ಸೂರತ್: ತನ್ನ ಚೊಚ್ಚಿಲ ಪ್ರಯತ್ನದಲ್ಲೇ ಸೂರತ್ ಸ್ಥಳೀಯ ನಗರ ಪಾಲಿಕೆ ಚುನಾವಣೆಯಲ್ಲಿ ಆಮ್ಆದ್ಮಿ ಪಕ್ಷ 27 ಕ್ಷೇತ್ರಗಳನ್ನು ತನ್ನ ಜೇಬಿಗೆ ಇಳಿಸಿಕೊಂಡಿದೆ. ಇಂದು ನಡೆದ 6 ಮಹಾನಗರ ಕ್ಷೇತ್ರಗಳ ಮತ ಎಣಿಕೆಯಲ್ಲಿ ಸೂರತ್ ಕ್ಷೇತ್ರದ ಎಲ್ಲ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದ್ದು, ಇದೇ ಮೊದಲ ಬಾರಿಗೆ ಗುಜರಾತ್ ಸ್ಥಳೀಯ ಸಂಸ್ಥೆಗಳಿಗೆ ಸ್ಪರ್ಧಿಸಿದ್ದ ಆಮ್ಆದ್ಮಿ ಪಾಲಿಗೆ ಸಿಹಿ ದೊರೆತಿದೆ.
ಒಟ್ಟು 120 ಸ್ಥಾನಗಳ ಪೈಕಿ 97ರಲ್ಲಿ ಬಿಜೆಪಿ ಗೆಲುವು ಪಡೆದಿದ್ದು, ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಕಳೆದ ಚುನಾವಣೆಯಲ್ಲಿ 36 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ಗೆ ಈ ಬಾರಿ ತೀವ್ರ ಮುಖಭಂಗವಾದಂತಾಗಿದೆ. ಒಂದೇ ಒಂದು ಸ್ಥಾನದಲ್ಲಿ ಗೆಲುವಿನ ನಗು ಬೀರಲು ಸಾಧ್ಯವಾಗದೇ, ಇರುವ 36 ಸ್ಥಾನಗಳನ್ನೂ ಕಳೆದುಕೊಂಡು ಖಾಲಿ ಕೈಯಲ್ಲಿ ಕೂರುವಂತಾಗಿದೆ. ಕಳೆದ ಚುನಾವಣೆಯಲ್ಲಿ ಎರಡು ಸ್ಥಾನಗಳಲ್ಲಿ ಗೆದ್ದಿದ್ದ ಸ್ವತಂತ್ರ ಅಭ್ಯರ್ಥಿಗಳು ಸಹ ಒಂದು ಸ್ಥಾನಗಳಲ್ಲಿ ಗೆಲ್ಲಲಾರದೇ ನಿರಾಶೆ ಪಟ್ಟಿದ್ದಾರೆ.
ಗೆಲುವು ಸಂಭ್ರಮಿಸಿದ ಅರವಿಂದ ಕೇಜ್ರಿವಾಲ್
ಸೂರತ್ನಲ್ಲಿ ಮೊದಲ ಪ್ರಯತ್ನದಲ್ಲೇ 27 ಸ್ಥಾನಗಳಲ್ಲಿ ನಗು ಬೀರಿದ ಹರ್ಷದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮೂಲಕ ಗುಜರಾತಿನ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ಗುಜರಾತ್ ರಾಜ್ಯದಲ್ಲಿ ಹೊಸ ಆಡಳಿತವನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.ಅಲ್ಲದೇ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಫೆಬ್ರವರಿ 26ರಂದು ಗುಜರಾತ್ಗೆ ಆಗಮಿಸಿ ಸಾರ್ವಜನಿಕ ಮೆರವಣಿಗೆ ನಡೆಸಲಿದ್ದಾರೆ ಎಂದು ಆಮ್ಆದ್ಮಿ ಪಕ್ಷ ತಿಳಿಸಿದೆ.
नई राजनीति की शुरुआत करने के लिए गुजरात के लोगों को दिल से बधाई।
— Arvind Kejriwal (@ArvindKejriwal) February 23, 2021
ಈ ಗೆಲುವು ಸಾಧಿಸಿದ ಕೆಲ ಕ್ಷಣಗಳಲ್ಲೇ ಗುಜರಾತ್ ಬಿಜೆಪಿ ಮುಖ್ಯಸ್ಥ ಸಿ.ಆರ್. ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ‘ಕೇಂದ್ರೀಯ ನಾಯಕತ್ವದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಆಮ್ಆದ್ಮಿ ಪಕ್ಷ ತನ್ನ ಹುಸಿ ಭರವಸೆಗಳಿಂದ 27 ಕ್ಷೇತ್ರಗಳನ್ನು ಬಾಚಿಕೊಂಡಿದೆ’ ಎಂದು ಹೇಳಿಕೆ ನೀಡಿದ್ದಾರೆ.
ಪಕ್ಷದ ತೀವ್ರ ಕಳಪೆ ಪ್ರದರ್ಶನದ ಜವಾಬ್ದಾರಿ ಹೊತ್ತ ಕಾಂಗ್ರೆಸ್ನ ಸೂರತ್ ನಗರ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಬಾಬು ರಾಯ್ಕಾ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Gujarat BJP: ಭರೂಚ್ ಸ್ಥಳೀಯ ಪಾಲಿಕೆ ಚುನಾವಣೆ; ಅತಿ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳಿಗೆ ಮಣೆ ಹಾಕಿದ ಬಿಜೆಪಿ
Published On - 7:36 pm, Tue, 23 February 21