ್ನವಾಗಿ ನೋಡಬಹುದು ಎಂಬುದನ್ನು ಗಮನಿಸಬಹುದು.

ತಮ್ಮ ಚಹಾ ತಣ್ಣಗಾಗುತ್ತಿದ್ದಂತೆ ಶ್ರೀ ವರ್ಮಾ ಇದೆಲ್ಲವನ್ನೂ ಆಲಿಸಿದರು. “ಆದರೆ ಜಿಮ್‌ನಲ್ಲಿರುವ ಕ್ಲರ್ಕ್ ಈಗಲೂ ಕೇಳುತ್ತಾನಲ್ಲ,” ಎಂದರು ಅವರು. ರೋಹನ್ ತಲೆಯಾಡಿಸಿದ. ಸಂಪೂರ್ಣ ಕಥೆಯ ಅತ್ಯಂತ ಗಮನ ಸೆಳೆಯುವ ಭಾಗ ಅದೇ ಎಂದು ಅವನು ಕಂಡುಕೊಂಡಿದ್ದನು. ನಿಯಮವು ನ್ಯಾಯಾಲಯದಲ್ಲಿ ಬದಲಾಯಿತು, ಆದರೆ ಅಭ್ಯಾಸವು ಕೌಂಟರ್‌ನಲ್ಲಿ ಬದಲಾಗಲಿಲ್ಲ. ವರ್ಷಗಳಿಂದ ಜೆರಾಕ್ಸ್ ಪ್ರತಿ ಕೇಳುತ್ತಾ ಬಂದಿರುವ ಕ್ಲರ್ಕ್ ಅದನ್ನು ಕೇಳುವುದನ್ನು ಮುಂದುವರಿಸುತ್ತಾನೆ, ಮತ್ತು ವರ್ಷಗಳಿಂದ ಅದನ್ನು ನೀಡುತ್ತಾ ಬಂದಿರುವ ಗ್ರಾಹಕ ಅದನ್ನು ನೀಡುವುದನ್ನು ಮುಂದುವರಿಸುತ್ತಾನೆ. ಒಂದು ನಿಯಮವು ತೀರ್ಪಿನಲ್ಲಿ ವೇಗವಾಗಿ ಚಲಿಸುತ್ತದೆ. ನಂತರ ಸರತಿಯಲ್ಲಿ ನಿಧಾನಗೊಳ್ಳುತ್ತದೆ. ಈ ಹೆಚ್ಚಿನ ನಕಲು ಮಾಡುವಿಕೆಯು ದುಷ್ಟತನವೇನೂ ಅಲ್ಲ. ಇದೊಂದು ಅಭ್ಯಾಸ ಅಷ್ಟೇ. ಯಾವುದೇ ಕಚೇರಿಯಲ್ಲಿ ಅಭ್ಯಾಸವೇ ಅತ್ಯಂತ ತಾಳ್ಮೆಯ ಶಕ್ತಿಯಾಗಿದೆ.

ಮತ್ತೊಂದು ವಿಷಯವಿತ್ತು. ಅದು ದುಃಖಕರವಾಗಿದ್ದರಿಂದ ರೋಹನ್ ಅದನ್ನು ಬಹುತೇಕ ಬಿಟ್ಟುಬಿಡುತ್ತಾನೆ. ಬೆರಳಚ್ಚುಗಳನ್ನು ಓದುವ ಯಂತ್ರಗಳು ಹೆಚ್ಚಿನ ಜನರಿಗೆ ಚೆನ್ನಾಗಿ ಕೆಲಸ ಮಾಡುತ್ತವೆ. ಆದರೆ ದಶಕಗಳಿಂದ ಕಲ್ಲುಗಳನ್ನು ಒಡೆದ ಅಥವಾ ಕಬ್ಬು ಕತ್ತರಿಸಿದ ಕೈಗಳ ಚರ್ಮ ಸವೆದು ಬೆರಳಚ್ಚುಗಳು ಮಸುಕಾಗಬಹುದು. ಯಂತ್ರವೊಂದು ಹೆಬ್ಬೆರಳ ಅಚ್ಚನ್ನು ಓದಲು ವಿಫಲವಾದಾಗ, ಯಾವುದೇ ತಪ್ಪಿಲ್ಲದಿದ್ದರೂ ವ್ಯಕ್ತಿಯನ್ನು ರೇಷನ್ ಅಂಗಡಿಯಿಂದ ಅಥವಾ ಪಿಂಚಣಿ ಕೌಂಟರ್‌ನಿಂದ ವಾಪಸ್ ಕಳುಹಿಸಿರುವ ನಿದರ್ಶನಗಳು ಲೆಕ್ಕವಿಲ್ಲದಷ್ಟು ಇವೆ. ಯಂತ್ರದ ನಿರಾಕರಣೆಯು ಅದರ ಮುಂದೆ ನಿಂತಿರುವ ವ್ಯಕ್ತಿಯ ಬಗ್ಗೆ ಯಾವಾಗಲೂ ಸತ್ಯವೇ ಆಗಿರುವುದಿಲ್ಲ ಎಂದು ರೋಹನ್ ಬರೆದಿದ್ದಾನೆ.

ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ 2020: ಅನುಷ್ಠಾನ ಸವಾಲುಗಳು, ನಿಜವಾದ ಬದಲಾವಣೆ; ಒಂದು ಅವಲೋಕನ

ತನ್ನ ಪ್ರಾಜೆಕ್ಟ್‌ನ ಕೊನೆಯಲ್ಲಿ ಅವನು ಕಾರ್ಡ್ ಯಾವುದಕ್ಕೆ ಅಲ್ಲ ಎಂಬುದರ ಸಣ್ಣ ಪಟ್ಟಿಯನ್ನು ಸೇರಿಸಿದನು. ಇದು ಮತದಾರರ ಗುರುತಿನ ಚೀಟಿಯಲ್ಲ. ಇದು ಪಾಸ್‌ಪೋರ್ಟ್ ಅಲ್ಲ. ಹುಟ್ಟಿದ ದಿನಾಂಕವು ಸಾಮಾನ್ಯವಾಗಿ ನೋಂದಣಿಯ ಸಮಯದಲ್ಲಿ ಹೇಳಿದ್ದರಿಂದ ಬರುವುದರಿಂದ ಇದು ವ್ಯಕ್ತಿಯ ವಯಸ್ಸನ್ನು ಖಚಿತವಾಗಿ ಸಾಬೀತುಪಡಿಸುವುದಿಲ್ಲ. ಪ್ರತಿಯೊಂದು ದಾಖಲೆಯು ಒಂದು ಪ್ರಶ್ನೆಗೆ ಉತ್ತರಿಸುತ್ತದೆ, ಮತ್ತು ಒಂದೇ ಕಾರ್ಡ್ ಎಲ್ಲವನ್ನೂ ಉತ್ತರಿಸಬೇಕೆಂದು ನಾವು ಬಯಸಿದಾಗ ತೊಂದರೆ ಪ್ರಾರಂಭವಾಗುತ್ತದೆ. ಅಧಿಕೃತ UIDAI ವೆಬ್‌ಸೈಟ್‌ನಲ್ಲಿ ಒಬ್ಬ ವ್ಯಕ್ತಿಯು ತಮ್ಮ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡಬಹುದು ಮತ್ತು ಅಗತ್ಯವಿದ್ದಾಗ ಮಾತ್ರ ಅವುಗಳನ್ನು ತೆರೆಯಬಹುದು ಎಂದೂ ಅವನು ಬರೆದಿದ್ದಾನೆ. ಇದರ ಬಗ್ಗೆ ಎಂದಿಗೂ ಕೇಳಿರದ ಅವರ ತಾತ, ಅದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತೋರಿಸಬೇಕೆಂದು ಕೇಳುತ್ತಾರೆ.

ಶ್ರೀ ವರ್ಮಾ ತಮ್ಮ ಡ್ರಾಯರ್‌ನಲ್ಲಿರುವ ಹಳೆಯ ಜೆರಾಕ್ಸ್ ರಸೀದಿಗಳ ರಾಶಿಯನ್ನು ನೋಡುತ್ತಾರೆ. ತಾನು ಎಂದಿಗೂ ಭೇಟಿಯಾಗದ ಯಾರನ್ನೋ ಹೊರತುಪಡಿಸಿ ಯಾರಿಗೂ ಕೂಡ ಅವು ಈಗ ಉಪಯುಕ್ತವಾಗುತ್ತವೆ ಎಂದು ಅವರಿಗೆ ಅನಿಸಲಿಲ್ಲ.

ನಿಮ್ಮ ಆಧಾರ್ ಜೆರಾಕ್ಸ್ ಪ್ರತಿಗಳು ಈಗ ಎಲ್ಲಿ ಬಿದ್ದಿವೆ, ಅವರನ್ನು ಯಾರು ಹೊಂದಿದ್ದಾರೆ ಎಂಬುದ ನಿಮಗೆ ಗೊತ್ತಾ?

(ಆಧಾರಗಳು: ಆಧಾರ್ ಕಾಯ್ದೆ, 2016; ಜಸ್ಟಿಸ್ ಕೆ.ಎಸ್. ಪುಟ್ಟಸ್ವಾಮಿ (ನಿವೃತ್ತ) ವಿ. ಭಾರತ ಒಕ್ಕೂಟ ಪ್ರಕರಣದ ತೀರ್ಪು, ಭಾರತದ ಸುಪ್ರೀಂ ಕೋರ್ಟ್, ಸೆಪ್ಟೆಂಬರ್ 26, 2018; ಪೌರತ್ವ ಮತ್ತು ಆಧಾರ್ ಕುರಿತು ಸುಪ್ರೀಂ ಕೋರ್ಟ್‌ನ 2025 ರ ಅವಲೋಕನಗಳ ವರದಿಗಳು; UIDAI. ಶ್ರೀ ವರ್ಮಾ ಮತ್ತು ರೋಹನ್ ಕಾಲ್ಪನಿಕ ಪಾತ್ರಗಳು; ಘಟನೆಗಳು ನೈಜವಾದವು.)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
Loading...
Unable to load recommendations.
Follow Us